ಯುವಶಕ್ತಿ ಸದ್ಬಳಕೆಗೆ ಸುವರ್ಣಾವಕಾಶ
Team Udayavani, Dec 15, 2020, 6:10 AM IST
ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಶ್ರೇಷ್ಠ ಧ್ಯೇಯೋದ್ದೇಶಗಳನ್ನೊಳಗೊಂಡು ಸ್ವಚ್ಛ, ಸ್ವಸ್ಥ, ಬಲಿಷ್ಠ, ಪರಿವರ್ತಿತ ಸಮಾಜ ನಿರ್ಮಾಣ ಮಾಡ ಬಲ್ಲ ಶಕ್ತಿ, ಸಾಮರ್ಥ್ಯ ಪಡೆದುಕೊಂಡಿದೆ. ಹಳ್ಳಿಗ ಳಿಂದ ಕೂಡಿದ ಗ್ರಾಮೀಣ ಪ್ರದೇಶ ಮತ್ತು ನಮ್ಮ ಯುವಜನತೆ ರಾಷ್ಟ್ರದ ಬೆನ್ನೆಲುಬು. ಡಾ| ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನ ನಮ್ಮ ಪ್ರಜಾಪ್ರಭುತ್ವ ವ್ಯವ ಸ್ಥೆಯ ಭದ್ರ ಬುನಾದಿ. ಇದರ ಪ್ರಕ್ರಿಯೆ ಮತ್ತು ವ್ಯವಸ್ಥೆಗೆ ಚಾಲನೆ ಸಿಗುವುದೇ ಪ್ರಾಥಮಿಕ ಹಂತದ ಗ್ರಾಮ ಪಂಚಾಯತ್ ಚುನಾವಣೆಗಳ ಮೂಲಕ.
ಪ್ರತಿಯೊಬ್ಬ ಪ್ರಜೆಯೂ ಸಾಧಕ-ಸಾಧಕಿ ಎಂದೆನಿಸಿಕೊಳ್ಳಬೇಕಾದರೆ ಮೂರು ಪೂರಕವಾದ ಅಂಶಗಳಾದ ಸಾಮರ್ಥ್ಯ, ಇಚ್ಛಾಶಕ್ತಿ ಮತ್ತು ಅವಕಾಶ ಅತೀ ಅಗತ್ಯ. ನಮ್ಮ ಗ್ರಾಮೀಣ ಪ್ರದೇ ಶದ ಯುವ ಸಮುದಾಯದಲ್ಲಿ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಹೇರಳವಾಗಿದ್ದು, ಅವರಾರೂ ಈ ಸಮಯ-ಸಂದರ್ಭದಲ್ಲಿ ಅವಕಾಶವಂಚಿತ ರಾಗಬಾರದು. ಬೇರೆ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಇತರರು ಅಸೂಯೆಪಡುವಷ್ಟು ಹೆಚ್ಚಿನ ಸಂಖ್ಯೆ ಮತ್ತು ಗುಣಮಟ್ಟದ ಯುವ ಮಾನವ ಸಂಪನ್ಮೂಲ ನಮ್ಮ ಹಳ್ಳಿಗಳಲ್ಲಿದೆ ಎಂಬು ದನ್ನು ನಾವು ಮರೆಯುವಂತಿಲ್ಲ. ಇದರ ಸದ್ಬಳಕೆ ಸಕಾಲದಲ್ಲಿ ಮಾಡಿ ತೋರಿಸುವ ಸುವರ್ಣಾವಕಾಶ ಗ್ರಾಮ ಪಂಚಾಯತ್ ಚುನಾವಣೆ ವೇಳೆ ನಮಗೆಲ್ಲರಿಗೂ ಲಭಿಸಿದೆ. ಗ್ರಾಮೀಣ ಪ್ರದೇಶದ ಯುವ ಜನತೆ ಮತ ಚಲಾವಣೆಯಲ್ಲಿ ಮಾತ್ರ ಪಾಲ್ಗೊಳ್ಳದೆ, ಜಾತಿ, ಮತ, ಪಕ್ಷ ಬೇಧಗಳನ್ನು ಮರೆತು ಪರಿಶುದ್ಧ ಮನಸ್ಸಿನಿಂದ ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಉನ್ನತ ಕಾಳಜಿಯಿಂದ ಗ್ರಾಮ ಪಂಚಾ ಯತ್ ಚುನಾವಣೆಯಲ್ಲಿ ಸ್ಪರ್ಧಿಸ ಬೇಕು. ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖ ಗಳು. ಗೆದ್ದು ಸೋಲುವುದ ಕ್ಕಿಂತ ಯಾವಾಗಲೂ “ಸೋತು ಗೆಲ್ಲುವುದೇ’ ಲೇಸು. ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದರ ಜತೆಗೆ ಸೌಹಾ ರ್ದಯುತವಾದ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣ, ದುಡಿದು ಬದುಕಲು ಪೂರಕವಾದ ಕೌಶಲಾಭಿವೃದ್ಧಿ, ಒಗ್ಗಟ್ಟಿ ನಲ್ಲಿರುವ ಶಕ್ತಿಯ ಅರಿವು-ಜಾಗೃತಿ, ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟ್ರ ಹಾಗೂ ಚಾರಿತ್ರÂ ನಿರ್ಮಾಣ, ರಾಜಕೀಯ-ಸಾಮಾಜಿಕ- ಆರ್ಥಿಕ ಸಶಕ್ತೀಕರಣದಂತಹ ಗುರಿಗಳೊಂದಿಗೆ ಸ್ಪರ್ಧಿಸಿದರೆ ಗ್ರಾಮ ಸ್ವರಾಜ್ಯದ ಗುರಿ ತಲುಪಬಹುದು. ಈ ನಿಟ್ಟಿನಲ್ಲಿ “ನಮ್ಮ ದೇಶ ಒಂದು ಕಂಬದ ಡೇರೆಯಲ್ಲ, ಸಾವಿರ ಕಂಬಗಳ ಚಪ್ಪರ’ ಎಂಬುದನ್ನು ಯುವ ಜನತೆ ಮನವರಿಕೆ ಮಾಡಿಕೊಳ್ಳಬೇಕು.
ನಾನು ಕಂಡುಕೊಂಡ ಹಾಗೆ ನಮ್ಮ ಗ್ರಾಮೀಣ ಪ್ರದೇಶದ ಜನರು ಬುದ್ಧಿವಂತರು ಹಾಗೂ ಪ್ರಜ್ಞಾವಂತರು. ಅವರ ಪರಿಶ್ರಮದ ಬದುಕು, ಆತ್ಮಗೌರವದಿಂದ ಸಾಗಿಸುವ ಜೀವನದ ಪರಿ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ, ನಂಬಿಕೆ, ಬದ್ಧತೆ, ಇನ್ನೊಬ್ಬರ ಕಷ್ಟ-ಕಾರ್ಪಣ್ಯಗಳಿಗೆ, ದುಃಖ, ದುಮ್ಮಾನಗಳಿಗೆ ಸಕಾಲದಲ್ಲಿ ಸ್ಪಂದಿಸುವ ಮನಸ್ಸು ಸರ್ವರಿಗೂ ಪ್ರೇರಣೆ ನೀಡಬಲ್ಲ ಆಸ್ತಿ ಎಂದು ತಿಳಿಯಬೇಕು. ಇಂತಹ ಜನರ ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ಈಡೇರಿಸಬಲ್ಲ ನಾಯಕತ್ವ ಖಂಡಿತವಾಗಿಯೂ ನಮ್ಮ ಗ್ರಾಮೀಣ ಪ್ರದೇಶದ ಯುವ ಜನತೆ ನೀಡಬಲ್ಲರು ಎಂಬುದರಲ್ಲಿ ನನಗೆ ಎಳ್ಳಿನಷ್ಟೂ ಸಂಶಯವಿಲ್ಲ.
ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಾ ಗಿನಿಂದ ಸಮಾಜಮುಖೀಯಾದ, ವಿದ್ಯಾರ್ಥಿ- ಸಾರ್ವಜನಿಕ ಸ್ನೇಹಿ ಆಡಳಿತ ನೀಡುವುದರ ಜತೆಗೆ ಈಗಿನ ಸಮಯ-ಸಂದರ್ಭಗಳಿಗನುಸಾರ ಸೂಕ್ತ ಬದ ಲಾವಣೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ನಮ್ಮ ವಿಶ್ವವಿದ್ಯಾ ನಿಲಯವನ್ನು ಹಳ್ಳಿಗಳ ಕಡೆ ಕೊಂಡೊಯ್ಯುವ ಸತ್ಕಾರ್ಯ ಸಾಗುತ್ತಾ ಬಂದಿದೆ. ಈಗಾಗಲೇ ನಾವು ವಿವಿ ಆಸುಪಾಸಿನ ಐದು ಹಳ್ಳಿಗಳನ್ನು ಹಾಗೂ ಹತ್ತು ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ದತ್ತು ಸ್ವೀಕರಿಸಿ ಅವುಗಳನ್ನು ಉನ್ನತೀಕರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಿಶ್ವದಲ್ಲಿ ಗ್ರೀನ್‌ಮೆಟ್ರಿಕ್ ಶ್ರೇಯಾಂಕದಲ್ಲಿ ಮಂಗಳೂರು ವಿವಿ 139ನೇ ಸ್ಥಾನದಲ್ಲಿದ್ದು, ದೇಶದಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶದ ಜನತೆಗೆ ಆತ್ಮನಿರ್ಭರ ಭಾರತದ ಸ್ಪೂರ್ತಿಯೊಂದಿಗೆ ದುಡಿದು, ಬದುಕಿ, ಸ್ವಾವಲಂಬಿಗಳಾಗಲು ಪೂರಕವಾಗಿರುವ ಕೌಶ ಲಾಭಿವೃದ್ಧಿ ಯೋಜನೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಕೈಗೆತ್ತಿಕೊಂಡಿದೆ. ನಮ್ಮ ಸುತ್ತ ಮುತ್ತಲಿನ ಹಳ್ಳಿಗಳ ಸ್ಥಿತಿ-ಗತಿ ಆಸೆ-ಆಕಾಂಕ್ಷೆ ಗಳನ್ನು ಅರಿತುಕೊಂಡು, ಸಮಾನ ಮನಸ್ಕರ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶದ ಏಳಿಗೆಗೆ ಶ್ರಮಿಸುವ ಪಣತೊಟ್ಟಿದ್ದೇವೆ.
ನಮ್ಮ ಪ್ರಾಧ್ಯಾಪಕ-ಪ್ರಾಧ್ಯಾಪಕೇತರ ಸಿಬಂದಿ, ಸಂಶೋಧನ ವಿದ್ಯಾರ್ಥಿಗಳು, ಸ್ನಾತಕ- ಸ್ನಾತಕೋತ್ತರ ವಿದ್ಯಾರ್ಥಿ ಸಮುದಾಯ, ಹಳೆ ವಿದ್ಯಾರ್ಥಿಗಳು, ಹೆತ್ತವರು-ಪೋಷಕರು, ಸಹೃ ದಯಿ ಗ್ರಾಮಸ್ಥರು, ಜನಪ್ರತಿನಿಧಿಗಳು ನಾವು ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳನ್ನು ಈಡೇರಿಸುವಲ್ಲಿ ಕೈಜೋಡಿಸುತ್ತಾ ಬಂದಿದ್ದಾರೆ. ನಾನು ಕುಲಸಚಿವನಾಗಿದ್ದ ಸಮಯದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಆಯೋಜಿಸಿದ “ಕೃಷಿಮೇಳ’ ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಸದಾ ಹಸಿರಾಗಿದೆ.
ಗ್ರಾಮೀಣ ಪ್ರದೇಶದ ಯುವಜನತೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಆತ್ಮ ವಿಶ್ವಾಸ, ದೃಢ ಸಂಕಲ್ಪ, ಸದ್ವಿಚಾರಗಳೊಂದಿಗೆ ಸ್ಪರ್ಧಿಸಿ, ಇಡೀ ಗ್ರಾಮಕ್ಕೆ ಯುವ ನೇತೃತ್ವದ ಮೂಲಕ ಆದರ್ಶಗ್ರಾಮವನ್ನಾಗಿ ಮಾಡಲಿ ಎಂಬ ಆಶಯ ದೊಂದಿಗೆ ಪಾರದರ್ಶಕತೆ, ಉತ್ತರದಾಯಿತ್ವ, ಜವಾಬ್ದಾರಿಗಳೊಂದಿಗೆ ನಾವೆಲ್ಲರೂ ಅಹರ್ನಿಶಿ ಶ್ರಮಿಸೋಣ. ಇತರರನ್ನು ದೂಷಿಸಿ, ದ್ವೇಷಿಸಿ ಪ್ರಯೋಜನವಿಲ್ಲ. ತನ್ನ ಶತ್ರು ತಾನೇ, ತನ್ನೊಳಗಿದ್ದಾನೆಯೆಂಬ ಅರಿವು ಪ್ರತಿಯೊಬ್ಬ ಯುವ ಜನತೆಯಲ್ಲಿರಲಿ.
ಯುವಜನರೇ, ನಿಮ್ಮ ಮನಸ್ಸಿನ ಕಿಟಿಕಿ, ಬಾಗಿಲುಗಳನ್ನು ತೆರೆದಿಡಿ, ನಾನಾ ದಿಕ್ಕುಗಳಿಂದ ಬರುವ ಗಾಳಿಗೆ ಅನುವು ಮಾಡಿಕೊಡಿ. ಆದರೆ ಆ ಗಾಳಿ ಬಿರುಗಾಳಿಯಾಗದಿರಲಿ, ತನ್ನನ್ನು ಬುಡಸಹಿತ ಕಿತ್ತೂಗೆಯದಿರಲಿ. ತನ್ನತನವನ್ನು ಉಳಿಸಿಕೊಳ್ಳಿ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷಬೇಧ ಮರೆತು ಯುವಜನತೆ ಸ್ಪರ್ಧಿಸಿ ಆದರ್ಶ ಗ್ರಾಮ ನಿರ್ಮಾಣದ ಮೂಲಕ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಸನ್ನದ್ಧರಾಗಬೇಕು.
ಗ್ರಾಮೀಣ ಪ್ರದೇಶದ ಜನರು ಪರಿಶುದ್ಧ ಮನಸ್ಸಿನಿಂದ ದುಡಿದು ಬದುಕುವ ಬುದ್ಧಿವಂತ ಹಾಗೂ ಪ್ರಜ್ಞಾವಂತರು. ನಮ್ಮ ದೇಶದ ರಾಷ್ಟ್ರಪ್ರೇಮ ಮತ್ತು ವ್ಯಕ್ತಿತ್ವ ವಿಕಸನ ಹಳ್ಳಿಯ ಯುವ ಜನತೆಯಿಂದ ಆರಂಭವಾಗಬೇಕು. ತಾವು ಕೈಗೆತ್ತಿಕೊಳ್ಳುವ ಕೆಲಸ-ಕಾರ್ಯಗಳನ್ನು ಪ್ರೀತಿ, ವಿಶ್ವಾಸ, ಗೌರವ, ಬದ್ಧತೆ, ಪ್ರಾಮಾಣಿಕತೆಗಳೊಂದಿಗೆ ನಿರ್ವಹಿಸುವುದೇ ದೇಶಸೇವೆ. ಚುನಾವಣೆಯಲ್ಲಿ ಸ್ಪರ್ಧಿಸುವ, ತನ್ನ ಗ್ರಾಮದ ಜನತೆಯನ್ನು ಪ್ರತಿನಿಧಿಸುವ, ಅಭಿವೃದ್ಧಿ ಪಡಿಸುವ ಮೂಲಕ ಪ್ರಗತಿಪಥದಲ್ಲಿ ಸಾಗುವ, ಮನಸ್ಸು-ಮನಸ್ಸುಗಳನ್ನು ಜೋಡಿಸುವ, ಸಾಮಾಜಿಕ ಸೌಹಾರ್ದ, ಯುವಶಕ್ತಿಯ ಸದ್ಬಳಕೆ ಇಂತಹ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುವ ದೃಢ ಸಂಕಲ್ಪ, ಆತ್ಮ ವಿಶ್ವಾಸ, ಮೊದಲು ನಮ್ಮ ಮನಸ್ಸಿನಲ್ಲಿ ಜನ್ಮ ತಾಳಿದರೆ ಮಾತ್ರ ಮುಂದಕ್ಕೆ ನಿಜರೂಪದಲ್ಲಿ ಪ್ರತ್ಯಕ್ಷವಾಗಲು ಸಾಧ್ಯ ಎಂಬುದನ್ನು ನಾವು ಮರೆಯುವಂತಿಲ್ಲ.
ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕುಲಪತಿಗಳು, ಮಂಗಳೂರು ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.