ಯುವಶಕ್ತಿಯಿಂದ ದೇಶದ ವಿಕಾಸ
Team Udayavani, Jan 20, 2021, 8:02 PM IST
ಶಿವಮೊಗ್ಗ: ದೇಶದ ಯುವಸಮೂಹಕ್ಕೆ ಉದ್ಯೋಗಾವಕಾಶ ಲಭಿಸಿ, ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಹೇಳಿದರು.
ಮಂಗಳವಾರ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ 7, 10, ಪಿ.ಯು.ಸಿ., ಐ.ಟಿ.ಐ., ಬಿ.ಇ., ಯಾವುದೇ ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ರಾಜ್ಯದಲ್ಲಿನ ಯಾವುದೇ ವಿದ್ಯಾರ್ಹತೆಯ ಯುವಕ- ಯುವತಿಯರಿಗೆ ಉದ್ಯೋಗಾವಕಾಶವನ್ನು ಸೃಜಿಸಿ ಒದಗಿಸುವ ಸದುದ್ದೇಶದಿಂದ ಉದ್ಯೋಗ ಮೇಳ ಆಯೋಜಿಸುತ್ತಿದೆ. ಎಲ್ಲರ ದೃಷ್ಟಿ ಇಂದಿನ ಯುವಸಮೂಹದ ಮೇಲಿದೆ. ಈ ಯುವಶಕ್ತಿ ವ್ಯರ್ಥವಾಗದೆ ಸದ್ವಿನಿಯೋಗವಾಗಬೇಕೆಂದರು. ನಿರೀಕ್ಷಿತ ಉದ್ಯೋಗ ದೊರೆಯಲಿಲ್ಲವೆಂಬ ಹತಾಶೆ ಬೇಡ. ಮರಳಿ ಪ್ರಯತ್ನ ಮಾಡಿದಾಗ ಯಶಸ್ಸು ಖಂಡಿತವಾಗಿಯೂ ದೊರೆಯಲಿದೆ. ಮೊದಲು ಉದ್ಯೋಗಿಗಳಾಗಿ, ನಂತರ ಉದ್ಯೋಗದಾತರಾಗಿ ಅನೇಕರಿಗೆ ಉದ್ಯೋಗ ಒದಗಿಸುವಂತಾಗಬೇಕೆಂದರು.
ಇದನ್ನೂ ಓದಿ: ಕೃಷಿಕ ಸಮಾಜ ರೈತರು- ಸರ್ಕಾರದ ನಡುವಿನ ಸೇತುವಾಗಲಿ: ಮಹೇಂದ್ರನಾಥ್
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಾಸುದೇವ ಜೆ.ಆರ್. ಮಾತನಾಡಿ, ತಾವು ಬಯಸುವ ಉದ್ಯೋಗ ಹೊಂದಲು ನಿಗ ದಿತ ವಿದ್ಯಾರ್ಹತೆ, ಕೌಶಲ್ಯ ಹೊಂದಿರಬೇಕು. ಯಾವುದೇ ವ್ಯಕ್ತಿ ಪರಾವಲಂಬಿಗಳಾಗದೇ ಸ್ವತಂತ್ರ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅದಕ್ಕಾಗಿ ಕನಸುಗಳಿರಲಿ. ಅದಕ್ಕಾಗಿ ಅನುಭವ ಹೊಂದಿರುವುದು ಸೂಕ್ತ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಮಾತನಾಡಿ, ರಾಜ್ಯದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿಫುಲ ಅವಕಾಶಗಳಿವೆ. ಕೈಗಾರಿಕೆ, ಸೇವಾ ಚಟುವಟಿಕೆಗಳಿಗೆ ಕೈಗಾರಿಕಾ ಇಲಾಖೆ ಉತ್ತೇಜನ ನೀಡಲಿದೆ. ಶೇ.15-35 ಪ್ರೋತ್ಸಾಹಧನದೊಂದಿಗೆ ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ನೀಡಲಾಗುತ್ತಿದೆ. ಕೈಗಾರಿಕೆಗಳಿಗೆ 25 ಲಕ್ಷ ಹಾಗೂ ಸೇವಾ ವಲಯಗಳಿಗೆ 10 ಲಕ್ಷ ರೂ. ಗಳವರೆಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗ ಕೈಗೊಳ್ಳಬಹುದಾಗಿದೆ. ಇಂತಹ ಹಲವು ಉದ್ಯೋಗಾವಕಾಶಗಳಿಗಾಗಿ ಅನೇಕ ಜಾಲತಾಣದಲ್ಲಿ ಮಾಹಿತಿ ಲಭ್ಯವಿದೆ ಎಂದರು. ಮಲೆನಾಡು ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಕೆ.ಎನ್. ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.