ಬಹು ಮಹಡಿ ಪಾರ್ಕಿಂಗ್ ಕಟ್ಟಡ ಎಂಬ ಕನ್ನಡಿಯೊಳಗಿನ ಗಂಟು !
Team Udayavani, Feb 11, 2021, 5:55 AM IST
ವಾಹನ ಪಾರ್ಕಿಂಗ್ ಸಮಸ್ಯೆ ಬಹು ಆಯಾಮದ್ದು. ಒಂದಕ್ಕೊಂದು ಪೂರಕವಾಗಿ ಸೌಲಭ್ಯ ಕಲ್ಪಿಸುತ್ತಾ ಬಂದರೆ ಎಲ್ಲವೂ ಸುಸಜ್ಜಿತಗೊಳ್ಳು ತ್ತದೆ. ನಗರ ಸಭೆಯೂ ಈಗಾಗಲೇ ಸಮಗ್ರವಾಗಿ ಆಲೋಚಿಸಿ ಕ್ರಿಯಾಶೀಲ ವಾಗಬೇಕಿತ್ತು. ಆದರೆ ಈಗ ಯೋಚಿಸಲು ಆರಂಭಿಸಿದೆ. ಇದು ಕಾರ್ಯ ರೂಪಕ್ಕೆ ಇಳಿಯುವುದು ಜನಪ್ರತಿ ನಿಧಿಗಳ ಇಚ್ಛಾಶಕ್ತಿ ಹಾಗೂ ಆಧಿಕಾರಿಗಳ ಉತ್ಸಾಹವನ್ನು ಅವಲಂಬಿಸಿದೆ.
ಉಡುಪಿ: ನಗರ ದಿನೇದಿನೆ ಮಹಾನಗರವಾಗಿ ಬೆಳೆಯ ತೊಡಗಿದೆ. ವಾಹನ ನಿಲುಗಡೆ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಸಾರಿಗೆ ಪ್ರಾಧಿಕಾರ ಕಚೇರಿಯ ಅಂಕಿಅಂಶಗಳ ಪ್ರಕಾರ ಈ ವರ್ಷದಲ್ಲಿ ಹತ್ತು ಸಾವಿರ ಕಾರುಗಳು ಬಂದರೂ ಅಚ್ಚರಿ ಪಡುವಂತಿಲ್ಲ. ಇವುಗಳ ಪೈಕಿ ಶೇ. 50-60 ರಷ್ಟು ಕಾರುಗಳು ಉಡುಪಿ ನಗರದ ಸುಗಮ ಸಂಚಾರದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿಯೇ ಹೆಚ್ಚಿಸುತ್ತದೆ. ಆದರೆ ಇಡೀ ವ್ಯವಸ್ಥೆಯ ಉತ್ತದಾಯಿತ್ವ ಹೊಂದಿರುವ ನಗರಸಭೆ ಮಾತ್ರ ಇನ್ನೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವತ್ತ ಚಿಂತನೆಯಲ್ಲಿದೆ.
ಹಾಗೆಂದು ನಗರಸಭೆ ಹಿಂದೆ ಯೋಚಿಸಿಲ್ಲವೆಂದಲ್ಲ; ಯೋಚಿಸಿ ಸುಮ್ಮನಾಗಿದೆ. ಆಗಿನ ಸ್ಥಳೀಯ ಜನಪ್ರತಿನಿಧಿಗಳು ಪ್ರಸ್ತಾವಿಸಿದ್ದಾರೆ, ಬಳಿಕ ಯಾವುದ್ಯಾವುದೋ ಕಾರಣಗಳಿಗೆ ಸಾಧ್ಯವಾಗದೇ ಸುಮ್ಮನಾಗಿದ್ದಾರೆ. ಆದರೆ ನಗರಸಭೆ ಆಡಳಿತ ನಡೆಸುವ ಅಧಿಕಾರಿಗಳು, ಜಿಲ್ಲಾಡಳಿತ ನಗರದ ಭವಿಷ್ಯದ ದೃಷ್ಟಿಯಿಂದ ಯೋಚಿಸಿ ಕಾರ್ಯೋನ್ಮುಖವಾಗಬೇಕಿತ್ತು. ಆದರೆ ಅವರೂ ನಿರ್ಲಕ್ಷ್ಯ ವಹಿಸಿದ್ದರಿಂದ ಈಗ ಪಾರ್ಕಿಂಗ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
ಹಲವು ವರ್ಷಗಳಿಂದ ಪ್ರಸ್ತಾವದಲ್ಲೇ
ನಗರಸಭೆಯ ಈಗಿನ ಕಟ್ಟಡವನ್ನು ಬನ್ನಂಜೆ ಬಳಿಗೆ ಸ್ಥಳಾಂತರಿಸಿ, ಹಳೆಯ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಯ ಕಟ್ಟಡ ಕಟ್ಟಬೇಕೆಂದು ಯೋಚಿಸಲಾಗಿತ್ತು. ಅದಲ್ಲದೇ ದಿನವಹಿ ಮಾರುಕಟ್ಟೆಯ ಜಾಗದಲ್ಲೂ ಇಂಥದ್ದೇ ಒಂದು ಪ್ರಸ್ತಾವ ಇತ್ತು. ವಾಣಿಜ್ಯ ಕಟ್ಟಡವನ್ನಾಗಿಸಿ, ಅದರಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವ ಆಲೋಚನೆಯಿತ್ತು. ಸುಮಾರು ಹತ್ತು ವರ್ಷಗಳಾದವು. ಯಾವುದೂ ಜಾರಿಗೊಳ್ಳಲೇ ಇಲ್ಲ. ಇಂದಿಗೂ ನಗರಸಭೆ ಕಟ್ಟಡ ಇರುವಲ್ಲೇ ಇದೆ !
ಕಿರಣ್‌ಕುಮಾರ್ ಅಧ್ಯಕ್ಷರಾಗಿದ್ದಾಗ (2010-2013) ಇತ್ತೀಚೆಗೆ ಉದ್ಘಾಟನೆಗೊಂಡ ನರ್ಮ್ ಬಸ್‌ನಿಲ್ದಾಣದ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ಕಟ್ಟುವ ಆಲೋಚನೆಯಿತ್ತು. ಆದರೆ ಅದು ನಗರಸಭೆಯದ್ದಾಗಿರದೇ, ಕಂದಾಯ ಇಲಾಖೆಯ ಜಾಗವಾಗಿತ್ತು. ಅಲ್ಲಿಂದ ಪಡೆದು ಪಾರ್ಕಿಂಗ್ ಕಟ್ಟಡ ಕಟ್ಟಬೇಕಿತ್ತು. ಅಷ್ಟೇ. ಅದೂ ಸಹ ಪ್ರಸ್ತಾವದಲ್ಲೇ ಉಳಿಯಿತು.
ನಗರಸಭೆಯಷ್ಟೇ ಅಲ್ಲ, ನಾಗರಿಕರಾದ ನಾವೂ ಎಂಥ ಇಕ್ಕಟ್ಟಿನಲ್ಲಿದ್ದೇವೆ ಎಂದರೆ ನಗರದ ಹೃದಯಭಾಗದಲ್ಲಿ ಒಂದೆರಡು ಜಾಗ ಬಿಟ್ಟರೆ ಬೇರೆಲ್ಲೂ ಖಾಲಿ ಜಾಗವೇ ಇಲ್ಲ. ಎಲ್ಲವೂ ಬಿಕರಿಯಾಗಿದೆ. ಈಗ ಏನೇ ಇದ್ದರೂ ಒಂದನ್ನು ಸ್ಥಳಾಂತರಿಸಿ ಮತ್ತೂಂದು ಸೌಲಭ್ಯ ಕಲ್ಪಿಸಬೇಕು. ಪರ-ವಿರೋಧ ವಿವಾದ ಮುಗಿಯುವಾಗ 20 ವರ್ಷ. ನಗರವನ್ನು ಅಡ್ಡಾದಿಡ್ಡಿಯಾಗಿ ಬೆಳೆಯಲು ಬಿಟ್ಟ ಪರಿಣಾಮ ಈಗ ಅನುಭವಿಸುವಂತಾಗಿದೆ.
ಮತ್ತೆ ಆಲೋಚಿಸುತ್ತಿದೆ !
ಸದ್ಯಕ್ಕೆ ಸಮಾಧಾನದ ಸಂಗತಿಯೆಂದರೆ, ನಗರಸಭೆಯು ಮತ್ತೆ ಆಲೋಚಿಸುತ್ತಿದೆ. ಆದರೆ ಯೋಚನೆ ಹಳೆಯದ್ದೇ. ಒಂದು- ನಗರಸಭೆಯ ಕಟ್ಟಡವನ್ನು ಹಳೆ ತಾಲೂಕು ಆಫೀಸ್‌ಗೆ ಸ್ಥಳಾಂತರಿಸಿ, ಕೆ ಎಂ ಮಾರ್ಗದ ಹಳೆಯ ಕಟ್ಟಡದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ಕಟ್ಟುವುದು. ಎರಡನೆಯದು- ಪ್ರಸ್ತುತ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಬನ್ನಂಜೆಗೆ ಸ್ಥಳಾಂತರಗೊಂಡ ಅನಂತರ ಅಲ್ಲಿ ಸುಸಜ್ಜಿತವಾದ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸುವುದು. ಮೂರನೆಯದು- ಪ್ರಸ್ತುತ ಸರ್ವಿಸ್ ಬಸ್‌ನಿಲ್ದಾಣದ ಹಿಂಭಾಗದಲ್ಲಿರುವ ಹೂವಿನ ಅಂಗಡಿ ಮುಂಭಾಗದ 9 ಸೆಂಟ್ಸ್ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸುವುದು. ಇದರೊಂದಿಗೆ ದಿನವಹಿ ಮಾರುಕಟ್ಟೆಯಲ್ಲೂ ನಿರ್ಮಿಸುವ ಬಗ್ಗೆ ಆಲೋಚಿಸುತ್ತಿದೆ.
ಪ್ರಥಮ ಆದ್ಯತೆಯಲ್ಲ
ಪಾರ್ಕಿಂಗ್ ಸೌಲಭ್ಯದ ಕೊರತೆಗೆ ಕಾರಣವನ್ನು ಹುಡುಕುತ್ತಾ ಹೋದರೆ ಸ್ಪಷ್ಟವಾಗಿ ಸಿಗುವ ಉತ್ತರ ಒಂದೇ- “ಅದು ಅಧಿಕಾರಿ ಗಳ, ಆಡಳಿತಗಾರರ ನಿರಾಸಕ್ತಿ’. ಕೆಲವೊಮ್ಮೆ ಚುನಾವಣೆ ಪ್ರಣಾಳಿಕೆಯ ಪಟ್ಟಿಗೆ ಒಂದು ಐಟಂ ಆಗಿ ಸೇರುತ್ತಿದೆಯೇ ಹೊರತು ಆ ಬಳಿಕ ಕಾರ್ಯರೂಪಕ್ಕೆ ಇಳಿಸುವ ಆದ್ಯತಾ ಪಟ್ಟಿಯಲ್ಲಿ ಸೇರದಿರುವುದು ಹಿನ್ನಡೆಗೆ ಮತ್ತೂಂದು ಪ್ರಮುಖ ಕಾರಣವಾಗಿದೆ.
ಇಲ್ಲೊಂದು ವ್ಯವಸ್ಥೆ ಬೇಕು
ನಗರದ ಹೃದಯಭಾಗ ದಲ್ಲಿರುವ ಈಗಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರಸ್ತೆ (ಹಿಂದಿನ ಕಾರ್ಪೋರೇಷನ್ ಬ್ಯಾಂಕ್) ಹಾಗೂ ಅಕ್ಕಪಕ್ಕದ ರಸ್ತೆಗಳ ತಿರುವುಗಳಲ್ಲೂ ಅಡ್ಡಾದಿಡ್ಡಿ ವಾಹನ ನಿಲ್ಲಿಸಲಾಗಿರುತ್ತದೆ. ಇದರಿಂದ ಮತ್ತೂಂದು ಬದಿಯಿಂದ ಬರುವವರಿಗೆ ಎದುರು ಬರುತ್ತಿರುವ ವಾಹನಗಳು ತೋರುವುದೇ ಇಲ್ಲ. ಇದಕ್ಕೆ ಏನಾದರೂ ಪರಿಹಾರ ಬೇಕು ಎಂಬುದು ನಾಗರಿಕರ ಆಗ್ರಹ.
ಬಹುಮಹಡಿ ಪಾರ್ಕಿಂಗ್ ಸೌಲಭ್ಯದ ಚಿಂತನೆ
ನಗರಸಭೆಯ ವ್ಯಾಪ್ತಿಯಲ್ಲಿ ಸರ್ವಿಸ್ ಬಸ್‌ನಿಲ್ದಾಣ ಸಮೀಪದ ನಗರಸಭೆಯ 9 ಸೆಂಟ್ಸ್ ಜಾಗದಲ್ಲಿ ಪ್ರಸ್ತುತ ದ್ವಿಚಕ್ರವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ನಗರಸಭೆ ವ್ಯಾಪ್ತಿಯ ದಿನವಹಿ ಮಾರುಕಟ್ಟೆ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಸುಸಜ್ಜಿತ ವಾಹನ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸುವ ಚಿಂತನೆಯಿದೆ.
-ಉದಯ ಶೆಟ್ಟಿ, ಪೌರಾಯುಕ್ತರು, ನಗರಸಭೆ.
ಇದು ಪ್ರತ್ಯಕ್ಷ ಅನುಭವ
ನನ್ನ ತಂದೆಯ ಚಿಕಿತ್ಸೆಗಾಗಿ ಆದರ್ಶ ಹಾಸ್ಪಿಟಲ್‌ಗೆ ಹೋಗಬೇಕಿತ್ತು. ಕೊರೊನಾದಿಂದಾಗಿ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಇರಲಿಲ್ಲ. ಬೇರೆ ಕಡೆ ವಾಹನ ನಿಲ್ಲಿಸಲು ಸ್ಥಳ ಹುಡುಕಿಕೊಂಡು ಕೆಎಂ ಮಾರ್ಗ ಪೂರ್ತಿ ಮೂರು ಸುತ್ತು ಹಾಕಿದೆ. ಎಲ್ಲಿಯೂ ಸ್ಥಳವೇ ಇರಲಿಲ್ಲ ಒಂದು ಕಡೆ ತಂದೆಯವರನ್ನು ಆಸ್ಪತ್ರೆಯಲ್ಲಿ ಬಿಟ್ಟಿದ್ದೇನೆ ಎಂಬ ಟೆನ್ಶನ್. ಆದರೆ ವಾಹನ ಎಲ್ಲಿ ನಿಲ್ಲಿಸುವುದು ಎಂದು ತಿಳಿಯಲೇ ಇಲ್ಲ. ಕೊನೆಗೆ ದಿಕ್ಕು ತೋಚದೆ ನಗರ ಸಭೆ ಕಾರ್ಯಾಲಯದ ಹಿಂದೆ ಇರುವ ಫ್ಲ್ಯಾಟ್‌ನ ಎದುರು ಸೆಕ್ಯೂರಿಟಿ ಗಾರ್ಡ್‌ನ ಅನುಮತಿ ಪಡೆದು ವಾಹನ ನಿಲ್ಲಿಸಿ ಆಸ್ಪತ್ರೆಗೆ ಹೋಗಲು ಒಂದು ತಾಸು ಬೇಕಾಯಿತು.-ಶಿಲ್ಪಾ ಶೆಟ್ಟಿ, ಕರಂಬಳ್ಳಿ
ಭಾರತೀಯ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಉಡುಪಿ ಶಾಖೆಗೆ ಹೋಗಬೇಕಾದಾಗ ಎದುರಿಸಿದ ಸಮಸ್ಯೆ. ದ್ವಿಚಕ್ರ ವಾಹನದಲ್ಲಿ ಹೋಗಿ¨ªೆ. ರಾಜ್ಯ ರಸ್ತೆ ನಿಗಮದ ನಿಲ್ದಾಣದಿಂದ ಬ್ಯಾಂಕಿಗೆ ಹೋಗುವ ಮೆಟ್ಟಿಲು ಏರುವಲ್ಲಿಯವರೆಗೆ ದ್ವಿಚಕ್ರ, ಚತುಷcಕ್ರ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಖಾಲಿ ಜಾಗವೇ ಇರಲಿಲ್ಲ. ಪೂರ್ವದಲ್ಲಿನ ಸಿಪಿಸಿ ಸಂಕೀರ್ಣದ ಎದುರು ನಿಲ್ಲಿಸಲು ಹೋದಾಗ ಸಂಕೀರ್ಣದ ಒಳಗೆ ಹೋಗುವವರಿಗೆ ಮಾತ್ರ ನಿಲ್ಲಿಸಲು ಅವಕಾಶ ಎಂದು ಹೇಳಿ ಅಲ್ಲಿನ ಭದ್ರತಾ ಸಿಬಂದಿ ನಿಲ್ಲಿಸಲು ಬಿಡಲೇ ಇಲ್ಲ. ಬ್ಯಾಂಕಿನ ವ್ಯವಹಾರಕ್ಕೆ ಹೋಗುವವರಿಗೆ ಅದರ ತಳಭಾಗದಲ್ಲಿ ನಿಲ್ಲಿಸಲು ಅವಕಾಶವಿಲ್ಲ. ಬ್ಯಾಂಕಿನ ಉನ್ನತ ಅಧಿಕಾರಿಯವರಲ್ಲಿ ಪ್ರಸ್ತಾವಿಸಿದಾಗ ಕಷ್ಟಸಾಧ್ಯವೆಂಬುದು ಅವರ ಪ್ರತಿಕ್ರಿಯೆಯಾಗಿತ್ತು. ಆ ಕಡೆ, ಈ ಕಡೆ ಸುತ್ತಾಡಿ ಅನಂತರ ಸರಕಾರಿ ಕಿರಿಯ ಮಹಾವಿದ್ಯಾಲಯದ ವಠಾರದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬದಿಯಲ್ಲಿ ನಿಲ್ಲಿಸಿ ಬರಬೇಕಾಯಿತು. ದ್ವಿಚಕ್ರ ವಾಹನದವರ ಪಾಡೇ ಹೀಗಾದರೆ ಬೇರೆ ವಾಹನದವರ ಪಾಡು ದೇವರೇ ಗತಿ.
-ಶ್ರೀನಿವಾಸ ಶೆಟ್ಟಿ ತೋನ್ಸೆ, ನಗರಸಭಾ ಮಾಜಿ ಸದಸ್ಯ ಬನ್ನಂಜೆ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.