ಸಮಪಾಲು, ಸಾಮಾಜಿಕ ನ್ಯಾಯಕ್ಕೆ ಬಿಎಸ್‌ವೈ ಬದ್ಧ
3ನೇ ವರ್ಷದ ಸಿದ್ದಲಿಂಗೇಶ್ವರ ಜಯಂತ್ಯುತ್ಸವ! ಲಿಂ.ಡಾ.ಶಿವಕುಮಾರ ಶ್ರೀಗಳ ಪುಣ್ಯ ಸಂಸ್ಮರಣೋತ್ಸವ
Team Udayavani, Feb 8, 2021, 4:28 PM IST
ಮಾಗಡಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ಯತೀತವಾಗಿ ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ಒದಗಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಟ್ಟಣದ ಡಾ.ಶಿವಕುಮಾರಸ್ವಾಮಿ ವೃತ್ತದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಹಾಗೂ ಲಿಂ.ಡಾ.ಶಿವಕುಮಾರ ಶ್ರೀಗಳ 2ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿರೋಧ ಪಕ್ಷದ ಮುಖಂಡರು ಬಿಎಸ್‌ವೈ ವಿರುದ್ಧ ಎಷ್ಟೇ ಷಡ್ಯಂತರ ರೂಪಿಸಿದರೂ ಅದನ್ನು ಭೇದಿಸಲು ನಾವು ಹೋರಾಟ ಮಾಡಿದ್ದೇವೆ. ವಿರೋಧಿಗಳು ಬಿಎಸೈ ವಿರುದ್ಧ 30 ಕ್ರಿಮನಲ್ ಪ್ರಕರಣ ದಾಖಲಿಸಿದ್ದರು. ಎಲ್ಲವೂ ಇತ್ಯರ್ಥಗೊಂಡಿವೆ. ಹಲವು ಏಳುಬೀಳುಗಳ ನಡುವೆಯೂ ಬಿಎಸ್‌ವೈ ರಾಜ್ಯದ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದಾರೆ. ಇದಕ್ಕೆಲ್ಲ ನಾಡಿನ ವಿವಿಧ ಮಠಾಧೀಶರ ಆಶೀರ್ವಾದ, ಜನರ ಪ್ರೀತಿ-ವಿಶ್ವಾಸವೇ ಕಾರಣ ಎಂದ ಅವರು, ಇದೇ ವೇಳೆ ಬಿಎಸ್‌ವೈ ಜೊತೆಗಿರುವ ಕೆಲವರು ಕಪಿಚೇಷ್ಟೆ ಮಾಡುತ್ತಿರುವುದರ ವಿರುದ್ಧ ಬೇಸರಿಸಿದರು.
“ಬಿವೈವಿ ಸೂಪರ್ ಸಿಎಂ’ ಹೇಳಿಕೆಗೆ ತಿರುಗೇಟು: ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿರುವ ಬಿಎಸ್‌ವೈ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಾಡಿನಾದ್ಯಂತ ಸುತ್ತಿ ಜಾತ್ಯತೀತವಾಗಿ ರೈತರು, ಬಡವರ ಸೇವೆಗೆ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು.
ಎಲ್ಲಿ ಅನ್ಯಾಯ ನಡೆಯುತ್ತಿದೆಯೋ ಅಲ್ಲಿ ನಾನು ಯುವಕರ ಹೋರಾಟದ ಕಿಚ್ಚು ಬೆಳೆಸಿಕೊಂಡು ನ್ಯಾಯ ಒದಗಿಸುವಂತೆ ಸಂಘಟನಾತ್ಮಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾನೆ. ಕೆಲವರು “ಸಿಎಂ ಮಗ ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ’ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಾರೆ. ನನಗೂ ಅರಿವಿದೆ. ಯಾರು ಬೊಟ್ಟು ತೋರಿಸುವಂತ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ವೀರಾಪುರ ಅಭಿವೃದ್ಧಿಗೆ 80 ಕೋಟಿ ಮೀಸಲು: ಶಾಸಕ ಎ.ಮಂಜುನಾಥ್ ಮಾತನಾಡಿ, ಸಿದ್ಧಗಂಗೆಯ ಲಿಂ.ಡಾ.ಶಿವಕುಮಾರ ಶ್ರೀಗಳ ಹುಟ್ಟೂರು ವೀರಾಪುರ ವನ್ನು ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸಲು 80 ಕೋಟಿ ರೂ. ಮೀಸಲಿಡಲಾಗಿದೆ. ಈಗಾಗಲೇ ಸಿಎಂ ಬಿಎಸ್‌ವೈ, 25 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ :ಶಿಕ್ಷಕಿಯರಿಗೆ ಶೇ.50 ಹುದ್ದೆ ಕಲ್ಪಿಸಲು ಆಗ್ರಹ
ಆದಿಚುಂಚನಗಿರಿ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರು ಬಾನಂದೂರು ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆಯಾಗಿದೆ. ಬಿಡದಿಯಲ್ಲಿ ಲಿಂ.ಡಾ.ಶಿವಕುಮಾರಸ್ವಾಮಿ ಪ್ರತಿಮೆ ಸ್ಥಾಪನೆಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ಇಲ್ಲಿನ ರಸ್ತೆಗೆ ಶ್ರೀಗಳ ಹೆಸರಿಡಲಾಗಿದೆ. ಅಲ್ಲದೇ, 7ಕೋಟಿ
ರೂ. ವೆಚ್ಚದಲ್ಲಿ ಲಿಂಗೈಕ್ಯ ಶ್ರೀಗಳ ಹೆಸರಿನಲ್ಲಿ ಸಭಾಂಗಣ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ರಾಜಬೀದಿಯಲ್ಲಿ ಸಿದ್ಧಲಿಂಗೇಶ್ವರಸ್ವಾಮಿ ಪ್ರತಿಮೆ ಮೆರವಣಿಗೆ ನಡೆಯಿತು. ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಸಿಎಂ ಬಿಎಸ್‌ವೈ ಕಾರ್ಯದರ್ಶಿ ರೇಣುಕಾಚಾರ್ಯ , ಎಂಎಲ್‌ಸಿ ಅ.ದೇವೇಗೌಡ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಬೆಟ್ಟಹಳ್ಳಿ ಮಠದಚಂದ್ರಶೇಖರಚಾರ್ಯಸ್ವಾಮಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ್ ಬಿದರಿ, ಕೆ.ಪಿ. ಮಹ ದೇವಶಾಸ್ತ್ರಿ , ಬಂಡೇ ಮಠದ ಬಸವಲಿಂಗ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜಸ್ವಾಮೀಜಿ ಕೆಆರ್‌ಡಿಬಿಎಲ್‌ನ ಅಧ್ಯಕ್ಷ ಎಂ.ರುದ್ರೇಶ್, ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಪುರಸಭಾಧ್ಯಕ್ಷೆ ಭಾಗ್ಯಮ್ಮ ನಾರಾಯಣಪ್ಪ, ಸದಸ್ಯೆ ಶಿವರುದ್ರಮ್ಮ ವಿಜಯ ಕುಮಾರ್, ಅನಿಲ್‌ಕುಮಾರ್, ರೇಖಾ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಜಿ.ರಂಗಧಾಮಯ್ಯ, ಮಾಜಿ ಶಾಸಕ ನಾಗರಾಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಎಂ.ಕೃಷ್ಣ ಮುಂತಾದವರಿದ್ದರು.