ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ
"ದಂತ ವೈದ್ಯಕೀಯ ತಪಾಸಣೆ ದುಬಾರಿಯಲ್ಲ; ಆದರೆ ಅದರತ್ತ ನಿರ್ಲಕ್ಷ್ಯ ದುಬಾರಿಯಾದೀತು!'
Team Udayavani, Feb 21, 2021, 12:54 PM IST
ಭಾರತದಲ್ಲಿ ದಂತವೈದ್ಯಕೀಯ ಆರೋಗ್ಯವನ್ನು ಬಹಳ ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ. ದಂತ ವೈದ್ಯರ ಬಳಿಗೆ ನಿಯಮಿತ ತಪಾಸಣೆಗೆ ತೆರಳುವುದು ಎಂದರೆ, “ಅಯ್ಯೋ ಯಾರಪ್ಪಾ ಅಲ್ಲಿಗೆ ಹೋಗುವುದು’ ಎಂಬ ಭಾವನೆ! ನೋವು ಅಧಿಕವಾಗಿದ್ದರೂ ಕೂಡ ವೈದ್ಯರ ಬಳಿಗೆ ಹೋಗುವುದನ್ನು ಬಿಟ್ಟು ಯಾವುದಾದರೊಂದು ನೋವು ನಿವಾರಕ ಮಾತ್ರೆ ನುಂಗಿ ಸುಮ್ಮನಿದ್ದು ಬಿಡುವ ಪರಿಪಾಠ ನಮ್ಮದು. ಇದಕ್ಕೆ ಕಾರಣಗಳು ತುಂಬ ಸರಳ: ದಂತವೈದ್ಯಕೀಯ ಚಿಕಿತ್ಸೆ, ತಪಾಸಣೆ ಎಂದರೆ ನೋವು, ಆತಂಕ, ಭಯ ಮತ್ತು ವೆಚ್ಚ ತಗಲುತ್ತದೆ ಎಂಬ ತಪ್ಪು ಕಲ್ಪನೆಗಳು.
ಆದರೆ ಇವೆಲ್ಲವುಗಳಿಗೂ ಮೂಲ ಕಾರಣ ಏನು? ಕೇವಲ ನಿರ್ಲಕ್ಷ್ಯ! ಇಲ್ಲೊಂದು ಸರಳ ಪ್ರಶ್ನೆಯಿದೆ: ನಿಯಮಿತ ರಕ್ತದೊತ್ತಡ ತಪಾಸಣೆಗಾಗಿ ವೈದ್ಯರ ಬಳಿಗೆ ಹೋಗುವುದಕ್ಕೆ ವ್ಯಕ್ತಿಯೊಬ್ಬರು ಹೆದರುತ್ತಾರೆ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ ಎಂದಿಟ್ಟುಕೊಳ್ಳಿ. ಪರಿಣಾಮವಾಗಿ ಮುಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಮುಂದೆ ಒಳಗಾಗಬೇಕಾದ ನೋವು ಮತ್ತು ಹಣಕಾಸಿನ ಹೊರಗೆ ಇದು ಒಂದು ಸಣ್ಣ ಉದಾಹರಣೆ. ದಂತ ವೈದ್ಯಕೀಯ ಚಿಕಿತ್ಸೆಯ ವಿಚಾರದಲ್ಲಿಯೂ ಈ ಮಾತು ನಿಜ. ನಿಯಮಿತವಾದ ದಂತ ವೈದ್ಯಕೀಯ ತಪಾಸಣೆಯನ್ನು ನಿರ್ಲಕ್ಷಿಸುವುದರಿಂದ ಇರಬಹುದಾದ ಅನಾರೋಗ್ಯಗಳು ಉಲ್ಬಣಗೊಂಡು ಗಂಭೀರ ದಂತ ವೈದ್ಯಕೀಯ, ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಬೇಕಾದೀತು. ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ಸಮೀಪದ ದಂತ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗತಿ ಬಾಧೆಗೀಡಾಗದೆ ಸುಸ್ಥಿತಿಯಲ್ಲಿರುತ್ತವೆ.ಇದರಿಂದ ನೀವು ಹಲವು ತೊಂದರೆಗಳಿಂದ ಪಾರಾಗಬಹುದು.
ಒಂದು ಉದಾಹರಣೆ ನೋಡೋಣ. ನೀವು ಬಾಯಿಯ ನೈರ್ಮಲ್ಯವನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ವಸಡುಗಳ ಉದ್ದಕ್ಕೆ ಕೊಳೆಯ ಪದರ ಬೆಳೆಯುತ್ತದೆ. ವಸಡುಗಳು ಮತ್ತು ಹಲ್ಲುಗಳ ನಡುವೆ ಬ್ಯಾಕ್ಟೀರಿಯಾ ಹೆಚ್ಚುತ್ತವೆ. ನಿಯಮಿತವಾದ ಹಲ್ಲುಶುಚಿಗಾಗಿ ವೈದ್ಯರಲ್ಲಿಗೆ ಹೋಗುವುದಿಲ್ಲ. ಇದರಿಂದ ಜಿಂಜಿವೈಟಿಸ್ ಉಂಟಾಗುತ್ತದೆ, ಕ್ರಮೇಣ ಪೆರಿಯೋಡಾಂಟಿಕ್ಸ್ ತಲೆದೋರುತ್ತದೆ. ಬಾಯಿಯೊಳಗೆ ಗಾಯ, ಬಿರುಕು ಅಥವಾ ಹಲ್ಲುಜ್ಜುವಾಗ ಉಂಟಾಗುವ ಗಾಯದಿಂದಾಗಿ ಅವಕಾಶ ದೊರೆತರೆ ಬಾಯಿಯಲ್ಲಿ ಬೆಳೆದಿರುವ ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಯೊಳಕ್ಕೂ ಹೊಕ್ಕು ಬಿಡುವ ಸಾಧ್ಯತೆಯಿದೆ.
ಈಗ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಬಲಿಷ್ಠವಾಗಿದ್ದರೆ ದೇಹ ಸುಲಭವಾಗಿ ಅವುಗಳ ವಿರುದ್ಧ ಹೋರಾಡಿ ನಾಶ ಮಾಡಿ ಬಿಡುತ್ತದೆ. ಆದರೆ ಕ್ಯಾನ್ಸರ್, ಮಧುಮೇಹ ಅಥವಾ ಎಚ್‌ಐವಿಯಂತಹ ಅನಾರೋಗ್ಯಗಳಿಂದ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗಿದ್ದರೆ ಇದು ದೇಹದ ಯಾವುದೇ ಅಂಗದಲ್ಲಿ ಸೋಂಕಿಗೆ ಕಾರಣವಾಗಬಹುದು. ಉದಾಹರಣೆಗೆ, ದುರ್ಬಲ ಎಂಡೊಕಾರ್ಡಿಟಿಸ್ – ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಗೆ ಸೇರಿ ಹೃದಯದ ಕವಾಟಗಳ ಭಿತ್ತಿಗೆ ಅಂಟಿಕೊಳ್ಳುವುದರಿಂದ ತಲೆದೋರುವ ಗಂಭೀರ ಅನಾರೋಗ್ಯ ಇದು.
ತೀವ್ರ ತರಹದ ವಸಡಿನ ಕಾಯಿಲೆಗಳು ಅವಧಿಪೂರ್ವ ಹೆರಿಗೆ ಮತ್ತು ಶಿಶು ಅಪ್ರಾಪ್ತವಾಗಿ ಜನಿಸುವಂತಹ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ.
ಅಧ್ಯಯನಗಳು ಹೇಳುವುದೇನೆಂದರೆ, ಭ್ರೂಣದ ಬೆಳವಣಿಗೆ ಮತ್ತು ಪ್ರಗತಿಗೆ ಅಡಚಣೆ ಉಂಟುಮಾಡುವ ವಿಷಾಂಶಗಳನ್ನು ಬ್ಯಾಕ್ಟೀರಿಯಾಗಳು ಬಿಡುಗಡೆ ಮಾಡಬಲ್ಲವು. ಬಾಯಿಯ ಸೋಂಕಿನಿಂದ ಅವಧಿಪೂರ್ವ ಪ್ರಸೂತಿಯೂ ತಲೆದೋರಬಹುದಾಗಿದೆ.
ಸ್ಥೂಲವಾಗಿ ಏನು ಹೇಳಬಹುದು ಎಂದರೆ, ಪ್ರತೀ ಮೂರು ತಿಂಗಳುಗಳಿಗೆ ಒಂದು ಬಾರಿ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಒಟ್ಟು ಆರೋಗ್ಯವನ್ನು ಕಾಪಾಡಿಕೊಂಡಂತಾಗುತ್ತದೆ; ಸದ್ಯಕ್ಕೆ ಮಾತ್ರ ಅಲ್ಲ, ಭವಿಷ್ಯದ ದೃಷ್ಟಿಯಿಂದಲೂ.
ದಂತ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಹಲ್ಲುಗಳು ಮತ್ತು ವಸಡುಗಳನ್ನು ಮಾತ್ರ ಆರೋಗ್ಯವಾಗಿ ಇರಿಸಿಕೊಳ್ಳುವುದಲ್ಲ; ಇನ್ನಿತರ ಹಲವು ಅನಾರೋಗ್ಯಗಳು ಕಾಡದಂತೆ ಪ್ರತಿಬಂಧಿಸಬಹುದು. ದಂತವೈದ್ಯಕೀಯ ಸಮಸ್ಯೆಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತದೆ. ಸಮಸ್ಯೆ ಉಲ್ಬಣಗೊಂಡು ಹೆಚ್ಚು ವೆಚ್ಚ, ನೋವುಣ್ಣುವುದರಿಂದಲೂ ಪಾರಾಗಲು ಸಾಧ್ಯವಾಗುತ್ತದೆ.
ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗುವುದರಿಂದ ಆ ಬಗೆಗಿನ ಭಯ, ಆತಂಕ ದೂರವಾಗಿ ಸಮಸ್ಯೆ ತಲೆದೋರಿದಾಗ ದಂತ ಚಿಕಿತ್ಸಾಲಯಕ್ಕೆ ನಿರ್ಭಯವಾಗಿ ತೆರಳಲು ಸಾಧ್ಯವಾಗುತ್ತದೆ.
ಆದ್ದರಿಂದ ಯಾವುದೇ ವಯೋಮಾನದವರಾಗಿರಲಿ- ಯಾರು ಕೂಡ ದಂತ ವೈದ್ಯಕೀಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು, ನಿಯಮಿತವಾಗಿ ದಂತ ವೈದ್ಯರಲ್ಲಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬಾರದು.
ಡಾ| ಆನಂದದೀಪ್ ಶುಕ್ಲಾ
ಅಸೊಸಿಯೇಟ್ ಪ್ರೊಫೆಸರ್, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗ
ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.