ಓಟ ಮುಂದುವರಿಸಿದ ಜೊಕೋವಿಕ್
Team Udayavani, Feb 13, 2021, 6:30 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದ 5ನೇ ದಿನದಾಟದಲ್ಲಿ ಯಾವುದೇ ದೊಡ್ಡ ಮಟ್ಟದ ಏರುಪೇರು ಸಂಭವಿಸಿಲ್ಲ. ನೆಚ್ಚಿನ ಆಟಗಾರರಾದ ನೊವಾಕ್ ಜೊಕೋವಿಕ್, ಡೊಮಿನಿಕ್ ಥೀಮ್, ಸೆರೆನಾ ವಿಲಿಯಮ್ಸ್, ನವೋಮಿ ಒಸಾಕಾ ಅವರೆಲ್ಲ ಗೆಲುವಿನ ಓಟ ಮುಂದುವರಿಸಿ 4ನೇ ಸುತ್ತಿಗೆ ನೆಗೆದಿದ್ದಾರೆ.
5 ಸೆಟ್‌ಗಳ ಸೆಣಸಾಟ :
ಕಳೆದ ಬಾರಿಯ ಚಾಂಪಿಯನ್ ಜೊಕೋವಿಕ್ ಅಮೆರಿ ಕದ ಟೇಲರ್ ಫ್ರಿಟ್ಸ್ ಅವರನ್ನು ಮಣಿಸಲು 5 ಸೆಟ್‌ಗಳ ಹೋರಾಟ ನಡೆಸಿದ್ದು ಶುಕ್ರವಾರದ ಅಚ್ಚರಿ ಎನಿಸಿತು. ಈ ಪಂದ್ಯವನ್ನು ಜೊಕೋ 7-6 (7-1), 6-4, 3-6, 4-6, 6-2 ಅಂತರದಿಂದ ಗೆದ್ದರು. ಆದರೆ ಗಾಯಾಳಾಗಿರುವ ಜೊಕೋವಿಕ್ ಮುಂದಿನ ಪಂದ್ಯ ಆಡುವುದು ಅನುಮಾನ.
ನಂ.3 ಥೀಮ್ ಆತಿಥೇಯ ನಾಡಿನ ನಿಕ್ ಕಿರ್ಗಿಯೋಸ್ ವಿರುದ್ಧ ಮೇಲುಗೈ ಸಾಧಿಸಲಿಕ್ಕೂ 5 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಅಂತರ 4-6, 4-6, 6-3, 6-4, 6-4. ಯುಎಸ್ ಓಪನ್ ಚಾಂಪಿಯನ್ ಆಗಿರುವ ಥೀಮ್ ಅವರಿನ್ನು ಗ್ರಿಗರ್ ಡಿಮಿಟ್ರೋವ್ ವಿರುದ್ಧ ಸೆಣಸಲಿದ್ದಾರೆ.
ಮೊದಲ ಗ್ರ್ಯಾನ್‌ಸ್ಲಾಮ್ ಆಡುತ್ತಿರುವ ರಶ್ಯದ ಅಸ್ಲಾನ್ ಕರತ್ಸೇವ್ ನಂ. 8 ಆಟಗಾರ ಡೀಗೊ ಶಾರ್ಟ್ಸ್ಮನ್ ಅವರನ್ನು 6-3, 6-5, 6-3ರಿಂದ ಮಣಿಸಿದರು. ಕರತ್ಸೇವ್ ದಶಕದ ಬಳಿಕ “ಮೆಲ್ಬರ್ನ್ ಪಾರ್ಕ್’ನಲ್ಲಿ 4ನೇ ಸುತ್ತು ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರನಾಗಿದ್ದಾರೆ.
ಯುಎಸ್ ಓಪನ್ ರನ್ನರ್ ಅಪ್ ಅಲೆಕ್ಸಾಂಡರ್ ಜ್ವೆರೇವ್ 6-3, 6-3, 6-1ರಿಂದ ಫ್ರಾನ್ಸ್‌ನ ಆ್ಯಡ್ರಿಯನ್ ಮುನ್ನಾರಿನೊ ಅವರನ್ನು ಮಣಿಸಿದರು.
ಸೆರೆನಾ, ಒಸಾಕಾ ಗೆಲುವು :
ವನಿತಾ ಸಿಂಗಲ್ಸ್‌ನಲ್ಲಿ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್ ರಶ್ಯದ ಅನಾಸ್ತಾಸಿಯಾ ಪೊಟಪೋವಾ ವಿರುದ್ಧ ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರೂ 7-6 (7-5), 6-2ರಿಂದ ಗೆದ್ದು ಬಂದರು.
ಜಪಾನಿನ ನವೋಮಿ ಒಸಾಕಾ 6-3, 6-2ರಿಂದ ಓನ್ಸ್ ಜೆಬ್ಯೂರ್ ಅವರನ್ನು ಮಣಿಸಿದರೆ, ಗಾರ್ಬಿನ್ ಮುಗುರುಜಾ ಕಜಾಕ್‌ಸ್ಥಾನದ ಜರೀನಾ ದಿಯಾಸ್ ಅವರನ್ನು 6-1, 6-1ರಿಂದ ಹಿಮ್ಮೆಟ್ಟಿಸಿದರು.
ಲಾಕ್‌ಡೌನ್; ವೀಕ್ಷಕರಿಗೆ ನಿರ್ಬಂಧ :
ಮೆಲ್ಬರ್ನ್ನ ಕ್ವಾರಂಟೈನ್ ಹೊಟೇಲ್ ಒಂದರಲ್ಲಿ ಮತ್ತೆ ಕೋವಿಡ್-19 ಕೇಸ್ ಕಂಡುಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆ್ಯಂಡ್ರೂಸ್ ಶನಿವಾರದಿಂದ 5 ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ್ದಾರೆ. ಇದರಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಸ್ಪರ್ಧೆಗಳಿಗೇನೂ ಅಡ್ಡಿಯಾಗದು. ಆದರೆ ಈ 5 ದಿನಗಳ ಕಾಲ ವೀಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪಂದ್ಯಗಳೆಲ್ಲ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.