ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರ: ಕಟ್ಟುನಿಟ್ಟಿನ ನಿಯಮ ಬೇಕು
Team Udayavani, Jun 13, 2019, 6:00 AM IST
ಈ ಸಲದ ಲೋಕಸಭೆ ಚುನಾವಣೆಗೆ ಅಲ್ಲಿ 13 ಹಾಲಿ ಶಾಸಕರು ನಿಂತಿದ್ದರು. ಅದರಲ್ಲಿ 11 ಜನರು ಆಯ್ಕೆಯಾದರು. ಅಂದರೆ ಆ 11 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ! ಇನ್ನು ಶಾಸಕರು ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದಿಲ್ಲ. ಗೆದ್ದರೆ ಮಾತ್ರ ರಾಜೀನಾಮೆ ಕೊಟ್ಟರಾಯಿತು. ಅದೇ ಒಬ್ಬ ಸರಕಾರಿ ಉದ್ಯೋಗಿ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದರೆ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿಯೇ ಮುಂದುವರಿಯಬೇಕು. ಹೇಗಿದೆ ನೋಡಿ, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಮೇಠಿ ಮತ್ತು ವಯನಾಡ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದು ತಿಳಿದೇ ಇದೆ. ಅವರು ವಯನಾಡಲ್ಲಿ ಗೆದ್ದು ಅಮೇಠಿಯಲ್ಲಿ ಸೋತಿರುವುದರಿಂದ ಉಪ ಚುನಾವಣೆಯ ಅಗತ್ಯ ಬೀಳಲಿಲ್ಲ. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಯವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದು ಅವರು ತ್ಯಜಿಸಿದ ಒಂದು ಕ್ಷೇತ್ರ ಉಪ ಚುನಾವಣೆಯನ್ನು ಕಾಣುವಂತಾ ಯಿತು. ಹೀಗೆ ಚುನಾವಣೆಯ ಇತಿಹಾಸ ಕೆದಕುತ್ತಾ ಹೋದರೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದವರ ಒಂದು ದೊಡ್ಡ ಪಟ್ಟಿಯನ್ನೇ ಕಾಣಬಹುದು.
ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಜಯಲಲಿತಾ, ಮುಲಾಯಂ ಸಿಂಗ್ ಯಾದವ್, ಅಖೀಲೇಶ್ ಯಾದವ್, ಲಾಲು ಪ್ರಸಾದ್ ಯಾದವ್, ಸಿದ್ದರಾ ಮಯ್ಯ ಹೀಗೆ ಈ ಪಟ್ಟಿ ಉದ್ದವಾಗುತ್ತ ಹೋಗುತ್ತದೆ. 1971ರಲ್ಲಿ ಒಡಿಸ್ಸಾದಲ್ಲಿ ಬಿಜು ಪಟ್ನಾಯಕ್ ಅವರು ಒಮ್ಮೆಗೆ 4 ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಅಷ್ಟು ಮಾಡಿಯೂ ಆ ಐದೂ ಕ್ಷೇತ್ರಗಳಲ್ಲಿ ಸೋತಿದ್ದರು. 1999ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿಯವರು ಬಳ್ಳಾರಿ ಮತ್ತು ಅಮೇಠಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು ಮತ್ತು ಎರಡರಲ್ಲೂ ಗೆದ್ದಿದ್ದರು. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಮತ್ತು ಸುಷ್ಮಾ ಸ್ವರಾಜ್ ನಡುವಿನ ಪ್ರಬಲ ಹೋರಾಟವನ್ನು ಕರ್ನಾಟಕದ ಜನತೆ ಮರೆಯುವಂತೆಯೇ ಇಲ್ಲ. ಆದರೆ ನಂತರ ಅವರು ಅಮೇಠಿಯನ್ನು ಉಳಿಸಿಕೊಂಡು ಬಳ್ಳಾರಿಯನ್ನು ತ್ಯಜಿಸಿದರು. ಮತ್ತು ಬಳ್ಳಾರಿ ಉಪ ಚುನಾವಣೆ ಕಾಣುವಂತಾಯಿತು.
2011ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿತು. ಆಗ ಪಕ್ಷದ ನಾಯಕಿಯಾದ ಮಮತಾ ಬ್ಯಾನರ್ಜಿಯವರು ಸಂಸತ್ತಿನ ಸದಸ್ಯರಾಗಿದ್ದು ಕೇಂದ್ರದಲ್ಲಿ ರೈಲ್ವೇ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ರಾಜ್ಯದ ಮುಖ್ಯಮಂತ್ರಿ ಆಗಲು ಶಾಸಕರೊಬ್ಬರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರು. ಅಲ್ಲಿ ದೀದಿ ಆಯ್ಕೆಯಾಗಿ ಬರಲು ಒಂದು ಉಪ ಚುನಾವಣೆ ನಡೆಸಬೇಕಾಯಿತು. ಅದರಲ್ಲಿ ಆಯ್ಕೆಯಾಗಲಿಕ್ಕೂ ದೀದಿ ಇಲ್ಲಿ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು. ಇಲ್ಲೊಂದು ಉಪ ಚುನಾವಣೆ ನಡೆಸಬೇಕಾಯಿತು.
ಈ ಸಲ ಲೋಕಸಭೆ ಚುನಾವಣೆಗೆ ಕೆಲ ವಾರಗಳ ಹಿಂದೆ ಗುಜರಾತಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರು ಪಕ್ಷ ತೊರೆದು ಬಿ.ಜೆ.ಪಿ ಸೇರಿದರು. ಲೋಕಸಭೆ ಚುನಾವಣೆ ಜೊತೆಗೆ ಅಲ್ಲಿ ಆ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸÇ ಾ ಯಿತು. ಇನ್ನು ಉತ್ತರ ಪ್ರದೇಶದ ಕತೆಯೇ ಬೇರೆ. ಈ ಸಲದ ಲೋಕಸಭೆ ಚುನಾವಣೆಗೆ ಅಲ್ಲಿ 13 ಹಾಲಿ ಶಾಸಕರು ನಿಂತಿದ್ದರು. ಅದರಲ್ಲಿ 11 ಜನರು ಆಯ್ಕೆಯಾದರು. ಅಂದರೆ ಆ 11 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ. ಇಲ್ಲಿ ಮತ್ತೂಂದು ವಿಚಾರವೆಂದರೆ ಶಾಸಕರು ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದಿಲ್ಲ. ಒಂದೊಮ್ಮೆ ಗೆದ್ದರೆ ಮಾತ್ರ ರಾಜೀನಾಮೆ ಕೊಟ್ಟರಾಯಿತು. ಅದೇ ಒಬ್ಬ ಸರಕಾರಿ ಉದ್ಯೋಗಿ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದರೆ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿಯೇ ಮುಂದುವರಿಯಬೇಕು. ಹೇಗಿದೆ ನೋಡಿ, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ.
1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 33(7) ರ ಪ್ರಕಾರ ಯಾವುದೇ ವ್ಯಕ್ತಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬಹುದು. 1996ಕ್ಕೂ ಹಿಂದೆ ಈ ಕಾಯಿದೆಯ ಪ್ರಕಾರ ಒಬ್ಬ ವ್ಯಕ್ತಿ ಎಷ್ಟು ಕ್ಷೇತ್ರಗಳಲ್ಲೂ ಸ್ಪರ್ಧಿಸಬಹುದಾಗಿತ್ತು. 1996ರಲ್ಲಿ ತಂದ ತಿದ್ದುಪಡಿಯ ನಂತರ ಇದು ಎರಡೇ ಕ್ಷೇತ್ರಕ್ಕೆ ಸೀಮಿತಗೊಂಡಿತು.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಆಭ್ಯರ್ಥಿಗಳು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ 2017ರ ಡಿಸೆಂಬರ್‌ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸುಪ್ರೀಂ ಕೋರ್ಟಿಗೆ ಅಫಿಡವಿತ್ ಸಲ್ಲಿಸಿದ್ದು, ನಿಯಮ ರೂಪಿಸಲು 1951ರ ಜನಪ್ರತಿನಿಧಿಗಳ ಕಾಯಿದೆಗೆ ತಿದ್ದುಪಡಿ ತರಬೇಕು. ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪದ್ಧತಿಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಈ ಕುರಿತು 2004 ಮತ್ತು 2016ರಲ್ಲಿ ಎರಡು ಬಾರಿ ಕೇಂದ್ರ ಸರಕಾರಕ್ಕೆ ತನ್ನ ಅಭಿಪ್ರಾಯವನ್ನು ತಿಳಿಸಲಾಗಿದೆ ಎಂದು ಉಲ್ಲೇಖೀಸಿತು.
ಒಂದು ಕ್ಷೇತ್ರವನ್ನು ಉಳಿಸಿಕೊಂಡು ಇನ್ನೊಂದು ಕ್ಷೇತ್ರವನ್ನು ಬಿಡುವುದು ಮತದಾರರಿಗೆ ಮಾಡುವ ಅನ್ಯಾಯವಾಗಿದೆ. ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಬಾರದು ಎನ್ನುವುದು ಆಯೋಗದ ನಿಲುವಾಗಿದೆ ಎಂದು ಅಫಿಡವಿತ್‌ನಲ್ಲಿ ಆಯೋಗ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಆದರೆ ಕೇಂದ್ರ ಸರಕಾರ ಮಾತ್ರ ಇನ್ನೂ ತನ್ನ ಅಭಿಪ್ರಾಯವನ್ನು ಸಲ್ಲಿಸಿಲ್ಲ. ಒಬ್ಬ ಅಭ್ಯರ್ಥಿ ಎರಡು ಕಡೆಯಿಂದ ಕಣಕ್ಕಿಳಿದು, ಎರಡೂ ಕಡೆ ಗೆದ್ದರೆ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಮತ್ತೂಂದನ್ನು ತ್ಯಜಿಸುವುದು ಮತದಾರರಿಗೆ ಅನ್ಯಾಯ ಮಾಡಿದಂತಲ್ಲವೇ? ಅಲ್ಲದೆ ಮರುಚುನಾವಣೆ ನಡೆಸುವ ಅನಗತ್ಯ ವೆಚ್ಚದಿಂದ ಸರಕಾರದ ಬೊಕ್ಕಸಕ್ಕೆ ನಷ್ಟ.
ಇಲ್ಲಿ ಬರುವ ಮತ್ತೂಂದು ಅಭಿಪ್ರಾಯವೆಂದರೆ ಆ ಖರ್ಚನ್ನು ಅಭ್ಯರ್ಥಿಯಿಂದಲೇ ಭರಿಸುವುದು. ಮೇಲ್ನೋಟಕ್ಕೆ ಇದು ಸರಿಕಂಡರೂ ಎರಡು ಕಡೆಯಿಂದ ಸ್ಪರ್ಧಿಸುವುದನ್ನು ಇದು ಪರೋಕ್ಷವಾಗಿ ಬೆಂಬಲಿಸಿದಂತಾಗುತ್ತದೆ.
ಇನ್ನೊಂದು ಅಭಿಪ್ರಾಯವೆಂದರೆ ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿಯನ್ನು ವಿಜೇತನೆಂದು ಘೋಷಿಸುವುದು. ಆದರೆ ಇದರಿಂದ ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟಂತಾಗುವುದಿಲ್ಲ. ಹಾಗಾಗಿ ಸುಪ್ರೀಂಕೋರ್ಟ್, ಕೇಂದ್ರ ಸರಕಾರ, ಚುನಾವಣಾ ಆಯೋಗ ಎಲ್ಲ ಬಿಡಿ. ಅಭ್ಯರ್ಥಿಯನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಸಾಧ್ಯವಾಗುವುದು ಮತ ಚಲಾಯಿಸುವ ನಮ್ಮಿಂದಲ್ಲವೆ? ಯಾರೆಲ್ಲ ಎರಡು ಕಡೆಯಿಂದ ಕಣಕ್ಕಿಳಿಯುತ್ತಾರೋ ಅವರಿಗೆ ಮತ ಹಾಕದಿರುವುದು, ಅಷ್ಟೇ. ಎರಡೂ ಕಡೆ ಸೋತಾಗ ಅವರ ಅರಿವಿಗೆ ಬರುತ್ತದೆ, ಓ ಮತದಾರ ಬಾಂಧವರು ಬುದ್ಧಿವಂತರಾಗಿದ್ದರೆ ಎಂದು.
ಅಲ್ಲದಿದ್ದರೆ ಇನ್ನೇನು, ತಾತನು ತನ್ನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸುವುದು, ಇಲ್ಲಿ ಮೊಮ್ಮಗ ಗೆಲ್ಲುವುದು, ಅಲ್ಲಿ ಹೊಸ ಕ್ಷೇತ್ರದಿಂದ ತಾತ ಸೋಲುವುದು, ಅದರ ಮುಂದುವರಿದ ಭಾಗವಾಗಿ ಇಲ್ಲಿ ಮೊಮ್ಮಗ ತಾನು ರಾಜೀನಾಮೆ ನೀಡಿ ತಾತನ ಕ್ಷೇತ್ರವನ್ನು ಪುನಃ ತಾತನಿಗೆ ಬಿಟ್ಟು ಕೊಡುವುದಾಗಿ ಹೇಳುವುದು, ತಾತ ಇದಕ್ಕೆ ಒಪ್ಪದಿರುವುದು, ಅಬ್ಬಬ್ಟಾ… ಒಂದೇ ಎರಡೇ? ತಾತ ಬಿಟ್ಟುಕೊಡುವುದು, ಮೊಮ್ಮಗ ತೆಗೆದುಕೊಳ್ಳುವುದು, ಏನು ಇದು ಅವರ ಕುಟುಂಬದ ಅಸ್ತಿಯೇ? ಮೊಮ್ಮಗ ತಾನು ಗೆದ್ದ ಕ್ಷೇತ್ರವನ್ನು ಹರಿವಾಣದೊಳಗೆ ವೀಳ್ಯದೆಲೆ ಇಟ್ಟು ತಾತನಿಗೆ ಕೊಡಬಹುದಾಗಿದ್ದರೆ ಹೌದು, ಪುಣ್ಯಕ್ಕೆ ಅಂತಹ ಒಂದು ಪದ್ಧತಿಯಿಲ್ಲ. ಅಂದರೆ ಮೊಮ್ಮಗನ ಈ ದಾನಕ್ಕೆ ಉಪ ಚುನಾವಣೆಯೆಂದು ಸರಕಾರದ ತಿಜೋರಿ ಬರಿದಾಗಬೇಕು.
ಈ ಸಲ ಚುನಾವಣೆಯಲ್ಲಿ ಸ್ವೀಪ್ ಅಭಿಯಾನದ ಮೂಲಕ ಹೆಚ್ಚಿನ ಜನರು ಭಾಗಿಯಾಗಲು ಪ್ರಯತ್ನಗಳು ನಡೆದಿವೆ. ದೂರದೂರಿನಲ್ಲಿರುವವರು ಓಟಿಗಾಗಿ ತಮ್ಮೂರಿಗೆ ಬಂದು ಹೋಗಿದ್ದಾರೆ. ಹೀಗಿರುವಾಗ ಸ್ವ ಹಿತಸಕ್ತಿಗಾಗಿ ರಾಜೀನಾಮೆ ನೀಡಿ ಕ್ಷೇತ್ರವು ಉಪಚುನಾವಣೆ ಎದುರಿಸುವಂತೆ ಮಾಡಿದರೆ ಚುನಾವಣೆಯ ಘನತೆ ಎಲ್ಲಿ ಉಳಿಯುತ್ತದೆ? ಹೀಗಾಗಿ ಒಬ್ಬ ಅಭ್ಯರ್ಥಿ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದರ ಜೊತೆಗೆ ಒಮ್ಮೆ ಆಯ್ಕೆಯಾದಲ್ಲಿ ಐದು ವರ್ಷಗಳ ಅವಧಿ ಮುಗಿಯುವವರೆಗೂ ಚುನಾಯಿತ ಪ್ರತಿನಿಧಿಯು ಆದೇ ಪಕ್ಷದಲ್ಲಿದ್ದು ಕ್ಷೇತ್ರಕ್ಕಾಗಿ ಕೆಲಸ ಮಾಡಬೇಕು ಎಂಬ ನಿಯಮ ತರಬೇಕು. ಒಬ್ಬ ಪ್ರಜೆಗೆ ಹೇಗೆ ಒಂದು ಮತವೋ ಹಾಗೆ ಒಬ್ಬ ಅಭ್ಯರ್ಥಿಗೆ ಒಂದೇ ಕ್ಷೇತ್ರ ಎಂದಾಗಬೇಕು.
-ಶಾಂತಲಾ ಹೆಗ್ಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.