ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ, ಆಂಬುಲೆನ್ಸ್ ಕೊರತೆ: ಸದನದಲ್ಲಿ ನರೇಂದ್ರ ಪ್ರಶ್ನೆ
Team Udayavani, Feb 5, 2021, 1:14 PM IST
ಹನೂರು (ಚಾಮರಾಜನಗರ): ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಗತಿ, ವೈದರು ಮತ್ತು ಸಿಬ್ಬಂದಿ ಕೊರತೆ ಮತ್ತು ಆಂಬುಲೆನ್ಸ್ ಕೊರತೆಗಳ ಬಗ್ಗೆ ಶಾಸಕ ನರೇಂದ್ರ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತಿದ್ದು ಸಮಸ್ಯೆಗಳ ಬಗೆಹರಿಸುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಉತ್ತರಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಶಾಸಕ ನರೇಂದ್ರ ಮಾತನಾಡಿ, ತಾಲೂಕು ಕೇಂದ್ರವಾಗಿರುವ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು ಇದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ರಾಜ್ಯದ ನೂತನ 49 ತಾಲೂಕುಗಳ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ನೂತನ ಕಟ್ಟಡಗಳ ನಿರ್ಮಾಣಕ್ಕೆ ಆರ್ಥಿಕ ಇಲಾಖೆಯಿಂದ ಅನುದಾನ ಲಭ್ಯತೆ ಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಕುರಿತು ಚರ್ಚಿಸಲಾಗಿದ್ದು ಈ ವೇಳೆ ಕ್ರಮವಹಿಸಲಾಗುವುದು. ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸಿಎಂ ಯಡಿಯೂರಪ್ಪ ಅವರು ತಾತ್ವ್ವಿಕ ಒಪ್ಪಿಗೆ ನೀಡಿದ್ದು ಆರೋಗ್ಯ ಇಲಾಖೆಗೆ ಕಳುಹಿಸಿಕೊಟ್ಟಿದ್ದು ಪ್ರಸಕ್ತ ಸಾಲಿನಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ: ಸದನದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯ
ವೈದ್ಯರು ಮತ್ತು ಸಿಬ್ಬಂದಿ ಕೊರತೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆ ಬಗ್ಗೆ ಶಾಸಕ ನರೇಂದ್ರ ಕಲಾಪದಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್ ರಾಜ್ಯದಲ್ಲಿ 1246 ಸಾಮಾನ್ಯ ಕರ್ತವ್ಯ ವೈದ್ಯರು ಮತ್ತು 824 ತಜ್ಞ ವೈದ್ಯರ ನೇರ ನೇಮಕಾತಿಗೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಈ ಪ್ರಕ್ರಿಯೆ ಮುಂದಿನ ಒಂದು ತಿಂಗಳೊಳಗಾಗಿ ಮುಕ್ತಾಯಗೊಂಡು ರಾಜ್ಯದಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಕೊರತೆ ಸಮಸ್ಯೆ ನೀಗಲಿದೆ. ಇತರೆ ಸಿಬ್ಬಂದಿಗಳ ನೇಮಕ ಮಾಡಲು ಎಲ್ಲಾ ರೀತಿಯ ಕ್ರಮವಹಿಸಲಾಗಿದ್ದು ಮುಂದಿನ 3-4 ತಿಂಗಳಲ್ಲಿ ಆ ಸಮಸ್ಯೆನ್ನೂ ಬಗೆಹರಿಸುವ ಭರವಸೆ ನೀಡಿದರು.
ಆಂಬುಲೆನ್ಸ್ ಸಮಸ್ಯೆ: ಹನೂರು ವಿಧಾನಸಭಾ ಕ್ಷೇತ್ರವು ಒಂದು ತುದಿಯಿಂದ ಮತ್ತೊಂದು ತುದಿಗೆ 172 ಕಿ.ಮೀ ಅಂತರವಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ 15 – 20 ಸಾವಿರ ಜನರು ಮತ್ತು ವಿಶೇಷ ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ಇಂತಹ ಕ್ಷೇತ್ರಕ್ಕೆ ಕೇವಲ 3 ಆಂಬುಲೆನ್ಸ್ ಸಾಕಾಗುವುದಿಲ್ಲ. ಮತ್ತು ಸುಳ್ವಾಡಿ ವಿಷಪ್ರಾಶನ ಪ್ರಕರಣ ಜರುಗಿದ ವೇಳೆ ಸರ್ಕಾರದ ಗಮನಕ್ಕೆ ತಂದು ವೆಂಟಿಲೇಟರ್ ಸೌಲಭ್ಯಯುಕ್ತ ಆಂಬುಲೆನ್ಸ್ ಪಡೆಯಲಾಗಿತ್ತು. ಅದನ್ನೂ ಕೂಡ ವಾಪಸ್ಸು ಪಡೆಯಲಾಗಿದೆ. ಇದರಿಂದ ಕ್ಷೇತ್ರದ ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ಸದ್ಯ ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 1 ಆಂಬುಲೆನ್ಸ್ ಇದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸುದೀರ್ಘವಾದ ಚರ್ಚೆ ನಡೆಸಿ ಪ್ರತಿ 30-35ಸಾವಿರ ಜನರಿಗೆ ಒಂದು ಆಂಬುಲೆನ್ಸ್ ಒದಗಿಸುವ ಕುರಿತು ಚರ್ಚೆ ನಡೆಸಲಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ಆಂಬುಲೆನ್ಸ್ ಸೇವೆ ಜೊತೆಗೆ ಇನ್ನೂ 12 ಸೇವೆಗಳನ್ನು ಒದಗಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದು ಜಾರಿಗೊಂಡ ಬಳಿಕ ಹನೂರು ಕ್ಷೇತ್ರಕ್ಕೆ ಇನ್ನೂ 6 ಆಂಬುಲೆನ್ಸ್ ದೊರೆಯಲಿದ್ದು ಎಲ್ಲಾ ಉತ್ತಮ ಗುಣಮಟ್ಟದ ಮತ್ತು ಅತ್ಯಾಧುನಿಕ ಸವಲತ್ತುಗಳ ಸೇವೆಯನ್ನು ಒದಗಿಸಲಾಗುವುದು ಎಂದು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.