ದೇಶದಲ್ಲಿ ಏಕಸ್ವಾಮ್ಯ ಮೆರೆದೀತೇ ಬಿಜೆಪಿ?
Team Udayavani, Jan 4, 2021, 6:50 AM IST
ಮೂರು ದಶಕಗಳ ಹಿಂದೆ ಬೆರಳೆಣಿಕೆಯ ಲೋಕಸಭಾ ಸದಸ್ಯರನ್ನು ಹೊಂದಿದ್ದ ಬಿಜೆಪಿ ಈಗ ಕೇಂದ್ರದಲ್ಲಿ ಸತತ ಎರಡನೇ ಅವಧಿಯ ಸರಕಾರವನ್ನು ಮುನ್ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆಯ ಫಲವಾಗಿ ಕೆಲವೇ ವರ್ಷಗಳ ಅಂತರದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದ್ದಲ್ಲದೆ ಹಲವು ರಾಜ್ಯಗಳಲ್ಲಿ ಆಡಳಿತ ಸೂತ್ರವನ್ನು ಹಿಡಿದಿದೆ. ಆರಂಭದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿ ಆಯಾಯ ರಾಜ್ಯಗಳಲ್ಲಿನ ರಾಜಕೀಯ ಹಾಗೂ ಜನರ ಆಕಾಂಕ್ಷೆ, ಬೇಗುದಿಗಳನ್ನು ಅರ್ಥೈಸಿಕೊಂಡು ಬಳಿಕ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿ, ಜನತೆಯ ಮನಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಏರುವಲ್ಲಿ ಪಕ್ಷ ಯಶಸ್ವಿಯಾಗಿದೆ.
ಪ್ರಸಕ್ತ ವರ್ಷ ನಾಲ್ಕು ಪ್ರಮುಖ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು ಈ ರಾಜ್ಯಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಬಿಜೆಪಿ ಪಣತೊಟ್ಟಿದೆ. ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಈಡೇರಿಸಿಕೊಳ್ಳಲು ಈ ಚುನಾವಣೆಗಳು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವ ದ್ದಾಗಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಮುಂದಡಿ ಇಟ್ಟಿದೆ. ಪಶ್ಚಿಮ ಬಂಗಾಲ ಮತ್ತು ಅಸ್ಸಾಂನಲ್ಲಿ ಅಧಿಕಾರಕ್ಕೇರಲು ಶತ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಇತ್ತ ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲೂ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಸಜ್ಜಾಗುತ್ತಿದೆ. ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಅಷ್ಟೇನೂ ಶಕ್ತಿಶಾಲಿಯಾಗಿಲ್ಲವಾದರೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಖರಿ, ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟು ಇಲ್ಲಿನ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಇನ್ನಷ್ಟು ರಾಜ್ಯಗಳಲ್ಲಿ ಅಧಿಕಾರಕ್ಕೇರುವ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಈ ಚುನಾವಣೆಗಳು ಅತ್ಯಂತ ನಿರ್ಣಾಯಕ.
ಬಂಗಾಲದ ಸವಾಲು: ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ತನ್ನ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸಿ ರುವ ಬಿಜೆಪಿಗೆ ಪಶ್ಚಿಮ ಬಂಗಾಲ ಚುನಾವಣೆ ಒಂದರ್ಥದಲ್ಲಿ ಬಲುದೊಡ್ಡ ಸವಾಲೇ ಸರಿ. ಇಲ್ಲಿ 2011ರ ವಿಧಾನಸಭೆ ಚುನಾವಣೆಯಲ್ಲಿ ಶೇ. 4ರಷ್ಟು ಮತಗಳನ್ನು ಗಳಿಸಿದ್ದ ಬಿಜೆಪಿ 2016ರ ಚುನಾ ವಣೆಯಲ್ಲಿ ಈ ಪ್ರಮಾಣವನ್ನು ಶೇ.16ಕ್ಕೆ ಹೆಚ್ಚಿಸಿ ಕೊಂಡಿತ್ತು. ಇನ್ನು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಒಟ್ಟಾರೆ ಮತಗಳಿಕೆ ಪ್ರಮಾಣ ಶೇ. 40ರಷ್ಟಿತ್ತು. ಇನ್ನು ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಳ್ಳುವುದರ ಜತೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ತನ್ನ ಬುನಾದಿಯನ್ನು ಭದ್ರಗೊಳಿ ಸುವುದು ಪಕ್ಷದ ಗುರಿಯಾಗಿದೆ.
ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳುವ ಯತ್ನ: ಆರಂಭದಿಂದಲೂ ಬಿಜೆಪಿಯನ್ನು ಉತ್ತರ ಭಾರತದ ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳ ಪಕ್ಷ ಎಂದೇ ಪರಿಗಣಿಸಲಾಗುತ್ತಿತ್ತು. ಕರ್ನಾಟಕವನ್ನು ಹೊರತು ಪಡಿಸಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಷ್ಟೇನೂ ಪ್ರಭಾವಶಾಲಿಯಾಗಿಲ್ಲ. ಕೇರಳದಲ್ಲಿ ಬಿಜೆಪಿ ನಿಧಾನಗತಿಯಲ್ಲಿ ಬೇರೂರತೊಡಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏಕೈಕ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತ್ತು. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ದಲ್ಲಿ ಹೆಚ್ಚಳವಾಗಿರುವುದು ಪಕ್ಷದ ನಾಯ ಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಆಶಾವಾದ ಮೂಡುವಂತೆ ಮಾಡಿದೆ.
ಇನ್ನು ತಮಿಳುನಾಡಿನಲ್ಲಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಮಿತ್ರ ಪಕ್ಷದ ವಿರೋಧದ ಹೊರತಾಗಿಯೂ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಮತದಾರರನ್ನು ತಲುಪುವ ಯತ್ನ ಮಾಡಿದೆ. ನಾಯಕತ್ವದ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆಯಾದರೂ ಬಿಜೆಪಿ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅದನ್ನು ನಿವಾರಿಸಿ ಕೊಳ್ಳುವ ಸಾಧ್ಯತೆಯೇ ಹೆಚ್ಚು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ. 3.6ರಷ್ಟಿತ್ತು. ಈ ನಡುವೆ ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಘೋಷಣೆ ಮಾಡಿ, ಅಧಿಕೃತವಾಗಿ ಹೇಳುವುದಕ್ಕಿಂತ ಮೊದಲೇ ಅನಾರೋಗ್ಯದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದಾರೆ. ಹೀಗಿದ್ದರೂ ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ರಜನಿಕಾಂತ್ ಅವರನ್ನು ಪಕ್ಷದ ಪರ ಪ್ರಚಾರಕ್ಕೆ ಕರೆತರಲು ಬಿಜೆಪಿಯ ಉನ್ನತ ನಾಯಕರು ತೆರೆಮರೆ ಯಲ್ಲಿ ಪ್ರಯತ್ನಿಸುತ್ತಿರುವ ವಿಚಾರ ರಹಸ್ಯವೇನಲ್ಲ.
ಮೋದಿ ಅಲೆಯ ಮೇಲೆ ವಿಶ್ವಾಸ: ಪ್ರಧಾನಿ ಮೋದಿ ನಾಯಕತ್ವ, ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆ ಗಳು, ಪಕ್ಷದ ಸೈದ್ಧಾಂತಿಕ ಧೋರಣೆಗಳು ಬಿಜೆಪಿ ಪಾಲಿಗೆ ಈ ಎಲ್ಲ ರಾಜ್ಯಗಳಲ್ಲಿ ಪ್ರಮುಖ ಚುನಾವಣ ಅಸ್ತ್ರಗಳಾಗಿವೆ. ಪಶ್ಚಿಮ ಬಂಗಾಲ, ಕೇರಳದಲ್ಲಿ ಆಡಳಿತವಿರೋಧಿ ಅಲೆ, ಭ್ರಷ್ಟಾಚಾರ, ಹಿಂದೂಗಳ ಮೇಲಣ ದೌರ್ಜನ್ಯದ ವಿಚಾರಗಳನ್ನು ಬಿಜೆಪಿ ತನ್ನ ಪ್ರಚಾರದ ಬತ್ತಳಿಕೆಗೆ ಸೇರಿಸಿಕೊಂಡಿದೆ.
ರಾಜ್ಯಸಭೆಯತ್ತ ಚಿತ್ತ: 2019ರವರೆಗೆ ರಾಜ್ಯಸಭೆ ಯಲ್ಲಿ ಅಗತ್ಯವಿರುವಷ್ಟು ಸದಸ್ಯ ಬಲವನ್ನು ಹೊಂದದೇ ಇದ್ದುದರಿಂದಾಗಿ ಕೆಲವೊಂದು ಮಹತ್ವದ ಮಸೂದೆಗಳಿಗೆ ಸದನದ ಅಂಗೀಕಾರ ಪಡೆಯಲು ಕಷ್ಟಸಾಧ್ಯವಾಗಿತ್ತು. ಇದೀಗ ಬಿಜೆಪಿ ಒಂದೊಂದೇ ರಾಜ್ಯವನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಈ ಕೊರತೆಯನ್ನು ನಿವಾರಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ. ಅಲ್ಲದೆ ಈ ರಾಜ್ಯಗಳಲ್ಲಿ ಅಧಿಕಾ ರಕ್ಕೇರುವುದರಿಂದ ಕೇಂದ್ರ ಜಾರಿಗೆ ತರುವ ಯೋಜನೆಗಳನ್ನು ಅತ್ಯಂತ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ತನ್ನ ಮತಬ್ಯಾಂಕ್‌ನ್ನು ಮತ್ತಷ್ಟು ಸದೃಢಗೊಳಿಸುವ ಲೆಕ್ಕಾಚಾರ ಬಿಜೆಪಿ ನಾಯಕರದು.
ಆರ್‌ಎಸ್‌ಎಸ್ ಪ್ರಭಾವ: ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಅತ್ಯಂತ ಕ್ರಿಯಾಶೀಲವಾಗಿದೆ. ಈ ಕಾರಣ ದಿಂದಾಗಿಯೇ ಬಿಜೆಪಿಗೆ ಹೆಚ್ಚಿನ ಮತಗಳು ಲಭಿಸುವಂತಾಗಿದೆ. ಪಶ್ಚಿಮ ಬಂಗಾಲದಲ್ಲಿಯೂ ಆರ್‌ಎಸ್‌ಎಸ್ ಕಾರ್ಯಕರ್ತರು ಸಂಘದ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಜನಪರ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೆಡೆ ಯಿಂದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದು ಪರ್ಯಾಯ ಆಡಳಿತದತ್ತ ಮುಖಮಾಡಿದ್ದಾರೆ.
ಪ್ರಾದೇಶಿಕ ಪಕ್ಷಗಳೇ ಗುರಿ: ಕೇರಳವನ್ನು ಹೊರತು ಪಡಿಸಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಂಶ ಪಾರಂಪರ್ಯ ಆಡಳಿತವೇ ದಶಕಗಳಿಂದ ಅಧಿಕಾರ ದಲ್ಲಿದೆ. ಬಹುತೇಕ ಪ್ರಾದೇಶಿಕ ಪಕ್ಷಗಳು ವಂಶಪಾ ರಂಪರ್ಯ ಆಡಳಿತಕ್ಕೆ ಮಣೆ ಹಾಕುತ್ತಿರು ವುದರಿಂದ ಜನರು ಈ ವ್ಯವಸ್ಥೆಗೆ ವಿದಾಯ ಹೇಳಬಯಸು ತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದು ಸದ್ಯಕ್ಕಂತೂ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್‌ಗೆ ಕೇಂದ್ರದಲ್ಲಿ ಪ್ರಬಲ ವಿಪಕ್ಷವಾಗಿ ಕಾರ್ಯನಿರ್ವ ಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ “ಕಾಂಗ್ರೆಸ್ ಮುಕ್ತ ಭಾರತ’ದ ಮಂತ್ರ ಜಪಿಸಿದರೆ ಇದೀಗ ಪ್ರಾದೇಶಿಕ ಪಕ್ಷಗಳನ್ನು ತನ್ನ ಗುರಿಯಾಗಿಸಿಕೊಳ್ಳತೊಡಗಿದೆ. ಕಾಂಗ್ರೆಸ್‌ನ ಗೊಂದಲಗಳು, ಸೋಲಿನ ಸರಪಳಿ ಮುಂದುವರಿದಿ ರುವುದರಿಂದ ಬಿಜೆಪಿಗೆ ಈಗ ಪ್ರಾದೇಶಿಕ ಪಕ್ಷಗಳೇ ಪ್ರತಿಸ್ಪರ್ಧಿ. ಪ್ರಾದೇಶಿಕ ಪಕ್ಷಗಳಿಂದ ಸಮಗ್ರ ದೇಶದ ಅಭಿವೃದ್ಧಿ ಅಸಾಧ್ಯ ಎಂಬುದು ರಾಷ್ಟ್ರೀಯ ಪಕ್ಷ ಬಿಜೆಪಿಯ ವಾದಸರಣಿ. ಆದರೆ ಕೆಲವು ರಾಜ್ಯಗಳಲ್ಲಿ ಬಿಜೆಪಿಗೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಈ ಪ್ರಾದೇಶಿಕ ಪಕ್ಷಗಳೇ ಆಸರೆಯಾಗಿದ್ದವು ಎಂಬುದನ್ನು ಮಾತ್ರ ಮರೆಯುವಂತಿಲ್ಲ. ರಾಜಕಾರಣದಲ್ಲಿ “ಕಾಲಕ್ಕೆ ತಕ್ಕ ಕೋಲ’ ಅನಿವಾರ್ಯವಾದ್ದರಿಂದ ಹಾಗೂ ನೈತಿಕ, ಅನೈತಿಕ ಎಂಬ ಪದಗಳ ವ್ಯಾಖ್ಯಾನ ಆಯಾಯ ಪರಿಸ್ಥಿತಿಗನುಗುಣವಾಗಿ ಬದಲಾಗುವು ದರಿಂದ ಬಿಜೆಪಿಯ ಈ ನಡೆಯನ್ನು ವಿರೋಧಿಸು ವುದಾದರೂ ಹೇಗೆ ಎನ್ನುವುದು ರಾಜಕೀಯ ವಿಶ್ಲೇಷಕರ ಪ್ರಶ್ನೆ.
ಆಯಾ ರಾಜ್ಯಗಳು ಮತ್ತು ರಾಜಕೀಯ ಸನ್ನಿವೇಶಗಳಿಗನುಗುಣವಾಗಿ ತನ್ನ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿರುವ ಬಿಜೆಪಿ ದೇಶದ ಬಲಾಡ್ಯ ಪಕ್ಷವಾಗಿ ಹೊರಹೊಮ್ಮಿದೆ. ಈ ವರ್ಷ ನಡೆಯಲಿ ರುವ ಚುನಾವಣೆಗಳಲ್ಲೂ ಪ್ರಾಬಲ್ಯ ಮುಂದುವ ರಿಸಿದ್ದೇ ಆದಲ್ಲಿ ದೇಶದಲ್ಲಿ ಏಕಸ್ವಾಮ್ಯ ಮೆರೆಯಲಿದೆ.
– ಕೆ. ಹರೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.