ಮೊದಲು ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಿ…
Team Udayavani, Jan 18, 2021, 3:40 AM IST
ಸಾಂದರ್ಭಿಕ ಚಿತ್ರ
ಮಂಗಳೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ಟೋಯಿಂಗ್ ಅವಾಂತರಗಳ ಕುರಿತಂತೆ ಉದಯವಾಣಿ ಸುದಿನ ಈಗಾಗಲೇ “ಪಾರ್ಕಿಂಗ್ ಪರದಾಟ’ ಅಭಿಯಾನದ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಅಭಿಯಾನದ ಭಾಗವಾಗಿ ಸಾರ್ವಜನಿಕರು ಅನೇಕ ಸಮಸ್ಯೆ, ಸಲಹೆ, ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಇದೇ ವೇಳೆ ನಗರದ ಬಸ್ ಮಾಲಕರ ಸಂಘ, ರಿಕ್ಷಾ ಚಾಲಕರ ಹೋರಾಟ ಸಮಿತಿ, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ, ವರ್ತಕರ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಉದಯವಾಣಿ ಸುದಿನ ಕಲೆ ಹಾಕಿದ್ದು, ಅವುಗಳನ್ನು ಇಲ್ಲಿ ಕೊಡಲಾಗಿದೆ.
ಹೊಸತನಕ್ಕೆ ತೆರೆದುಕೊಳ್ಳುವ ಕಾಲವಿದು :
ದಿನಗಳುರುಳಿದಂತೆ ಜನಸಂಖ್ಯೆಯಂತೆ ವಾಹನಗಳೂ ಅಧಿಕ ವಾಗುತ್ತಿವೆ. ಆದರೆ ಅದರ ಪ್ರಮಾಣಕ್ಕನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿ ಆಗದಿರುವುದು ಪ್ರಸಕ್ತ ಪಾರ್ಕಿಂಗ್ ಸಮಸ್ಯೆಗೆ ಮೂಲ ಕಾರಣ. ನಗರಕ್ಕೆ ಬರುವ ಜನರು ವಾಹನಗಳನ್ನು ನಿಲ್ಲಿಸುವುದೆಲ್ಲಿ? ಎಂದು ತೋರಿಸಿಕೊಡ ಬೇಕಾಗಿರುವುದು ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಯಾರು? ಪೊಲೀಸ್ ಇಲಾಖೆಯೋ? ಪಾಲಿಕೆಯೋ? ಎನ್ನುವುದು ಸದ್ಯ ಜನ ಸಾಮಾನ್ಯರ ಪ್ರಶ್ನೆ.ನಗರದ ಅಲ್ಲಲ್ಲಿ ಖಾಲಿ ಸರಕಾರಿ, ಖಾಸಗಿ ಸ್ಥಳಗಳಿದ್ದು, ಅದನ್ನು ಪಾರ್ಕಿಂಗ್‌ಗೆ ಬಳಸಿಕೊಳ್ಳಬಹುದು. ಕಳೆದ ವರ್ಷ ಸ್ವತ್ಛ ಮಂಗಳೂರು ಕಾರ್ಯಕರ್ತರು ಪಂಜೆ ಮಂಗೇಶ ರಾವ್ ರಸ್ತೆಯಲ್ಲಿ ಪಾಳು ಬಿದಿದ್ದ ಪೆಟ್ರೋಲ್ ಪಂಪ್ ಜಾಗವನ್ನು ಸ್ವತ್ಛಗೊಳಿಸಿ ಸಂಬಂಧಪಟ್ಟವರಲ್ಲಿ ಮಾತನಾಡಿ ಅಲ್ಲೀಗ ಪಾರ್ಕಿಂಗ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಪ್ರತಿ ರವಿವಾರ ಸಾವಯವ ಸಂತೆಯೂ ಅಲ್ಲಿಯೇ ನಡೆಯುತ್ತಿದೆ. ಇಂತಹ ನೂರಾರು ಸ್ಥಳಗಳನ್ನು ಪಾರ್ಕಿಂಗ್‌ಗೆ ಬಳಸಿಕೊಳ್ಳಬಹುದು.ಸರಕಾರವು ಖಾಸಗಿ ಜಾಗದವರಿಗೆ ಪೇ ಪಾರ್ಕಿಂಗ್ ಮಾಡಲು ಸರಳ ಅನುಮತಿ ನೀಡಬೇಕು. ಬೃಹತ್ ವಾಣಿಜ್ಯ ಕಟ್ಟಡಗಳ ಮಾಲಕರು ಪಾರ್ಕಿಂಗ್‌ಗೆ ಕಡ್ಡಾಯವಾಗಿ ಅವರೇ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಬೇಕು. ಮದುವೆ ಮಂಟಪ, ಸಭಾಂಗಣ, ಆಡಿಟೋರಿಯಂನಲ್ಲಿ ಕಾರ್ಯಕ್ರಮಗಳಿಲ್ಲದಾಗ ಅವರ ಪಾರ್ಕಿಂಗ್ ಸ್ಥಳಗಳನ್ನು ಕನಿಷ್ಠ ದರದಲ್ಲಿ ಪೇ ಪಾರ್ಕಿಂಗ್ ಆಗಿ ಮಾಡಬಹುದು. ಈ ಮೂಲಕ ನಗರದ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದನ್ನು ಕಡಿಮೆ ಮಾಡಬಹುದು. ವಿದೇಶದಲ್ಲಿ ಇತ್ತೀಚಿಗೆ ಯಾವುದೇ ಕಾರ್ಯಕ್ರಮವಾದರೂ ಆಮಂತ್ರಣದಲ್ಲಿ “ಪಾರ್ಕಿಂಗ್ ಸ್ಪೇಸ್ ಅವೈಲೆಬಲ್’ ಎಂದು ನಮೂದಿಸುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ಕಾರ್ಯಕ್ರಮ ಹೊಣೆಹೊತ್ತವರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವುದು ಕಡ್ಡಾಯ. ಇಂತಹ ಹೊಸ ಹೊಸ ಮಾದರಿಗಳನ್ನು ಪರಿಚಯಿಸಿ ಹೊಸತನಕ್ಕೆ ತೆರೆದುಕೊಂಡಾಗ ಮಾತ್ರ ಪಾರ್ಕಿಂಗ್ ಸಮಸ್ಯೆ ನಿವಾರಣೆ ಸಾಧ್ಯ. – ದಿಲ್ ರಾಜ್ ಆಳ್ವ, ಮಂಗಳೂರು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿ :
ನಗರದಲ್ಲಿ ಬಹಳಷ್ಟು ವಾಣಿಜ್ಯ ಕಟ್ಟಡ ಸಂಕೀರ್ಣಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ; ಸಮೀಪ ದಲ್ಲಿ ಎಲ್ಲೂ ಪೇ ಪಾರ್ಕಿಂಗ್ ಸೌಲಭ್ಯ ಕೂಡ ಇರುವುದಿಲ್ಲ. ಒಂದು ವೇಳೆ ರಸ್ತೆ ಬದಿ ವಾಹನ ನಿಲ್ಲಿಸಿ ಅಂಗಡಿಗೆ ತೆರಳಿ ವಾಪಸ್ ಬರುವಷ್ಟರಲ್ಲಿ ಟೋಯಿಂಗ್ ಮಾಡುವವರು ಬಂದರೆ ಅಲ್ಲಿಂದ ವಾಹನವನನ್ನು ಎತ್ತಿಕೊಂಡು ಹೋಗುತ್ತಾರೆ. ಇಂತಹ ವಿದ್ಯಮಾನದಿಂದಾಗಿ ಗ್ರಾಹಕರಿಗೂ ಸಂಕಷ್ಟ, ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ. ಆದ್ದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇಲ್ಲದ ವಾಣಿಜ್ಯ ಮಳಿಗೆಗಳ ಬಳಿ ಕನಿಷ್ಠ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ನೀಡುವ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಚಿಂತನೆ ನಡೆಸಬೇಕು. ವಾಹನಗಳನ್ನು ಟೋಯಿಂಗ್ ಮಾಡುವಾಗ ಕನಿಷ್ಠ 5 ನಿಮಿಷ ಕಾಲ ಅನೌನ್ಸ್ ಮಾಡ ಬೇಕೆಂಬ ನಿಯಮ ಇದ್ದರೂ ಈ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಾತ್ರವಲ್ಲದೆ ಟೋಯಿಂಗ್ ಮಾಡುವ ವಿಚಾರದಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ; ಕೆಲವೊಂದು ರಸ್ತೆಗಳಲ್ಲಿ ಮತ್ತು ವಾಣಿಜ್ಯ ಮಳಿಗೆಗಳ ಬಳಿ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದರೂ ಟೋಯಿಂಗ್ ಮಾಡುವುದಿಲ್ಲ. ಇದು ಸಲ್ಲದು.– ನಾಗೇಶ್, ವರ್ತಕ, ಮಂಗಳೂರು
ರಿಕ್ಷಾಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಬೇಕು :
ನಗರದಲ್ಲಿನ ಸಂಚಾರ ನಾಡಿ ಆಟೋ ರಿಕ್ಷಾ ಗಳಾಗಿವೆ. ಆದರೆ ಅವುಗಳಿಗೆ ನಿಲ್ಲುವುದಕ್ಕೇ ಸರಿಯಾದ ಜಾಗವಿಲ್ಲ. ಈಗಂತೂ ಸ್ಮಾರ್ಟ್ ಸಿಟಿ ಕಾಮಗಾರಿಯ ಹಿನ್ನೆಲೆಯಲ್ಲಿ ಎಲ್ಲ ಕಡೆ ರಸ್ತೆ ಅಗೆದು ರಿಕ್ಷಾ ನಿಲುಗಡೆಗೆ ತಾಣಗಳೇ ಇಲ್ಲ ದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಟೋ ರಿಕ್ಷಾಗಳಿಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂಬ ನಿಯಮ ಇದೆ. ಆದ್ದರಿಂದ ರಿಕ್ಷಾಗಳಿಗೆ ವ್ಯವಸ್ಥಿತವಾದ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ.
ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸಂಬಂಧ ಪಟ್ಟವರ ಕರ್ತವ್ಯ. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಎಲ್ಲ ಕಡೆ ಏಕ ಕಾಲದಲ್ಲಿ ಆರಂಭಿಸಿ ಹಂಪನಕಟ್ಟೆ ಭಾಗದಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಸಂಚರಿಸಲು ಒಂದು ಮಾರ್ಗದಲ್ಲಿ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಸಮಸ್ಯೆ ಉಂಟಾಗಿದೆ. ರಿಕ್ಷಾ ಚಾಲಕರಿಗೂ, ಪ್ರಯಾಣಿಕರಿಗೂ ಕಷ್ಟವಾಗಿದೆ. “ಸುತ್ತು ಬಳಸಿ ಪ್ರಯಾಣಿಸಿ ಅಧಿಕ ಬಾಡಿಗೆ ದರ ವಸೂಲಿ ಮಾಡುವ ತಂತ್ರಗಾರಿಕೆಯೇ’ ಎಂಬುದಾಗಿ ಪ್ರಯಾಣಿಕರು ರಿಕ್ಷಾ ಚಾಲಕರನ್ನು ಪ್ರಶ್ನಿಸುತ್ತಿದ್ದಾರೆ. ಮಾತ್ರವಲ್ಲದೆ ಇರುವ ಒಂದೇ ರಸ್ತೆಯಲ್ಲಿ ಪ್ರತಿಭಟನ ಮೆರವಣಿಗೆಗಳಿಗೂ ಅವಕಾಶ ನೀಡುವುದರಿಂದ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್‌ಗೂ ಕಾರಣವಾಗುತ್ತಿದೆ. ಜನರಿಗೆ ಈ ರೀತಿಯ ತೊಂದರೆ ಕೊಡುವುದು ಎಷ್ಟು ಸರಿ? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕು.- ಲೋಕೇಶ್ ಶೆಟ್ಟಿ, ದ.ಕ., ಅಧ್ಯಕ್ಷರು, ಜಿಲ್ಲಾ ಆಟೋ ರಿಕ್ಷಾ ಚಾಲಕರ ಹೋರಾಟ ಸಮಿತಿ
ಖಾಲಿ ಜಾಗ ಗುರುತಿಸಿ ಪಾವತಿ ಪಾರ್ಕಿಂಗ್ ವ್ಯವಸ್ಥೆ ಮಾಡಲಿ :
ನಗರದಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯ ಇಲ್ಲದ ಕಾರಣ ವ್ಯಾಪಾರ – ವಾಣಿಜ್ಯ ವ್ಯವಹಾರಕ್ಕೆ ಧಕ್ಕೆಯಾಗು ತ್ತಿದೆ. ಪಾರ್ಕಿಂಗ್ ಸೌಕರ್ಯ ಇಲ್ಲದ ಕಡೆ ಗ್ರಾಹಕರು ಬರುತ್ತಿಲ್ಲ. ಹಾಗಾಗಿ ಈಗಾಗಲೇ ಹಲವಾರು ಮಂದಿ ವ್ಯಾಪಾರಿಗಳು ಸೂಕ್ತ ಪಾರ್ಕಿಂಗ್ ಇರುವ ಕಟ್ಟಡಗಳನ್ನು ಹುಡುಕುತ್ತಿದ್ದಾರೆ. ಮನ ಪಾವು ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅದನ್ನು ಗುರುತಿಸಿ ಪೇ ಪಾರ್ಕಿಂಗ್ (ಪಾವತಿ ಪಾರ್ಕಿಂಗ್)ಗೆ ಅವಕಾಶ ಕಲ್ಪಿಸಬೇಕು, ಪಾರ್ಕಿಂಗ್ ತಾಣಗಳ ಪಟ್ಟಿಯನ್ನು ಪ್ರಕಟಿಸ ಬೇಕು. ರಜಾ ದಿನ ಮತ್ತು ವೀಕೆಂಡ್ ದಿನಗಳಲ್ಲಿ ನಗರದಲ್ಲಿ ಲಭ್ಯವಿರುವ ಖಾಸಗಿ ಜಾಗದಲ್ಲಿ ಪೇ ಪಾರ್ಕಿಂಗ್‌ಗೆ ಅನುಮತಿ ಕೊಡಬಹುದು. ಹಳೆ ಬಸ್ ನಿಲ್ದಾಣದಲ್ಲಿ ಬಹು ಅಂತಸ್ತಿನ ಕಾರು ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿಯನ್ನು ಅದಷ್ಟು ಶೀಘ್ರ ಆರಂಭಿಸಿ ಮುಗಿಸಬೇಕು. ಬಸ್‌ಗಳಲ್ಲಿ ಸುರಕ್ಷೆ, ಆರಾಮದಾಯಕ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿ, ಜನರು ಬಸ್‌ಗಳನ್ನು ಹೆಚ್ಚು ಅವಲಂಬಿಸುವಂತೆ ಮಾಡುವ ಮೂಲಕ ನಗರದಲ್ಲಿ ಸ್ವಂತ ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬಹುದು. ಪಾರ್ಕಿಂಗ್ ಸಮಸ್ಯೆಗೆ ಇದು ಒಂದು ಪರಿಹಾರ ಆಗಬಹುದು.– ಐಸಾಕ್ ವಾಸ್, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ.
ಇಂದು ಸಂವಾದ :
ಉದಯವಾಣಿ ಸುದಿನದಲ್ಲಿ ಜ. 11ರಂದು ಆರಂಭವಾದ “ಪಾರ್ಕಿಂಗ್ ಪರದಾಟ’ ಅಭಿಯಾನದ ಭಾಗವಾಗಿ ಸಾರ್ವಜನಿಕರು ಮುಂದಿಟ್ಟಿರುವ ಸಮಸ್ಯೆ, ಸಲಹೆ, ಅಭಿಪ್ರಾಯಗಳ ಕುರಿತಂತೆ ಸೋಮವಾರ ಶಾಸಕ ಡಿ. ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರೊಂದಿಗೆ ಸಂವಾದ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.