ವಯಸ್ಸು ಹೆಚ್ಚಿಲ್ಲ; ಕೇವಲ ನಾಲ್ಕು ವರ್ಷಗಳು!
Team Udayavani, Jan 25, 2021, 6:00 AM IST
ಸಾಂದರ್ಭಿಕ ಚಿತ್ರ
“ಮೂರು ಕತ್ತೆಯ ಪ್ರಾಯ ವಾಯಿತು’ ಎನ್ನುವುದು ಕರಾವಳಿಯ ಆಡುಭಾಷೆಯಲ್ಲಿ ಬಳಕೆಯಲ್ಲಿರುವ ಒಂದು ನುಡಿಗಟ್ಟು. ಸಾಕಷ್ಟು ದೊಡ್ಡವ ರಾದರೂ ಬುದ್ಧಿಯಿಲ್ಲದಂತೆ ವರ್ತಿ ಸುವವರನ್ನು ಲಘುವಾಗಿ ತರಾಟೆ ಗೆತ್ತಿಕೊಳ್ಳುವ ಮಾತು ಇದು. ವಯಸ್ಸಾದಂತೆ ಬುದ್ಧಿ ಬಲಿಯುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ ಮತ್ತು ಅದು ನಿಜವೂ ಹೌದು. ವಯಸ್ಸನ್ನು ಜನ್ಮದಿನದಿಂದ ಲೆಕ್ಕ ಹಾಕುವುದು ಸಾಮಾನ್ಯ ರೂಢಿ. ಅದು ದೇಹಕ್ಕಾದ ವಯಸ್ಸಾಯಿತು. ಜ್ಞಾನಕ್ಕೆ ಸಂಬಂಧಿಸಿ ವಯಸ್ಸನ್ನು ಹೇಳುವುದಾದರೆ?
ಕುತೂಹಲದ ಬೌದ್ಧ ಕಥೆಯೊಂದಿದೆ.
ರಾಜಾ ಪ್ರಸೇನ ಜಿತನು ಮುನಿ ಗೌತಮ ಬುದ್ಧನ ಭೇಟಿಗೆ ಬಂದಿದ್ದ. ಅರಸನಿಗೆ ಯಥೋಚಿತ ಸತ್ಕಾರವಾದ ಬಳಿಕ ಇಬ್ಬರೂ ಕುಳಿತು ಮಾತುಕತೆ ಆರಂಭಿಸಿ ದ್ದರು. ರಾಜ್ಯ, ಆಡಳಿತ, ಪ್ರಜೆಗಳು, ಮಳೆ -ಬೆಳೆ ಹೀಗೆ ಮಾತುಕತೆ ಸಾಗಿತ್ತು.
ಅಷ್ಟರಲ್ಲಿ ವಯೋವೃದ್ಧ ಬೌದ್ಧ ಭಿಕ್ಕುವೊಬ್ಬ ಅಲ್ಲಿಗೆ ಆಗಮಿಸಿದ. ಅವನನ್ನು ನೋಡಿದರೆ ತಿಳಿಯಬಹು ದಿತ್ತು, ವಯಸ್ಸು ಎಪ್ಪತ್ತರ ಮೇಲೆ. ಚರ್ಮ ನೆರಿಗೆ ಬಿದ್ದಿತ್ತು, ಬೆನ್ನು ಸ್ವಲ್ಪ ಬಾಗಿತ್ತು.
ಭಿಕ್ಕು ಅವಸರವಸರವಾಗಿ ಒಳಕ್ಕೆ ಬಂದು ಹೇಳಿದ, “ಕ್ಷಮಿಸಿ. ನಿಮ್ಮಿಬ್ಬರ ಘನ ಸಂವಾದದ ನಡುವೆ ತೊಂದರೆ ಉಂಟು ಮಾಡುತ್ತಿದ್ದೇನೆ. ಆದರೆ ಇದು ನನಗೆ ಅನಿವಾರ್ಯ. ನಾನು ಪಕ್ಕದ ಹಳ್ಳಿಗೆ ಹೋಗುವವನಿದ್ದೇನೆ. ಹಾದಿ ಮಧ್ಯೆ ಬುದ್ಧನ ಪಾದಕಮಲಗಳಿಗೆ ನಮಸ್ಕರಿಸಿ ಹೋಗೋಣ ಎಂದು ಕೊಂಡೆ. ನಾಳೆ ನನಗೆ ಅವಕಾಶ ಸಿಗು ವುದೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಸಿಕ್ಕಿದ ಅವಕಾಶ ಸದುಪಯೋಗ ಪಡಿಸಿ ಕೊಳ್ಳೋಣ ಎಂದುಕೊಂಡೆ. ಅದಾಗಲೇ ಮುಸ್ಸಂಜೆ ಯಾಗಿದೆ, ರಾತ್ರಿಗೆ ಮುನ್ನ ಪಕ್ಕದ ಹಳ್ಳಿ ಸೇರಬೇಕು. ಹೆಚ್ಚು ತೊಂದರೆ ಕೊಡುವುದಿಲ್ಲ’. ಇಷ್ಟು ಹೇಳಿ ಭಿಕ್ಕು ಗೌತಮ ಬುದ್ಧನ ಪಾದಗಳಿಗೆ ನಮಸ್ಕರಿಸಿ ಎದ್ದ ಮತ್ತು ಮುಂದಕ್ಕೆ ಹೊರಡಲು ಅನುವಾದ.
ಬೌದ್ಧ ಮುನಿಗಳು, ಭಿಕ್ಕುಗಳು ರಾತ್ರಿ ಪ್ರಯಾಣ ಮಾಡುವುದಿಲ್ಲ. ಸೂರ್ಯ ಮುಳುಗಿದೊಡನೆ ಎಲ್ಲಿದ್ದರೋ ಅಲ್ಲೇ ತಂಗುತ್ತಾರೆ ಅಥವಾ ಸೂರ್ಯಾಸ್ತಕ್ಕೆ ಮುನ್ನ ಗಮ್ಯ ಸೇರುವಂತೆ ಪ್ರಯಾಣ ಹೊಂದಿಸಿಕೊಳ್ಳುತ್ತಾರೆ.
“ಒಂದು ಪ್ರಶ್ನೆ’ ಬುದ್ಧ ಹೇಳಿದ, “ನಿಮಗೀಗ ಎಷ್ಟು ವಯಸ್ಸಾಯಿತು?’
“ಹೆಚ್ಚಿಲ್ಲ, ನಾಲ್ಕು ವರ್ಷಗಳು’ ಎಂದು ಭಿಕ್ಕು ಉತ್ತರಿಸಿದ.
ರಾಜಾ ಪ್ರಸೇನಜಿತ ನಿಗೆ ನಂಬುವುದಕ್ಕಾಗ ಲಿಲ್ಲ. ಹಿಂದಿನ ಕಾಲದ ಕೆಲವರಿಗೆ ಹುಟ್ಟಿದ ದಿನಾಂಕ ಖಚಿತವಾಗಿ ಗೊತ್ತಿರುವುದಿಲ್ಲ. ಆದರೆ ಅಜಮಾಸು ವಯಸ್ಸು ಹೇಳುತ್ತಾರೆ. ಈ ಭಿಕ್ಕುವೂ ಎಪ್ಪತ್ತು – ಎಂಬತ್ತರ ಆಸುಪಾಸಿನ ವಯಸ್ಸಿನವನು. ಆದರೆ ನಾಲ್ಕು ವರ್ಷ ಎನ್ನುತ್ತಿದ್ದಾನಲ್ಲ!
“ನನ್ನ ಆಶೀರ್ವಾದಗಳು ಸದಾ ನಿಮ್ಮ ಮೇಲಿರಲಿ’ ಎಂದು ಬುದ್ಧ ನುಡಿದು ಭಿಕ್ಕುವನ್ನು ಬೀಳ್ಕೊಟ್ಟ.
ಭಿಕ್ಕು ಅತ್ತ ಹೋದ ಕೂಡಲೇ ರಾಜಾ ಪ್ರಸೇನಜಿತನ ಪ್ರಶ್ನೆ, “ಅವರು ನಾಲ್ಕು ವರ್ಷ ಎಂದದ್ದನ್ನು ನಂಬಿಬಿಟ್ಟಿರಾ?’
“ಈಗ ನಿನಗೇ ಒಂದು ಪ್ರಶ್ನೆ- ನಿನಗೆಷ್ಟು ವಯಸ್ಸಾಯಿತು? ನೀನು ಬಂದಲ್ಲಿಂದ ಆ ಭಿಕ್ಕು ಬರುವ ವರೆಗೆ ನಾವು ಏನೇನೋ ಮಾತನಾಡಿದೆವು. ಈಗ ನಿಜವಾದ ಆತ್ಯೋನ್ನತಿಯ ಸಂವಾದ ಮಾಡೋಣ. ನಾನು ಆ ಭಿಕ್ಕುವಿನಲ್ಲಿ ಕೇಳಿದ ಪ್ರಶ್ನೆ ನಿನ್ನಲ್ಲಿ ಒಂದು ಅರಿವನ್ನು ಉಂಟುಮಾಡುವುದಕ್ಕಾಗಿತ್ತು. ದೇಹಕ್ಕೆ ವಯಸ್ಸಾಗುತ್ತದೆ ನಿಜ. ನಾವು, ಮುನಿಗಳು ಆತ್ಮ ಪರಿವರ್ತನೆಯಾದ, ಜ್ಞಾನೋದಯವಾದ, ವಿರಾಗಿಯಾದ ದಿನದಿಂದ ವಯಸ್ಸನ್ನು ಲೆಕ್ಕ ಹಾಕುತ್ತೇವೆ. ಆ ಪ್ರಕಾರ ತನ್ನ ವಯಸ್ಸು ನಾಲ್ಕು ವರ್ಷ ಎಂದು ಅವರು ಹೇಳಿದರು. ಅವರಿಗೆ ಎಂಬತ್ತು ವರ್ಷವಾಗಿರಬಹುದು. ಅದರಲ್ಲಿ ಎಪ್ಪತ್ತಾರು ವರ್ಷಗಳು ವ್ಯರ್ಥ. ನಿನಗೆ ಅರುವತ್ತು ವರ್ಷವಾಯಿತು; ಪುನರ್‌ಜನ್ಮ ಯಾವಾಗ?’ ಗೌತಮ ಬುದ್ದ ರಾಜಾ ಪ್ರಸೇನಜಿತನನ್ನು ಉದ್ದೇಶಿಸಿ ಹೇಳಿದ.
(ಸಾರ ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.