ಸರಳ ವಿಚಾರಗಳಲ್ಲಿ ಕಠಿನ ಆಚಾರಗಳಿರುವ ಪಂಚಾಚಾರ
Team Udayavani, Dec 1, 2019, 5:24 AM IST
ಬಸವಾದಿ ಶರಣರು ಆಚಾರಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಧರ್ಮದ, ತತ್ವದ ವಿಚಾರಗಳಿಗೆ ಮೌಲ್ಯ ಬರುವುದು ಈ ವಿಚಾರಗಳನ್ನು ಆಚಾರಕ್ಕೆ ಅಳವಡಿಸಿದಾಗಲೇ ಎಂಬ ಪ್ರಾಯೋಗಿಕತೆಯನ್ನು ಒಪ್ಪಿಕೊಂಡು ಅಪ್ಪಿಕೊಂಡವರು ಬಸವಾದಿ ಪ್ರಥಮರು. ಹಾಗಾಗಿ ನುಡಿಗೆ ನಡೆಯನ್ನು, ವಿಚಾರಕ್ಕೆ ಆಚಾರವನ್ನು ಕಟ್ಟಿಹಾಕಿಕೊಂಡವರು ಬಸವ ಪಥಿಕರು. ಹೀಗೆ ಆಚರಿಸಬೇಕು, ನಡೆಯಬೇಕು ಎಂದು ಬರೀ ಹೇಳದೇ ಅವುಗಳನ್ನು ಮೊದಲು ತಾವು ಪಾಲಿಸಿದವರು. ಇದೇ ಕಾರಣಕ್ಕಾಗಿ ಶರಣ ತತ್ವದಲ್ಲಿ ಬರುವ ಲಿಂಗ, ಸನ್ನಡತೆ, ಶಿವ, ಗಣ, ಭೃತ್ಯ ಮತ್ತು ಕಾಯಕ, ಪ್ರಸಾದ, ದಾಸೋಹ ತತ್ವ ಇವುಗಳನ್ನೆಲ್ಲ ಆಚಾರಕ್ಕೆ ಅಳವಡಿಸಿಕೊಂಡಿರುವುದನ್ನು ಕಾಣುತ್ತೇವೆ.
ಸಾಮಾನ್ಯವಾಗಿ, ಆದರ್ಶಗಳ ಕುರಿತು ಹೇಳು ಎಂದರೆ ಸುಲಭವಾಗಿ ಏನೆಲ್ಲವನ್ನೂ ಹೇಳಿಬಿಡುತ್ತಾರೆ. ಆದರೆ ನೀ ಹೇಳಿದ್ದನ್ನೇ ಪಾಲಿಸು ಎಂದರೆ ಒಂದಿಷ್ಟು ತಡವರಿಸುತ್ತಾರೆ. ಅಲ್ಲಿ ಕಷ್ಟದ ಸತ್ಯ ದರ್ಶನವಾಗುತ್ತದೆ. ಅದಕ್ಕೇ ಹೇಳುವುದು “ಸಂಸ್ಕೃತಿಗಿಂತ ಸತ್ಯ ಶ್ರೇಷ್ಠ, ಸತ್ಯಕ್ಕಿಂತ ಆಚರಣೆ ಶ್ರೇಷ್ಠ’ ಎಂದು. ಶರಣ ಧರ್ಮದಲ್ಲಿ ದೊಡ್ಡ ದೊಡ್ಡ ತತ್ವಗಳಾಗಲೀ, ಸಿದ್ಧಾಂತಗಳಾಗಲೀ ಇಲ್ಲ.
ಬದುಕಿನ ಅನುಭವಗಳನ್ನು ಹಿಡಿದಿಟ್ಟಿರುವ ವಚನಗಳಿವೆ. ಮೇಲ್ನೋಟಕ್ಕೆ ಈ ವಚನಗಳ ನಿಲುವನ್ನು ಆಚರಿಸಲು ಬಹಳ ಸುಲಭವೆನಿಸುವಂಥ ವಿಚಾರಗಳಿವೆ. ಹಾಗೆಂದು ಶರಣ ಧರ್ಮ ಪಾಲನೆ ಸುಲಭದ್ದಲ್ಲ. ಅದು ಸುಲಭದ ನುಡಿ, ಕಠಿನದ ನಡೆ. ಬಸವಾದಿ ಶಿವಶರಣರೆಲ್ಲರ ವಚನಗಳ ಸಾರವನ್ನು ಪಾಲಿಸುವಾಗ ಆಚರಿಸುವಾಗ ಏನೆಲ್ಲವನ್ನು ಅನುಸರಿಸಬೇಕೆಂಬ ಒಟ್ಟು ಆಚಾರವೇ ಪಂಚಾಚಾರವಾಗಿವೆ. ಅವುಗಳೇ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರಗಳೆಂಬ ಐದು ಆಚಾರಗಳು. ಇವುಗಳ ಚೌಕಟ್ಟಿನಲ್ಲಿ ಬಸವಾದಿ ಶರಣರ ತತ್ವವನ್ನು ಹೇಗೆ ಪಾಲಿಸಬೇಕೆಂಬುದನ್ನು ಅರಿತುಕೊಳ್ಳಲಾಗುತ್ತದೆ.
ಲಿಂಗಾಚಾರವೆಂಬಲ್ಲಿ ಅಂಗವಂತ ವ್ಯಕ್ತಿ ತಾನೇ ಲಿಂಗವಾಗಿ ಆಚರಿಸುವ ವಿಧಾನಗಳ ಕುರಿತಾಗಿದೆ. ಕೇವಲ ಇಷ್ಟಲಿಂಗವನ್ನಿಡಿದು ಲಿಂಗಾರ್ಚನೆ ಮಾಡುವುದಷ್ಟೇ ಅಲ್ಲ, ಇಷ್ಟಲಿಂಗದ ಮೂಲಕ ನಮ್ಮೊಳ ಗಿರುವಾತನ ಕುರಿತು, ಆತನಿರುವಿಕೆಯ ಕುರಿತು ಅರಿವನ್ನು ಜಾಗೃತ ಮಾಡಿಕೊಂಡ ನಂತರ ಅಕ್ಷರಶಃ ಆತ ಲಿಂಗವಂತನಾಗುತ್ತಾನೆ. ಲಿಂಗತತ್ವವನ್ನು ಆಯತ ಮಾಡಿಕೊಂಡ ನಂತರ ಲಿಂಗಾಯತ ನಾಗುತ್ತಾನೆ. ಈತನೇ ತತ್ವತಃ ಲಿಂಗಾಯತ. ಆ ಪರಶಿವನ ಒಂದಂಶ ಜೀವಾತ್ಮವಾಗಿ ಅಂಗದಲ್ಲಿರುವ ಕಾರಣವೇ ಪ್ರತಿಯೊಬ್ಬರು ದೇವಸ್ವರೂಪಿಗಳೇ ಆಗಿರುತ್ತಾರೆ. ಆದರೆ ಆ ಒಳಗಿರುವಾತನನ್ನು ತಾನೇ ಸ್ವತಃ ಅರಿತುಕೊಂಡಿರಬೇಕಷ್ಟೇ. ಈ ಅರಿವು ಯಾವಾಗ ಕಣ್ತೆರೆಸು ತ್ತದೆಯೋ ಆವಾಗ ಪ್ರತಿಯೊಬ್ಬರಲ್ಲಿ ದೇವನನ್ನು ಕಾಣುವ ಗುಣ ಜಾಗೃತವಾಗುತ್ತದೆ. ಹೀಗೆ ಅಂಗ ಗುಣವಳಿದು ಲಿಂಗಗುಣ ಸಂಪನ್ನರಾದವರೆಲ್ಲರಲ್ಲಿ ಇವನಾರವ, ಇವನಾರವ? ಎಂಬ ಬೇಧ ಭಾವವಿರಲೇಬಾರದು. ಜಾತೀಯತೆ ಇರಬಾರದು. ಧರ್ಮಗ ಳೆಲ್ಲೆಯನ್ನು ಮೀರಿದ ಮಾನವೀಯತೆ ನೆಲೆಯಾಗಿರಬೇಕು. ದಯೆಯೇ ಧರ್ಮವೆಂದರಿತಿರಬೇಕು. ಸಕಲ ಜೀವಿಗಳಿಗೆ ಲೇಸನೇ ಬಯಸುವ ಲಿಂಗಗುಣವುಳ್ಳವರಾಗಿರಬೇಕು.
ಸದಾಚಾರ ಮತ್ತು ಶಿವಾಚಾರ ತತ್ವದಲ್ಲಿ ಬಸವಾದಿ ಶರಣರು ರೂಪಿಸಿದ ಸದುವಿನಯ, ಸುವಿಚಾರ, ಸಕಲ ಜೀವಿಗಳ ಲೇಸನು ಬಯಸುವ, ಸಪ್ತ ವ್ಯಸನಗಳನ್ನು ಸುಟ್ಟು ಅದರ ಬೂದಿಯನ್ನು ಅನುಭೂತಿಯನ್ನಾಗಿಸಿಕೊಂಡು ಬಹಿರಂಗದೊಂದಿಗೆ ಅಂತರಂಗದಲ್ಲೂ ಸರಳತೆಯ ಆಚಾರವನ್ನು ಅನುಸರಿಸುವುದೇ ಸದಾಚಾರ. ಒಳ್ಳೆಯ ಆಚಾರವಿಲ್ಲದಿದ್ದರೆ ಅದು ಕೇವಲ ತೋರಿಕೆಯ ಭಕ್ತಿಯಾಗುತ್ತದೆ. ಹಣೆಯ ಮೇಲೆ ವಿಭೂತಿ ಇದ್ದು ನಡೆಯಲ್ಲಿ ಅನುಭೂತಿ ಇಲ್ಲದಿದ್ದರೆ, ಕೊರಳಲ್ಲಿ ಲಿಂಗವಿದ್ದು, ನಡೆಯಲ್ಲಿ ಲಿಂಗ ಗುಣಗಳಿಲ್ಲದಿದ್ದರೆ ಅದೆಂಥ ಸದಾಚಾರ?
ವಿಚಾರ ಆಚಾರ ಗಳೊಂದಾದ, ನುಡಿ ನಡೆಗಳೊಂದಾದವರ ಇಂಥ ಸದಾಚಾರದಿಂದಲೇ ತಾನೇ, ಶಿವನಾಗಿ ಪ್ರತಿಯೊಬ್ಬರಲ್ಲಿ ಶಿವನನ್ನು ಕಾಣುವಂಥ ನಡೆಯನ್ನನುಸರಿಸಿದಾಗ ಸದಾಚಾರದ ಆಚಾರ ವಾಗುತ್ತದೆ. ಶರಣರ ನಿಲುವಿನಲ್ಲಿ ತಾನೊಬ್ಬನೇ ಲಿಂಗವಂತನಾಗಿ ತನ್ನಷ್ಟಕ್ಕೆ ತಾನಿದ್ದುಬಿಡುವುದನ್ನು ಶರಣರೂ ಎಂದಿಗೂ ಇಷ್ಟಪಡುವುದಿಲ್ಲ.
ಒಪ್ಪುವುದಿಲ್ಲ. ಮತ್ತೂಬ್ಬರಿಗೆ ದಾಸೋಹಿಸುವುದರ ಮೂಲಕ ಅವರೊಳಗನ್ನೂ ಜಾಗೃತಗೊಳಿಸಲು ಪ್ರಯತ್ನಿಸುವುದು ಜಂಗ ಮಾಚಾರ. ತಾನರಿತ ಶಿವನನ್ನು ತಾನೇ ಶಿವನಾಗಿ ಉಳಿದ ಶಿವ ಸ್ವರೂಪಿಗಳನ್ನು ತನ್ನ ಸದಾಚಾರದ ನಡೆಯಿಂದ ಜಂಗಮಗೊಳಿಸುತ್ತ ತಾನೂ ಜಂಗಮವಾಗುತ್ತಲಿರುವುದೇ ಶಿವಾಚಾರ. ಸದಾಚಾರದಿಂದ ಶಿವ ತತ್ವವನ್ನು ಅಕ್ಷರಶಃ ಪಾಲಿಸುವುದೇ ಶಿವಾಚಾರ. ಪ್ರತಿಯೊಬ್ಬರೂ ಶಿವ ಸ್ವರೂಪಿಯಾಗಿರುವುದರಿಂದ ಆ ಪರಶಿವ ಮಾಡಬೇಕಾದದ್ದನ್ನು ಆತನ ಪ್ರತಿನಿಧಿಯಾಗಿ ತಾನೊಬ್ಬ ಶಿವನಾಗಿ ಪಾಲಿಸಿದಾಗ ಶಿವಾಚಾರವಾಗುತ್ತದೆ. ಅಲ್ಲಿ ಇವನಾರವ ಎನ್ನುವ ಭಾವವಳಿದು ಸದಾಚಾರದಿಂದ ಪ್ರತಿಯೊಬ್ಬರನ್ನು ಇವ ನಮ್ಮವ ಎಂದು ಅಪ್ಪಿಕೊಂಡು, ಒಪ್ಪಿಕೊಳ್ಳುವ ಮೂಲಕ ಶಿವಾಚಾರವನ್ನು ಪಾಲಿಸುವಂಥ ಧರ್ಮ ದಾಚರಣೆ ಆಗುತ್ತದೆ .
ಇನ್ನು ಗಣಾಚಾರ ಮತ್ತು ಭೃತ್ಯಾಚಾರಗಳು ಸಮಾಜಮುಖೀ ಯಾಗಿರುವಂಥವು. ಪ್ರಾಯೋಗಿಕತೆಯತ್ತ ಲಿಂಗವಂತ ಗುಣ ಗಳೊಂದಿಗೆ ಸಾಗುತ್ತಿರುವಾಗ ಅಡ್ಡಿ ಆತಂಕಗಳು, ಸವಾಲುಗಳು ಎದುರಾಗಬಹುದು. ಆಗ ನಮ್ಮ ಲಿಂಗ ಗುಣಗಳಿಗೆ ವಿಮುಖವಾಗದೇ ನಮ್ಮ ತತ್ವಗಳೇ ನಮ್ಮ ಬದ್ಧತೆಗಳೆಂದು, ನಮ್ಮ ನಿಲುವುಗಳೇ ನಮ್ಮ ಆಚಾರಗಳೆಂಬ ಧೋರಣೆಯಲ್ಲಿ ಅಂಥ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಸ್ವೀಕರಿಸಿ ನಾವು ನಂಬಿಕೊಂಡಿರುವುದು ಹೇಗೆ ನಿಜವೆಂದು ಬಿಂಬಿಸಬೇಕು. ನನ್ನ ಆಚಾರ ಹೇಗೆ ಒಳ್ಳೆಯದೆಂದು ಪ್ರತಿಪಾದಿಸಬೇಕು. ನನ್ನ ದೇವನು ನನ್ನೊಳಗಿದ್ದಾನೆಂಬುದೇ ದಿಟ ಎಂದು ಸಾಬೀತುಪಡಿಸಬೇಕು. ನಾನೊಬ್ಬ ಲಿಂಗವಂತನಾಗಿ ಲಿಂಗತತ್ವಕ್ಕೆ ಬದ್ಧನಾಗಿ ನಡೆದುಕೊಂಡಾಗ ಯಾರಿಗೂ ಹೆದರುವ ಅಗತ್ಯವಿಲ್ಲ. ಸಾತ್ವಿಕ ಪ್ರತಿಭಟನೆಯ ಮೂಲಕ ಸಹನೆ ನಮ್ಮ ದೌರ್ಬಲ್ಯವಲ್ಲವೆಂದು ಸಾಬೀತುಪಡಿಸಬೇಕು. ಇದು ಗಣಾಚಾರವಾಗುತ್ತದೆ.
ಅನವಶ್ಯಕವಾಗಿ ವಾದ ಮಾಡುವವರಿಗೆ ತಿಳಿದೂ ತಿಳಿಯದವರಂತೆ ವರ್ತಿಸುವವರ ಮುಂದೆ “ಶರಣು ಶರಣಾರ್ಥಿ’ ಎಂದು ನಮ್ಮ ಆಚಾರಗಳನ್ನು ತಿಳಿಹೇಳಿ ಅವರ ವಿಚಾರಗಳ ಒಳಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳದೇ ನಮ್ಮ ನಿಲುವಿಗೆ ಬದ್ಧರಾಗಿ ನಮ್ಮದೇ ಶರಣ ಪಥದತ್ತ ಸಾಗಿಬಿಡಬೇಕು. ಆಗ ನಮ್ಮ ಬಸವಪಥ ಅವರಿಗೆ ಅರ್ಥವಾಗುತ್ತಾ ಹೋಗುತ್ತದೆ. ಗಣಾಚಾರದಲ್ಲಿ ಶರಣ ತತ್ವವನ್ನು ಪ್ರತಿಪಾದಿಸುವಾಗ ಕೆಲವೊಮ್ಮೆ ಕಠೊರತೆಯನ್ನು ಅನುಸರಿಸಬೇಕಾಗುತ್ತದೆ. ಆ ಕಠೊರತೆ ಯಿಂದ ಅವರು ಅರಿತುಕೊಳ್ಳದಿದ್ದರೆ ಬಸವಣ್ಣ ನಮಗೆ ಕಲಿಸಿದಂತೆ ವಿಧೇಯತೆಯಿಂದಲೂ ನಮ್ಮ ವಿಚಾರಗಳೆಂಬ ಆಚಾರಗಳನ್ನು ತಿಳಿಹೇಳುವ ಮೂಲಕ ಕೇವಲ ಅಂಗ ಗುಣವುಳ್ಳವರಲ್ಲಿ ಲಿಂಗ ಗುಣಗಳನ್ನು ಬಿತ್ತಬಹುದು. ಅಂಥವರ ಎದೆಯಲ್ಲಿ ವಿಧೇಯತೆಯಿಂದ ಬಿತ್ತಿದ ಬಸವ ಬೀಜಗಳೆಂದೂ ನಿಷ್ಪ್ರಯೋಜಕವಾಗದೇ ಸತ್ಪಾತ್ರಕ್ಕೆ ಸಲ್ಲಿಕೆಯಾಗುತ್ತವೆ. ವಿಧೇಯತೆಯೇ ಭೃತ್ಯಾಚಾರದ ಅಸ್ತ್ರವಾಗಿದೆ. ಸಹನೆ, ವಿಧೇಯತೆಗಳಿಂದ ಬಿಂಬಿಸಿ ಪ್ರತಿಪಾದಿಸಿದ ನಮ್ಮ ಆಚಾರಗಳು ಮತ್ತೂಬ್ಬರಿಗೆ ಬಸವಪಥದ ವಿಚಾರಗಳಾಗಿ ಅವರಿಗೆ ಮುಂದೊಂದು ದಿನ ಅವುಗಳೇ ಆಚಾರವಾಗಲೂಬಹುದು. ಇದುವೇ ಐದನೇಯ ಮತ್ತು ಕೊನೆಯ ಆಚಾರ ಭೃತ್ಯಾಚಾರ.
ಹೀಗೆ, ಈ ಪಂಚಾಚಾರಗಳು ಕೇವಲ ಲಿಂಗಾಯತರ ಧಾರ್ಮಿಕ ಪದ್ಧತಿಗಳಲ್ಲ. ಲಿಂಗವಂತರ ವೈಚಾರಿಕ ಬದುಕಿನ ಕ್ರಮವಾಗಿವೆ. ಇವು ಕೇವಲ ಒಂದು ಧರ್ಮದ ಹಿನ್ನೆಲೆಯಲ್ಲಿ ಆಚರಿಸಬಹುದಾದ ವಿಚಾರಗಳಲ್ಲ. ಅವು ನಮ್ಮ ದೈನಂದಿನ ನಡೆಯಲ್ಲಿ ಅನುಸರಿಸ ಬಹುದಾದ ಆಚಾರ ಸಂಹಿತೆಗಳು.
– ವೆಂಕಟೇಶ ಕೆ. ಜನಾದ್ರಿ, ಕನಕಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.