ಅರಿಹಂತ: ಅಣ್ವಸ್ತ್ರ ಬೆದರಿಕೆಗೆ ಭಾರತದ ಪ್ರತ್ಯುತ್ತರ
Team Udayavani, Dec 2, 2018, 12:30 AM IST
ಅರಿಹಂತ ಎಂದರೆ ಸಂಸ್ಕೃತದಲ್ಲಿ ಶತ್ರುಗಳ ವಿನಾಶಕ ಎಂದರ್ಥ. “ಐಎನ್‌ಎಸ್ ಅರಿಹಂತ್’, ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ಇದು ಭಾರತದ ಪೂರ್ವ ನೌಕಾದಳ ವಲಯದ ಎಸ್.ಎಸ್.ಬಿ.ಎನ್.(ಸ್ಟ್ರಾಟಜಿಕ್ ಸ್ಟ್ರೈಕ್ ನ್ಯೂಕ್ಲಿಯರ್ ಸಬ್‌ಮೆರಿನ್) ಮಾದರಿ. ನವೆಂಬರ್ 5ಕ್ಕೆ “ಅರಿಹಂತ’ ಹಿಂದೂ ಮಹಾಸಾಗರದಲ್ಲಿ ಮೊದಲ ಪ್ರಾಯೋಗಿಕ ಪರೀಕ್ಷಣ ಗಸ್ತನ್ನು ಪೂರೈಸಿತು. ಹೀಗೆ ಭಾರತವು ಭೂ, ವಾಯು ಹಾಗೂ ಜಲ ಮೂರೂ ಮಾಧ್ಯಮಗಳಲ್ಲಿಯೂ ನ್ಯೂಕ್ಲಿಯರ್ ಶಸ್ತ್ರಬಲದ ಅಣ್ವಸ್ತ್ರ ತ್ರಿವಳಿ ಶಕ್ತಿಯಾಗಿದೆ. ರಷ್ಯ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನಾ ದೇಶಗಳನ್ನು ಹೊರತುಪಡಿಸಿ ಪರಮಾಣು ತಂತ್ರಜ್ಞಾನದ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಯನ್ನು ಅಭಿವೃದ್ಧಿಪಡಿಸಿ ಬಳಸುತ್ತಿರುವ ಅಣ್ವಸ್ತ್ರ ತ್ರಿವಳಿ ಸಾಮಾರ್ಥ್ಯದ ವಿಶ್ವದ ಆರನೇ ಮತ್ತು ಏಷ್ಯಾದ ಎರಡನೇ ದೇಶ ಭಾರತ.
ಯಾವ ತಂತ್ರಜ್ಞಾನಗಳ ಕಣ್ಣಿಗೂ ಕಾಣದಂತೆ ತಿಂಗಳುಗಳ ಕಾಲ 300 ಮೀಟರ್‌ಗಳಷ್ಟು ಸಾಗರದಾಳದಲ್ಲಿ ಉಳಿಯಬಲ್ಲ, 95 ಜನರನ್ನು ಹೊತ್ತೂಯ್ಯಬಲ್ಲ, 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇದಕ್ಕೆ 750 ಕಿಲೋಮೀಟರ್‌ಗಳಷ್ಟು ದೂರಕ್ಕೆ ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯವಿದ್ದು ಏಕಕಾಲಕ್ಕೆ 12 ಅಣುಶಕ್ತಿಯ ಖಂಡಾಂತರ ಕ್ಷಿಪಣಿಗಳನ್ನು ಹೊತ್ತೂಯ್ಯಬಲ್ಲದು. ಸಾಗರದಾಳದಿಂದ ಕ್ಷಿಪಣಿಗಳನ್ನು ಸ್ಫೋಟಿಸಬಲ್ಲದು.
“ಕೆ’15 (-15) “ಸಮೀಪ ವ್ಯಾಪ್ತಿ’ಯ ಅಂದರೆ ಸುಮಾರು 700-750 ಕಿಮೀ ದೂರ ತಲುಪಬಲ್ಲ 12 ಕ್ಷಿಪಣಿಗಳಿವೆ. ಕೆ ಮಾದರಿ ಎಂಬ ಹೆಸರಿನಲ್ಲಿ ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂರಿಗೆ ಗೌರವ ಸಲ್ಲಿಸಲಾಗಿದೆ. ನೌಕಾದಳಕ್ಕೆ ಅರಿಹಂತ್ ಸೇರುವಿಕೆಯಿಂದ ಯಾವುದೇ ಹೊತ್ತಿನಲ್ಲಿಯೂ ಭೂ ಹಾಗೂ ವಾಯು ಅಣ್ವಸ್ತ್ರಗಳ ಮೇಲೆ ಮೊದಲಿಗೆ ನ್ಯೂಕ್ಲಿಯರ್ ದಾಳಿಯಾದರೂ ಸಾಗರದಾಳದಲ್ಲಿರುವ ನೌಕೆಯನ್ನು ನಾಶಪಡಿ ಸುವುದು ಕಷ್ಟಸಾಧ್ಯ. ಹಾಗಾಗಿ ಪ್ರತಿದಾಳಿ ನಡೆಸುವುದಕ್ಕೆ ಅರಿಹಂತ್ ಉತ್ತಮ ಆಯ್ಕೆ.
ಪಾರಂಪರಿಕ ನೌಕೆಗಳಿಗೆ ಹೋಲಿಸಿದರೆ ಅರಿಹಂತ್‌ನ ವಿಶೇಷತೆಗಳು: ಪೋಖ್ರಾನ್-2 ಯಶಸ್ವಿ ಪರೀಕ್ಷೆಗಳ ಬಳಿಕ ಭಾರತ ನೌಕಾ ಮಾಧ್ಯಮದಲ್ಲಿಯೂ ಅಣುಶಕ್ತಿಯ ನೌಕೆಗಳನ್ನು ತಯಾರಿಸಲು ಹೆಚ್ಚಿನ ಗಮನಹರಿಸಿತ್ತು. ಚಲನೆಯಲ್ಲಿ ದೊಡ್ಡ ಸದ್ದುಮಾಡುವ ಪಾರಂಪರಿಕ ಡಿಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾ ಮಿಗಳಿಗೆ ಹೋಲಿಸಿದರೆ ಅಣುಶಕ್ತಿಯ ನೌಕೆಗಳು ಹೆಚ್ಚು ಸಮರ್ಥ ಹಾಗೂ ಶಕ್ತಿಶಾಲಿ. ಅಣುಶಕ್ತಿಯ ಅರಿಹಂತ್, ಒಮ್ಮೆ ಸಾಗರಕ್ಕೆ ಇಳಿದರೆ ಯಾವುದೇ ಸಮಸ್ಯೆಯಿಲ್ಲದೆ ತಿಂಗಳುಗಳ ಕಾಲ ಅಲ್ಲೇ ಉಳಿದು, ವೇಗದ ಚಲನೆಯ ಗಸ್ತು ನಡೆಸಬಹುದು. ನೀರಿನ ಒತ್ತಡ, ಆಮ್ಲಜನಕ ಮೊದಲಾದ ಅನಿವಾರ್ಯತೆಗಳು ಎದುರಾಗದೆ, ಭೂ, ವಾಯು ನೆಲೆಗಳು ಧ್ವಂಸಗೊಂಡರೂ ಸಮುದ್ರದಾಳದಿಂದಲೇ ಪ್ರತಿದಾಳಿ ನಡೆಸುವುದಕ್ಕೆ ಶಕ್ತ.
ಅರಿಹಂತ್‌ನಲ್ಲಿ ಮಿತಿಗಳೇ ಇಲ್ಲವೆಂದಲ್ಲ. ಸಮಕಾಲೀನ ಅಣ್ವಸ್ತ್ರ ಶಕ್ತಿಯ ಜಲಾಂತರ್ಗಾಮಿ ನೌಕೆಗಳು 250 ಮೆಗಾ ವ್ಯಾಟ್ ಶಕ್ತಿಯ ರಿಯಾಕ್ಟರ್ ಇಂಜಿನ್‌ಗಳನ್ನು ಹೊಂದಿವೆ. ಅವಕ್ಕೆ ಹೋಲಿಸಿದರೆ 83 ಮೆಗಾವ್ಯಾಟ್ ಶಕ್ತಿಯ ಅರಿಹಂತ್‌ನ ಇಂಜಿನ್ ದುರ್ಬಲವಾಗಿದೆ. ಅವುಗಳ ಕಾರ್ಯಕ್ಷಮತೆಯ ಹಂತಕ್ಕೆ ಭಾರತವೂ ಏರಬೇಕಾದರೆ, ಇಂಜಿನ್ ನಿರ್ಮಾಣ ಕ್ರಿಯೆಯಲ್ಲಿ ವಿದೇಶಿ ತಂತ್ರಜ್ಞಾನದ ನೆರವು ಪಡೆಯುವುದು ಅನಿವಾರ್ಯ. ಪ್ರಸ್ತುತ 750 ಕಿಲೋಮೀಟರ್ ಗುರಿಮುಟ್ಟಬಲ್ಲ ಕ್ಷಿಪಣಿಗಳು ಪಾಕಿಸ್ತಾನದ ನೆಲೆಗಳನ್ನು ಮುಟ್ಟಬಲ್ಲವು. ಆದರೆ ಚೀನಾದ ನೆಲೆಗಳನ್ನಲ್ಲ. ಹಾಗಾಗಿ ಚೀನಾದ ಆಕ್ರಮಣಕಾರಿ ಪ್ರವೃತ್ತಿಯನ್ನು ತಡೆಯಲು ಅರಿಹಂತ್ ಕ್ಲಾಸ್‌ನ ಮುಂದಿನ ನೌಕೆಗಳು ಬಹುದೂರ ತಲುಪಬಲ್ಲ ಕ್ಷಿಪಣಿಗಳನ್ನು ಹೊಂದಬೇಕಿವೆ. ಉತ್ತಮ ತಂತ್ರಜ್ಞಾನ ಎಂದ ಮೇಲೆ ವೆಚ್ಚವೂ ಅಧಿಕ. ಅಮೆರಿಕ 72, ರಷ್ಯ 40, ಫ್ರಾನ್ಸ್, ಬ್ರಿಟನ್‌ಗಳು 8 ರಿಂದ 10 ಹಾಗೂ ಚೀನಾ 10 ಅಣುಶಕ್ತಿಯ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿವೆ. ಅವುಗಳ ತುಲನೆಯಲ್ಲಿ ಭಾರತ ಹಿಂದಿದೆ. ಭಾರತದ ರಕ್ಷಣೆಗೆ ಅರಿಹಂತ್ ಒಂದು ಹೆಜ್ಜೆಯೇ ಹೊರತು ಸರ್ವತ್ರ ಪರಿಹಾರವಲ್ಲ.
ಅಣ್ವಸ್ತ್ರದ ಬೆದರಿಕೆಗೆ ಪ್ರತ್ಯುತ್ತರ: ಭಾರತದ ಅರಿಹಂತ್, ಪ್ರತಿಷ್ಟೆಗಿಂತ ಅಸ್ತಿತ್ವದ ಅನಿವಾರ್ಯ ಆಯ್ಕೆ. ಆದರೆ ಭಾರತದ ಅರಿಹಂತ್‌ಗೆ ಪ್ರತಿಯಾಗಿ ಪಾಕಿಸ್ತಾನ ಬಾಬರ್-3 ಕ್ರೂಸ್ ಮಿಸೈಲ್ ಜಲಾಂತರ್ಗಾಮಿ ನೌಕೆಯನ್ನು ನೌಕಾದಳಕ್ಕೆ ಸೇರಿಸಿದೆ. ಮೊದಲು ಅಣ್ವಸ್ತ್ರ ದಾಳಿ ನಡೆಸುವುದಕ್ಕೂ ಸಿದ್ಧ ಎಂಬ ನೀತಿಯನ್ನು ಅನುಸರಿಸುತ್ತಿರುವ ಪಾಕಿಸ್ತಾನಕ್ಕೆ ಎರಡನೇ ಹಂತದ ಪ್ರತಿದಾಳಿ ನಡೆಸುವ ಅಣುಶಕ್ತಿಯ ಜಲಾಂತರ್ಗಾಮಿ ನೌಕೆಯ ಅಳವಡಿಕೆಯ ಅನಿವಾರ್ಯತೆಯೇ ಅನುಮಾನಾ ಸ್ಪದವಾಗಿದೆ. ಬಾಬರ್ ಅಳವಡಿಕೆ ಹಾಗೂ ಚೀನಾದಿಂದ ಪಡೆಯಲಿರುವ ಅನೇಕ ಅಣ್ವಸ್ತ್ರ ನೌಕೆಗಳ ಸೇರ್ಪಡೆಯಿಂದ ಪಾಕಿಸ್ತಾನದ ಮೊದಲ ದಾಳಿ ನಡೆಸುವ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ. ಇದು ಭಾರತವನ್ನು ಬೆದರಿಸುವ, ಪ್ರಚೋದಿಸುವ, ಅಣ್ವಸ್ತ್ರ ಸ್ಪರ್ಧೆಯನ್ನು ಜಾಗೃತವಾಗಿಡುವ ಪ್ರಯತ್ನವಾಗಿದೆ.
ಚೀನಾದ ಮಿಲಿಟರಿಯಲ್ಲಿ ಹೆಚ್ಚಿನ ಮಹತ್ವ ನೌಕಾದಳದ ಸುಧಾರಣೆಗೆ ನೀಡಲಾಗಿದೆ. ಅದು ಎರಡನೇ ತಲೆಮಾರಿನ ಶಾಂಗ್ ಮತ್ತು ಜಿನ್ ಜಲಾಂತರ್ಗಾಮಿ ನೌಕೆಗಳನ್ನೂ ಅಭಿವೃದ್ಧಿಪಡಿಸುತ್ತಿದೆ. ಉದ್ದೇಶ, ಪ್ರಭಾವಶಾಲಿ ಅಣ್ವಸ್ತ್ರಸಹಿತ ನೌಕಾದಳದ ಸಹಾಯದಿಂದ ದಕ್ಷಿಣ ಚೀನ ಸಾಗರ, ಹಿಂದೂ ಮಹಾಸಾಗರ ಹಾಗೂ ಇಂಡೋ-ಫೆಸಿಫಿಕ್ ಪ್ರಾಂತ್ಯಗಳಲ್ಲಿ ಹೆಚ್ಚುತ್ತಿರುವ ತನ್ನ ಪ್ರಾಬಲ್ಯವನ್ನು ಶಾಸನಬದ್ಧಗೊಳಿಸುವುದು. ಈ ಪ್ರಾಂತ್ಯಗಳಲ್ಲಿ ವಿಸ್ತಾರವಾದಿ ಚೀನಾದ ಪ್ರಾಬಲ್ಯ ನಿಯಂತ್ರಣದಲ್ಲಿರಲು ಅರಿಹಂತ್‌ನಂತಹ ಸ್ವಯಂತಂತ್ರ ಕವಚ ಅನಿವಾರ್ಯ.
ಪ್ರತಿದಾಳಿ ಅಣ್ವಸ್ತ್ರಗಳ ಅನಿವಾರ್ಯತೆ: ಅಣ್ವಸ್ತ್ರ ಪ್ರಯೋಗಿಸಿದರೆ ವಿನಾಶ ಎಂದೇ ಅರ್ಥ. ಭವಿಷ್ಯದಲ್ಲಿ ಪಾರಂಪರಿಕ ಯುದ್ಧ ವಿಧಾನಗಳು ನೆನೆಗುದಿಗೆ ಸರಿದು ಒಂದೇ ಒಂದು ಸ್ವಿಚ್‌ನಿಂದ ಸಮಸ್ತವನ್ನೂ ನಾಶಗೊಳಿಸುವ ಅಣ್ವಸ್ತ್ರಗಳೇ ಪಾರಮ್ಯ ಮೆರೆಯಲಿವೆ. ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ. ಆದರೆ ಪಾಕಿಸ್ತಾನ, ಚೀನಾ ಅಣ್ವಸ್ತ್ರದ ಮೂಲಕ ಭಾರತದ ಆಂತರಿಕ ಭದ್ರತೆ ಹಾಗೂ ಅಸ್ತಿತ್ವಕ್ಕೇ ಆತಂಕವೊಡ್ಡುತ್ತಿರುವಾಗ, ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡುವುದಕ್ಕೆ ಸಜ್ಜಾಗಿರಬೇಕು. ಇಲ್ಲದಿದ್ದರೆ ಅಣ್ವಸ್ತ್ರ ದಾಳಿಯ ಭೀತಿ-ಬೆದರಿಕೆಗಳಿಂದಲೇ ಭಾರತ ಶತಮಾನಗಳಷ್ಟು ಹಿಂದಕ್ಕೆ ಸರಿಯುವ ಅಪಾಯವಿದೆ.
ಭಾರತ 1998ರಲ್ಲಿ ಪೋಖ್ರಾನ್ ಪರೀಕ್ಷಣೆಗಳ ಮೂಲಕ ಅಧಿಕೃತವಾಗಿ ಅಣ್ವಸ್ತ್ರ ದೇಶವಾಗಿ ಜಗಜ್ಜಾಹಿರಾಯಿತು. ಭಾರತದ ಗೌಪ್ಯ ಅಣ್ವಸ್ತ್ರಗಳ ಪರೀಕ್ಷಣೆಯ ಸುದ್ದಿಯಿಂದ ಮೊದಲಿಗೆ ವಿಶ್ವದ ಅನೇಕ ದೇಶಗಳು ಬೆಚ್ಚಿದವು. ಕ್ರಮೇಣ ಭಾರತದ ಅಣ್ವಸ್ತ್ರ ಪರೀಕ್ಷೆಯ ಅನಿವಾರ್ಯತೆಯನ್ನು ಅರಿತವು. ಭಾರತ ಅಣ್ವಸ್ತ್ರವನ್ನು ಹಿಂಸೆಗೆ ಬಳಸುವುದಿಲ್ಲ, ಅದು ರಕ್ಷಣೆಯ ಕವಚ ಎಂಬುದು ತಿಳಿಯಿತು. ಭಾರತ, ಅಣ್ವಸ್ತ್ರಗಳನ್ನು ಮೊದಲು ಪ್ರಯೋಗಿಸುವುದಿಲ್ಲ ಮತ್ತು ಕನಿಷ್ಟ ರಕ್ಷಣೆಗಾಗಿ ಮಾತ್ರವೇ ಅಭಿವೃದ್ಧಿಪಡಿಸುವುದು ಎಂಬ ನಿಯಮ ಪಾಲಿಸುತ್ತಿದೆ. ಯಾವುದೇ ಕಾರಣಕ್ಕೂ ತನ್ನಲ್ಲಿರುವ ಅಣ್ವಸ್ತ್ರಗಳನ್ನು, ಅಣ್ವಸ್ತ್ರರಹಿತ ದೇಶಗಳ ಮೇಲೆ ಪ್ರಯೋಗಿಸುವುದಿಲ್ಲ ಎಂಬ ದೃಢ ಸಂಕಲ್ಪ. ಇದು ಸಾರ್ವತ್ರಿಕ ಮತ್ತು ಪಾರದರ್ಶಕ ಅಣ್ವಸ್ತ್ರಮುಕ್ತ ವಿಶ್ವವನ್ನು(ನ್ಯೂಕ್ಲಿಯರ್ ಫ್ರಿ ವಲ್ಡ್) ನಿರ್ಮಿಸುವ ಆಶಯ.
2003ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ತೆಗೆದುಕೊಂಡ ಐತಿಹಾಸಿಕ ನಿರ್ಣಯ, “ಶಾಂತಿಮಾರ್ಗದಲ್ಲಿ ಸಾಗುವ ಯಾವುದೇ ದೇಶಕ್ಕೂ ಭಾರತದಿಂದ ಅಪಾಯವಿಲ್ಲ’ ಎಂಬ ಸ್ಪಷ್ಟ ಸಂದೇಶ ಹಾಗೂ ಮಾರ್ಗದರ್ಶಿಯನ್ನು ನೀಡಿದೆ. ಪೂರಕವಾಗಿ ರೂಪುಗೊಂಡ ಸುರಕ್ಷಿತ ನ್ಯೂಕ್ಲಿಯರ್ ಆದೇಶ ಮತ್ತು ಅಧಿಕಾರ ವ್ಯವಸ್ಥೆ ಅಣ್ವಸ್ತ್ರ ಬಳಕೆಯನ್ನು ಮತ್ತಷ್ಟು ಜಾಗರೂಕ ಹಾಗೂ ಜವಾಬ್ದಾರಿಯುತಗೊಳಿಸಿದೆ. ಭಾರತದ ರಾಜತಾಂತ್ರಿಕತೆ ಯಿಂದ ಪಶ್ಚಿಮದ ರಾಷ್ಟ್ರಗಳೂ ಭಾರತದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದವು. ಭಾರತದ ಪಾರದರ್ಶಕತೆ ಹಾಗೂ ನೈತಿಕತೆ ಕಾರಣದಿಂದಲೇ ಇಂದು ಚೀನಾ ಹೊರತುಪಡಿಸಿ ಬಹುತೇಕ ಸದಸ್ಯ ರಾಷ್ಟ್ರಗಳು ಭಾರತ ಎನ್‌ಎಸ್‌ಜಿಗೆ ಸೇರಲು ಒಪ್ಪಿವೆ.
2010ರ ನೀನಾಸಮ್ ಶಿಬಿರದಲ್ಲಿ ಮಾತನಾಡುತ್ತಾ, ಯು.ಆರ್. ಅನಂತಮೂರ್ತಿಯವರು ಭಾರತದ ಅಣ್ವಸ್ತ್ರ ನೀತಿಯಲ್ಲಿಯೇ ಸಂಕಲ್ಪ ಹಿಂಸೆ (ಜನ್ನನ ಯಶೋಧರ ಚರಿತೆ) ಅಡಗಿದೆ. ಹಾಗಾಗಿ ಭಾರತವೇ ಹಿಂಸೆಯಿಂದ ಶಾಂತಿಯನ್ನು ಸ್ಥಾಪಿಸಬೇಕೆಂಬ ಲೆಕ್ಕಾಚಾರದಲ್ಲಿದೆ ಎಂದು ಅಣ್ವಸ್ತ್ರ ನೀತಿಯನ್ನು ಟೀಕಿಸಿ ಮಾತನಾಡಿದ್ದರು. ಭದ್ರತೆ ಹಾಗೂ ರಕ್ಷಣಾ ತಂತ್ರಗಾರಿಕೆಯ ಕುರಿತಾದ ತಪ್ಪು ಪರಿಕಲ್ಪನೆಗಳನ್ನು ಹೊತ್ತವರು ಇಂತಹ ವಾದಗಳಿಂದ ಸಮುದಾಯಗಳನ್ನು ದಿಕ್ಕುತ ಪ್ಪಿಸುತ್ತಿರುತ್ತಾರೆ. ಆದರ್ಶದ ಚಿನ್ಮಯಿ ಪ್ರಜ್ಞೆಗೆ ಮೃಣಯಿಯೇ ಅನಿವಾರ್ಯ. ದೇಶದ ಭೂಭಾಗ ಸುರಕ್ಷಿತವಾಗಿದ್ದಾಗ ಮಾತ್ರ ದೇಶವಾಸಿಗಳು ಸುರಕ್ಷಿತವಾಗಿರಲು ಸಾಧ್ಯ. ಮನುಷ್ಯರು ಬದುಕಿದರೆ ತಾನೆ ಮಾನವತಾವಾದ ಉಳಿಯುವುದು.
ಭಾರತವನ್ನು ಯಾರು ಕೆಣಕುತ್ತಾರೆ? ಕೆಣಕಿದರೂ ಅವರಿಗೆ ಬೇಕಿದ್ದನ್ನು ಕೊಟ್ಟುಬಿಟ್ಟರೆ ಭಾರತದ ಒಂದು ಉದಾತ್ತ ನಡೆಯ ಮೂಲಕ ವಿಶ್ವದಲ್ಲಿಯೇ ಶಾಂತಿ ಸ್ಥಾಪಿಸಬಹುದು ಎಂಬ ಹುಸಿ ವಾದವನ್ನು ಹುಟ್ಟುಹಾಕುವವರು, ದೇಶವೊಂದು ಶಕ್ತಿಯುತವಾಗಿಲ್ಲದಿದ್ದರೆ ಆ ದೇಶ ಎಂದಿಗೂ ಶಾಂತಿಯಿಂದ ಇರಲು ಸಾಧ್ಯವಿಲ್ಲ ಎಂಬುದನ್ನು ಅರಿಯುವುದಿಲ್ಲ. ಭಾರತ ದುರ್ಬಲವಾಗಿದ್ದರೆ ಸಣ್ಣಪುಟ್ಟ ದೇಶಗಳೇ ಯಜಮಾನ್ಯವನ್ನು ಸ್ಥಾಪಿಸಿಬಿಡುತ್ತವೆ. ಕೋಸ್ಟರಿಕ ಎಂಬ ಮಧ್ಯ ಅಮೆರಿಕದ, ಬಹುತೇಕ ಫುಟ್ಬಾಲ್ ಕ್ರೀಡೆಗೆ ಹೆಸರಾದ, ದೇಶದ ರಕ್ಷಣಾ ಬಜೆಟ್ ಸೊನ್ನೆ. ಹಾಗೆಂದು ಭಾರತವೂ ತನ್ನ ರಕ್ಷಣಾ ಬಜೆಟ್ ಸೊನ್ನೆಗೊಳಿಸಿದರೆ ಮರುದಿನ ಭಾರತವೆಂಬ ಈ ದೇಶವೇ ಇರುವುದಿಲ್ಲ. ಹಾಗೆಂದು ಕೋಸ್ಟರಿಕ ಮತ್ತು ಅಲ್ಲಿನ ಜನರು ಸುರಕ್ಷಿತವಾಗಿಲ್ಲವೇ? ವಿಸ್ತೀರ್ಣದಲ್ಲಿ ಕೇರಳಕ್ಕಿಂತಲೂ ಸಣ್ಣ ಭೂಪ್ರದೇಶವನ್ನು ಆಕ್ರಮಿಸಲು ಹೊರಟರೆ ಏನು ಸಿಗುತ್ತದೆ? ಯಾಕೆಂದರೆ ಆ ದೇಶದಲ್ಲಿ ಪಡೆಯುವುದಕ್ಕೆ ಏನೂ ಇಲ್ಲ. ಆದರೆ ಭಾರತದಲ್ಲಿ ಏನಿಲ್ಲ?
ಭಾರತದ ರಕ್ಷಣೆಗೆ ಅಣ್ವಸ್ತ್ರವನ್ನು ಪ್ರಯೋಗಿಸಬೇಕಿಲ್ಲ. ಬತ್ತಳಿಕೆಯಲ್ಲಿದ್ದರೆ ಸಾಕು. ಆಗ ಭಾರತವನ್ನು ಹೆದರಿಸದೆ, ಸಮಾನ ಗೌರವದಿಂದ ಕಾಣುತ್ತಾರೆ. ಭಾರತದ್ದು ಯಾರಿಗೂ ಕೇಡು ಬಯಸದ, ಸರ್ವರ ಒಳಿತು ಅರಸುವ ಮಧ್ಯಮ ಮಾರ್ಗ. ಅದು ವಿಶ್ವದ ಯಾವುದೇ ಶಕ್ತಿಯ ಮುಂದೆ ಸ್ವಂತವಾಗಿ ನಿಂತು ಶಾಂತಿ ಹಾಗೂ ಸುರಕ್ಷತೆಯ ಆತ್ಮವಂಚನೆಯಿಲ್ಲದ ಸ್ವತಂತ್ರ ಧ್ವನಿ ಮೊಳಗಿಸುವ ಬದ್ಧತೆ ಹೊಂದಿದೆ. ಇದರ ಹಿನ್ನೆಲೆಯಲ್ಲಿ ಐಎನ್‌ಎಸ್ ಅರಿಹಂತ್‌ನ ಒಳಗೊಳ್ಳುವಿಕೆ ಹಾಗೂ ಪ್ರತಿಬಂಧಕ ಗಸ್ತನ್ನು ಅರ್ಥಮಾಡಿಕೊಳ್ಳಬೇಕು.
ಜೈನರ ಮೊದಲ ತೀರ್ಥಂಕರ “ಅರಿಹಂತ’. ಅರಿಷಡ್ವರ್ಗಗಳನ್ನು ಗೆದ್ದವನು ಎಂದರ್ಥ. ಅರಿಹಂತ್ ಮಾದರಿಯಲ್ಲಿ 6 ಜಲಾಂತರ್ಗಾಮಿ ನೌಕೆಗಳೂ ಭಾರತದ ಪಾಲಿಗೆ ನೂರಾರು ಬಗೆಯ ಅಣ್ವಸ್ತ್ರಗಳ ಮೂಲಕ ಬೆದರಿಕೆಯೊಡ್ಡುವ ವಿನಾಶಕಾರಿ ಶಕ್ತಿಗಳನ್ನು ಗೆಲ್ಲುವ, ಅವುಗಳನ್ನು ನಾಶಪಡಿಸುವ ಭದ್ರತೆಯ ಸುರಕ್ಷಾ ಕವಚವಾಗಲಿ.
ಶ್ರೇಯಾಂಕ ಎಸ್ ರಾನಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.