ನವಮಾಧ್ಯಮಗಳ ಭರಾಟೆ: ನಾಗರಿಕ ಪತ್ರಿಕೋದ್ಯಮ ಅರ್ಥ ಕಳೆದುಕೊಳ್ಳುತ್ತಿದೆಯೇ?
Team Udayavani, Jan 2, 2021, 6:10 AM IST
ಸಾಂದರ್ಭಿಕ ಚಿತ್ರ
ಮಾಧ್ಯಮದಲ್ಲಿ ಕೆಲಸ ಮಾಡಬೇಕಾದರೆ ಅವರಿಗೊಂದು ವಿದ್ಯಾರ್ಹತೆಯ ಮಾನದಂಡ ಬೇಕಾಗುತ್ತದೆ. ಸಮಾಜಕ್ಕೆ ದಿನನಿತ್ಯದ ಆಗು ಹೋಗುಗಳನ್ನು ತಿಳಿಸುವಾಗ ಅದರ ಹಿಂದಿನ ಜವಾಬ್ದಾರಿಯ ಅರಿವೂ ಇರಬೇಕಾಗುತ್ತದೆ.
ಸಹಭಾಗಿತ್ವ ಪತ್ರಿಕೋದ್ಯಮ, ಸಮಾನಾಂತರ ಪತ್ರಿಕೋದ್ಯಮ ಎಂದು ವಿವಿಧ ಹೆಸರುಗಳಲ್ಲಿ ಕರೆಯಿಸಿಕೊಳ್ಳುವ ನಾಗರಿಕ ಪತ್ರಿಕೋದ್ಯಮ, ಒಂದೂವರೆ ದಶಕದ ಹಿಂದೆ ಮಾಧ್ಯಮ ಕ್ಷೇತ್ರದಲ್ಲಿ ಪ್ರಚಲಿತಕ್ಕೆ ಬಂದಿತು. ಸುದ್ದಿಗ್ರಹಿಸುವ ಶಕ್ತಿಯಿರುವ ನಾಗರಿಕರು ವರದಿಗಾರರಿಗೆ ನಿಲುಕಲಾರದ ಅಥವಾ ಮಾಧ್ಯಮ ಕ್ಷೇತ್ರದ ದೃಷ್ಟಿಗೆ ಬೀಳದ ವಿಚಾರಗಳನ್ನುಅಧಿಕೃತವೆನಿಸಿಕೊಂಡ ಮಾಧ್ಯಮಗಳಿಗೆ ನೀಡಿ ಆ ಮೂಲಕ ಜನರನ್ನು ತಲುಪಬಹುದು ಎಂಬ ಕಾರಣಕ್ಕೆ ನಾಗರಿಕ ಪತ್ರಿಕೋದ್ಯಮ ಬಹುಬೇಗ ಯಶಕಂಡಿತು.
ಮಾಧ್ಯಮ ಕ್ಷೇತ್ರದಲ್ಲಿ ನಾಗರಿಕ ಪತ್ರಿಕೋದ್ಯಮ ನೂತನ ಆಯಾಮವಾಗಿ ಗುರುತಿಸಿಕೊಳ್ಳುವ ಮೊದಲೇ ನಾಗರಿಕರ ಸಹಭಾಗಿತ್ವದಿಂದ ಸಮು ದಾಯಅಭಿವೃದ್ಧಿ ಮಾಡಬಹುದು ಎಂಬುದನ್ನು ಮನಗಂಡ ಕೆಲವೊಂದು ಪತ್ರಿಕೆಗಳು (ಉದಯವಾಣಿ, ಹಿಂದೂಸ್ತಾನ್ ಟೈಮ್ಸ್) “ಅಭ್ಯುದಯ ಪತ್ರಿಕೋದ್ಯಮ’ ಎಂಬ ಹೆಸರಿನಲ್ಲಿ ಜನಸಾಮಾನ್ಯರನ್ನೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡು ಕಾರ್ಯಪ್ರವೃತ್ತವಾಗಿ ಯಶಸ್ವಿಯೂ ಆದವು. ಆದರೆ ನಾಗರಿಕರು ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿ ಸುದ್ದಿರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದನ್ನು ಅಧಿಕೃತವಾಗಿ ಗುರುತಿಸಿ ಕೊಂಡದ್ದು ಮತ್ತು ಚರ್ಚೆಯಾದದ್ದು, ವರ್ಜಿನಿಯಾದ ಶಾಲೆಯೊಂದರಲ್ಲಿ ನಡೆದ ಗನ್ ಶೂಟ್‌ನ ದೃಶ್ಯಾವಳಿಯನ್ನು ವಿದ್ಯಾರ್ಥಿಯೊಬ್ಬನಿಂದ ಪಡೆದುಕೊಂಡು ಅಂತಾರಾಷ್ಟೀಯ ಸುದ್ದಿವಾಹಿನಿಯೊಂದು ಇದನ್ನು ವಿಶ್ವದಾದ್ಯಂತ ಬಿತ್ತರವಾಗುವಂತೆ ಮಾಡಿದಾಗ. ಇಲ್ಲಿ ವಿದ್ಯಾರ್ಥಿಯೊಬ್ಬ ಆ ಸುದ್ದಿವಾಹಿನಿಗೆ ಮಾಹಿತಿದಾರನಾಗುವ ಮೂಲಕ ಆತ ಸಾರ್ವತ್ರಿಕ ಪ್ರಶಂಸೆಗೂ ಪಾತ್ರನಾಗಿದ್ದ.
ಭಾರತದಲ್ಲಿ ನಾಗರಿಕ ಪತ್ರಿಕೋದ್ಯಮ ಅತ್ಯಂತ ಪ್ರಶಂಸೆಗೆ ಒಳಗಾದದ್ದು 2004ರಲ್ಲಿ ಸುನಾಮಿ ಅಪ್ಪಳಿಸಿದಾಗ. ಅತ್ಯಂತ ಜವಾಬ್ದಾರಿಯಿಂದ ಮಾಧ್ಯಮಕ್ಕೆ ಮಾಹಿತಿ ಹಾಗೂ ದೃಶ್ಯಾವಳಿಗಳನ್ನು ನಾಗರಿಕರೇ ನೀಡಿ ದುರಂತದ ಗಂಭೀರತೆಯನ್ನು ದೇಶದ ಜನರ ಮುಂದೆ ಇಟ್ಟಾಗ. ಅದೇ ರೀತಿ 2015ರ ಚೆನ್ನೈಯಲ್ಲಿನ ಪ್ರವಾಹದ ಅನಾಹುತವಿರಬಹುದು, ನೌಕಾಪಡೆಯ ರಕ್ಷಣಾಕಾರ್ಯವಿರಬಹುದು, ವಿದ್ಯಾರ್ಥಿಗಳೇ ಆ ಪ್ರದೇಶದಲ್ಲಿ ನಿಂತು ಸುದ್ದಿವಾಹಿನಿಗಾಗಿ ಮಾಡಿದ ವರದಿಗಳು ಅತ್ಯಂತ ಪ್ರಶಂಸೆಗೆ ಒಳಗಾದವು. ಅದೇ ರೀತಿ ಎರಡು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಧಿಕೃತ ಮಾಧ್ಯಮಗಳ ಮೂಲಕ ನೀಡಿದ ಜನಸಾಮಾನ್ಯರು ರಕ್ಷಣಾಕಾರ್ಯವನ್ನೂ ಪರಿಹಾರ ಪ್ರಕ್ರಿಯೆ ಚುರುಕುಮಾಡಿದ್ದನ್ನೂ ನೆನಪಿಸಿಕೊಳ್ಳಬೇಕು. ಹೀಗೆ ನಿಜಾರ್ಥದಲ್ಲಿ ಜನರು “ನಾಗರಿಕ ಪತ್ರಕರ್ತ’ರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈ ನಾಗರಿಕ ಪತ್ರಕರ್ತರು ನೀಡಿದ ಮಾಹಿತಿಗಳು ಮಾಧ್ಯಮ ಕಚೇರಿಯ ವ್ಯವಸ್ಥಿತ ಪ್ರಕ್ರಿಯೆಯನ್ನು ದಾಟಿ ಸುದ್ದಿಯಾಗಿ ಪರಿವರ್ತನೆಯಾಗಿ ಜನಸಾಮಾನ್ಯರನ್ನು ತಲುಪಿತ್ತು ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ನಾಗರಿಕ ಪತ್ರಿಕೋದ್ಯಮ ಎಂದಾಕ್ಷಣ ನೇರವಾಗಿ ಜನಸಾಮಾನ್ಯರು ವರದಿಗಾರರಾಗುತ್ತಾರೆೆ ಎಂದಾಗಲಿ, ಯಾರು ಬೇಕಾದರೂ ವರದಿಗಾರರಾಗುತ್ತಾರೆ ಎಂದಾಗಲಿ ಅಲ್ಲ. ಯಾಕೆಂದರೆ ಮಾಧ್ಯಮದಲ್ಲಿ ಕೆಲಸ ಮಾಡಬೇಕಾದರೆ ಅವರಿಗೊಂದು ವಿದ್ಯಾ ರ್ಹತೆಯ ಮಾನದಂಡ ಬೇಕಾಗುತ್ತದೆ. ಸಮಾಜಕ್ಕೆ ದಿನನಿತ್ಯದ ಆಗುಹೋಗುಗಳನ್ನು ತಿಳಿಸುವಾಗ ಅದರ ಹಿಂದಿನ ಜವಾಬ್ದಾರಿಯ ಅರಿವೂ ಇರಬೇಕಾಗುತ್ತದೆ. ಹಾಗೆಂದು ಪತ್ರಿಕೋದ್ಯಮಶಿಕ್ಷಣ ಔಪಚಾರಿಕವಾಗಿ ಆರಂಭವಾಗುವುದಕ್ಕೆ ಮುನ್ನ ಮಾಧ್ಯಮ ಜವಾಬ್ದಾರಿಯುತವಾಗಿರಲಿಲ್ಲವೇ ಅಥವಾ ಭಾರತೀಯ ಪತ್ರಿಕೋದ್ಯಮ ಕ್ಷೇತ್ರದ ಮಹಾನ್ ಶಕ್ತಿಗಳಾದ ರಾಜಾರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧೀಜಿ ಅಥವಾ ಡಾ| ಬಿ.ಆರ್.ಅಂಬೇಡ್ಕರ್‌ರಂಥ ಮಹಾನ್ ಪತ್ರಕರ್ತರು ಪತ್ರಿಕೋದ್ಯಮವನ್ನು ಔಪಚಾರಿಕವಾಗಿ ಕಲಿತವರೇ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ. ಈ ಮಹಾನ್ ವ್ಯಕ್ತಿಗಳು ಪತ್ರಿಕೋದ್ಯಮದ ಶಕ್ತಿಯನ್ನೂ ಅದು ಜನರ ಮೇಲೆ ಅಗಾಧವಾಗಿ ಬೀರುವ ಪರಿಣಾಮವನ್ನೂ ಮನಗಂಡವರು. ನೈತಿಕ ಚೌಕಟ್ಟಿನ ಬರಹಗಳು ಮಾಡಬಹುದಾದ ಬದಲಾವಣೆಯ ಅರಿವಿನೊಂದಿಗೆ ಅವರ ಪತ್ರಿಕೋದ್ಯಮವಿತ್ತು. ನಿಜ ಅರ್ಥದಲ್ಲಿ ಇಂದಿನ ಪತ್ರಿಕೋದ್ಯಮ ಶಿಕ್ಷಣದ ಅಡಿಪಾಯವೇ ಅವರ ಸಿದ್ಧಾಂತಗಳು. ಆದ್ದರಿಂದ ಮಾಧ್ಯಮ ನೀಡುವ ಪರಿಣಾಮದ ಗಂಭೀರತೆಯ ಅರಿವಿದ್ದವರು, ಸುದ್ದಿರಚನೆಯ ಪ್ರಕ್ರಿಯೆಯ ಅರಿವನ್ನು ಔಪಚಾರಿಕ ಶಿಕ್ಷಣದಿಂದಲೋ ಅಥವಾ ಸುದ್ದಿಮನೆಯ ತರಬೇತಿಯ ಅನುಭವದಿಂದಲೊ ಪಡೆದವರೇ ಈ ಕೆಲಸದಲ್ಲಿ ನಿರತರಾಗಬೇಕಾಗುತ್ತದೆ. ಸುದ್ದಿತಯಾರಿಯ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಸೂಕ್ಷ್ಮತೆ, ಮಾಧ್ಯಮದಲ್ಲಿ ಪ್ರಸಾರವಾಗುವ ಸುದ್ದಿಯ ಪರಿಣಾಮದ ಕುರಿತ ಚಿಕಿತ್ಸಕ ನೋಟ ಇಲ್ಲಿ ಕೆಲಸ ಮಾಡುವವರಿಗೆ ಇರಬೇಕಾದ ಅರ್ಹತೆಯಾಗಿರುತ್ತದೆ.
ಆದರೆ ಇಂದು ಸಮಸ್ಯೆಯಾಗಿರುವುದು, ನವಮಾಧ್ಯಮಗಳ ಭರಾಟೆಯಲ್ಲಿ ಯಾರು ಬೇಕಾದರೂ ಪತ್ರಕರ್ತರಾಗಬಹುದು (ಪತ್ರಕರ್ತ ಎಂಬುದನ್ನು ಯಾವುದೇ ಮಾಧ್ಯಮದಲ್ಲಿ ಸುದ್ದಿರಚನೆ ಪ್ರಕ್ರಿಯೆಯಲ್ಲಿ ನಿರತರಾದವರು ಎಂದು ಅರ್ಥೈಸಿಕೊಳ್ಳಬೇಕು) ಎಂಬ ವಿಲಕ್ಷಣ ಪ್ರಕ್ರಿಯೆಯಿಂದಾಗಿ. ಸಾಮಾನ್ಯವಾಗಿ ಮಾಧ್ಯಮಗಳಲ್ಲಿಯೂ ಅಧಿಕೃತ ವರದಿಗಾರ ತಂದ ಸುದ್ದಿಯೂ ಹಲವಾರು ಹಂತಗಳನ್ನು ದಾಟಿಯೇ ಓದುಗರಿಗೆ ಅಥವಾ ನೋಡುಗರಿಗೆ ಸಿಗುತ್ತದೆ ಅಥವಾ ನೇರವಾಗಿ ವರದಿಮಾಡುವ ಸಂದರ್ಭದಲ್ಲೂ ಪದಬಳಕೆಯ ಕುರಿತು, ಕೆಲವೊಂದು ದೃಶ್ಯಾವಳಿಗಳನ್ನು ನೀಡುವಾಗ ನೆಲದ ಕಾನೂನಿಗೆ ಭಂಗವಾಗದಂತೆ ಜಾಗರೂಕರಾಗಿರಬೇಕಾಗುತ್ತದೆ.
ಆದರೆ ಸುಲಭವಾಗಿ ಮಾಹಿತಿ ನೀಡುವ ಮತ್ತು ಪಡೆಯುವ ಸಾಮಾಜಿಕ ಜಾಲತಾಣಗಳಿಂದಾಗಿ ಸುದ್ದಿಯ ನಾಗರಿಕತೆ ಬದಲಾಗುತ್ತಿದೆ. ಇದರ ಜತೆಗೆ ನಾಗರಿಕ ಪತ್ರಿಕೋದ್ಯಮದ ಮೂಲ ಆಶಯವೂ. ಅಧಿಕೃತವಲ್ಲದ ಕೆಲವು ಸಾಮಾಜಿಕ ಜಾಲತಾಣಗಳ ಪುಟಗಳು ಮತ್ತು ಸುದ್ದಿತಾಣಗಳು, ಹೆಚ್ಚು ವೀಕ್ಷಣೆಯಾದರೆ ಆದಾಯ ಬರುತ್ತದೆ ಎಂಬ ಒಂದೇ ಒಂದು ವಿಚಾರವನ್ನು ತಲೆಯೊಳಗೆ ಇರಿಸಿಕೊಂಡು, ತತ್‌ಕ್ಷಣಕ್ಕೆ ಸಿಕ್ಕ ಮಾಹಿತಿಗಳೆಲ್ಲವನ್ನೂ ತುರುಕಿ, ಅದಕ್ಕೊಂದು ಅತಿರೋಚಕ ಶೀರ್ಷಿಕೆ ನೀಡಿ ಮಾಹಿತಿ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಇದಕ್ಕಿಂತಲೂ ಗಂಭೀರ ವಾದದ್ದು ಸಾಮಾಜಿಕ ಜಾಲತಾಣ ಬಳಕೆ ಗೊತ್ತು ಎಂಬ ಕಾರಣಕ್ಕೆ ಎಲ್ಲರೂ ವರದಿಗಾರರೇ ಆಗಿಬಿಡುವುದು. ಅಧಿಕೃತ ಎನಿಸಿಕೊಂಡ ಮಾಧ್ಯಮ ಗಳು ತಪ್ಪು ಮಾಡಿದಾಗ ಪ್ರಶ್ನಿಸುವ ಅಥವಾ ಟೀಕಿಸುವ ಪ್ರಜ್ಞೆ ಬೆಳೆಸಿಕೊಂಡವರೇ ಎಷ್ಟೋ ಸಲ ಜಾಲತಾಣದ ಗುಂಪಿನ ಸದಸ್ಯರೋ ಪರಿಚಯ ದವರೋ ಅಥವಾ ತಾವೇ ಪೋಸ್ಟ್ ಮಾಡುವಾಗ ಈ ಸೂಕ್ಷ್ಮತೆ ಬೆಳೆಸಿಕೊಂಡಿರುವುದಿಲ್ಲ.
ಕೊನೆಯದಾಗಿ ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಭೋಪಾಲದ ಮಕ್ಕನ್ ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಶ್ವವಿದ್ಯಾನಿಲಯದ ಉಪಕುಲ ಪತಿಗಳಾದ ಪ್ರೊ| ಕೆ.ಜಿ ಸುರೇಶ್ ಅವರು ಮಾಡಿದ ಉಲ್ಲೇಖವನ್ನು ಗಮನಿಸಬೇಕು, ವಿದ್ಯಾಭ್ಯಾಸದ ಅರ್ಹತೆಯನ್ನು ಗಣನೆಗೆ ತೆಗೆದುಕೊಳ್ಳದೇ ಇರುವ ಯಾವುದೇ ಔದ್ಯೋಗಿಕ ವಲಯವಿಲ್ಲ. ನಾಗರಿಕ ವೈದ್ಯ, ನಾಗರಿಕ ವಕೀಲ, ನಾಗರಿಕ ಎಂಜಿನಿಯರ್ ಎಂಬ ವಿಚಾರವನ್ನು ಯಾರೂ ಒಪ್ಪುವುದಿಲ್ಲ. ಹಾಗಿದ್ದಾಗ ಸಮಾಜದ ಮೇಲೆ ಅತ್ಯಂತ ಪರಿಣಾಮ ಬೀರುವ ಮಾಧ್ಯಮರಂಗದಲ್ಲಿ ಯಾರು ಬೇಕಾದರೂ ಸುದ್ದಿ ನೀಡಬಹುದು ಎಂಬ ವಿಚಾರ ಯಾಕೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ? ಸುದ್ದಿ ನೀಡುವ ಕೆಲಸಕ್ಕೆ ಯಾವುದೇ ಮಾನದಂಡ ಬೇಡವೇ? ಬಹುಶಃ ಈ ಚಿಂತನೆ ಎಲ್ಲರೂ ಯೋಚಿಸಬೇಕಾದ ವಿಚಾರ ಅಲ್ಲವೇ?.
ಗೀತಾವಸಂತ್ ಇಜಿಮಾನ್, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.