ಫೆ. 1ರಿಂದ 9 ಮತ್ತು 11ನೇ ತರಗತಿಗಳೂ ಆರಂಭ : ಸಚಿವ ಸುರೇಶ್ ಕುಮಾರ್
Team Udayavani, Jan 28, 2021, 9:02 PM IST
ಬೆಂಗಳೂರು: ಶಾಲಾ ಪುನಾರಂಭದ ಎರಡನೇ ಹಂತಕ್ಕೆ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳು ರಾಜ್ಯಾದ್ಯಂತ ಪ್ರಾರಂಭ ಆಗಲಿವೆ.
ವಿಧಾನಸೌಧದಲ್ಲಿ ಗುರುವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, 9ನೇ ಹಾಗೂ ಪ್ರಥಮ ಪಿಯುಸಿ ತರಗತಿಗಳು ಫೆ. 1ರಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನಾರಂಭಗೊಳ್ಳಲಿವೆ. ಅಲ್ಲದೆ, ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ನಿತ್ಯ ಪೂರ್ಣಾವಧಿ ನಡೆಯಲಿವೆ. ಉಳಿದಂತೆ 6ರಿಂದ 8ನೇ ತರಗತಿಗಳಿಗೆ ನಡೆಯುತ್ತಿರುವ ವಿದ್ಯಾಗಮ ಕಾರ್ಯಕ್ರಮ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಕಾಂಗ್ರೇಸ್ ನೇತೃತ್ವದ 16 ಪ್ರತಿಪಕ್ಷಗಳ ಘೋಷಣೆ
ಫೆಬ್ರವರಿ ಎರಡನೇ ವಾರದಲ್ಲಿ ಪುನಃ ಸಭೆ ಸೇರಿ, ಹಿಂದಿನ ಹದಿನೈದು ದಿನಗಳ ಅವಲೋಕನ ಮಾಡಲಾಗುವುದು. ಮಕ್ಕಳ ಹಾಜರಾತಿ, ಕಲಿಕಾ ಆಸಕ್ತಿ ಮತ್ತಿತರ ಅಂಶಗಳನ್ನು ಗಮನಿಸಿ, ಉಳಿದ ತರಗತಿಗಳನ್ನೂ ಪುನಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಜ. 1ರಿಂದ ಶುರುವಾದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಮಕ್ಕಳ ಹಾಜರಾತಿ ಸರಾಸರಿ ಶೇ. 75ರಷ್ಟಿದೆ. ಕಲಿಕೆ ಪರಿಣಾಮಕಾರಿಯೂ ಆಗಿದೆ ಹಾಗೂ ಮಕ್ಕಳಲ್ಲೂ ಆಸಕ್ತಿ ಹೆಚ್ಚಿರುವುದು ಕಂಡುಬಂದಿದೆ ಎಂದು ತಿಳಿಸಿದರು.
6ರಿಂದ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಬರುವ ಫೆ. 1ರಿಂದ ಪುನಾರಂಭದ ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಪೂರ್ಣಾವಧಿ ನಡೆಸಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿತ್ತು. ಈ ವಿಚಾರವನ್ನು ತಾಂತ್ರಿಕ ಸಲಹಾ ಸಮಿತಿ ಮುಂದೆ ಇಡಲಾಯಿತು. ಆದರೆ, ಇಂಗ್ಲೆಂಡ್‌ನಲ್ಲಿ ಜೂನ್‌ವರೆಗೂ ಲಾಕ್‌ಡೌನ್ ಇದೆ. ಎರಡನೇ ಅಲೆಯ ಆತಂಕ ಪೂರ್ಣಪ್ರಮಾಣದಲ್ಲಿ ನಿವಾರಣೆ ಆಗಿಲ್ಲ. ದೇಶಕ್ಕೆ ಮಾದರಿಯಾಗಿದ್ದ ಕೇರಳದಲ್ಲಿ ಈಗ ಸಾಂಕ್ರಾಮಿಕ ರೋಗದ ಹಾವಳಿ ನಿಯಂತ್ರಣ ತಪ್ಪಿರುವುದೂ ಕಣ್ಮುಂದಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಕೇವಲ 9ನೇ ಮತ್ತು 11ನೇ ತರಗತಿಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಈ ವಿದ್ಯಾರ್ಥಿನಿ ಏಕ್ ದಿನ ಕಾ ಸಿಇಓ !
ವಿದ್ಯಾಗಮ ನಿಯಮಿತ?
ಈ ಮಧ್ಯೆ ವಿದ್ಯಾಗಮ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಹಾಜರಾತಿ ಪ್ರಮಾಣ ಶೇ. 40ರಿಂದ 45ರಷ್ಟಿದೆ. ಪರ್ಯಾಯ ದಿನ ಅಂದರೆ ಒಂದು ದಿನ ಬಿಟ್ಟು ಒಂದು ದಿನ ವಿದ್ಯಾಗಮ ನಡೆಯುವುದು ಗೈರುಹಾಜರಿಗೆ ಕಾರಣ ಆಗಿರಬಹುದು ಎಂದು ಪೋಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಗಳು ಅಭಿಪ್ರಾಯಪಟ್ಟಿವೆ. ಇದನ್ನು ನಿಯಮಿತವಾಗಿ ನಡೆಸಲಾಗುವುದು ಎಂದರು.
ಪೋಷಕರಿಗೂ ಹೊರೆಯಾಗದಂತೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಮಸ್ಯೆ ಆಗದಂತೆ ಸಮತೋಲನ ಕಾಯ್ದುಕೊಂಡು ಶುಲ್ಕ ನಿಗದಿಪಡಿಸಲಾಗುವುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳ ಶಿಕ್ಷಣಕ್ಕೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಅಂತಹ ದೂರುಗಳಿದ್ದರೆ, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕು. ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರ ಕೈಗೊಳ್ಳುವ ತೀರ್ಮಾನ ಸಮತೋಲನವಾಗಿ ಇರಲಿದೆ. ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಬಂದ್; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ
ಶಾಲೆಬಿಟ್ಟವರ ಕರೆತರುವುದೇ ಸವಾಲು
ಕೋವಿಡ್ ಹಿನ್ನೆಲೆಯಲ್ಲಿ ಸುದೀರ್ಘಾವಧಿ ತರಗತಿಗಳು ನಡೆಯದಿರುವುದರಿಂದ ಶಾಲೆಬಿಟ್ಟ ಮಕ್ಕಳನ್ನು ಕರೆತರುವುದೇ ಮುಂದಿನ ದಿನಗಳಲ್ಲಿ ಸವಾಲಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಾಲಾ-ಕಾಲೇಜುಗಳು ಇಲ್ಲದ್ದರಿಂದ ಪೋಷಕರು, ಮಕ್ಕಳೊಂದಿಗೆ ದುಡಿಯಲು ಬೇರೆ ಬೇರೆ ಕಡೆಗೆ ಹೋಗಿದ್ದಾರೆ. ಶಾಲೆಗಳು ಸಂಪೂರ್ಣವಾಗಿ ಪುನಾರಂಭಗೊಂಡ ನಂತರ ಅವರೆಲ್ಲರನ್ನೂ ಕರೆತರುವುದೇ ಸವಾಲಾಗಿದೆ. ಉದಾಹರಣೆಗೆ ಚಾಮರಾಜನಗರದಲ್ಲಿ ಕೆಲವು ಹಳ್ಳಿಗಳಲ್ಲಿ ಪೋಷಕರು ಮಕ್ಕಳನ್ನು ಕರೆದುಕೊಂಡು ನೆರೆಯ ಕೇರಳಕ್ಕೆ ದುಡಿಯಲು ತೆರಳಿದ್ದಾರೆ. ಅವರನ್ನು ಕರೆತರಲೆಂದೇ ಶಿಕ್ಷಣ ಇಲಾಖೆಯ ತಂಡವೊಂದು ತೆರಳಿದೆ ಎಂದು ಹೇಳಿದರು.
ಬಾಲ್ಯವಿವಾಹಗಳೂ ಈ ಅವಧಿಯಲ್ಲಿ ಆಗಿರುವುದು ಕಂಡುಬಂದಿದೆ. ವಿವಾಹವಾಗಿದ್ದರೂ ಅಂತಹ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಪೋಷಕರಲ್ಲಿ ಮನವಿ ಮಾಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.