ಕತಾರ್‌-ಸೌದಿ ಸ್ನೇಹ ತರಲಿರುವ ಬದಲಾವಣೆ ಏನು?


Team Udayavani, Jan 11, 2021, 7:20 AM IST

TDY-23

ಈಗ ಕೊಲ್ಲಿ ಸಹಕಾರ ಒಕ್ಕೂಟ (ಜಿಸಿಸಿ) ಪೂರ್ಣ ಚಂದ್ರನ ಸ್ಥಿತಿಗೆ ಬಂದಿದೆ. ಇಂಥದ್ದೊಂದು ಉಲ್ಲೇಖಕ್ಕೆ ಸಕಾರಣ ಅಂಶಗಳಿವೆ. 2017ರಲ್ಲಿ ಸೌದಿ ಅರೇಬಿಯಾ ಮತ್ತು ಕತಾರ್‌ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ­ಗಳಿಂದಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯ ಮುರಿದು ಬಿದ್ದಿತ್ತು. ಇದೀಗ ಅಮೆರಿಕ ಸರಕಾರ‌ ನಡೆಸಿದ ತೆರೆಮರೆಯ ಮಾತುಕತೆಗಳಿಂದಾಗಿ ಬಾಂಧವ್ಯ ಮೂರು ವರ್ಷಗಳ ಹಿಂದಿನ ಯಥಾಸ್ಥಿತಿಗೆ ಬಂದಿದೆ. ಈ ವಿಚಾರದಲ್ಲಿ ಭಾರತದ ಮೇಲೆ ಸಾಕಷ್ಟು ಧನಾತ್ಮಕ ಅಂಶಗಳು ಇವೆ. ಏಕೆಂದರೆ ಜಿಸಿಸಿ ರಾಷ್ಟ್ರಗಳಾಗಿರುವ ಬಹ್ರೈನ್‌, ಕುವೈಟ್‌, ಒಮಾನ್‌, ಕತಾರ್‌, ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ಗಳಲ್ಲಿ ಭಾರತ ಮೂಲದ 90 ಲಕ್ಷ ಮಂದಿ ಜೀವನ ಕಂಡುಕೊಂಡಿದ್ದಾರೆ. ಹಾಗೆಂದು ಸೌದಿ ಅರೇಬಿಯಾ ಮತ್ತು ಇತರ ಕೊಲ್ಲಿ ರಾಷ್ಟ್ರಗಳು ಬಾಂಧವ್ಯ ಕಡಿದುಕೊಂಡಿದ್ದ ಕಾರಣ ದಿಂದಾಗಿ ಭಾರತ ಮೂಲದವರ ಮೇಲೆ ನೇರ ಪರಿಣಾಮ ಬೀರಿಲ್ಲ. ಆಂಶಿಕವಾಗಿ ಎಲ್ಲೋ ಆಯ್ದ ಕೆಲವು ಮಂದಿಗೆ ಸೌದಿ-ಕತಾರ್‌ ಗದ್ದಲ ಪ್ರತಿಕೂಲ ಪರಿಣಾಮ ಬೀರಿದ್ದ ಘಟನೆಗಳು ಇರಬಹುದೇನೋ. ಆದರೆ ಸದ್ಯದ ಬಾಂಧವ್ಯ ಯಥಾಸ್ಥಿತಿಗೆ ಬಂದಿರುವ ಕಾರಣದಿಂದ ನಮ್ಮವರಿಗೆ ಆರು ರಾಷ್ಟ್ರಗಳಲ್ಲಿ ಉದ್ಯೋಗ ಪಡೆದು ಜೀವನ ಕಂಡುಕೊಳ್ಳುವ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ, ಆತಂಕ ಗಳು ನಿವಾರಣೆಯಾಗಲಿವೆ ಎನ್ನುವುದು ಖಚಿತ.

ಹಾಗಿದ್ದರೆ 2017ರಲ್ಲಿ ಉಂಟಾಗಿದ್ದು ಏನು ಎಂಬು ದನ್ನು ಕೊಂಚ ತಿಳಿಯುವುದು ಅಗತ್ಯ. ಜಿಸಿಸಿ ರಾಷ್ಟ್ರಗಳ ಪೈಕಿ ಕತಾರ್‌ ಎಲ್ಲ ವಿಚಾರಗಳಲ್ಲಿ ತಾನೇ ಮುಂದೆ ಇರಬೇಕು ಎಂಬ ಅತೀ ಮಹತ್ವಾಕಾಂಕ್ಷೆ ಹೊಂದಿದೆ. ಈ ವಿಚಾ ರ ವೇ ಬಿಕ್ಕಟ್ಟಿಗೆ ಕಾರಣವಾಗಿತ್ತು. ಈಜಿಪ್ಟ್ನಲ್ಲಿ ಕ್ರಾಂತಿಗೆ ಕಾರಣವಾಗಿದ್ದ ಮುಸ್ಲಿಂ ಬ್ರದರ್‌ಹುಡ್‌ಗೆ ಕತಾರ್‌ ಬೆಂಬಲ ನೀಡಿತ್ತು. ಈ ಅಂಶ ಸೌದಿ ಅರೇಬಿಯಾಕ್ಕೆ ಸರಿಕಾಣಲಿಲ್ಲ. ಜತೆಗೆ ಕೊಲ್ಲಿ ರಾಷ್ಟ್ರಗಳ ಪ್ರಾದೇಶಿಕ ಭದ್ರತೆಗೆ ಈಜಿಪ್ಟ್ನ ಸಂಘಟನೆ ಕಾರಣವಾಗ­ಬಹುದು ಎನ್ನುವುದು ರಿಯಾದ್‌ನ ಆತಂಕವಾಗಿತ್ತು. ಅದಕ್ಕೆ ಸೊಪ್ಪು ಹಾಕದ ಕತಾರ್‌ ಮುಸ್ಲಿಂ ಬ್ರದರ್‌ಹುಡ್‌ ಜತೆಗೆ ಗಾಢವಾದ ಬಾಂಧವ್ಯ ಸ್ಥಾಪಿಸಿಕೊಂಡಿತ್ತು.

ಪ್ಯಾಲೇಸ್ತೀನ್‌ನಲ್ಲಿ ಸಕ್ರಿಯವಾಗಿರುವ ಹಮಸ್‌ ಉಗ್ರ ಸಂಘಟನೆಯನ್ನು ತನ್ನ ನೆಲದಲ್ಲಿ ಕಾರ್ಯವೆಸಗಲು ಅನುವು ಮಾಡಿತ್ತು. ಅದೇ ಸಂದರ್ಭದಲ್ಲಿ ಸೌದಿ ಅರೇಬಿಯಾ ಹಮಸ್‌ ಅನ್ನು ಭಯೋತ್ಪಾದಕ ಸಂಘ ಟನೆ ಎಂದು ಘೋಷಣೆ ಮಾಡಿತ್ತು. ಮುಸ್ಲಿಂ ರಾಷ್ಟ್ರವಾಗಿ ದ್ದರೂ ಸೌದಿ ಅರೇಬಿಯಾ ಮತ್ತು ಇರಾನ್‌ ನಡುವೆ ಹೇಳುವಂಥ ಬಾಂಧವ್ಯದ ಇಷಾರೆ ಏನಿಲ್ಲ. ಇರಾನ್‌ ಜತೆಗೆ ಹೆಚ್ಚಿನ ಬಾಂಧವ್ಯ ಕಾಪಿಟ್ಟುಕೊಳ್ಳಲು ಕತಾರ್‌ ಮುಂದಾಗಿದ್ದದ್ದು ಸೌದಿ ಮುನಿ ಸಿಗೆ ಮೂರನೇ ಕಾರಣ. ಈ ಎಲ್ಲ ಅಂಶಗಳು ಸೇರಿಕೊಂಡು 2017ರಲ್ಲಿ ಕತಾರ್‌ ಜತೆಗೆ ಬಾಂಧವ್ಯ ಕೊನೆಗೊಳಿಸುವ ಘೋಷಣೆಯನ್ನು ಸೌದಿ ಅರೇಬಿಯಾ ಮಾಡಿತ್ತು. ಅದಕ್ಕೆ ಪೂರಕವಾಗಿ ಜಿಸಿಸಿಯ ಇತರ ರಾಷ್ಟ್ರಗಳೂ ಬಾಂಧವ್ಯ ಕಡಿತದ ನಿರ್ಧಾರ ಪ್ರಕಟಿಸಿದ್ದವು.

1991ರಲ್ಲಿ ನಡೆದಿದ್ದ ಕೊಲ್ಲಿ ಯುದ್ಧದ ಬಳಿಕ 2017ರ ಬೆಳವಣಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಭಾರೀ ಪ್ರತಿಕೂಲ ಪರಿಣಾಮ ತಂದೊಡ್ಡಿತು. ಸೌದಿ ಅರೇಬಿಯಾದ ಮಿತ್ರ ರಾಷ್ಟ್ರವಾಗಿರುವ ಈಜಿಪ್ಟ್ ಕೂಡ ಕತಾರ್‌ಗೆ ಬೆನ್ನು ತೋರಿಸಿತ್ತು. ಈಜಿಪ್ಟ್ನಲ್ಲಿ ರಕ್ತ ಸಹಿತ ಕ್ರಾಂತಿಯಾಗುವ ನಿಟ್ಟಿನಲ್ಲಿ ಮುಸ್ಲಿಂ ಬ್ರದರ್‌ಹುಡ್‌ಗೆ ಕತಾರ್‌ ಬೆಂಬಲಿಸಿದ್ದ ಸಿಟ್ಟೂ ಈ ಬೆಳವಣಿಗೆಗೆ ಕಾರಣವಾಗಿತ್ತು ಎನ್ನಿ. ಒಟ್ಟಿನಲ್ಲಿ ಆ ಸಂದರ್ಭದಲ್ಲಿ ಕತಾರ್‌ ಹೊರತು ಪಡಿಸಿದ ಜಿಸಿಸಿ ರಾಷ್ಟ್ರಗಳಿಂದ ಅಲ್ಲಿಗೆ ಪ್ರಯಾಣ ಮಾಡುವುದೇ ಕಷ್ಟವಾ­ಗಿತ್ತು. ಸಾಮಾನ್ಯರು ತಮ್ಮ ಬಂಧುಗಳನ್ನೇ ಮರೆತು ಬಿಡಬೇಕಾದ ಸ್ಥಿತಿ ಉಂಟಾಗಿತ್ತು.

ಕುವೈಟ್‌ ಮಧ್ಯಸ್ಥಿಕೆಯಲ್ಲಿ ಅಮೆರಿಕ ಬಿಕ್ಕಟ್ಟು ಬಗೆಹರಿ­ಸಲು ಮುಂದಾಗಿತ್ತು. ಒಂದು ಹಂತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕತಾರ್‌ ಅನ್ನು “ಉಗ್ರತ್ವದ ಸಂಸ್ಥಾಪಕ’ ಎಂದು ಜರೆದಿದ್ದರು. ಅದು ಅಮೆರಿಕದ ಮಿತ್ರ ರಾಷ್ಟ್ರಗಳಿಗೆ ತೀರಾ ಅನಿರೀಕ್ಷಿತ ಎನ್ನಿಸಿತ್ತು. ಇರಾನ್‌ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯನ್ನಾಗಿಸಲು ಅಮೆರಿಕಕ್ಕೆ ಯಾವುದಾದರೂ ಒಂದು ವೇದಿಕೆ ಬೇಕು. ಹೀಗಾಗಿ ಕೊಲ್ಲಿ ರಾಷ್ಟ್ರಗಳ ಬಿಕ್ಕಟ್ಟು ಬಗೆಹರಿಸಲು ಮುಂದಾಯಿತು. ಅದಕ್ಕಾಗಿ 2019ರಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂತ್ರವೊಂದನ್ನು ಸಿದ್ಧಪಡಿಸಿದ್ದರು. ಟ್ರಂಪ್‌ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಇಸ್ರೇಲ್‌ ಮತ್ತು ಯುಎಇ ನಡುವೆ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿಸಿ ಬಾಂಧವ್ಯ ಸುಧಾರಿಸಲು ಪ್ರಯತ್ನ ನಡೆಸಿದ್ದರು. ಇಂಥ ಪ್ರಯತ್ನ ಮಾಡುವ ಮೂಲಕ ಜಗತ್ತಿಗೆ ಕೊಲ್ಲಿ ರಾಷ್ಟ್ರಗಳಿಂದ ತೈಲ ಪೂರೈಕೆ ಮಾಡುವುದರ ಜತೆಗೆ ಪ್ರಾದೇಶಿಕವಾಗಿ ಇರುವ ವ್ಯಾಜ್ಯಗಳಲ್ಲಿ ತನ್ನ ಪ್ರಭಾವಳಿ ವಿಸ್ತರಿಸಿಕೊಳ್ಳುವ ಚಾಳಿ ಅಮೆರಿಕದ್ದು.

ಇನ್ನು ಕತಾರ್‌ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಭಾರತ ಸರಕಾರ‌ದ ಹಿತಾಸಕ್ತಿಯೂ ಕೆಲಸ ಮಾಡಿದೆ. ಕೊಲ್ಲಿ ರಾಷ್ಟ್ರಗಳು ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಾಂಧವ್ಯ ಉತ್ತಮವಾಗಿದೆ. ದೇಶದ ಇಂಧನ ಅಗತ್ಯ ಗಳಿಗೆ ಮಾತ್ರ ಕೊಲ್ಲಿ ರಾಷ್ಟ್ರಗಳ ಜತೆಗೆ ಬಾಂಧವ್ಯ ಇದ್ದದ್ದು 2014ರ ವರೆಗೆ ಸಾಮಾನ್ಯವಾಗಿತ್ತು. ಆ ವರ್ಷ ಹೊಸದಿಲ್ಲಿಯಲ್ಲಿ ಮೋದಿ ನೇತೃತ್ವದ ಸರಕಾರ‌ ಅಧಿಕಾರಕ್ಕೆ ಬಂದ ಬಳಿಕ ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆಗೆ ಗಾಢ ಬಾಂಧವ್ಯ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿದರು. ಇದರಿಂದಾಗಿ ಆ ದೇಶಗಳಲ್ಲಿ ಜೀವನ ಕಂಡು ಕೊಂಡಿರುವ ಭಾರತದ ಮೂಲದವರಿಗೂ ಹಲವು ರೀತಿ ಗಳಲ್ಲಿ ಅನುಕೂಲವಾಗಿದೆ. ಅಮೆರಿಕ ಪ್ರಾಯೋಜಿತ ಬಾಂಧವ್ಯ ಪುನಸ್ಥಾಪನ ವ್ಯವಸ್ಥೆ ಜಾರಿಯಾಗುವ ಕೆಲವೇ ದಿನಗಳ ಹಿಂದೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಕತಾರ್‌ಗೆ ಭೇಟಿ ನೀಡಿದ್ದರು. ಕೊರೊನಾ ಅವಧಿಯಲ್ಲಿ ಕೂಡ ಕೊಲ್ಲಿ ರಾಷ್ಟ್ರಗಳಿಂದ ಸಾವಿರಾರು ಮಂದಿ ಸ್ವದೇಶಕ್ಕೆ ವಾಪಸಾಗಿದ್ದರು. ಅವರು ಮತ್ತೆ ಆಯಾ ದೇಶಗಳಿಗೆ ಹೋಗಿ ಜೀವನ ಕಂಡುಕೊಳ್ಳುವುದು ಭಾರತ ಸರಕಾರ‌ಕ್ಕೂ ಅಗತ್ಯವಾಗಿರುವ ಅಂಶ. ಹೀಗಾಗಿ, ಜಿಸಿಸಿ ವ್ಯಾಪ್ತಿಯ ಯಾವುದೇ ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾದರೂ ಕೇಂದ್ರ ಸರಕಾರ‌ಕ್ಕೆ ತಲೆನೋವೇ ಆಗುತ್ತದೆ. ಇದರ ಜತೆಗೆ ಕತಾರ್‌ನಲ್ಲಿ ನೈಸರ್ಗಿಕ ಅನಿಲ ಹೇರಳವಾಗಿದೆ. ಅದನ್ನು ಭಾರತಕ್ಕೆ ತರುವ ಬಗ್ಗೆಯೂ ಕೇಂದ್ರ ಸರಕಾರ‌ ಹಲವು ಯೋಜನೆಗಳನ್ನು ಮುಂದಿಟ್ಟಿದೆ. ಇವೆಲ್ಲದರ ಜತೆಗೆ ಬಿಕ್ಕಟ್ಟು ಮುಗಿದು ಹೋದರೆ ಪ್ರಾದೇಶಿಕ ಭದ್ರತೆಗೂ ಭದ್ರ ಬುನಾದಿ ಸಿಗುತ್ತದೆ. ಹೀಗಾಗಿ ಭಾರತ ಪ್ರತಿಪಾದಿಸುವ “ವಸುಧೈವ ಕುಟುಂಬಕಂ’ ಎಂಬ ಉಕ್ತಿಯೂ ಪ್ರಭಾವ ಬೀರಿದೆ ಎಂದು ಹೇಳಲಡ್ಡಿಯಿಲ್ಲ.

ಕೊಲ್ಲಿ ರಾಷ್ಟ್ರಗಳಲ್ಲಿ ಸರಿ ಸುಮಾರು 90 ಲಕ್ಷ ಮಂದಿ ಭಾರತೀಯ ಮೂಲದವರು ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೊಲ್ಲಿ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಗಣರಾಜ್ಯದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ನಮ್ಮವರು ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದವರು ಹೆಚ್ಚಿನವರು ಅಲ್ಲಿ ಜೀವನ ಕಂಡುಕೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಶೇ.9, ಕುವೈಟ್‌ನಲ್ಲಿ ಶೇ.11, ಯುಎಇನಲ್ಲಿ ಶೇ.16, ಕತಾರ್‌ನಲ್ಲಿ ಶೇ.18, ಬಹ್ರೈನ್‌ನಲ್ಲಿ ಶೇ.29, ಒಮಾನ್‌ನಲ್ಲಿ ಶೇ.37ರಷ್ಟು ಮಂದಿ ಭಾರತೀಯರು ಇದ್ದಾರೆ.

ಇನ್ನು ಕತಾರ್‌ನ ಬಗ್ಗೆ ಉಲ್ಲೇಖೀಸುವುದಿದ್ದರೆ ಅಲ್ಲಿನ ಒಟ್ಟು ಜನಸಂಖ್ಯೆಯೇ 28,81,053. ಈ ಪೈಕಿ ಭಾರತೀಯ ಮೂಲದವರ ಸಂಖ್ಯೆಯೇ 6,91,000. ಕತಾರ್‌-ಭಾರತ ನಡುವಿನ ಬಾಂಧವ್ಯದ ಬಗ್ಗೆ ಪ್ರಸ್ತಾವ ಮಾಡುವುದಿದ್ದರೆ ಅತ್ಯಂತ ಉತ್ತಮ ಬಾಂಧವ್ಯವೇ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಜಯಗಳಿಸಿದ್ದಾಗ ಅಲ್ಲಿನ ಪ್ರಧಾನಮಂತ್ರಿ ಶೇಖ್‌ ಅಬ್ದುಲ್ಲಾ ಬಿನ್‌ ನಾಸೆರ್‌ ಅಲ್‌ ತಾನಿ ಅಭಿನಂದನೆ ಸಲ್ಲಿಸಲು ಫೋನ್‌ ಮಾಡಿದ್ದರು. 2015ರಲ್ಲಿ ಶೇಖ್‌ ತಮೀಮ್‌ ಬಿನ್‌ ಹಮ್ಮದ್‌ ಅಲ್‌ ತನ್ನಿ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು ಎನ್ನುವುದು ಗಮನಾರ್ಹ ಅಂಶ. ಒಟ್ಟಿನಲ್ಲಿ 1991ರ ಬಿಕ್ಕಟ್ಟಿನ ಬಳಿಕ 2017ರಲ್ಲಿ ತಲೆದೋರಿದ್ದ ಬಿಕ್ಕಟ್ಟು ಮುಕ್ತಾಯವಾದದ್ದನ್ನು ಭಾರತದ ಮಟ್ಟಿಗಂತೂ ಬಾನಂಗಳದಲ್ಲಿ ಪೂರ್ಣ ಚಂದ್ರ ಕಾಣಿಸಿಕೊಂಡಂತೆಯೇ ಸರಿ.

 

 -ಸದಾಶಿವ ಕೆ.

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.