ಸಂಸದೀಯ ಪದ್ಧತಿಗೆ ಸರಿಯಾಗಬಹುದೇ ಏಕರಾಷ್ಟ್ರ-ಏಕ ಚುನಾವಣೆ?
Team Udayavani, Aug 17, 2019, 6:21 AM IST
ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಏಕರಾಷ್ಟ್ರ- ಏಕಚುನಾವಣೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ವಿಷಯ ಇಂದು ದೇಶವ್ಯಾಪಿಯಾಗಿ ಬಹು ಚರ್ಚಿತವಾಗುತ್ತಿದೆ. ಹಾಗೆಂದು ಇದು ಹೊಸ ಚಿಂತನೆಯೇನಲ್ಲ. ಬಹು ಹಿಂದೆ ಇದೇ ವಿಷಯದ ಕುರಿತು ಚರ್ಚೆಯು ನಡೆದಿತ್ತು. ಆದರೆ ಅಂದು ನಡೆದ ಚರ್ಚೆ ಬರೇ ಚರ್ಚೆಯಾಗಿ ಅಂತ್ಯ ಕಂಡಿತು ಹೊರತು ಕಾರ್ಯಗತವಾಗುವ ಯಾವ ಲಕ್ಷಣವೂ ಗೋಚರಿಸಲಿಲ್ಲ.
ಏಕರಾಷ್ಟ್ರ-ಏಕಚುನಾವಣೆಯ ಸುಧಾರಣೆಯ ಮೊದಲ ಹೆಜ್ಜೆಯಾಗಿ ಕಾನೂನು ಆಯೋಗ 2018 ಆಗಸ್ಟ್ 30ರಂದು ವಿಸ್ತಾರವಾದ ವರದಿಯನ್ನು ತಯಾರಿಸಿ ಕೇಂದ್ರ ಸರಕಾರಕ್ಕೆ ಒಪ್ಪಿಸಿತ್ತು. ಏಕರಾಷ್ಟ್ರ-ಏಕಚುನಾವಣೆಯ ಸಂಕಲ್ಪವನ್ನು ಸಂವಿಧಾನ ಅನುಷ್ಠಾನಗೊಳಿಸುವ ಹೊಸ್ತಿಲಲ್ಲಿಯೇ ಹೊಂದಲಾಗಿತ್ತು. ಆದರೆ ಇದನ್ನು ಸಂವಿಧಾನದಲ್ಲಿ ಅಕ್ಷರಗಳ ರೂಪದಲ್ಲಿ ಜೋಡಿಸುವುದು ಅಷ್ಟು ಸುಲಭವಾಗಿರಲಿಲ್ಲ. 1952ರಿಂದ 1967ರ ವರೆಗಿನ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆದುಕೊಂಡು ಬಂದವು. ಆದರೆ 1970ರ ಅನಂತರದ ಕಾಲಘಟ್ಟಗಳಲ್ಲಿ ನಡೆದ ಚುನಾವಣೆಗಳು ಅವಧಿಯಲ್ಲಿ ಏರುಪೇರುಗಳನ್ನು ಕಂಡವು. 1951-52 ರಿಂದ 1967ರವರೆಗಿನ ಅವಧಿಯಲ್ಲಿ ನಡೆದ ರಾಜ್ಯ- ರಾಷ್ಟ್ರಮಟ್ಟದ ಚುನಾವಣೆಗಳು ಏಕರಾಷ್ಟ್ರ ಏಕ ಚುನಾವಣೆಯ ರೀತಿಯಲ್ಲಿ ನಡೆದು ಬರಲು ಮುಖ್ಯ ಕಾರಣವೆಂದರೆ ಅಂದು ಇಡೀ ರಾಷ್ಟ್ರ ವ್ಯಾಪಿಯಾಗಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸುಭದ್ರವಾದ ಸರಕಾರ ನೀಡುವಲ್ಲಿ ಸಫಲವಾಗಿತ್ತು. ಹಾಗಾಗಿ ಈ ಕಾಲಾವಧಿಯಲ್ಲಿ ಮಧ್ಯಾವಧಿ ಚುನಾವಣೆ ವಿಷಯ ಹುಟ್ಟಿಕೊಳ್ಳಲೇ ಇಲ್ಲ. 1970ರ ಅನಂತರ ಕಾಂಗ್ರೆಸ್ ನಿಧಾನವಾಗಿ ತನ್ನ ಹಿಡಿತವನ್ನು ಒಂದೊಂದೇ ರಾಜ್ಯಗಳಲ್ಲಿ ಕಳೆದುಕೊಳ್ಳುತ್ತಾ ಬಂತು. ಪ್ರಾದೇಶಿಕ ಪಕ್ಷಗಳು ತಲೆ ಎತ್ತಲು ಪ್ರಾರಂಭವಾಯಿತು. ಮುಂದೆ ಇದು ಬಿಜೆಪಿಯ ಸಮ್ಮಿಶ್ರ ಸರಕಾರದ ಆಡಳಿತದ ಅವಧಿಯಲ್ಲಿ ಮುಂದುವರಿಯಿತು. ಸಂವಿಧಾನದ ಪ್ರಮುಖ ವಿಧಿ 356 ಬಳಕೆಯೂ ಕೂಡಾ ಅದೆಷ್ಟೋ ರಾಜ್ಯಗಳಲ್ಲಿ ಮಧ್ಯಾವಧಿ ಚುನಾವಣೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಿಸಿದನ್ನು ಕಾಣಬಹುದು.
ವಿಶೇಷವಾಗಿ ಗಮನಿಸಬೇಕಾದ ಸಂಗತಿ ಅಂದರೆ; ಇಂತಹ ಹಳಿತಪ್ಪಿದ ಚುನಾವಣಾ ಕಣಗಳನ್ನು ಮತ್ತೆ ಏಕರಾಷ್ಟ್ರ-ಏಕಚುನಾವಣೆಯ ಹೆಸರಿನಲ್ಲಿ ಒಂದೇ ದಾರಿಗೆ ತರಲು ಸಾಧ್ಯವೇ? ಇದ್ದಕ್ಕಿದ್ದ ಹಾಗೆ ಈ ಒಂದು ಪರಿಕಲ್ಪನೆ ಹುಟ್ಟಿ ಬರಲು ಕಾರಣವೇನು ಎಂದು ವಿಶ್ಲೇಷಿಸಿದಾಗ ತಿಳಿದು ಬರುವ ಸತ್ಯಾಂಶವೆಂದರೆ 1952ರಿಂದ 1967ರವರೆಗೆ ಕಾಂಗ್ರೆಸ್ ಪಕ್ಷ ಯಾವ ಸ್ಥಿತಿಯಲ್ಲಿತ್ತೂ, ಅದೇ ಪರಿಸ್ಥಿತಿ ಇವತ್ತು ಬಿಜೆಪಿಗೆ ಬಂದಿದೆ ಅನ್ನುವುದು. ಇಂದು ಕೇಂದ್ರದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರಕಾರ ನಡೆಸುವ ಸಾಮರ್ಥ್ಯ ಪಡೆದಿದೆ; ಮಾತ್ರವಲ್ಲ ಹೆಚ್ಚಿನ ರಾಜ್ಯಗಳಲ್ಲಿ ಕೂಡಾ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸರಕಾರ ನಡೆಸುತ್ತಿರುವ ಕಾರಣ; ಈ ಚುನಾವಣಾ ನೀತಿ ಜಾರಿಗೆ ತರಲು ಸುಲಭವಾಗಬಹುದು ಎಂಬ ವಿಶ್ವಾಸ ಕೇಂದ್ರ ಸರಕಾರದ್ದು. ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗ ಕೂಡಾ ಹಸಿರು ನಿಶಾನೆ ತೋರಿಸಿಬಿಟ್ಟಿದೆ.
ಏಕರಾಷ್ಟ್ರ-ಏಕ ಚುನಾವಣೆ ಇಂದಿನ ಚುನಾವಣೆಗಳ ಭರಾಟೆಯ ಕಾಲದಲ್ಲಿ ಆಶಾದಾಯಕವಾದ ನಿರ್ಧಾರ ಅನ್ನಿಸುವುದು ಅಷ್ಟೇ ಸತ್ಯ. ಇದರಿಂದಾಗಿ ಚುನಾವಣೆಯ ವೆಚ್ಚವನ್ನು ಕಡಿತಗೊಳಿಸಬಹುದು; ಸಮಯ ಉಳಿತಾಯವಾದೀತು. ಮಾನವ ಸಂಪನ್ಮೂಲವನ್ನು ಉಳಿಸಿ, ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು, ಮಾತ್ರವಲ್ಲ ನೀತಿಸಂಹಿತೆಯಿಂದಾಗಿ ಸ್ಥಗಿತಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೂ ಇದೊಂದು ಉತ್ತಮ ಪರಿಹಾರ ನೀಡಬಲ್ಲ ಕಾನೂನು ಎಂಬ ಅಭಿಪ್ರಾಯಕ್ಕೂ ಬರಲಾಗಿದೆ. ಇದರ ಜೊತೆಗೆ ಮತದಾನದ ಪ್ರಮಾಣದಲ್ಲಿ ಕೂಡಾ ಹೆಚ್ಚಿನ ಪ್ರಗತಿ ಸಾಧಿಸಬಹುದೆಂಬ ವಿಶೇಷ ಚಿಂತನೆಯೂ ಅಡಗಿದೆ.
ಇದು ಏಕರಾಷ್ಟ್ರ-ಏಕಚುನಾವಣೆಯ ಚಿಂತನೆಯ ಒಂದು ದಿಕ್ಕಾದರೆ ಇನ್ನೊಂದು ದಿಕ್ಕಿನಲ್ಲಿ ಆಲೋಚಿಸುವವರು ಹತ್ತು ಹಲವು ಅಸ್ತ್ರಗಳನ್ನು ವಿರೋಧವಾಗಿ ಬಳಸುತ್ತಿದ್ದಾರೆ. ಹಾಗಂತ ಈ ವಿರೋಧ ಅಸ್ತ್ರಗಳನ್ನು ತಪ್ಪು ಅನ್ನುವ ಹಾಗೆಯೂ ಇಲ್ಲ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಮತದಾನ ನಡೆದಾಗ; ಚುನಾವಣೆಗಳಲ್ಲಿ ಪ್ರಧಾನವಾಗಿ ಚರ್ಚಿತವಾಗುವ ಸಮಸ್ಯೆಗಳು; ಬೇಡಿಕೆಗಳು ರಾಷ್ಟ್ರ-ರಾಜ್ಯದ ಮಟ್ಟದಲ್ಲಿ ಭಿನ್ನವಾಗಿರಬಹುದು; ರಾಜ್ಯದಿಂದ ರಾಜ್ಯಕ್ಕೆ ಸಮಸ್ಯೆಗಳು ಬೇಡಿಕೆಗಳಲ್ಲಿ ವ್ಯತ್ಯಾಸವಿರಬಹುದು; ಆದರೆ ಏಕರಾಷ್ಟ್ರ-ಏಕಚುನಾವಣೆ ನೀತಿಯ ಅಡಿಯಲ್ಲಿ ಲೋಕಸಭಾ-ವಿಧಾನಸಭಾ ಚುನಾವಣೆಗಳಲ್ಲಿ ಎರಡನ್ನು ಒಂದೇ ತಕ್ಕಡಿಯಲ್ಲಿ ಹಿಡಿದು ತೂಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ರಾಷ್ಟ್ರೀಯ ವಿಚಾರಗಳು ಪ್ರಾದೇಶಿಕ ವಿಚಾರಗಳನ್ನು ನುಂಗಿ ಹಾಕುವ ಸಾಧ್ಯತೆಯೂ ಇದೆ. ಹಾಗಾಗಿ ಇದು ನಮ್ಮ ಸಂಸದೀಯ ವ್ಯವಸ್ಥೆಯ ಒಕ್ಕೂಟಪದ್ಧತಿಗೆ ಮಾರಕವಾಗಬಹುದು ಎಂಬ ಅಪಸ್ವರವಿದೆ.
ಇನ್ನೊಂದು ಸಾಂವಿಧಾನಿಕ ಪ್ರಶ್ನೆ ಅಂದರೆ ಇದಾಗಲೇ ಹಳಿ ತಪ್ಪಿಕೊಂಡು ಓಡುತ್ತಿರುವ ಚುನಾಯಿತ ರಾಜ್ಯಗಳ ಹಾಗೂ ಕೇಂದ್ರ ಸರಕಾರವನ್ನು ಒಂದೇ ಹಳಿಗೆ ತರುವುದಾದರೂ ಹೇಗೆ? ಇದಕ್ಕೆ ಸಂವಿಧಾನದ ತಿದ್ದುಪಡಿ ಅನಿವಾರ್ಯವಲ್ಲವೇ? ಒಂದು ವೇಳೆ ಯಾವುದೇ ಸರಕಾರ ತಮ್ಮ ಅವಧಿ ಪೂರೈಸುವ ಮೊದಲೇ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದರೆ ಅಂತಹ ಸರಕಾರಗಳನ್ನು ಐದು ವರ್ಷದ ಅವಧಿಗೆ ಮುಂದುವರಿಸುವುದಾದರೂ ಹೇಗೆ? ಇಂದಿನ ಸಂವಿಧಾನದ ನಿಯಮ ಪ್ರಕಾರ ಆರು ತಿಂಗಳೊಳಗೆ ಚುನಾವಣೆ ನಡೆಸಿ ಹೊಸ ಸರಕಾರ ಸ್ಥಾಪಿಸಬೇಕು. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮತ್ತೆ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರಬೇಕಾದ ಅನಿವಾರ್ಯತೆ ಇದೆ.
ಏಕರಾಷ್ಟ್ರ-ಏಕಚುನಾವಣೆಯ ಚಿಂತನೆ ಅಮೆರಿಕದಂತಹ ಅಧ್ಯಕ್ಷೀಯ ಮಾದರಿ ಸರಕಾರಕ್ಕೆ ಒಪ್ಪಬಹುದು ಹೊರತು ಭಾರತದಂತಹ ಸಂಸದೀಯ ಮಾದರಿ ವ್ಯವಸ್ಥೆಗೆ ಸರಿಹೊಂದಬಹುದೇ ಅನ್ನುವುದು ದೊಡ್ಡ ಪ್ರಶ್ನೆ. ಸಂಸದೀಯ ಸರಕಾರದಲ್ಲಿ ಶಾಸಕಾಂಗ ಕಾರ್ಯಾಂಗಕ್ಕೂ ನೇರವಾದ ಸಂಬಂಧವಿದೆ. ಅವಿಶ್ವಾಸದಂತಹ ಅಸ್ತ್ರಗಳು ಸದಾ ಬಳಕೆಯಾಗುತ್ತಿರುವ ಕಾರಣ ಚುನಾಯಿತ ಸರಕಾರ ಯಾವತ್ತೂ ಬೀಳುವ ಸಾಧ್ಯತೆ ಇರುತ್ತದೆ. ಇಲ್ಲಿ ನಮಗೆ ಹೊಳೆಯಬಹುದಾದ ಇನ್ನೊಂದು ಉತ್ತಮ ಮಾದರಿ ಅಂದರೆ ಜಪಾನ್ ಮಾದರಿ ಸಂಸದೀಯ ವ್ಯವಸ್ಥೆ. ಜಪಾನ್‌ನಲ್ಲಿ ನಮ್ಮ ಹಾಗೆ ಬಹುಪಕ್ಷ ಪದ್ಧತಿ ಇರುವ ಕಾರಣ ಯಾವಾಗಲೂ ಅಸ್ಥಿರ ಸರಕಾರ ಕಾಣಬೇಕಾದ ಪರಿಸ್ಥಿತಿ ಬಂದಾಗ ಅವರು ಮಾಡಿಕೊಂಡ ಒಂದು ಸುಧಾರಣೆ ಅಂದರೆ ಆ ದೇಶದ ಪ್ರಧಾನಮಂತ್ರಿಯನ್ನು ಅಲ್ಲಿನ ಸಂಸತ್ತು (ಡೈಟ್) ಆಯ್ಕೆ ಮಾಡುವುದು. ಒಂದು ವೇಳೆ ಆ ಪ್ರಧಾನಮಂತ್ರಿ/ಅರ್ಥಾತ್ ಸರಕಾರ ತೆಗೆಯಬೇಕಾದ ಪ್ರಸಂಗ ಬಂದಾಗ; ಸಂಸತ್ತಿನಲ್ಲಿ (ಡೈಟ್) ಮೊದಲು ಹೊಸ ಪ್ರಧಾನಮಂತ್ರಿ ಆಯ್ಕೆ ಮಾಡಿ; ಆಡಳಿತರೂಢ ಪ್ರಧಾನಮಂತ್ರಿಯನ್ನು ಕೆಳಗಿಳಿಸಬೇಕು. ಇದರಿಂದಾಗಿ ಅಲ್ಲಿ ಅವಧಿಪೂರ್ತಿ ಆಡಳಿತ ನಡೆಸುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ.
ಆದರೆ ಇಂತಹ ಸಮಗ್ರ ತರದ ಸುಧಾರಣೆ ನಮ್ಮ ಸಂವಿಧಾನದಲ್ಲಿ ತರಬೇಕಾದರೆ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರಬೇಕಾದ ಅನಿವಾರ್ಯತೆ ಇದೆ. ಸುಪ್ರೀಂ ಕೋರ್ಟು ಕೇಶಾವನಂದ ಭಾರತಿ ಮತ್ತು ಕೇರಳ ಸರಕಾರದ ಪ್ರಕರಣದಲ್ಲಿ ನೀಡಿದ ತೀರ್ಪೇಂದರೆ ‘ಇನ್ನು ಮುಂದೆ ಯಾವುದೇ ಸಂವಿಧಾನದ ತಿದ್ದುಪಡಿ ಸಂವಿಧಾನದ ಮೂಲ ಚೌಕಟ್ಟಿಗೆ ಚ್ಯುತಿ ಬಾರದ ತರದಲ್ಲಿ ಇರಬೇಕು ಎಂದು’. ಹಾಗಾಗಿ ಇಂತಹ ಮೂಲಭೂತ ಸ್ವರೂಪದ ಬದಲಾವಣೆ ಸುಲಭದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಅನ್ನುವುದು ಸಂವಿಧಾನ ತಜ್ಞರ ಅಭಿಪ್ರಾಯ.
ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.