ಭೂ ಸ್ವಾಧೀನಕ್ಕಿಂತ ಗುತ್ತಿಗೆ ಪಡೆಯುವುದು ಒಳಿತಲ್ಲವೇ?
ಗುತ್ತಿಗೆ ಆಧಾರದ ಮೇಲೆ ಎಲ್ಲ ಯೋಜನೆಗಳಿಗೆ ಭೂಮಿ ಪಡೆಯುವುದು ಸರಳ ಮಾರ್ಗವಾಗಿದೆ
Team Udayavani, Nov 18, 2019, 5:15 AM IST
ಕೃಷ್ಣಾ ಮೇಲ್ದಂಡೆ ಯೋಜನೆಗೆ 2 ಹಂತಗಳಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಲೆ ನಿಗದಿ ಪರಿಹಾರ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವಿಧಾನ ಸಭೆಯಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಈಗ ಮೂರನೇ ಹಂತಕ್ಕಾಗಿ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ. ರೈತರು ಪ್ರತಿರೋಧ ಒಡ್ಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಭೂಮಿ ವಶಪಡಿಸಿಕೊಳ್ಳುವುದನ್ನು ಬಿಟ್ಟು ಪಾವಗಡ ಮಾದರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಭೂಮಿ ಪಡೆದುಕೊಂಡರೆ ಸಮಸ್ಯೆ ಸರಳವಾಗಿ ಬಗೆಹರಿಯುತ್ತದೆ.
ತುಮಕೂರ ಜಿಲ್ಲೆಯ ಪಾವಗಡದಲ್ಲಿ ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಪಾರ್ಕ್ ತಲೆ ಎತ್ತಿದೆ. ಎರಡು ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಈ ಬೃಹತ್ ಯೋಜನೆಯನ್ನು ಒಂದು ವರ್ಷದ ಹಿಂದೆ ಉದ್ಘಾಟಿಸಲಾಗಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕರ್ನಾಟಕ ವಿದ್ಯುತ್ ನಿಗಮಕ್ಕೆ ಪೂರೈಕೆಯಾಗುತ್ತಿದೆ.
ಈ ಯೋಜನೆಗಾಗಿ ಸರಕಾರ ಪಾವಗಡ ಸುತ್ತಮುತ್ತಲಿನ 12700 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಬದಲಾಗಿ (ಖರೀದಿ) ಗುತ್ತಿಗೆ ಆಧಾರದ ಮೇಲೆ ರೈತರಿಂದ ಪಡೆದುಕೊಂಡಿದೆ. ಗುತ್ತಿಗೆ ಆಧಾರದ ಮೇಲೆ ಕೈಗಾರಿಕೆಗಳಿಗೆ ಭೂಮಿ ಪಡೆದಿರುವುದು ನಿಜಕ್ಕೂ ವಿನೂತನವಾದ, ರೈತರಿಗೆ ನೋವನ್ನುಂಟು ಮಾಡದ ಪರಿಕಲ್ಪನೆಯಾಗಿದೆ. ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ಆಸಕ್ತಿಯಿಂದ ಈ ಪರಿಕಲ್ಪನೆಯ ರೂಪಿಸಿದೆ. ಇದಕ್ಕೆ ಸರಕಾರ ಕೂಡ ಒಪ್ಪಿಗೆ ನೀಡಿರುವುದು ಒಂದು ಒಳ್ಳೆಯ ಬೆಳವಣಿಗೆ.
ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್‌ಮೆಂಟ್ ಬೋರ್ಡ್‌ನಿಂದ (ಕೆ.ಐ.ಎ.ಡಿ.ಬಿ) ಭೂಮಿ ವಶಪಡಿಸಿಕೊಳ್ಳುವ ವಿಧಾನ ಅನುಸರಿಸಿದ್ದರೆ 12700 ಎಕರೆ ಭೂಮಿ ವಶಪಡಿಸಿಕೊಳ್ಳಲು 10 ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತಿತ್ತು. ಅನೇಕರ ವಿರೋಧ, ಪ್ರತಿಭಟನೆ ಮತ್ತು ಅಸಮಾಧಾನದ ನಡೆಗಳನ್ನು ಎದುರಿಸ ಬೇಕಾಗುತ್ತಿತ್ತು. ಕೋರ್ಟ್, ಕಾನೂನು ತೊಡಕುಗಳನ್ನು ಸರಿಪಡಿಸಲು ಬಹಳ ಸಮಯ ಬೇಕಾಗುತ್ತಿತ್ತು. ಇದೆಲ್ಲ ಮುಗಿಯುವವರೆಗೆ ಜನತೆ ಕತ್ತಲಲ್ಲಿ ಕುಳಿತುಕೊಳ್ಳಬೇಕಾಗುತ್ತಿತ್ತು.
ಕೈಗಾರಿಕೆಗಳಿಗೆ ಭೂಮಿಯನ್ನು ನೇರವಾಗಿ ಖರೀದಿಸುವುದು ಅಥವಾ ಕೆ.ಐ.ಎ.ಡಿ.ಬಿ ಮೂಲಕ ವಶ ಪಡಿಸಿಕೊಳ್ಳುವುದರಿಂದ ರೈತರು ಭೂಮಿಯ ಸ್ವಾಮ್ಯವನ್ನು ಕಳೆದುಕೊಳ್ಳುತ್ತಾರೆ. ಅವರ ಕೈಗೆ ಬಂದ ಹಣ ಖರ್ಚಾಗಿ ಹೋಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅದಕ್ಕೆ ಬದಲಾಗಿ ಪ್ರತಿವರ್ಷ ಭೂಮಿಗೆ ಲೀಜ್ ರೂಪದಲ್ಲಿ ಹಣ ಕೊಡುವುದರಿಂದ ರೈತರ ಕುಟುಂಬಗಳು ನೆಮ್ಮದಿಯಿಂದ ಬದುಕಬಹುದು. ಕೈಗಾರಿಕೆಗಳು ಬರಬೇಕು. ಹಾಗೂ ರೈತರು ಬದುಕಬೇಕು ಎಂಬ ಒಳ್ಳೆಯ ತತ್ವ ಪಾವಗಡ ಮಾದರಿಯಲ್ಲಿ ಅಡಗಿದೆ.
ಸೌರ ವಿದ್ಯುತ್ ಬೃಹತ್ ಪಾವಗಡ ಪ್ರಾಜೆಕ್ಟ್ಗೆ ಗುತ್ತಿಗೆ ಮೇಲೆ ಭೂಮಿ ಪಡೆಯುವುದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಸಮಿತಿಯಲ್ಲಿ ಕೃಷಿ ಅಧಿಕಾರಿಗಳು ಸದಸ್ಯರಾಗಿದ್ದರು. ಈ ಭಾಗದ ರೈತರು ಒಂದು ವರ್ಷಕ್ಕೆ ಒಂದು ಎಕರೆಗೆ ಎಷ್ಟು ಆದಾಯ ಪಡೆಯುತ್ತಾರೆ ಎಂಬುದನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಲಾಯಿತು. ಈ ಆಧಾರದ ಮೇಲೆ ಪ್ರತಿ ಎಕರೆಗೆ ಪ್ರತಿ ವರ್ಷ 21000 ರೂ. ಕೊಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ 5% ಹೆಚ್ಚಿಗೆ ಮಾಡಲು ಒಪ್ಪಂದದಲ್ಲಿ ಅವಕಾಶ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ರೈತರು ಹಣ ಪಡೆಯುತ್ತಿದ್ದಾರೆ. 25 ವರ್ಷಗಳ ನಂತರ ಗುತ್ತಿಗೆ ಆಧಾರದ ನಿಯಮಗಳನ್ನು ಮರು ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ವಿವಾದ ಇಲ್ಲದೆ ರೈತರು ಸಂತೋಷದಿಂದ ಭೂಮಿ ನೀಡಿದ್ದಾರೆ.
ಅವರ ಮಾಲಿಕತ್ವದ ಹಕ್ಕು ಹಾಗೆಯೇ ಉಳಿದಿದೆ. ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಿದ್ದಕ್ಕೆ ಪ್ರತಿಫಲವಾಗಿ ರೈತರಿಗೆ ಜೀವನ ನಡೆಸಲು ನಿರಂತರ ಆದಾಯದ ಗ್ಯಾರಂಟಿ ದೊರೆತಿದೆ.
ಬೆಳಗಾವಿ ಜಿಲ್ಲೆಯ ಸಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ಪಾವಗಡ ಮಾದರಿಯಲ್ಲಿ 670 ಎಕರೆ ಭೂಮಿಯನ್ನು ಒಂದೇ ಕಡೆಗೆ ಪಡೆದು ಸೌರವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ವಿಜಯಪುರ ಜಿಲ್ಲೆಯ ಕೂಡಗಿ ವಿದ್ಯುತ್ ಸ್ಥಾವರಕ್ಕೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ (2008-2012) ಸರಕಾರ ಮತ್ತು ರೈತರ ಮಧ್ಯ ಒಂದು ರೀತಿಯ ಯುದ್ಧವೇ ನಡೆಯಿತು. ರೈತರ ಪ್ರತಿಭಟನೆಯ ಕಾಲಕ್ಕೆ ಗುಂಡು ಹಾರಿಸಲಾಯಿತು. ರೈತರಲ್ಲಿ ಇನ್ನೂ ಅಸಮಾಧಾನ ಹೊಗೆ ಇದೆ. ಅವರು ಕೋರ್ಟ್, ಪೊಲೀಸ್ ಠಾಣೆಗಳಿಗೆ ಅಲೆಯುತ್ತಿದ್ದಾರೆ.
ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವುದು ತೀರ ಕಠಿಣವಾದ ಕೆಲಸ. ಕೈಗಾರಿಕೆ ಈ ಪ್ರದೇಶದಲ್ಲಿ ಬರುತ್ತದೆ ಎಂದು ಗೊತ್ತಾಗುತ್ತಲೇ ಅಲ್ಲಿ ಏಜೆಂಟರು, ಸಮಯ ಸಾಧಕರು, ಹೋರಾಟಗಾರರು, ಮೋಜು ನೋಡುವವರು ಸಹಜವಾಗಿ ಹುಟ್ಟಿಕೊಳ್ಳುತ್ತಾರೆ. ಭೂಮಿ ಮಾರಾಟ ಮಾಡಲು ಭೂಮಾಲೀಕರ ಬಳಿ ಸರಿಯಾದ ದಾಖಲೆಗಳಿರುವುದಿಲ್ಲ. 3-4 ತಲೆಮಾರುಗಳಿಂದ ವಾರಸಾ ಆಗಿರುವುದಿಲ್ಲ. ಸಹೋದರರ ನಡುವೆ ಮೌಖೀಕ ಭೂಮಿ ಹಂಚಿಕೆಯಾಗಿರುತ್ತದೆ; ಆದರೆ ಅದನ್ನು ಭೂಮಿ ಕೇಂದ್ರದಲ್ಲಿ ದಾಖಲಿಸಿರುವುದಿಲ್ಲ. ಬಹಳಷ್ಟು ರೈತರು ಈ ಭೂಮಿಯ ಆಧಾರದ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರಿಗೆ ತಿಳಿದಿರುವುದಿಲ್ಲ. ಭೂಮಿಯ ಕ್ಷೇತ್ರ ಮಾಹಿತಿ ಸರಿಯಾಗಿರುವುದಿಲ್ಲ. ಕೋರ್ಟಿನಲ್ಲಿ ವ್ಯಾಜ್ಯಗಳಿರುತ್ತವೆ. ಇವುಗಳನ್ನೆಲ್ಲ ಸರಿಪಡಿಸಿದ ನಂತರವೇ ಭೂಮಿ ಖರೀದಿಗೆ ಒಪ್ಪಿಗೆ ದೊರೆಯುತ್ತದೆ. ಇದನ್ನೆಲ್ಲ ನಿಭಾಯಿಸುವಲ್ಲಿ ಉದ್ದಿಮೆ ಸ್ಥಾಪಿಸುವವರ ಉತ್ಸಾಹ ಕುಗ್ಗಿ ಹೋಗುತ್ತದೆ. ಬಹಳ ಸಮಯವೂ ವ್ಯರ್ಥವಾಗುತ್ತದೆ.
ನನಗೆ ಕಳೆದ ಸುಮಾರು 3 ದಶಕಗಳಿಂದ ಕೈಗಾರಿಕೆಗೆ ಭೂಮಿ ಖರೀದಿಸುವ ಕೆಲಸದ ಉಸ್ತುವಾರಿ ವಹಿಸಿದ ಅನುಭವವಿದೆ. ಒಂದು ಉದಾಹರಣೆ ಹೇಳುವುದಾದರೆ ಒಂದು ಕಾರ್ಖಾನೆ ಸ್ಥಾಪನೆಗೆ ರಾಜ್ಯ ಕೈಗಾರಿಕಾ ಉನ್ನತ ಸಮಿತಿ 160 ಎಕರೆ ಭೂಮಿ ಖರೀದಿಸಲು ಅನುಮತಿ ನೀಡಿತ್ತು. ಇದರಲ್ಲಿ ಕಾರ್ಖಾನೆ ಅವರು ನೇರವಾಗಿ ರೈತರ ಮನ ಒಲಿಸಿ ಅವರ ಒಪ್ಪಿಗೆ ಪಡೆದು 140 ಎಕರೆ ಭೂಮಿ ಖರೀದಿಸಿದರು, ಆದರೆ ಮಧ್ಯದಲ್ಲಿ ಇದ್ದ ಇಬ್ಬರು ರೈತರು 20 ಎಕರೆ ಭೂಮಿ ಕೊಡಲು ಒಪ್ಪದ್ದರಿಂದ ಆ ಕಾರ್ಖಾನೆ ಕಟ್ಟುವ ಕೆಲಸ ನಿಂತು ಹೋಗಿದೆ. ಈ 20 ಎಕರೆ ಭೂಮಿ ಪಡೆಯುವದಕ್ಕೆ ಕೆ. ಐ. ಎ.ಡಿ.ಬಿ ಮೂಲಕ ಆಡಳಿತ ಮಂಡಳಿಯವರು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಭೂ ಮಾಲಿಕರು ಕೋರ್ಟ್ ಕಟ್ಟೆ ಏರಿದ್ದಾರೆ. ಇದು ಇತ್ಯರ್ಥವಾಗುವುದಕ್ಕೆ ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ. ನಿಗದಿತ ಅವಧಿಯಲ್ಲಿ ಕಾರ್ಖಾನೆ ಉತ್ಪಾದನೆ ಆರಂಭಿಸದಿದ್ದರೆ ಹಣ ಹೂಡಿದ ಉದ್ದಿಮೆದಾರರು ಸಾಕಷ್ಟು ಹಾನಿ ಅನುಭವಿಸಬೇಕಾಗುತ್ತದೆ.
ಭಯಪಡಬೇಕಿಲ್ಲ. ಬಹುತೇಕ ಜನತೆಗೆ ಗೊತ್ತಾಗಿದೆಯೋ ಇಲ್ಲವೋ ದೇಶದಲ್ಲಿ ಈಗ ಸ್ಥಾಪಿಸಲು ಉದ್ದೇಶಿಸಿರುವ ಎಲ್ಲ ಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳು ಸೇರಿ ಬೇಕಾಗುವ ಒಟ್ಟು ಸಾಗುವಳಿ ಜಮೀನಿನ 0.02% ಭಾಗ ಮಾತ್ರ (ಅಂದರೆ 10 ಸಾವಿರ ಎಕರೆಗೆ 2 ಎಕರೆ ಮಾತ್ರ ಕೈಗಾರಿಕೆಗೆ ಬೇಕು) ದೇಶದ ಒಟ್ಟು ಸಾಗುವಳಿ ಕ್ಷೇತ್ರಕ್ಕೆ ಹೋಲಿಸಿದರೆ ಇದು ತೀರ ಅಲ್ಪ. ಆಹಾರ ಭದ್ರತೆಗೆ ಯಾವುದೇ ತೊಂದರೆ ಇಲ್ಲ ಮಾತ್ರವಲ್ಲ ; ಕೃಷಿಗೂ ಅನೇಕ ರೀತಿಯಲ್ಲಿ ಉದ್ದಿಮೆಗಳು ನೆರವಾಗುತ್ತವೆ. ಕೃಷಿ ಆಧರಿತ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿವೆ. ಇದು ಒಳ್ಳೆಯ ಬೆಳವಣಿಗೆ.
ಒಂದು ಸಕ್ಕರೆ ಸಮೂಹ ಘಟಕಕ್ಕೆ, ಅಂದರೆ ಸಕ್ಕರೆ, ವಿದ್ಯುತ್ ಡಿಸ್ಟಿಲರಿ ಘಟಕಗಳನ್ನು ಕಟ್ಟಲು ಹೆಚ್ಚೆಂದರೆ ಒಟ್ಟು 200 ಎಕರೆ ಭೂಮಿ ಸಾಕು. ಒಂದು ಕಾರ್ಖಾನೆ ಒಂದು ತಾಲೂಕ ವ್ಯಾಪ್ತಿಯಲ್ಲಿ ಬೆಳೆದ ಎಲ್ಲ ಕಬ್ಬು ಖರೀದಿಸಿ ಸಕ್ಕರೆ ಮಾಡುತ್ತದೆ. ರೈತ ಬೆಳೆದ ಕಬ್ಬು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆ ಅವಶ್ಯ ಬೇಕು. ಹಾಗೆಯೇ ಕಾರ್ಖಾನೆಗೆ ಅವಶ್ಯವಿರುವ ಭೂಮಿಯನ್ನು ರೈತರು ನೀಡಬೇಕು. ಕಾರ್ಖಾನೆ ಒಂದು ತಲೆ ಎತ್ತಿದರೆ ಅದರೊಂದಿಗೆ ಇತರ ಉದ್ಯೋಗ ಅವಕಾಶಗಳು ಬೆಳೆಯುತ್ತವೆ. ಹಣದ ಸಂಚಲನ ದೊಡ್ಡ ಪ್ರಮಾಣದಲ್ಲಿ ಆರಂಭವಾಗುತ್ತದೆ.
ಉತ್ತರ ಕರ್ನಾಟಕದ ಭಾಗದ ಕೃಷ್ಣಾ ಮೇಲ್ದಂಡೆ ಯೋಜನೆ ರಾಜ್ಯದ ಅತ್ಯಂತ ದೊಡ್ಡ ನೀರಾವರಿ ಯೋಜನೆಯಾಗಿದೆ. ಈ ಯೋಜನೆಗೆ ಎರಡು ಹಂತಗಳಲ್ಲಿ ಭೂಮಿ ವಶಪಡಿಸಿಕೊಳ್ಳ ಲಾಗಿದೆ. ಬೆಲೆ ನಿಗದಿ ಪರಿಹಾರ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ. ವಿಧಾನ ಸಭೆಯಲ್ಲಿಯೂ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.
ಈಗ ಮೂರನೇ ಹಂತಕ್ಕಾಗಿ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ. ರೈತರು ಪ್ರತಿರೋಧ ಒಡ್ಡುತ್ತಿದ್ದಾರೆ. ಹೋರಾಟ ಉಗ್ರ ರೂಪ ಪಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಭೂಮಿ ವಶಪಡಿಸಿಕೊಳ್ಳುವುದನ್ನು ಬಿಟ್ಟು ಪಾವಗಡ ಮಾದರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಭೂಮಿ ಪಡೆದುಕೊಂಡರೆ ಸಮಸ್ಯೆ ಸರಳವಾಗಿ ಬಗೆಹರಿಯುತ್ತದೆ. ರೈತರ ಒಡೆತನ ಉಳಿಯುತ್ತದೆ ಮತ್ತು ನಿರಂತರ ಆದಾಯಕ್ಕೆ ದಾರಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಪ್ರದೇಶದ ಬಹಳಷ್ಟು ಭಾಗ ನೀರಾವರಿಗೆ ಒಳಪಟ್ಟಿದೆ ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ಗುತ್ತಿಗೆ ಹಣ ನಿರ್ಧರಿಸುವುದು ಸೂಕ್ತ ಮಾರ್ಗ ವಾಗಿದೆ. ರೈತ ವರ್ಗಕ್ಕೆ ಭೂಮಿಯ ಬಗ್ಗೆ ಅಪಾರ ಪ್ರೀತಿ ಭಕ್ತಿ ಇದೆ. ಭೂಮಿಯನ್ನು ಭೂಮಾತೆ ಎಂದು ಪೂಜಿಸುತ್ತಾರೆ. ಭೂಮಿ ರೈತರ ಪಾಲಿಗೆ ಭೌತಿಕ ನೆಲವಲ್ಲ. ಅದು ಭಾವನ್ಮಾತಕ ಸಂಬಂಧ ಹೊಂದಿದ ಸಂಪತ್ತು. ಭೂಮಿಯನ್ನು ರೈತರ ಹೆಸರಿನಲ್ಲಿ ಉಳಿಸಿ ಸರಿಯಾದ ನಿಯಮಗಳನ್ನು ರೂಪಿಸಿ ಗುತ್ತಿಗೆ ಆಧಾರದ ಮೇಲೆ ಪಡೆಯುವುದರಿಂದ ರೈತರಿಗೆ ಅಷ್ಟು ನೋವಾಗುವುದಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ಗುತ್ತಿಗೆ ಆಧಾರದ ಮೇಲೆ ಎಲ್ಲ ಯೋಜನೆಗಳಿಗೆ ಭೂಮಿ ಪಡೆಯುವುದು ಸರಳ ಮಾರ್ಗವಾಗಿದೆ.
– ಮಲ್ಲಿಕಾರ್ಜುನ ಹೆಗ್ಗಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.