ಮೂಡುಬಿದಿರೆ ಮಾರೂರುನಲ್ಲಿ ಸರಕಾರಿ ಮದ್ಯದಂಗಡಿ: ಕಾಂಗ್ರೆಸ್ ಪ್ರತಿಭಟನೆ
ಮನವಿ ಸ್ವೀಕರಿಸಲು ಬಾರದ ಅಧಿಕಾರಿಗಳು; ಬಿಸಿಲಲ್ಲಿ ನೆಲದಲ್ಲೇ ಕುಳಿತು ಪ್ರತಿಭಟಿಸಿದ ಮಾಜಿ ಸಚಿವ
Team Udayavani, Jan 22, 2021, 9:35 PM IST
ಮೂಡುಬಿದಿರೆ: ಮಾರೂರು ಗ್ರಾಮವನ್ನು ಮದ್ಯಮುಕ್ತವನ್ನಾಗಿಸುವ ಆಂದೋಲನ ವರ್ಷಗಳ ಹಿಂದೆ ನಡೆದಿದ್ದರೆ ಈಗ ಅದೇ ಗ್ರಾಮದಲ್ಲಿ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆ (ಮದ್ಯದಂಗಡಿ) ತೆರೆಯಲು ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಮಾಜಿ ಸಚಿವ ಅಭಯಚಂದ್ರ ಅವರ ನೇತೃತ್ವದಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆದು, ಹಲವು ಮಂದಿ ಮುಖಂಡರು ಮಾತನಾಡಿ ಸುಮಾರು ಒಂದೂವರೆ ಗಂಟೆ ಕಳೆದರೂ ತಾಲೂಕು ಕಚೇರಿಯ ಯಾವುದೇ ಅಧಿಕಾರಿಗಳು ಪ್ರತಿಭಟನಕಾರರ ಮನವಿ ಸ್ವೀಕರಿಸಲು ಬಾರದೇ ಇರುವುದರ ಬಗ್ಗೆ ಆಕ್ರೋಶಗೊಂಡ ಅಭಯಚಂದ್ರ ಹಾಗೂ ಕಾರ್ಯಕರ್ತರು ಧ್ವಜಕಟ್ಟೆ ಇರುವ ಅಂಗಳದಿಂದ ಹೊರಟು ತಹಶೀಲ್ದಾರರ ಕಚೇರಿ ಮುಂಭಾಗದಲ್ಲೇ ನೆಲದಲ್ಲಿ ಕುಳಿತು ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ್ದೇ ಅಲ್ಲದೆ ಜಿಲ್ಲಾಧಿಕಾರಿಗಳೇ ಬಂದು ಮನವಿ ಸ್ವೀಕರಿಸಲಿ ಎಂದು ಆಗ್ರಹಿಸಿದಾಗ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನಕಾರರ ಕೂಗಿಗೆ ಕೊನೆಗೂ ಕಚೇರಿಯಿಂದ ಹೊರಬಂದ ಉಪತಹಶೀಲ್ದಾರರು “ತಹಶೀಲ್ದಾರರು ಇನ್ನಷ್ಟೇ ಬರಲಿದ್ದಾರೆ, ಸ್ವಲ್ಪ ಹೊತ್ತಿನಲ್ಲೇ ಬಂದು ಮುಟ್ಟುತ್ತಾರೆ’ ಎಂದಾಗ “ಕಚೇರಿ ತೆರೆದು ಒಂದೂವರೆ ಗಂಟೆಯಾದರೂ ತಹಶೀಲ್ದಾರರು ಕಚೇರಿಗೇ ಬಂದಿಲ್ಲ ಎಂದರೇನು? ಯಾರ ಕುಮ್ಮಕ್ಕಿನಿಂದ?’ ಎಂದು ಅಭಯಚಂದ್ರ ಜೋರಾಗಿ ಪ್ರಶ್ನಿಸಿದರು.
ಪುರಸಭಾ ಸದಸ್ಯ ಸುರೇಶ ಪ್ರಭು ” ಮಾಜಿ ಸಚಿವರೋರ್ವರ ಮನವಿ ತೆಗೆದುಕೊಳ್ಳಲು ಯಾರೂ ಬಂದಿಲ್ಲವೆಂದರೇನರ್ಥ? ಮಾಜಿ ಸಚಿವರು ನೆಲದಲ್ಲಿ ಕುಳಿತುಕೊಳ್ಳುವಂತಾದರೆ ಇನ್ನು ಜನಸಾಮಾನ್ಯರ ಪಾಡೇನು?’ ಎಂದು ಏರಿದ ದನಿಯಲ್ಲಿ ಕೇಳಿದರು.
ಅಷ್ಟರಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿ ಉಪತಹಶೀಲ್ದಾರರಿಗೆ ವಿಷಯದ ಗಹನತೆಯನ್ನು ಮನವರಿಕೆ ಮಾಡಿ ಮನವಿ ಸ್ವೀಕರಿಸಲು ಹೊರಬರುವಂತೆ ಮನವೊಲಿಸಿದರು. ಆಗ ಉಪತಹಶೀಲ್ದಾರರು ಹೊರಬಂದರಾದರೂ ಪ್ರತಿಭಟನಕಾರರ ಬಿರುಸಾದ ನುಡಿಗಳಿಂದ ತತ್ತರಿಸಿಹೋಗಿ ನಿರುಪಾಯರಾಗಿ ನಿಂತರು.
“ನಿಮಗೆ ಭ್ರಷ್ಟಾಚಾರ ಮಾಡಲು ಗೊತ್ತಿದೆ; ಲಂಚ ಸ್ವೀಕರಿಸಲು ಗೊತ್ತಿದೆ, ನಮ್ಮ ಮನವಿ ಸ್ವೀಕರಿಸಲು ಗೊತ್ತಿಲ್ಲವೇ? ಇಲ್ಲೇ ಕಚೇರಿಯ ಬಾಗಿಲು ಬಂದ್ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದರು ಅಭಯಚಂದ್ರ.
ಅಷ್ಟು ಹೊತ್ತಿಗೆ ತಹಶೀಲ್ದಾರ್ ಡಾ| ವೆಂಕಟೇಶ ನಾಯಕ್ ಆಗಮಿಸಿದರೂ ಪರಿಸ್ಥಿತಿ ತಿಳಿಯಾಗದ ಲಕ್ಷಣ ಕಂಡು ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರು “ಈಗಿರುವ ತಹಶೀಲ್ದಾರ ಡಾ. ವೆಂಕಟೇಶ್ ನಾಯಕ್ ಅವರು ಮುಂದಿನ ತಹಶೀಲ್ದಾರರಾಗಿ ನಿಯೋಜಿತರಾಗಿರುವ, ಮಂಗಳೂರು, ಮೂಲ್ಕಿ ಯೊಂದಿಗೆ ಮೂಡುಬಿದಿರೆ ತಹಶೀಲ್ದಾರರಾಗಿಯೂ ಕಾರ್ಯನಿರ್ವಹಿಸಲಿರುವ ಗುರುಪ್ರಸಾದ್ ಅವರಿಲ್ಲಿಗೆ ಬಾರದೆ, ಅವರಿಗೆ ಅಧಿಕಾರ ವಹಿಸಿ ಕೊಡಲು ಇನ್ನೂ ಸಾಧ್ಯವಾಗದ ಕಾರಣ, ಕೊಂಚ ಸಮಸ್ಯೆಯಾಗಿದೆ; ತಾವು ಹಿರಿಯರು, ಸಹಕರಿಸಬೇಕು’ ಎಂದು ವಿನಂತಿಸಿದಂತೆ, ಅಭಯಚಂದ್ರ ಅವರು ತಮ್ಮ ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸ್ವ-ಸಹಾಯ ಸಂಘ, ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಮಾರೂರು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮಾರೂರು ಹೊಸಂಗಡಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಪ್ರಮುಖರೂ ಒಳಗೊಂಡಂತೆ ಮಾರೂರಿನ ಸುಮಾರು 50 ಮಂದಿ ನಾಗರಿಕರು ಸಹಿ ಹಾಕಿರುವ ಮನವಿಯ ಪ್ರತಿಗಳನ್ನು ಸರಕಾರದ ಅಬಕಾರಿ ಸಚಿವರು, ದ.ಕ. ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಆಯುಕ್ತರು, ಮೂಡುಬಿದಿರೆ ಅಬಕಾರಿ ಉಪನಿರೀಕ್ಷಕರು, ತಹಶೀಲ್ದಾರರು, ಪುರಸಭಾ ಮುಖ್ಯಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳುಹಿಸಲಾಗಿದೆ.
ಮೂರನೇ ಬಾರಿ ಪ್ರತಿಭಟನೆ :
ಇದಕ್ಕೂ ಮುನ್ನ ನಡೆದ ಪ್ರತಿಭಟನ ಸಭೆಯಲ್ಲಿ ಮಾಜಿ ಸಚಿವಅಭಯಚಂದ್ರ ಮಾತನಾಡಿ, ಮದ್ಯಮುಕ್ತ ಗ್ರಾಮಗಳನ್ನು ರೂಪಿಸುತ್ತಿರುವ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನ ಮಾರೂರಿನ ಮೂಲಕ ಈ ತಾಲೂಕನ್ನು ಪ್ರವೇಶಿಸಿದ್ದು ಇದೀಗ ಅವರ ಆಶಯಗಳಿಗೆ ವಿರುದ್ಧವಾಗಿ ಇಲ್ಲಿ ಮದ್ಯದಂಗಡಿ ತೆರೆಯಲು ಸರಕಾರ, ಪರೋಕ್ಷವಾಗಿ ಜನಪ್ರತಿನಿಧಿಗಳು ಮುಂದಾಗಿರುವುದನ್ನು ಖಂಡಿಸುತ್ತೇನೆ, ಈ ಪರವಾನಿಗೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.
ಪುರಸಭಾ ಸದಸ್ಯ, ಎಸ್‌ಕೆಡಿಆರ್‌ಡಿಪಿಯ ಮೂಡುಬಿದಿರೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜೊಸ್ಸಿ ಮಿನೇಜಸ್, ಮಾತನಾಡಿ, “ಮೂಡುಬಿದಿರೆಯ ಮಾರೂರು , ಗಂಟಾಲ್ಕಟ್ಟೆ, ಕಲ್ಲಬೆಟ್ಟು ಗ್ರಾಮವು ಅತಿಸೂಕ್ಷ್ಮ ಪ್ರದೇಶವೆಂದು ಪೊಲೀಸ್ ಇಲಾಖೆಯು ಗುರುತಿಸಿದ್ದು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಂಗತಿಗಳು ನಡೆಯುತ್ತಿರುವುದರಿಂದ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡಗಳ ಸಹಿತ ವಿವಿಧ ಕೋಮುಗಳ ಮಂದಿ ವಾಸವಾಗಿರುವ, ಮದ್ಯಮುಕ್ತ ವಲಯವೆಂಬ ಹೆಸರನ್ನು ಪಡೆದಿರುವ ಈ ತಾಣದಲ್ಲಿ ಮದ್ಯದಂಗಡಿ ತೆರೆಯುವುದು ಸಲ್ಲದು. ಈ ಬಗ್ಗೆ 2020ರ ಆ.13 ಮತ್ತು ಸರಿಯಾಗಿ ಒಂದು ವರ್ಷದ ಹಿಂದೆ, 2021ರ ಜ.22ರಂದು ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಇದೀಗ ಮೂರನೇ ಬಾರಿ ಪ್ರತಿಭಟನೆ ನಡೆಯುತ್ತಿದೆ’ ಎಂದರು.
ಕಾಂಗ್ರೆಸ್‌ಬ್ಲಾಕ್ ಅಧ್ಯಕ್ಷ ವಲೇರಿಯನ್ ಸಿಕ್ವೇರ,ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಸೇವಾದಳದ ಅಧ್ಯಕ್ಷ ಮಿತ್ತಬೈಲು ವಾಸುದೇವ ನಾಯಕ್ , ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ ಪ್ರಭು, ಇಬ್ರಾಹಿಂ ಕರೀಂ, ಹಿದಾಯತುಲ್ಲ, ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ , ಶಿರ್ತಾಡಿ ಪಂ. ಸದಸ್ಯ ಎಸ್. ಪ್ರವೀಣ್ ಕುಮಾರ್, ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ಜಯಕುಮಾರ ಶೆಟ್ಟಿ ದರೆಗುಡ್ಡೆ , ಶಿವಾನಂದ ಪಾಂಡ್ರು , ರಾಜೇಶ್ ಕಡಲಕೆರೆ ಮೊದಲಾದ ಮುಖಂಡರು, ಕಾರ್ಯಕರ್ತರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.