ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ: ಅಲೋಪಥಿ, ಆಯುರ್ವೇದ ವೈದ್ಯರ ಅಭಿಪ್ರಾಯಗಳು
Team Udayavani, Dec 13, 2020, 6:10 AM IST
ಸಾಂದರ್ಭಿಕ ಚಿತ್ರ
ಅಲೋಪಥಿ ತರಬೇತಿಯಿಲ್ಲದೇ ಶಸ್ತ್ರಚಿಕಿತ್ಸೆ ಹೇಗೆ ಸಾಧ್ಯ?
ಡಾ| ಗೌತಮ ಚೌಧರಿ
ಆಯುರ್ವೇದ ಹಾಗೂ ಅಲೋಪಥಿ ಎರಡೂ ಒಂದಕ್ಕೊಂದು ಭಿನ್ನ ವ್ಯವಸ್ಥೆಗಳಾಗಿದ್ದು, ಚಿಕಿತ್ಸೆಯು ಸಂಪೂರ್ಣವಾಗಿ ಬೇರೆ ಥರ ದ್ದೇ ಆಗಿರುತ್ತದೆ. ಅಲೋಪಥಿ ಪದ್ಧತಿಯಲ್ಲಿ ಒಬ್ಬ ವೈದ್ಯ ಶಸ್ತ್ರಚಿಕಿತ್ಸೆಯಲ್ಲಿ ನುರಿತ ತಜ್ಞನಾಗಬೇಕಾದಲ್ಲಿ ಸಾಕಷ್ಟು ತರಬೇತಿ ಪಡೆಯಬೇಕಾಗುತ್ತದೆ. ಎಂಬಿ ಬಿಎಸ್ ಅಲ್ಲದೇ ಅದರಲ್ಲಿ ಎಂಎಸ್ ಕೂಡ ಮಾಡಬೇಕಾಗಿರುತ್ತದೆ. ಅದರಲ್ಲೂ ವಿವಿಧ ಭಾಗಗಳಿಗೆ ವಿವಿಧ ತಜ್ಞರಿರುತ್ತಾರೆ. ಉದಾಹರಣೆಗೆ ನ್ಯೂರೋ ಸರ್ಜನ್, ಸ್ಪೈನ್ ಸರ್ಜನ್, ಉದರದ ಸರ್ಜನ್, ಕ್ಯಾನ್ಸರ್ ಸರ್ಜನ್ ಇತ್ಯಾದಿ.ಇವೆಲ್ಲವುಗಳನ್ನೂ ಅಭ್ಯಾಸ ಮಾಡಲು ಒಬ್ಬ ಅಲೋಪಥಿ ವೈದ್ಯ ಸಾಕಷ್ಟು ಶ್ರಮವಹಿಸಿರುತ್ತಾರೆ, ತರಬೇತಿ ಪಡೆದಿರುತ್ತಾರೆ.
ಅದಲ್ಲದೇ ಒಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾದರೆ ಬರೀ ಸರ್ಜನ್ ಅಲ್ಲದೇ ಅದರಲ್ಲಿ ಪರಿಣತರ ತಂಡವೇ ಇರಬೇಕಾಗುತ್ತದೆ. ಉದಾ: ಅರಿವಳಿಕೆ ತಜ್ಞರು, ಇವರ ಪಾತ್ರ ಶಸ್ತ್ರ ಚಿಕಿತ್ಸೆಯಲ್ಲಿ ಬಹುಮುಖ್ಯವಾಗಿರುತ್ತದೆ. ಅದರ ಜತೆಗೆ ತರಬೇತಿಗೊಂಡ ಶುಶ್ರೂಷಕಿಯರು, ಶಸ್ತ್ರ ಚಿಕಿತ್ಸಾ ಕೊಠಡಿಯ ಸಹಾಯಕರು ಇತ್ಯಾದಿ. ಇವರೆಲ್ಲರನ್ನೂ ಒಳ ಗೊಂಡಾಗ ಒಂದು ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ಮಾಡಲು ಸಾಧ್ಯ.
ಶಸ್ತ್ರಚಿಕಿತ್ಸೆಗಿಂತ ಮೊದಲು ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಅರ್ಹನೆಂದು ಪರೀಕ್ಷಿಲು ಇನ್ನೊಂದು ವೈದ್ಯರ ತಂಡವೇ ಇರುತ್ತದೆ. ಇಷ್ಟೆಲ್ಲ ವ್ಯವಸ್ಥೆಗಳು ಅಲೋಪಥಿ ವಿಧಾನಗಳಲ್ಲಿದ್ದು, ಒಂದು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿಸುತ್ತಾರೆ. ಇದರಲ್ಲಿ ಸಾಕಷ್ಟು ಅಪಾಯ ಕೂಡ ಇರುತ್ತದೆ. ಆದರೆ ಆಯುರ್ವೇದ ಪದ್ಧತಿಯಲ್ಲಿ ಇದ್ಯಾವುದರಲ್ಲೂ ತರಬೇತಿ ಪಡೆಯದೇನೇ ಶಸ್ತ್ರಚಿಕಿತ್ಸಕನಾಗಲು ಹೇಗೆ ಸಾಧ್ಯ? ಆಯುರ್ವೇದ ಅಲೋಪಥಿ ವಿಧಾನಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು, ಆಯುರ್ವೇದ ವೈದ್ಯರು ಅಲೋಪಥಿ ಚಿಕಿತ್ಸೆ ಕೊಡುವುದು ಸೂಕ್ತವಲ್ಲ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವುದು ಸರಿ ಅಲ್ಲ.
ಇವಾಗಿನ ಪರಿಸ್ಥಿತಿಯಲ್ಲಿ ಏನಾಗಿದೆ ಎಂದರೆ ಕೆಲವು ಆಸ್ಪತ್ರೆಗಳಲ್ಲಿ ಕಾರ್ಯನಿರತ ವೈದ್ಯರ ಕೊರತೆ ಅಪಾರ ಪ್ರಮಾಣದಲ್ಲಿದ್ದು ಕೆಲವು ಆಸ್ಪತ್ರೆಗಳಲ್ಲಿ ಆಯುರ್ವೇದ ವೈದ್ಯರು ಕೆಲಸ ಮಾಡುತ್ತಿದ್ದು, ಅಲ್ಲಿ ಪಡೆದಂತಹ ತರಬೇತಿಯಿಂದ ಹೊರಗಡೆ ಬಂದು ಕ್ಲಿನಿಕ್ ತೆರೆದು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲೋಪಥಿ ಪದ್ಧತಿಯಲ್ಲಿ ಸಾಕಷ್ಟು ಮಾಹಿತಿ ಇಲ್ಲದೇ ಆಯುರ್ವೆಧೀ ದ ವೈದ್ಯರು ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಸಾರ್ವ ಜನಿಕರಿಗೆ ಔಷಧೋಪಚಾರ ಮಾಡುತ್ತಿರುವುದು ಎಷ್ಟು ಸರಿ? ಇದರಲ್ಲಿ ಅಪಾಯ, ಆತಂಕಗಳೇ ಜಾಸ್ತಿ. ಸರಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಪರವಾನಿಗೆ ನೀಡಿರುವುದು ತುಂಬಾ ವಿಷಾದನೀಯ.
ಈ ರೀತಿ ಬಿಲ್ ಪಾಸ್ ಮಾಡುವಾಗ ನುರಿತ ವೈದ್ಯರು, ವಿಷಯ ತಜ್ಞರ ಸಲಹೆ ಪಡೆದು ಯಾವುದು ಸೂಕ್ತ ಎನ್ನುವುದನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದರಿಂದ ಜನ ರೇ ತೊಂದರೆಗೆ ಒಳಗಾಗುತ್ತಾರೆ.
“ವೈದ್ಯೋ ನಾರಾಯಣೋ ಹರಿಃ’ ಎಂಬು ದಾಗಿ ವೈದ್ಯರನ್ನು ಗೌರವಿಸುತ್ತಾರೆ. ಜನರ ಜೀವವನ್ನು ಉಳಿಸುವ ಕೆಲಸ ಒಬ್ಬ ವೈದ್ಯ ರಿಂದ ಮಾತ್ರ ಸಾಧ್ಯ. ಅದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಾಗುತ್ತದೆ. ಆದರೆ ತರಬೇತಿ ಇಲ್ಲದವರ ಕೈಯಲ್ಲಿ ಜವಾಬ್ದಾರಿ ಕೊಟ್ಟರೆ, ಮುಂದೆ ಸಾವು ನೋವು ಸಂಭವಿಸಿದರೆ ಯಾರು ಹೊಣೆ? ಆದ್ದರಿಂದ ಸರಕಾರ ಮತ್ತೂಮ್ಮೆ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಅವಕಾಶ ನೀಡಿರುವುದನ್ನು ಬೇಗ ರದ್ದು ಮಾಡುವುದು ಒಳ್ಳೆಯದು.
ರೋಗಿಗಳ ಉತ್ತರವೂ ಮುಖ್ಯವಾಗಲಿ
ಡಾ|ಕಿರಣ್ ವಿ. ಎಸ್.
ಆಯುರ್ವೇದದ ಶಲ್ಯಚಿಕಿತ್ಸೆ ಓದಿರುವ ವೈದ್ಯರು ಆಧುನಿಕ ವೈದ್ಯಪದ್ಧತಿಯ ಅನುಸಾರವಾಗಿ ಶಸ್ತ್ರಚಿಕಿತ್ಸೆ ಗಳನ್ನು ಮಾಡಬೇಕೆ? ಎಂಬ ಪ್ರಶ್ನೆಯಲ್ಲಿ ಸರಿ-ತಪ್ಪುಗಳ ಜಿಜ್ಞಾಸೆ ಇರಬೇಕಾದ್ದು ವೈದ್ಯರ ಮಟ್ಟದಲ್ಲಿ ಮಾತ್ರವಲ್ಲ; ಅದಕ್ಕೆ ಪ್ರಮುಖವಾಗಿ ಆಧಾರವಾಗಬೇಕಾದ್ದು ರೋಗಿ ಗಳ ಸುರಕ್ಷತೆ ಮತ್ತು ಶಸ್ತ್ರ ಚಿಕಿತ್ಸೆಯ ಸಫಲತೆ.
ಗಡಿಯಾರದ ರಿಪೇ ರಿಗೆ ಅಥವಾ ಕಾರಿನ ಸರ್ವಿಸಿಗೆ ಕೂಡ ತಜ್ಞರನ್ನು ಬಯಸುವ ನಮ್ಮ ಸಮಾಜ, ತಮ್ಮ ಸ್ವಂತ ಶರೀರದ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಪ್ರಕ್ರಿಯೆಗೆ ಯಾವುದೋ ವೈದ್ಯ ಪದ್ಧತಿಯನ್ನು ಅಧ್ಯಯನ ಮಾಡಿ ಇನ್ಯಾವುದೋ ವೈದ್ಯ ಪದ್ಧತಿ ಅನುಸರಿಸಿ ಮಾಡುವವರನ್ನು ಯಾವ ಮಾನದಂಡಗಳಿಂದ ಒಪ್ಪುತ್ತದೆ? ಎಂಬುದು ನಾವು ಕೇಳಬೇಕಾದ ನೈಜ ಪ್ರಶ್ನೆ.
ಶಸ್ತ್ರಚಿಕಿತ್ಸೆ ಒಂದು ಸಾಂ ಕ ಪ್ರಯತ್ನ. ರೋಗ ಪತ್ತೆ ಮಾಡುವವರು, ಪ್ರಯೋಗಾಲಯಗಳು, ಕ್ಷ-ಕಿರಣ ತಜ್ಞರು, ಅರಿವಳಿಕೆ ತಜ್ಞರು, ಶಸ್ತ್ರಚಿಕಿತ್ಸೆಯ ವೈದ್ಯರು, ತೀವ್ರ-ನಿಗಾ ಘಟಕದ ತಜ್ಞರು, ಫಿಸಿಯೋಥೆರಪಿ – ಹೀಗೆ ಹಲವಾರು ತಜ್ಞರ ತಂಡ ಏಕರೂಪವಾಗಿ ಬೆಸೆದು ಕೊಂಡು ಮಾಡಬೇಕಾದ ಸರಣಿ ಪ್ರಕ್ರಿಯೆ. ಇಂತಹ ಸಂಕೀರ್ಣ ಸರಣಿಯ ಅತ್ಯುತ್ತಮ ನಿರ್ವಹಣೆಗೆ ಪ್ರತಿಯೊಬ್ಬರೂ ಒಂದೇ ಮಾದರಿಯ ತರಬೇತಿ ಹೊಂದಿರು ವುದು ಬಹಳ ಮುಖ್ಯ.
ಹೀಗಾಗಿ, ಆಯುರ್ವೇದದ ಶಲ್ಯ ಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಬೇಕೆಂದರೆ, ಇಡೀ ತಂಡವನ್ನು ಆಯುರ್ವೇದದ ಆಧಾರದ ಮೇಲೆ ಸಂಪೂರ್ಣವಾಗಿ ಕಟ್ಟಬೇಕಾಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆ ಇದನ್ನು ಸಫಲವಾಗಿ ಮಾಡಿ ದರೆ ಯಾರಿಗೂ ಅಭ್ಯಂತರವಿಲ್ಲ. ಆದರೆ ಬೇರೆ ಯಾವುದೋ ಪದ್ಧತಿಯಲ್ಲಿ ಅಧ್ಯಯನ ಮಾಡಿರುವವ ರನ್ನು ಮತ್ತೂಂದು ತಂಡದಲ್ಲಿ ಅನಾಮತ್ತಾಗಿ ಸೇರಿಸಿ ದರೆ ಅದು ಒಂದು ತಂಡವಾಗಿ ಉಳಿಯುವುದಿಲ್ಲ.
ಒಂದು ವೇಳೆ ಶಸ್ತ್ರಚಿಕಿತ್ಸೆ ಸಫಲವಾಗದಿದ್ದರೆ ಅದರ ಹೊಣೆಗಾರಿಕೆ ಯಾರದ್ದು? ಎರಡು ಬೇರೆ-ಬೇರೆ ಪದ್ಧತಿ ಗಳನ್ನು ಬೆರೆಸಿದ ತಂಡದಲ್ಲಿ ಸಾಫಲ್ಯ ವನ್ನು ಎಲ್ಲರೂ ಸಂಭ್ರಮಿಸುತ್ತಾರೆ.
ಆದರೆ, ಸೋಲಿನ ಹೊಣೆ ಗಾರಿಕೆಗೆ ಯಾರೂ ಸಿದ್ಧರಿರುವುದಿಲ್ಲ. ಈ ದ್ವಂದ್ವದಲ್ಲಿ ಸೋಲುವವರು ರೋಗಿಗಳು. ಹಾಗೆ ಆಗುವುದು ಅಸಹನೀಯ ಮತ್ತು ವೈದ್ಯಕೀಯ ವ್ಯವಸ್ಥೆಯ ಮೂಲೋದ್ದೇಶದ ಸೋಲು.
ರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಮಾತ್ರ ಈ ಪ್ರಶ್ನೆಯನ್ನು ವಿವೇಚಿಸಬೇಕು. ಇದು ಯಾರೊಬ್ಬರ ಪ್ರತಿಷ್ಠೆಯ ಪ್ರಶ್ನೆ ಆಗಬಾರದು. ನಮ್ಮ ಶಸ್ತ್ರಚಿಕಿತ್ಸೆಯನ್ನು ಯಾರು ಮಾಡಬೇಕು? ಎಂಬುದನ್ನು ನಿರ್ಧರಿಸ ಬೇಕಾ ದವರು ಖುದ್ದು ರೋಗಿಗಳು! ನಿಮ್ಮ ದೇಹದ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೀವು ಶಲ್ಯಚಿಕಿತ್ಸೆ ಓದಿ ರುವ ಆಯುರ್ವೇದ ವೈದ್ಯರಿಂದ ಮಾಡಿಸಿಕೊಳ್ಳು ತ್ತೀರಾ? ಎಂದು ರೋಗಿಗಳನ್ನು ಕೇಳಬೇಕು. ಅವರ ಉತ್ತರವೇ ಸರಿಯಾದ ಉತ್ತರ.
ಆಯುರ್ವೇದ
ನಾವ್ಯಾಕೆ ಅನಸ್ತೇಷಿಯಾ ಬಳಸಬಾರದು?
ಡಾ| ಅನಿತಾ ಮೃತ್ಯುಂಜಯ್
ಆಯುರ್ವೇದ ಅಥವಾ ಅಲೋಪಥಿ ಯಾವ ವ್ಯವಸ್ಥೆಯ ವೈದ್ಯರೇ ಆಗಲಿ ರೋಗಿಯ ಆರೋಗ್ಯ ಸುಧಾರಣೆ ಅವರ ಮೊದಲ ಆದ್ಯತೆ ಮತ್ತು ಅಂತಿಮ ಗುರಿಯಾಗಿರಬೇಕು. ಆರೋಗ್ಯದ ವಿಚಾರ ಬಂದಾಗ ಅತ್ಯುತ್ತಮ ಸಾಧ್ಯತೆಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತೇವೆ. ಕೇವಲ ಮೆಡಿಸಿನ್‌ನಿಂದಲೇ ಎಲ್ಲವನ್ನೂ ಗುಣಪಡಿಸಲು ಸಾಧ್ಯವಿಲ್ಲ. ಕೆಲವೊಂದಕ್ಕೆ ಶಸ್ತ್ರಚಿಕಿತ್ಸೆ ಬೇಕೇ ಬೇಕು. ಪೈಲ್ಸ್, ಬಂಜೆತನ ನಿವಾರಣೆ, ಸಹಜ ಹೆರಿಗೆಗೆ ಆಯುರ್ವೇದದಲ್ಲಿ ಅವಕಾಶವಿದೆ. ನಮ್ಮಲ್ಲಿ ಅಲೋಪಥಿಗಿಂತಲೂ ಉತ್ತಮ ಚಿಕಿತ್ಸೆ ಇದೆ. ಮೂತ್ರನಾಳ ಬ್ಲಾಕೇಜ್ ಆದಾಗ ಉತ್ತರ ಬಸ್ತಿ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಆಯುರ್ವೇದದಲ್ಲಿ ಮೊದಲಿನಿಂದಲೂ ಇದೆ. ಕೆಲವು ಮೈನರ್ ಸರ್ಜರಿಗಳನ್ನು ನಮ್ಮಲ್ಲಿಯೂ ಮಾಡಲಾಗುತ್ತದೆ. ಆಧುನಿಕ ವೈದ್ಯಕೀಯ ಪದ್ಧತಿಯ ಅವಲಂಬನೆ ಹೆಚ್ಚಾದ ಕಾರಣ ಆಯು ರ್ವೇದ ಶಸ್ತ್ರಚಿಕಿತ್ಸೆ ಹೆಚ್ಚು ಬಳಕೆಯಲ್ಲಿ ಇಲ್ಲ.
ಅಲೋಪಥಿಯಂತೆ ನಮ್ಮಲ್ಲೂ ಎಂ.ಡಿ. ಇದೆ. ಶಲ್ಯ, ಶಾಲ್ಯಕ ಎನ್ನುವ ಸರ್ಜರಿಗೆ ಸಂಬಂಧಿತ ಅಧ್ಯಯನ ವಿಭಾಗವಿದೆ. ಹಾಗಾಗಿ ನಮಗೂ ಸರ್ಜರಿ ಕೊಡುವುದು ತಪ್ಪಲ್ಲ. ಇಲ್ಲಿ ಹೋರಾಟ ನಡೆಸುತ್ತಿರುವವರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವವರು ಮಾತ್ರ. ಆಯುರ್ವೇದ ವೈದ್ಯರಿಂದ ಹೆಚ್ಚಿನ ಸ್ಪರ್ಧೆ ಏರ್ಪಡುವ ಭಯಕ್ಕೆ ಹೋರಾಟ ಮುಂಚೂಣಿ ಯಲ್ಲಿದೆ. ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡುವ ಅನುಮತಿ ಸಿಕ್ಕಿದರೆ, ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲೋಪಥಿಯ ಎಷ್ಟೋ ವೈದ್ಯರು ಹಳ್ಳಿಗಳಿಗೆ ಹೋಗಲು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗ ದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಅನುಕೂಲ ಮಾಡಿ ಕೊಡಬೇಕು. ಇದು ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ. ರೋಗಿಯ ಆರೋಗ್ಯ ಮುಖ್ಯವೇ ಹೊರತು ವಿಭಿನ್ನ ವೈದ್ಯಕೀಯ ವ್ಯವಸ್ಥೆಯಲ್ಲ. ಅಲೋಪಥಿಯಲ್ಲಿ ಪೈಲ್ಸ್ ಸರ್ಜರಿ ಗಮನಿಸಿ. ಪೈಲ್ಸ್ ಬೆಳವಣಿಗೆಯನ್ನು ಕತ್ತರಿಸುತ್ತಾರೆ ಆದರೆ ಗುಣಪಡಿಸುವುದಿಲ್ಲ. ಈ ಕಾರಣದಿಂದ ಪೈಲ್ಸ್ ಮತ್ತೆ ಬೆಳೆದಿರುವ ಎಷ್ಟೋ ಪ್ರಕರಣಗಳಿವೆ. ಆಯುರ್ವೇದದಲ್ಲಿ ಕಾಯಿಲೆಯನ್ನು ಮೂಲದಲ್ಲೇ ಟ್ರೀಟ್ ಮಾಡಲಾಗುತ್ತದೆ. ಪೈಲ್ಸ್‌ಗೆ ದಾರವನ್ನು ಕಟ್ಟಲಾಗುತ್ತದೆ. ಇದರಿಂದ ಪೈಲ್ಸ್ ಬಿದ್ದು ಹೋಗುತ್ತದೆ. ಅದು ಮರಳದಂತೆ ಚಿಕಿತ್ಸೆ ನೀಡಲಾಗುತ್ತದೆ. ಇದು ರೋಗಿಗಳಿಗೆ ಹೆಚ್ಚು ಅನುಕೂಲಕರ. ಇನ್ನು ಆಯುರ್ವೇದದಲ್ಲಿ ಸರ್ಜರಿಗೆ ಅವಕಾಶ ನೀಡಿದರೆ ಚೇತರಿಕೆ ಪ್ರಮಾಣ ಹೆಚ್ಚಿರುತ್ತದೆ..
ಹೋರಾಟದಲ್ಲಿ ಅನಸ್ತೇಷಿಯಾ ಮತ್ತು ಆ್ಯಂಟಿಬಯಾಟಿಕ್ಸ್ ಬಳಕೆ ಬಗ್ಗೆ ಮಾತು ಕೇಳಿಬರುತ್ತಿದೆ. ಆಯುರ್ವೇದದಲ್ಲಿ ಮೊದಲಿಂದಲೂ ಅನಸ್ತೇಷಿಯಾ ವಿಂಗ್ ಇಲ್ಲ. ಫಿಶರ್, ಫಿಸ್ತೂಲದಂತಹ ಮೈನರ್ ಸರ್ಜರಿಗೆ ಅನಸ್ತೇಷಿಯಾ ಅಗತ್ಯವಿಲ್ಲ. ಮೇಜರ್ ಸರ್ಜರಿಗೆ ಅನಸ್ತೇಷಿಯಾ ಅಗತ್ಯವಿದೆ. ಗಟ್ಟಿ ಇದ್ದವರಿಗೆ ಅನಸ್ತೇಷಿಯಾ ಬೇಡ. ಆದರೆ ಸೂಕ್ಷ್ಮವಾಗಿ ರುವವರಿಗೆ ಅನಸ್ತೇಷಿಯಾಬೇಕು. ಅಂತಹ ಸಂದರ್ಭದಲ್ಲಿ ಅಲೋಪಥಿ ಅನಸ್ಥೆಟಿಕ್ಸ್ ಜೊತೆಗೆ ಮಾತನಾಡಿಕೊಂಡು ಶಸ್ತ್ರ ಚಿಕಿತ್ಸೆ ಮಾಡುವ ಪದ್ಧತಿ ಇದೆ. ಇದು ಅಲೋಪಥಿಯ ಮೇಲಿನ ನಮ್ಮ ಅವಲಂಬನೆ ಎನ್ನಲಾಗುತ್ತಿದೆ. ಅಲೋಪಥಿಯವರು ನಮ್ಮ ಆಯುರ್ವೇದದ ಔಷ ಧಗಳನ್ನು ಬರೆಯಬಹುದಾದರೆ ನಾವ್ಯಾಕೆ ಅನಸ್ತೇಷಿಯಾ ಬಳಸಿಕೊಳ್ಳಬಾರದು? ಕಟ್ಟ ಕಡೆಗೆ ಎಲ್ಲವೂ ಕೂಡ ರೋಗಿಯ ಹಿತದೃಷ್ಟಿಯನ್ನಷ್ಟೇ ಮುಂದಿಟ್ಟುಕೊಂಡಿರುತ್ತದೆ.
ಆಯುರ್ವೇದದಲ್ಲಿ ಆ್ಯಂಟಿ ಬಯಾಟಿಕ್ಸ್ ಅಲೋಪಥಿಯಷ್ಟೇ ಸಾಮ್ಯತೆ ಹೊಂದಿದೆ. ಆ್ಯಂಟಿ ಬಯಾಟಿಕ್ಸ್ ಇಲ್ಲದೆಯೂ ಮೂಲಿಕೆಗಳನ್ನು ಬಳಸಿಕೊಂಡು ಶಸ್ತ್ರ ಚಿಕಿತ್ಸೆ ಅನಂತರ ನಿಭಾವಣೆ ಮಾಡಬಹುದು. ಇದರಿಂದ ಶಸ್ತ್ರ ಚಿಕಿತ್ಸೆ ಅನಂತರದ ಅಡ್ಡ ಪರಿಣಾಮಗಳು ಬಹಳ ಕಡಿಮೆ. ಗಾಯಗಳು ಒಣಗಲು ಕೂಡ ಆಯುರ್ವೇದ ಮೂಲಿಕೆಗಳು ಹೆಚ್ಚು ಪರಿಣಾಮ ಕಾರಿಯಾಗಿ ಬಳಕೆಯಲ್ಲಿವೆ.
ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಪರಿಣತರು
ಡಾ| ಮಹಾಂತಸ್ವಾಮಿ ಹಿರೇಮಠ
ಇಡೀ ವಿಶ್ವಕ್ಕೆ ಆಯುರ್ವೇದ ಔಷಧ ಪದ್ಧತಿ ಪರಿಚಯಿಸಿದ್ದು ಭರತಖಂಡ. ಸಾವಿರಾರು ವರ್ಷ ಪುರಾತನವಾಗಿರುವ ಈ ಔಷಧ ಪದ್ಧತಿ ಆಧುನಿಕತೆಯ ಭರಾಟೆಯಲ್ಲಿ ಕೊಂಚ ತೆರೆಗೆ ಸರಿದದ್ದು ಸುಳ್ಳಲ್ಲ. ಆದರೆ ಮತ್ತೆ ಜನರಲ್ಲಿ ಆಯುರ್ವೇದವೇ ಸೂಕ್ತ, ಈ ಪದ್ಧತಿಯಿಂದ ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಅರಿವು ಬರುತ್ತಿದೆ.
ಹಾಗಿದ್ದರೆ ಆಯುರ್ವೇದ ವೈದ್ಯರು ಬರೀ ವನಸ್ಪತಿ ಮಾತ್ರೆಗಳನ್ನು, ಒಂದಿಷ್ಟು ತೈಲಗಳನ್ನು ಕೊಟ್ಟು, ಪಂಚಕರ್ಮ ಚಿಕಿತ್ಸೆ ಮಾಡಿ, ಚವನ್‌ಪ್ರಾಶಗಳನ್ನು ತಿನ್ನುವಂತೆ ಸಲಹೆ ನೀಡಬಲ್ಲರು. ಶಸ್ತ್ರಚಿಕಿತ್ಸೆ ಮಾಡಲು ಇವರಿಂದ ಸಾಧ್ಯವೇ? ಎನ್ನುವ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ. ಖಂಡಿತಾ ಇತರ ಆಯುರ್ವೇದ ವೈದ್ಯರು ಪರಿಣಾಮಕಾರಿಯಾಗಿ ಶಸ್ತ್ರಚಿಕಿತ್ಸೆ ಮಾಡಬಲ್ಲರು.
ಭಗವಾನ್ ಬ್ರಹ್ಮನಿಂದ ಅವತರಿಸಿದ ಆಯುರ್ವೇದ ಇಂದ್ರನ ಮುಖಾಂತರ ಅಶ್ವಿನಿ ಕುಮಾರರಿಗೆ ತಲುಪಿತು. ಭೂಮಿಯಲ್ಲಿ ನರ ಮಾನವರು ಜನ್ಮ ತಳೆಯುತ್ತಿದ್ದು, ಅವರಿಗೆ ರೋಗಾದಿಗಳು ಬರಲಿದ್ದು, ಅವರನ್ನು ರಕ್ಷಿಸಲು ಧನ್ವಂತರಿ ಅವತಾರ ವೆತ್ತಿದರು. ಚರಕರು ಔಷಧ ಹೇಳಿದರು, ಶೂಷೂತರು ಶಲ್ಯವನ್ನು (ಶಸ್ತ್ರಚಿಕಿತ್ಸೆ) ತಿಳಿಸಿಕೊಟ್ಟರು. ಅಷ್ಟೇ ಅಲ್ಲ ಶುಷೂತರು ಅನೇಕ ಬಗೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರ ಬಗ್ಗೆ ಆಯುರ್ವೇದ ಗ್ರಂಥಗಳು, ಪುರಾಣಗಳಲ್ಲಿ ಉಲ್ಲೇಖಗಳಿವೆ. ಸಾವಿರಾರು ವರ್ಷಗಳ ಮುಂಚೆಯೇ ವಾಚಸ್ಪತಿಗಳು ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಿದ್ದಾರೆ.
ಆಯುರ್ವೇದಲ್ಲಿನ ಅಷ್ಟಾಂಗ ಪದ್ಧತಿಗಳು ಇಂದಿಗೂ ಪ್ರಸ್ತುತ. ಆದರೆ ಕಾಲಾಂತರದಲ್ಲಿ ಅನಸ್ತೇಷಿಯಾ ಮತ್ತು ಶೀಘ್ರ ಗುಣಮುಖರಾಗುವ ತವಕದಲ್ಲಿ ಅಲೋಪಥಿ ಔಷಧ ಪದ್ಧತಿ ಹೆಚ್ಚು ಪ್ರಚಲಿತಕ್ಕೆ ಬಂತು. ಸಾಮಾನ್ಯ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಕಣ್ಣುಮೂಗು, ಶಾರೀರ ಶಾಸ್ತ್ರ, ರೋಗಾದಿಗಳ ಅಧ್ಯಯನ ಮತ್ತು ಅದಕ್ಕೆ ಪೂರ್ವಭಾವಿಯಾಗಿರುವ ಆಹಾರ ಪದ್ಧತಿ ಕುರಿತು ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದೆ. ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ 120ಕ್ಕೂ ಹೆಚ್ಚು ಬಗೆಯ ಉಪಕರಣಗಳ ಉಲ್ಲೇಖ ಆಯುರ್ವೇದ ದಲ್ಲಿದೆ. ಶರೀರ ರಚನಾಶಾಸ್ತ್ರವಂತೂ ಅಲೋಪಥಿಗಿಂತಲೂ ಆಯುರ್ವೇದದಲ್ಲಿ ಹೆಚ್ಚು ಉಲ್ಲೇಖ ಮತ್ತು ದೀರ್ಘವಾದ ಅಧ್ಯಯನ ನಡೆದಿದೆ. ಹೀಗಾಗಿ ಆಯುರ್ವೇದ ವೈದ್ಯರು ಕೂಡ ಶಸ್ತ್ರಚಿಕಿತ್ಸೆ ಮಾಡಬಲ್ಲರು. ಆದರೆ ಇಂದಿನ ದಿನಗಳಲ್ಲಿ ಅದಕ್ಕೆ ಪೂರಕವಾದ ವ್ಯವಸ್ಥೆ ಕಟ್ಟಿಕೊಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.