ಕೋವಿಡ್ ಕಲಿಸಿದ ಪಾಠ ಮರೆಯದಿರೋಣ!
Team Udayavani, Dec 23, 2020, 6:20 AM IST
ಸರಕಾರ ಆಯುಷ್ಮಾನ್ ಭಾರತ್ ಮತ್ತು ಸಂಬಂಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೆಜ್ಜೆಯಿಡುತ್ತಿದೆಯಾದರೂ, ಇದರ ವ್ಯಾಪ್ತಿ “ಮಿಸ್ಸಿಂಗ್ ಮಿಡಲ್’ಗೂ ವಿಸ್ತರಿಸಬೇಕಾಗಿದೆ. ಅಂದರೆ, ಮಧ್ಯಮ ವರ್ಗಕ್ಕೆ(ಮುಖ್ಯವಾಗಿ ಸ್ವಂತ ಉದ್ಯೋಗದಲ್ಲಿರುವವರು ಮತ್ತು ಅನೌಪಚಾರಿಕ ವಲಯದಲ್ಲಿ ಇರುವವರಿಗೆ).
ಭಾರತವು ಪುಟಿದೇಳುವಂಥ ಶಕ್ತಿಯುಳ್ಳ ರಾಷ್ಟ್ರ. ನಮ್ಮ ದೇಶವು ಬರಗಾಲ, ಪ್ರವಾಹ, ನೆರೆ, ಸಾಂಕ್ರಾಮಿಕಗಳು, ಭಯೋತ್ಪಾದನ ದಾಳಿಗಳು ಮತ್ತು ಯುದ್ಧಗಳನ್ನು ಸಕ್ಷಮವಾಗಿ ಎದುರಿಸುತ್ತಲೇ ಬಂದಿದೆ. ಏಕೆಂದರೆ, ಈ ದೇಶದ ನಾಗರಿಕರು ಬಿಕ್ಕಟ್ಟಿನ ಸಂದರ್ಭದಲ್ಲಿ ಸದೃಢ ಹೆಜ್ಜೆ ಇಟ್ಟಿದ್ದಾರೆ. ಇಂದು ಕೋವಿಡ್-19 ಮತ್ತೆ ನಮ್ಮ ಶಕ್ತಿಯನ್ನು ಪರೀಕ್ಷಿಸುತ್ತಿದೆ. ಕಳೆದ 100 ವರ್ಷಗಳಲ್ಲೇ ಕಂಡು ಕೇಳರಿಯದಂಥ ಸಾಂಕ್ರಾಮಿಕಗಳಿಗಿಂತಲೂ ಹೆಚ್ಚಿನ ಪರಿಣಾಮ ಉಂಟುಮಾಡಲು ಅದಕ್ಕೆ ಸಾಧ್ಯವಾಗಿದೆ. ಇದರಿಂದಾಗಿ ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಅಪಾರ ಒತ್ತಡ ಸೃಷ್ಟಿಯಾಗಿದ್ದು, ಈ ವೈರಸ್ ಜಾಗತಿಕ ಆರ್ಥಿಕತೆಯನ್ನೂ ನಾಶ ಮಾಡಿದೆ. ಆದಾಗ್ಯೂ ಈ ಸಾಂಕ್ರಾಮಿಕವು ನಮ್ಮ ಆರೋಗ್ಯಸೇವೆ, ಆರ್ಥಿಕತೆ ಮತ್ತು ಮಾನಸಿಕ ನೆಮ್ಮದಿಗೆ ಭಂಗ ತಂದಿದೆಯಾದರೂ, ಇದೇ ವೇಳೆಯಲ್ಲೇ ಅದು ನಮಗೆ ಮರೆಯಲಾಗದಂಥ ಅನೇಕ ಪಾಠಗಳನ್ನೂ ಕಲಿಸಿದೆ.
ಲಾಕ್‌ಡೌನ್: ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ಲಾಕ್‌ಡೌನ್ ಅಗತ್ಯವಾಗಿತ್ತು ಎಂದು ನಮ್ಮಲ್ಲಿ ಬಹುತೇಕರು ಭಾವಿಸುತ್ತೇವಾದರೂ, ಕೊರೊ ನಾದಿಂದ ಜನರನ್ನು ರಕ್ಷಿಸುವ ಭರದಲ್ಲಿ ಬಡತನ ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರನ್ನು ಬಲಿಕೊಡುತ್ತಿದ್ದೇವಾ ಎಂದೂ ಇದೇ ಸಮಯದಲ್ಲೇ ಕೆಲವರು ಪ್ರಶ್ನಿಸಿದರು.
ನನ್ನ ಪ್ರಕಾರ ಆರಂಭಿಕ ಸಮಯದಲ್ಲಿ ಲಾಕ್‌ಡೌನ್ ಜಾರಿಮಾಡಿದ್ದರಿಂದಾಗಿ ನಮ್ಮ ದೇಶವನ್ನು ರಕ್ಷಿಸಿದಂತಾಗಿದೆ. ಆರಂಭದಲ್ಲೇನಾದರೂ ಲಂಡನ್ ಅಥವಾ ನ್ಯೂಯಾರ್ಕ್‌ನಷ್ಟು ಪ್ರಕರಣಗಳು ನಮ್ಮಲ್ಲಿ ದಾಖಲಾಗಿದ್ದರೆ ಆರೋಗ್ಯ ವ್ಯವಸ್ಥೆಗಳು ಅತೀವ ಭಾರಕ್ಕೆ ಕುಸಿದುಬಿಡುತ್ತಿದ್ದವು. ಲಾಕ್‌ಡೌನ್ ಆದರ್ಶಪ್ರಾಯವಾಗಿಲ್ಲದಿರಬಹುದು, ಆದರೆ, ಬಹಳಷ್ಟು ಸಂಖ್ಯೆಯಲ್ಲಿ ಜನರನ್ನು ಉಳಿಸಲು ಅದು ನಮ್ಮೆದುರಿದ್ದ ಅತ್ಯುತ್ತಮ ಅವಕಾಶವಾಗಿತ್ತು. ಒಂದು ವೇಳೆ ನಮ್ಮ ದೇಶದ ಅರ್ಧದಷ್ಟು ಜನಸಂಖ್ಯೆಯೇನಾದರೂ ಸೋಂಕಿತವಾಗಿತ್ತು ಎಂದರೆ, ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದರು(ಕೇವಲ 1 ಪ್ರತಿಶತ ಮರಣ ಪ್ರಮಾಣವನ್ನು ಪರಿಗಣಿಸಿದರೂ ಕೂಡ). ಲಾಕ್‌ಡೌನ್ ಒಂದು ರೀತಿಯಲ್ಲಿ ಕೀಮೋಥೆರಪಿಯಂತಿತ್ತು- ದುಬಾರಿ, ವಿವಿಧ ಅಡ್ಡಪರಿಣಾಮಗಳೊಂದಿಗೆ ಬಹಳ ಅಸೌಖ್ಯ ಉಂಟುಮಾಡುವಂಥದ್ದು. ಆದರೆ ಬದುಕುಳಿಯಲು ಅತ್ಯವಶ್ಯಕ! ಸಹಜ ಸ್ಥಿತಿಯನ್ನು ಸ್ಥಾಪಿಸಲು ಹಂತ ಹಂತದಲ್ಲಿ ನಿರ್ಬಂಧಗಳ ತೆರವು ನಮ್ಮ ಮುಂದಿನ ಉತ್ತಮ ಆಯ್ಕೆಯಾಗಿತ್ತು.
ಲಾಕ್‌ಡೌನ್‌ನಿಂದ ಎದುರಾದ ಪ್ರಮುಖ ಹಿನ್ನೆಡೆಯೆಂದರೆ, ವಲಸೆ ಕಾರ್ಮಿಕರ ಬಿಕ್ಕಟ್ಟು. ಪರಿಣಾಮಗಳನ್ನು ಮೊದಲೇ ನಿರೀಕ್ಷಿಸಿ ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ, ಆರೋಗ್ಯ ಸೇವೆ ಮತ್ತು ಜೀವನಾಧಾರ ಭತ್ತೆಯನ್ನು ಒದಗಿಸುವ ಮೂಲಕ ಆಂತರಿಕ ವಲಸೆ ದುರಂತವನ್ನು ತಡೆಯಬಹುದಿತ್ತು. ತಮ್ಮ ಮನೆಗಳಿಗೆ ಹಿಂದಿರುಗಲು ಅನಂತ ಕ್ಯೂಗಳಲ್ಲಿ ನಿಂತ ಹಸುಳೆಗಳು, ತಾಯಂದಿರು, ಮಕ್ಕಳು ಮತ್ತು ವೃದ್ಧರನ್ನು ನೋಡುವುದು ಕರುಳು ಹಿಂಡುವಂತಿತ್ತು. ಈ ರೀತಿ ಮತ್ತೆಂದೂ ಆಗಬಾರದು.
ನಾಗರಿಕ ಜವಾಬ್ದಾರಿ: ಸಾಂಕ್ರಾಮಿಕ ಈ ಪರಿ ಹರಡಲು ಒಂದು ಪ್ರಮುಖ ಕಾರಣವೆಂದರೆ ನಾಗರಿಕರ ಬೇಜವಾಬ್ದಾರಿತನ. ಮಾಸ್ಕ್ ಧರಿಸದೇ ಇರುವುದು, ಗುಂಪುಗೂಡುವುದು, ಸ್ವತ್ಛತೆ ಅಥವಾ ಕೆಮ್ಮುವಾಗ ಪಾಲಿಸಬೇಕಾದ ಎಚ್ಚರಿಕೆಯನ್ನು ಪಾಲಿಸದೇ ಇರುವುದು ಇತ್ಯಾದಿ. ಒಂದು ರೋಗದ ಪ್ರಸರಣವನ್ನು ತಡೆಗಟ್ಟುವಲ್ಲಿ ಶಿಸ್ತಿನ ಸಾರ್ವಜನಿಕರು ಬಹಳ ಮುಖ್ಯ ಎನ್ನುವುದನ್ನು ನಾವು ಕಲಿತಿದ್ದೇವೆ.
ಕೋವಿಡ್, ಕೋವಿಡೇತರ ಸೇವೆ: ಕೋವಿಡ್-19 ಸಾಂಕ್ರಾಮಿಕದಿಂದ ಸಂಭವಿಸಿದ ಮತ್ತೂಂದು ದುರಂತವೆಂದರೆ, ಕೋವಿಡೇತರ ರೋಗಿಗಳು ಪಟ್ಟ ಪಡಿಪಾಟಲು. ಅವರ ಆರೋಗ್ಯ ಸೇವೆಯನ್ನು ಗಾಳಿಗೆ ತೂರಲಾಯಿತು. ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದನ್ನು, ಮತ್ತೆ ಕೆಲವರು ಮೌನವಾಗಿಯೇ ಬಳಲುವುದನ್ನು, ಕೆಲವರಂತೂ ಸೂಕ್ತ ಆರೈಕೆ ದೊರೆಯದೇ ಮನೆಯಲ್ಲಿಯೇ ಸತ್ತಿದ್ದನ್ನು ನೆನೆದರೆ ಅತೀವ ಬೇಸರವಾಗುತ್ತದೆ. ಈ ಕಾರಣಕ್ಕಾಗಿಯೇ, ನಮ್ಮ ನೀತಿ ನಿರೂಪಕರು ಮತ್ತು ಆರೋಗ್ಯ ವಲಯವು ಮುಂದೆ ಸಾಂಕ್ರಾಮಿಕಗಳ ಸಮಯದಲ್ಲಿ ಸೋಂಕಿತರು ಮತ್ತು ಸಾಂಕ್ರಾಮಿಕೇತರ ರೋಗಿಗಳ ಸೇವೆಯಲ್ಲಿ ಯಾರಿಗೂ ವ್ಯತ್ಯಯವಾಗದಂತೆ ಸೌಲಭ್ಯ ಸೃಷ್ಟಿಯತ್ತ ಗಮನ ಹರಿಸಬೇಕು.
ಆರೋಗ್ಯ ವಲಯದ ಕುಂದುಕೊರತೆ: ಒಂದು ದೇಶದ ಆರೋಗ್ಯ ವ್ಯವಸ್ಥೆ ಎಷ್ಟು ಬಲಿಷ್ಠವಾಗಿರುತ್ತದೋ, ಆ ದೇಶವೂ ಅಷ್ಟೇ ಬಲಿಷ್ಠವಾಗಿರುತ್ತದೆ. ಜಗತ್ತಿನ ಅತ್ಯಂತ ಬಲಿಷ್ಟ ರಾಷ್ಟ್ರಗಳಲ್ಲಿ ಜನರು ಆರೋಗ್ಯ ಸೇವೆ ಸಿಗದೇ ರಸ್ತೆಗಳಲ್ಲಿಯೇ ಸತ್ತದ್ದನ್ನು ನೋಡಿದಾಗ ನಮಗೆ ಈ ಸತ್ಯ ಸ್ಪಷ್ಟವಾಗಿ ಅರಿವಾಯಿತು.
ಈ ಸಾಂಕ್ರಾಮಿಕವು ನಮ್ಮಲ್ಲಿನ ಆರೋಗ್ಯ ಸೇವೆ ಪೂರೈಕೆ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನೂ ಬಹಿರಂಗಗೊಳಿಸಿತು. ನಾವು ನಮ್ಮ ಪ್ರಾಥಮಿಕ ಆರೋಗ್ಯ ಸೇವೆ, ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ಮೂಲಸೌಕರ್ಯಗಳನ್ನು ಅಭೂತಪೂರ್ವವಾಗಿ ಬಲಿಷ್ಠಪಡಿಸಬೇಕು. ಅಲ್ಲದೇ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕು ಮತ್ತು ಈಗಿನ ಸಾಂಕ್ರಾಮಿಕದ 2ನೇ ಮತ್ತು 3ನೇ ಅಲೆಯಷ್ಟೇ ಅಲ್ಲದೇ ಭವಿಷ್ಯದಲ್ಲಿನ ಸಾಂಕ್ರಾಮಿಕಗಳು ಹಾಗೂ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಉಪದ್ರವವನ್ನು ನಿಭಾಯಿಸುವಂಥ ಮಾನವ ಸಂಪನ್ಮೂಲವನ್ನೂ ಮೇಲ್ಕಂಡ ಕ್ಷೇತ್ರಗಳಲ್ಲಿ ಹೆಚ್ಚಿಸಬೇಕು. ಪ್ರಸಕ್ತ ಜಿಡಿಪಿಯಲ್ಲಿ ಕೇವಲ 1.5 ಪ್ರತಿಶತಕ್ಕಿಂತಲೂ ಕಡಿಮೆ ಪ್ರಮಾಣವನ್ನು ನಮ್ಮಲ್ಲಿ ಆರೋಗ್ಯ ಸೇವೆಯ ಮೇಲೆ ಖರ್ಚು ಮಾಡಲಾಗುತ್ತಿದ್ದು, ಇದು ಬದಲಾಗಬೇಕು. ಇನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಲೇಬೇಕಾದ ಅಗತ್ಯವಿದೆ. ಆಗಲಾದರೂ ಹೆಚ್ಚು ಸಂಪನ್ಮೂಲವಿಲ್ಲದ ಜನರು ಆರೋಗ್ಯ ಸೇವೆಗಳಿಗಾಗಿ ಅನಿವಾರ್ಯವಾಗಿ ದುಬಾರಿ ಖಾಸಗಿ ವಲಯದ ಪೂರೈಕೆದಾರರ ಬಳಿ ದೌಡಾಯಿಸುವಂತಾಗುವುದನ್ನು ತಡೆಯಬಹುದು.
ಸರಕಾರಿ ಖಾಸಗಿ ಸಹಭಾಗಿತ್ವ: ಭಾರತದಂಥ ಬೃಹತ್ ರಾಷ್ಟ್ರದಲ್ಲಿ ಸರಿಸುಮಾರು ಮುಕ್ಕಾಲು ಪ್ರತಿಶತ ಆರೋಗ್ಯ ಸೇವೆ ಖಾಸಗಿ ವಲಯದಲ್ಲಿದ್ದು, ಇಂಥ ಬಿಕ್ಕಟ್ಟಿನ ಸಮಯದಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದ ಮಹತ್ವವನ್ನು ನಾವು ಅರಿತಿದ್ದೇವೆ. ಆರಂಭಿಕ ಸಮಯದಲ್ಲಿ ಒಂದಿಷ್ಟು ಅಡಚಣೆಗಳಿದ್ದರೂ, ಜತೆಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾವು ಕಲಿತಿದ್ದೇವೆ.
ಸಾರ್ವತ್ರಿಕ ಆರೋಗ್ಯ ಕವರೇಜ್‌ನ ತುರ್ತು ಅಗತ್ಯ: ಅತ್ಯಂತ ಮುಖ್ಯವಾದ ಮತ್ತು ಭಾರತದ ಪ್ರತಿಯೊಬ್ಬ ನಾಗರಿಕನಿಗಾಗಿಯೂ ಅತ್ಯಂತ ಹುರುಪಿನಿಂದ ಅನುಷ್ಠಾನಗೊಳಿಸಬೇಕಾದ ಪರಿಕಲ್ಪನೆಯೆಂದರೆ ಯುನಿವರ್ಸಲ್ ಹೆಲ್ತ್‌ಕೇರ್. ಆದಾಗ್ಯೂ, ಸರಕಾರವು ಆಯುಷ್ಮಾನ್ ಭಾರತ್ ಮತ್ತು ಅದರ ಮುಂದುವರಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೆಜ್ಜೆಗಳನ್ನಿಡುತ್ತಿದೆಯಾದರೂ, ಈ ಯೋಜನೆಗಳ ವ್ಯಾಪ್ತಿಯು “ಮಿಸ್ಸಿಂಗ್ ಮಿಡಲ್’ಗೂ ವಿಸ್ತರಿಸಬೇಕಾಗಿದೆ. ಅಂದರೆ, ದೇಶದ ಮಧ್ಯಮವರ್ಗಕ್ಕೆ (ಮುಖ್ಯವಾಗಿ ಸ್ವಂತ ಉದ್ಯೋಗದಲ್ಲಿರುವವರು ಮತ್ತು ಅನೌಪಚಾರಿಕ ವಲಯದಲ್ಲಿರುವವರು). ಈ ಕೆಲಸವನ್ನು ಸರಕಾರವು ಖಾಸಗಿ ವಲಯದ ಸಹಭಾಗಿತ್ವದಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರುವಂತಾಗಬೇಕು. ಆಗ ಮಾತ್ರ ಈಗಿನಂತೆ ಏಕಾಏಕಿ ನಿರ್ಧಾರಗಳನ್ನು ಕೈಗೊಂಡು ಆಸ್ಪತ್ರೆಗಳು ಉಚಿತವಾಗಿ ಅಥವಾ ಸಬ್ಸಿಡಿಯ ದರದಲ್ಲಿ ಚಿಕಿತ್ಸೆ ನೀಡುವಂತೆ ಮಾಡಿ, ಆರೋಗ್ಯ ವಲಯವು ಕುಸಿಯುವಂತೆ ಕಾರಣವಾಗುವ ಸಂದರ್ಭ ಎದುರಾಗುವುದಿಲ್ಲ.
ನಾವು ಈ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿನ ಅನುಭವಗಳಿಂದ ಪಾಠ ಕಲಿತರೆ ಮತ್ತು ಪ್ರಸಕ್ತ ಇರುವ ಕೊರತೆಗಳನ್ನು ಸರಿಪಡಿಸಿ
ದರೆ, ಮುಂದಿನ ಬಾರಿ ಉತ್ತಮ ಸ್ಥಿತಿಯಲ್ಲಿ ಇರುತ್ತೇವೆ. ಕೋವಿಡ್-19ನಿಂದಾಗಿ ನಾವೆಲ್ಲರೂ ಗಾಯಗೊಂಡಿದ್ದೇವೆ, ಜರ್ಜರಿತರಾಗಿದ್ದೇವಾದರೂ, ಒಂದು ವೇಳೆ ಈ ಸಾಂಕ್ರಾಮಿಕ ಕಲಿಸಿರುವ ಪಾಠಗಳನ್ನು ಕಲಿತೆವೆಂದರೆ ಈ ಹೋರಾಟದಲ್ಲಿ ಖಂಡಿತ ಯಶಸ್ವಿಯಾಗಿ ಹೊರಹೊಮ್ಮುತ್ತೇವೆ ಎನ್ನುವ ಭರವಸೆ ನನಗಿದೆ.
ಡಾ| ಸುದರ್ಶನ ಬಲ್ಲಾಳ , ಮುಖ್ಯಸ್ಥರು ಮಣಿಪಾಲ್ ಆಸ್ಪತ್ರೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.