ಬೆಂಕಿಯಲ್ಲಿ ಬಿದ್ದು-ಬಿಸಿಲಲ್ಲಿ ಎದ್ದು ಬೆಳದಿಂಗಳಾದಳು!
Team Udayavani, Jan 29, 2021, 6:51 PM IST
ಹೊನ್ನಾವರ: ಬಳ್ಳಾರಿ ಜಿಲ್ಲೆ ಕಲ್ಲುಕಂಬದ ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮೀಯವರ ಮಗನಾದ ಮಂಜುನಾಥ ಮುತ್ತು ಕಟ್ಟಿಸಿಕೊಂಡು ಜೋಗತಿ ಮಂಜಮ್ಮಳಾಗಿ ಬೆಂಕಿಯಲ್ಲಿ ಬಿದ್ದು ಜಾನಪದ ಕಲಾವಿದೆಯಾಗಿ, ಬಿಸಿಲಲ್ಲಿ ಊರೂರು ತಿರುಗಿ, ಗೆದ್ದು, ಜಾನಪದ ಅಕಾಡೆಮಿ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ, ಪದ್ಮಶ್ರೀ ಪುರಸ್ಕೃತೆಯಾಗಿ, ಈಗ ಬೆಳದಿಂಗಳಂತೆ ಹಸನ್ಮುಖೀಯಾಗಿರುವ ಕಥೆ ಇಲ್ಲಿದೆ.
ಹೊನ್ನಾವರದ ಹಳ್ಳಿ ಖರ್ವಾ ಕೊಳಗದ್ದೆ ಸಿದ್ಧಿವಿನಾಯಕ ವಿದ್ಯಾಮಂದಿರದಲ್ಲಿ ಜಾನಪದ ಕಲಾಪ್ರಕಾರಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಲಾ ವಿದ್ಯಾರ್ಥಿಗಳೊಂದಿಗೆ ಕುಣಿದು, ನಲಿಯುತ್ತಿರುವಾಗಲೇ ತಮಗೆ ಪದ್ಮಶ್ರೀ ಘೋಷಣೆಯಾದ ಸುದ್ದಿ ಬಂದರೂ ಕಾರ್ಯಾಗಾರವನ್ನು ಬಿಟ್ಟೋಡದೆ ಸಮಾರೋಪ ಸಮಾರಂಭದವರೆಗೆ ಉಳಿದುಕೊಂಡಿದ್ದು ಅವರ ಕರ್ತವ್ಯ ನಿಷ್ಠೆಗೆ, ಕಲಾಪ್ರೀತಿಗೆ ದ್ಯೋತಕ. ಮುಕ್ತಾಯ ಸಮಾರಂಭಕ್ಕೆ ಕುರ್ಚಿ ಜೋಡಿಸುತ್ತಿದ್ದ ಅವರು “ಉದಯವಾಣಿ’ಗೆ ತಮ್ಮ ಜೀವನೋತ್ಸಾಹ ಮತ್ತು ಮಾನವೀಯ ಗುಣಗಳಿಗೆ ಕಾರಣವಾದ ಸಂಗತಿಗಳನ್ನು ವಿವರಿಸಿದರು.
ಆರ್ಯವೈಶ್ಯ ಸಮಾಜದಲ್ಲಿ ಹುಟ್ಟಿದ ನನ್ನ ತಂದೆ ಹನುಮಂತಯ್ಯ ಶೆಟ್ಟಿ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ನನ್ನ ಹೆತ್ತವರಿಗೆ 21 ಮಕ್ಕಳು. ಎರಡು ಸಲ ಅವಳಿ, ಒಂದು ಸಲ ತ್ರಿವಳಿ ಮಕ್ಕಳನ್ನು ಹೆತ್ತ ನನ್ನ ಅಮ್ಮನ ನಂತರದ ಗರ್ಭದಲ್ಲಿ ನಾಲ್ಕು ಮಕ್ಕಳಿದ್ದಾಗ ಗರ್ಭಪಾತ ಮಾಡಿಸಲಾಯಿತು. 21 ಮಕ್ಕಳಲ್ಲಿ ನಾವು ನಾಲ್ಕು ಜನ ಇದ್ದೇವೆ.
ಸಾಯಲು ಹೋಗಿದ್ದೆ: ಸಾಧಾರಣವಾಗಿ ಮಕ್ಕಳನ್ನು ಜೋಗತಿಯಾಗಿ ತಂದೆ-ತಾಯಿಗಳು ಒಪ್ಪಿಸುವುದಿಲ್ಲ. ಎಸ್‌ಎಸ್‌ಎಲ್‌ಸಿ ಓದುವವರೆಗೆ ಹುಡುಗನಾಗಿದ್ದ ನನ್ನಲ್ಲಿ ಹುಡುಗಿಯ ಬದಲಾವಣೆ ಕಾಣಿಸಿಕೊಂಡಾಗ ನನ್ನನ್ನು ಜೋಗತಿಯನ್ನಾಗಿ ಯಲ್ಲಮ್ಮನಿಗೆ ಅರ್ಪಿಸಲಾಯಿತು. ಹೆಣ್ಣಿನ ವೇಷ ತೊಡಿಸಲಾಯಿತು. ಮನೆಗೆ ಬಂದರೆ ಮನೆಯವರೂ ಸ್ವೀಕರಿಸಲಿಲ್ಲ. ವಿಷ ಸೇವಿಸಿದ್ದೆ, ಸಾಯಲಿಲ್ಲ. ಜೋಗತಿಯಾದ ಮೇಲೆ ಕಂಡಕಂಡಲ್ಲಿ ತಿರುಗಿ ಭಿಕ್ಷಾಟನೆ ಮಾಡುತ್ತ ಪಂಚಾಯಿತಿ ಕಟ್ಟೆಯಲ್ಲಿ, ಬಸ್‌ಸ್ಟ್ಯಾಂಡ್‌ನಲ್ಲಿ ಮಲಗಿರುತ್ತಿದ್ದೆ. ಮೂವರು ಅತ್ಯಾಚಾರವೆಸಗಲು ಬಂದಾಗ ಮತ್ತೂಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟೆ. ಸಾಯಲಿಲ್ಲ. ಸಾಯುವುದರಲ್ಲಿ ಅರ್ಥವಿಲ್ಲ, ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿ ಇಡ್ಲಿ, ಚಟ್ನಿ ಮಾರಾಟ ಮಾಡಿದೆ. ಬಸಪ್ಪ ತಂಡದೊಂದಿಗೆ ಕುಣಿಯುವುದು ಕಲಿತೆ, ಕಾಳಮ್ಮ ಜೋಗತಿಯನ್ನು ಗುರುವಾಗಿ ಸ್ವೀಕರಿಸಿ ಜೋಗತಿ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಹಲವರಿಗೆ ತರಬೇತಿ ನೀಡಿದೆ.
ಇದನ್ನೂ ಓದಿ:ಶ್ರೀರಾಮ ಮಂದಿರಕ್ಕೆ 1 ಲಕ್ಷ ರೂ
ಊಟವಿಲ್ಲದೆ ಮಲಗಿದ, ಬಟ್ಟೆಯಿಲ್ಲದೇ ಸೊರಗಿದ, ಸಮಾಜತಿರಸ್ಕರಿಸಿದ ಬದುಕಿನಲ್ಲಿ ಮೇಲೆದ್ದು ಬರಲು ಹಠಹಿಡಿದೆ. ಜೋಗತಿಯರು ದೇವದಾಸಿಯರಲ್ಲ, ಕಲಾವಿದೆಯರು ಎಂಬುದನ್ನು ಸಿದ್ಧ ಮಾಡಿದೆ. ಯಲ್ಲಮ್ಮನಾಗಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದೆ. ಬಯಲಾಟದಲ್ಲಿ ತಾರಕಾಸುರನಾದೆ.ನನ್ನ ಜೀವನ ಹೋರಾಟದಲ್ಲಿ ಯಶಸ್ವಿಯಾಗುತ್ತಿದ್ದಂತೆ ಗೌರವ ದೊರೆಯತೊಡಗಿತು. ನಾಟಕದಲ್ಲಿ ಅಭಿನಯಿಸಿದ್ದನ್ನು ತಂದೆ ನೋಡಿ ಖುಷಿಪಟ್ಟಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದದ್ದನ್ನು ಅಮ್ಮ ನೋಡಿ ಸಂಭ್ರಮಪಟ್ಟಿದ್ದರು. ದೃಶ್ಯ ಮಾಧ್ಯಮಗಳು ನನ್ನ ಜೀವನದ ಕಥೆ-ವ್ಯಥೆಗಳನ್ನು ಭಿತ್ತರಿಸಿದವು. ಸಾಹಸವನ್ನುವರ್ಣಿಸಿದವು. ಬಾಣೆಲೆಯಿಂದ ಬೆಂಕಿಗೆ ಬಿದ್ದರೂ ಎದ್ದು ಬಂದಿದ್ದೇನೆ. ಕಲಾವಿದೆಯಾಗಿ ಕಲಾಕ್ಷೇತ್ರದ ಹುಳುಕು-ಕೊಳಕು ಕಂಡಿದ್ದೇನೆ. ಅವರ ಕಷ್ಟ ಅರಿತಿದ್ದೇನೆ. ನಾನು ಅಕಾಡೆಮಿ ಅಧ್ಯಕ್ಷಳಾದ ಮೇಲೆ ಅಂತಹ ತೊಂದರೆಗಳು ಬರಬಾರದೆಂದು ನಮ್ಮ ಎಲ್ಲ ಕಾರ್ಯಕ್ರಮಗಳಲ್ಲಿ ಕೊನೆಯತನಕ ಕಲಾವಿದರ ಜತೆಗೇ ಇರುತ್ತೇನೆ.
ಅವರ ಊಟ, ತಿಂಡಿ, ಯೋಗಕ್ಷೇಮ, ಆರೋಗ್ಯ ಎಲ್ಲವನ್ನೂ ವಿಚಾರಿಸಿಕೊಳ್ಳುತ್ತೇನೆ. ನನ್ನ ತಾಯಿ ಕಲಿಸಿದ ಪಾಠ ಇದು. ಮನೆಯಲ್ಲಿ ಅಷ್ಟೊಂದು ಮಕ್ಕಳಿದ್ದರೂ, ಅವರಿಗೆ ಇಲ್ಲವಾದರೂ ಬೀದಿಯಲ್ಲಿ ಹೋಗುವ ಭಿಕ್ಷುಕರನ್ನು, ಬಡವರನ್ನು ಮನೆಯೊಳಗೆ ಕರೆತಂದು ಊಟ ಹಾಕಿ, ಖರ್ಚಿಗೆ ಹಣಕೊಟ್ಟು ಕಳಿಸುತ್ತಿದ್ದಳು. ಅವಳ ಗುಣ ನನ್ನಲ್ಲಿ ಬಂದಿರಬೇಕು, ನನಗೆ ಇದನ್ನು ಯಾರೂ ಹೇಳಿಕೊಟ್ಟಿಲ್ಲ ಎಂದರು. ಕಷ್ಟದ ದಿನಗಳನ್ನು ವಿವರಿಸುವಾಗ ಕಣ್ಣೀರು ಹಾಕದೆ ನಗುನಗುತ್ತ ಹೇಳಿಕೊಂಡ ಮಂಜಮ್ಮ, ಅಮ್ಮನಿಂದ ಕಲಿತ ಮಾನವೀಯ ಗುಣಗಳನ್ನು ಪ್ರಸ್ತಾಪಿಸುವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. 63 ವರ್ಷದ ಇವರ ಬದುಕೇ ಕಷ್ಟದಲ್ಲಿರುವವರ ಪಾಲಿಗೆ ಬೆಳಕು.
ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.