ಭಾರತದ ಕ್ರಿಕೆಟಿಗರ ಕೋವಿಡ್ ನಿಯಮ ಉಲ್ಲಂಘನೆ ವಿವಾದ: ಐವರಿಗೆ ಐಸೊಲೇಶನ್
Team Udayavani, Jan 3, 2021, 6:10 AM IST
ಮೆಲ್ಬರ್ನ್: ಭಾರತದ ಕ್ರಿಕೆಟಿಗರು ಭೋಜನಕ್ಕಾಗಿ ಇಲ್ಲಿನ ಹೊಟೇಲ್ ಒಂದಕ್ಕೆ ತೆರಳಿ ಕೋವಿಡ್-19 ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂಬ ಆಸ್ಟ್ರೇಲಿಯ ಮಾಧ್ಯಮಗಳ ವರದಿ ಶನಿವಾರ ಬಿರುಗಾಳಿಯನ್ನೇ ಎಬ್ಬಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಭಾರತದ ಐವರು ಕ್ರಿಕೆಟಿಗರನ್ನು ಐಸೊಲೇಶನ್‌ನಲ್ಲಿ ಇರಿಸಲಾಗಿದೆ.
ಇದರಿಂದ ಜ. 7ರಿಂದ ಆರಂಭವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ದೊಡ್ಡ ಕಂಟಕವೊಂದು ಎದುರಾಗುವ ಸಾಧ್ಯತೆ ಇದೆ. ಐಸೊಲೇಶನ್ ಅವಧಿ ವಿಸ್ತರಿಸಲ್ಪಟ್ಟರೆ ಆಗ ರೋಹಿತ್ ಶರ್ಮ, ರಿಷಭ್ ಪಂತ್, ಶುಭಮನ್ ಗಿಲ್ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾಗುತ್ತದೆ. ಆಸ್ಟ್ರೇಲಿಯಕ್ಕೆ ಬೇಕಾದದ್ದೂ ಇದೆ! ಈ ಮೂವರ ಜತೆಗೆ ನವದೀಪ್ ಸೈನಿ ಮತ್ತು ಪೃಥ್ವಿ ಶಾ ಕೂಡ ಹೊಟೇಲಿಗೆ ತೆರಳಿದ್ದರು.
ಅಭಿಮಾನಿಯೇ ಮೂಲ
ಇದಕ್ಕೆಲ್ಲ ಮೂಲವಾದದ್ದು ನವಲ್‌ದೀಪ್ ಸಿಂಗ್ ಎಂಬ ಅಭಿಮಾನಿ ಮಾಡಿದ ಟ್ವೀಟ್. ಅವರು ಪತ್ನಿ ಯೊಂದಿಗೆ ಮೆಲ್ಬರ್ನ್ ಒಳಾಂಗಣ ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿಗೆ ಭಾರತ ತಂಡದ ಐವರು ಸದಸ್ಯರೂ ಭೋಜನಕ್ಕೆ ಆಗಮಿಸಿದ್ದರು. ರೋಹಿತ್ ಶರ್ಮ, ರಿಷಭ್ ಪಂತ್, ಶುಭಮನ್ ಗಿಲ್, ನವದೀಪ್ ಸೈನಿ, ಪೃಥ್ವಿ ಶಾ ಇದರಲ್ಲಿ ಸೇರಿದ್ದರು. ಬಳಿಕ ಈ ಕ್ರಿಕೆಟಿಗರ ಹೊಟೇಲ್ ಬಿಲ್ ಅನ್ನು ನವಲ್‌ದೀಪ್ ಅವರೇ ಪಾವತಿಸಿದ್ದಾಗಿಯೂ, ರೋಹಿತ್ ಇದರ ಮೊತ್ತ ನೀಡಲು ಮುಂದಾದರೂ ನವಲ್‌ದೀಪ್ ನಿರಾಕರಿಸಿದ್ದಾಗಿಯೂ ಸುದ್ದಿಯಾಗಿತ್ತು. ಕೊನೆಯಲ್ಲಿ ನವಲ್‌ದೀಪ್ ಪತ್ನಿಗೆ ಪಂತ್ ಥ್ಯಾಂಕ್ಸ್ ಹೇಳಿದರೆಂಬುದೂ ವರದಿಯಾಗಿತ್ತು.
ನವಲ್‌ದೀಪ್ ಅವರನ್ನು ಪಂತ್ ತಬ್ಬಿಕೊಂಡು ಕೃತಜ್ಞತೆ ಸಲ್ಲಿಸಿದರೆಂಬುದು ಈ ವಿದ್ಯಮಾನದ ಮುಂದಿನ ಭಾಗ. ಇದು ಕೋವಿಡ್-19 ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಎಂದು “ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಸೇರಿದಂತೆ ಆಸ್ಟ್ರೇಲಿಯದ ಕೆಲವು ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಬಳಿಕ ಇದು ರೆಕ್ಕೆ-ಪುಕ್ಕ ಕಟ್ಟಿಕೊಂಡು ತೀವ್ರ ಸ್ವರೂಪ ಪಡೆದುಕೊಳ್ಳುತ್ತ ಹೋಗಿದೆ.
ಈ ನಡುವೆ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯ ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಪರಿಶೀಲಿಸತೊಡಗಿವೆ. ಈ ಕುರಿತು ತನಿಖೆ ನಡೆಸುವುದಾಗಿ ಹೇಳಿವೆ.
ಮಾಧ್ಯಮಗಳ ಕೆಟ್ಟ ಚಾಳಿ
“ಇದು ಆಸ್ಟ್ರೇಲಿಯದ ಒಂದು ವರ್ಗದ ಮಾಧ್ಯಮಗಳ ದುರುದ್ದೇಶಪೂರಿತ ಸುದ್ದಿ. ಮೆಲ್ಬರ್ನ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಈ ಮಾಧ್ಯಮಗಳು ಇಂಥ ಕೆಲಸಕ್ಕೆ ಇಳಿದಿವೆ. ಅವು ಆಸ್ಟ್ರೇಲಿಯ ತಂಡದ ಮುಂದುವರಿದ ಭಾಗದಂತೆ ಗೋಚರಿಸುತ್ತಿವೆ’ ಎಂದು ಹೆಸರು ಹೇಳಬಯಸದ ಬಿಸಿಸಿಐ ಅಧಿಕಾರಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದರು.
“ಆಟಗಾರರು ಹೊಟೇಲಿನ ಹೊರಗಡೆ ನಿಂತಿದ್ದರು. ಆದರೆ ಮಳೆ ಬಂದ ಕಾರಣ ಒಳಗೆ ಹೋದರು. ಒಟ್ಟಾರೆ ಭಾರತ ತಂಡವನ್ನು ಮಾನಸಿಕವಾಗಿ ಕುಗ್ಗಿಸಿ ಇದರ ಲಾಭವೆತ್ತುವುದು ಅವರ ಯೋಜನೆ. ಇದು ಕ್ರಿಕೆಟ್ ಆಸ್ಟ್ರೇಲಿಯದ ಕೆಟ್ಟ ನಡೆ’ ಎಂದು ಅವರು ಕಿಡಿ ಕಾರಿದ್ದಾರೆ.
ಪಂತ್ ತಬ್ಬಿಕೊಂಡಿಲ್ಲ: ನವಲ್‌ದೀಪ್
ಪ್ರತ್ಯೇಕ ಹೇಳಿಕೆಯೊಂದನ್ನು ನೀಡಿರುವ ನವಲ್‌ದೀಪ್ ಸಿಂಗ್, “ಕ್ರಿಕೆಟಿಗ ಪಂತ್ ನನ್ನನ್ನು ತಬ್ಬಿಕೊಂಡರೆಂಬ ಆಸ್ಟ್ರೇಲಿಯ ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು’ ಎಂದಿದ್ದಾರೆ. ರೆಸ್ಟೋರೆಂಟ್‌ನಲ್ಲಿ ತನ್ನ ಹಿಂದಿನ ಸಾಲಿನಲ್ಲಿ ಕುಳಿತ ಕ್ರಿಕೆಟಿಗರ ಕೆಲವು ಫೋಟೊವನ್ನು ನವಲ್‌ದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.