ಸುಖ ಜೀವನಕ್ಕೆ ಸಪ್ತ ಸದ್ಗುಣಗಳು
Team Udayavani, Jul 21, 2019, 5:00 AM IST
ಮಾನವನ ಜೀವನದ ಶ್ರೇಯಸ್ಸು ಅನೇಕ ಒಳ್ಳೆಯ ಗುಣಗಳನ್ನು ಅವಲಂಬಿಸಿದೆ. ಸಮಗ್ರ ಸದ್ಗುಣಗಳ ಆಧಾರದ ಮೇಲೆ ಮನುಷ್ಯನ ವ್ಯಕ್ತಿತ್ವದ ಎತ್ತರವನ್ನು ಅಳೆಯಬಹುದು. ಬಾಳಿನಲ್ಲಿ ಉದಯಿಸುವ ಸಂಘರ್ಷಗಳ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಅರ್ಹತೆಯನ್ನು, ಸಾಮರ್ಥ್ಯವನ್ನು ಸದ್ಗುಣಗಳು ದಯಪಾಲಿಸುತ್ತವೆ. ‘ಗುಣ ನೋಡಿ ಹೆಣ್ಣು ಕೊಡು’, ‘ಗುಣವರಿತು ಗೆಳೆತನ ಮಾಡು’, ‘ಗುಣಹೀನನ ಸಿರಿಗಿಂತ ಗುಣವಂತನ ಬಡತನವೇ ಲೇಸು’ ಎಂಬ ಗಾದೆಗಳು ಎಲ್ಲ ಕಾಲದಲ್ಲೂ ರಾರಾಜಿಸುವ ಸಂಸ್ಕೃತಿ ಪರಾಗಗಳು. ಪ್ರತಿಯೊಂದು ಸರಕಿಗೂ ಅದರದ್ದೇ ಆದ ಬೆಲೆ ಇರುವಂತೆ, ಪ್ರತಿಯೊಬ್ಬ ವ್ಯಕ್ತಿಗೂ ಬೆಲೆ ಸಿಗುವುದು ಅವನಲ್ಲಿರುವ ಸದ್ಗುಣಗಳ ಸಂಕುಲದಿಂದ.
ಲೋಕರೂಢಿಯಲ್ಲಿ ಪ್ರಮುಖವಾಗಿ ಸಪ್ತಸದ್ಗುಣಗಳಿಗೆ ಮನ್ನಣೆ ಇದೆ. ಪ್ರತಿಯೊಂದು ಜೀವಿಯೂ ಈ ಸಪ್ತ ಸದ್ಗುಣಗಳ ಸಹಕಾರದಿಂದ ಆದರ್ಶ ಜೀವಿಯಾಗುವುದು ಸುಲಭ ಸಾಧ್ಯ. ನಮ್ಮನ್ನು ಉದ್ದೀಪನ ಗೊಳಿಸಿ ಉನ್ನತಿಗೆ ಕೊಂಡೊಯ್ಯುವ ಉದಾತ್ತ ವಿಚಾರಗಳಿಂದ ಆವೃತವಾದ ಸಪ್ತಸದ್ಗುಣಗಳ ಮೂಲ ಸ್ವರೂಪವನ್ನು ಅರ್ಥಮಾಡಿಕೊಂಡು ಅವನ್ನೆಲ್ಲ ನಮ್ಮ ಸ್ವಾಧೀನದಲ್ಲಿರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದರಲ್ಲಿ ಹಿತವಿದೆ. ಅಂತಹ ಸಪ್ತ ಸದ್ಗುಣಗಳು ಯಾವುವೆಂದರೆ:
ಆತ್ಮ ವಿಶ್ವಾಸ: ಬದುಕಿನ ವಿವಿಧ ಹಂತಗಳಲ್ಲಿ ಮನುಷ್ಯನಿಗೆ ಸವಾಲಾಗಿ ನಿಲ್ಲುವ ಸಂಗತಿ ಎಂದರೆ ಅವನಲ್ಲಿರುವ ಧೈರ್ಯದ ಮಟ್ಟ. ಬಾಳಿನ ಹಲವು ಪ್ರಸಂಗಗಳು ಅವನನ್ನು ಧೈರ್ಯಗೆಡುವಂತೆ ಮಾಡುತ್ತವೆ. ಅಂತಹ ಸಂದರ್ಭ ಸನ್ನಿವೇಶಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿ ತಾನು ವಿಶ್ವಾಸ ತಾಳಿದರೆ ಧೈರ್ಯದ ಮೂಲ ರೂಪದ ಅರಿವು ಮೂಡುತ್ತದೆ. ಆತ್ಮವಿಶ್ವಾಸ ಮಾನವನಿಗೆ ನೀಡುವ ಬಲ ಅಪಾರ, ಅನಂತ. ಅಂಜಿಕೆಯನ್ನು ಅಳಿಸಲು ಇರುವ ಪರಿಣಾಮಕಾರಿ ಪರಿಹಾರ ಎಂದರೆ ಆತ್ಮವಿಶ್ವಾಸ ಅಥವಾ ಧೀರತನ. ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಜೀವನದಲ್ಲಿ ಪ್ರತಿಯೊಂದು ಕಾರ್ಯದಲ್ಲೂ ನಿರೀಕ್ಷಿತ ಫಲಗಳನ್ನು ಪಡೆಯಬಹುದು. ನವ ಜಗತ್ತನ್ನು ಶೋಧಿಸುವ ಮಾರ್ಗ ಕೋಲಂಬಸ್‌ಗೆ ತಿಳಿಯದೇ ಇದ್ದರೂ ಹೊಸ ಸ್ಥಳವನ್ನು ಕಂಡು ಹಿಡಿಯುತ್ತೇನೆಂಬ ಆತ್ಮವಿಶ್ವಾಸ ಇತಿಹಾಸವನ್ನು ಸೃಷ್ಟಿಸಿತಲ್ಲವೇ?
ಸೈರಣೆ: ಬಾಳಿನ ಪಯಣದಲ್ಲಿ ಸಿಗುವ ಏರಿಳಿತಗಳನ್ನು ಎದುರಿಸಲು ನಮ್ಮಲ್ಲಿನ ಸೈರಣೆಯ ಬಲ ತುಂಬಾ ಉಪಕಾರಿ. ಉರಿ ಬರಲಿ, ಸಿರಿ ಬರಲಿ, ಸೈರಣೆಯಿಂದ, ಸಹನೆಯಿಂದ, ತಾಳ್ಮೆಯಿಂದ ಮುನ್ನಡೆ ಯುವುದು ಜ್ಞಾನಿಗಳ ಲಕ್ಷಣ. ತಾಳಿದವನು ಬಾಳಿಯಾನು ಎಂಬ ಗಾದೆ ಇಂದಿಗೂ ಪ್ರಸ್ತುತವಾಗಿದೆ. ತಾಳ್ಮೆ ಉಳಿಸಿಕೊಂಡ ವ್ಯಕ್ತಿಯು ಸುಂದರ ಜೀವನವನ್ನು ಸಾಗಿಸಬಹುದು.
ವಾಸ್ತವಿಕ ಸತ್ಯದ ಸ್ವರೂಪ ಎಷ್ಟೇ ಕಹಿಯಾಗಿರಲಿ ಅದನ್ನು ಸಹನಾ ಮನೋಭಾವದಿಂದ ಆತ್ಮಸ್ಥೈರ್ಯದಿಂದ ಸ್ವಾಗತಿಸಲು ಹಿಂಜರಿ ಯಬಾರದು. ಒಂದೆಡೆ ಮನುಸ್ಮತಿಯ ಪ್ರಕಾರ ತಾಳ್ಮೆ ಎಂಬುದು ಸಧರ್ಮದ ಹತ್ತು ಸ್ವರೂಪಗಳಲ್ಲಿ ಒಂದಾದರೆ, ಯಾಜ್ಞವಲ್ಕನು ತಾಳ್ಮೆ ಎಂಬುದು ಸರ್ವರಿಗೂ ಲಭ್ಯವಿರುವ ಧರ್ಮಸಾಧನ ಎಂದು ಸಾರಿದ್ದಾನೆ.
ಮನೋನಿಗ್ರಹ: ನೋಡಿದ್ದನ್ನೆಲ್ಲ ತನ್ನದಾಗಿಸಿಕೊಳ್ಳುವ ಮನಸ್ಸಿನ ವರ್ತನೆ ವಿಸ್ಮಯಕಾರಿ. ಮನವೆಂಬ ಮರ್ಕಟವ ತಾಳಲಾರೆನು ದೇವ, ಎನಿತಿದಿರ ಚಪಲ ಚೇಷ್ಟೆಗಳನೊರ್ಣಿಸಲಿ ಎಂದು ನೊಂದು ನುಡಿದರು ದಾಸ ಶ್ರೇಷ್ಠ ಪುರಂದರದಾಸರು. ಹಾನಿಕಾರಕ ವಿಷಯ ಗಳ ಇಷ್ಟಪಡದಿರು ಎಂದು ಬುದ್ಧಿ ಹೇಳಿದರೂ ಮನಸ್ಸು ಸಮ್ಮತಿ ಸುವುದಿಲ್ಲ. ರಚ್ಚೆ ಹಿಡಿದು ಅಳುವ ಹಠಮಾರಿ ಮಗುವಿನಂತೆ ವರ್ತಿಸುವ ಮನವನ್ನು ನಿಯಂತ್ರಿಸುವುದು ಹಗುರ ಕೆಲಸವಲ್ಲ.
ವಿವಿಧ ಮೂಲಗಳಿಂದ ಪಡೆದುಕೊಂಡ ಸರಿಯಾದ ಜ್ಞಾನ, ಸತ್ಸಂಗ, ಶುದ್ಧ ಜೀವನ ಶೈಲಿಗಳು ಮನಸ್ಸನ್ನು ಹತೋಟಿಯಲ್ಲಿ ಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಮನಸ್ಸಿನ ಪಟಲದಲ್ಲಿ ಬುಗ್ಗೆ ಬುಗ್ಗೆಯಾಗಿ ಉದ್ಭವಿಸುವ ಆಲೋಚನೆಗಳ ಯುಕ್ತಾಯುಕ್ತತೆಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಯಾವುದು ಹಿತಕರ, ಯಾವುದು ಅಹಿತಕರ ಎಂಬುದನ್ನು ಅರಿತುಕೊಂಡು ಪ್ರಾಯೋಗಿಕ ನಿರ್ಧಾರ ತೆಗೆದುಕೊಳ್ಳಬೇಕು. ಇದು ಜೀವನಕ್ಕೊಂದು ಮುದ-ಹದ ನೀಡುತ್ತದೆ. ಮನಸ್ಸನ್ನು ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಕವಚಗಳಿಂದ ಆವೃತ ಮಾಡಿದರೆ ಮನೋನಿಗ್ರಹ ಸುಲಭ.
ಶುಭ್ರತೆ: ಶರೀರ ಹಾಗೂ ಮನಸ್ಸುಗಳ ಶುದ್ಧಿಯೇ ಶುಭ್ರತೆ. ಮಲಿನತೆ ಇದ್ದಲ್ಲಿ ದೇವತೆಗಳು ವಾಸಿಸುವುದಿಲ್ಲ. ದೇವತ್ವದ ನಂತರದ ಸ್ಥಾನ ಪರಿಶುದ್ಧತೆಯದು ಎಂಬುದು ಪ್ರಸಿದ್ಧ ಸತ್ಯನುಡಿ.
ಮನಸ್ಸಿನ ನಿರ್ಮಲತೆಯೇ ಪುಣ್ಯ. ಮನಸ್ಸಿನಲ್ಲಿ ಪರಿಪೂರ್ಣವಾದ ಶುಭ್ರತೆ ಸ್ಥಾಪಿತವಾದರೆ ಸದಾ ಒಳಿತನ್ನು ಕಾಣಬಹುದು ಹಾಗೂ ಸರಿಯಾದ ಮಾರ್ಗದಲ್ಲಿ ಸಾಗಬಹುದು. ಶುಚಿತ್ವ ಎನ್ನುವುದು ಬಹಿರಂಗ ಕ್ರಿಯೆಯೂ ಹೌದು; ಅಂತರಂಗ ನಿಷ್ಟೆಯೂ ಹೌದು. ಇಂತಹ ಶುಚಿತ್ವ ತಾಮಸ ಸ್ವಾರ್ಥವನ್ನು, ರಜೋಸ್ವಾರ್ಥವನ್ನು ಹಾಗೂ ಸಾತ್ವಿಕ ಸ್ವಾರ್ಥವನ್ನು ಗೆದ್ದು ಗುಣಾತೀತ ಸ್ಥಿತಿಗೆ ನಮ್ಮನ್ನ ಕರೆದೊಯ್ಯುತ್ತದೆ. ಇಂದ್ರಿಯಗಳನ್ನು ದೃಢತಾಪೂರ್ವಕವಾಗಿ ವಿಷಯಗಳಿಂದ ದೂರವಿರಲು ಇದು ಉತ್ತೇಜನ ನೀಡುತ್ತದೆ.
ಅನುಕಂಪ: ಕರುಣೆ-ಅನುಕಂಪವೆಂಬುದು ಅತ್ಯುತ್ತಮ ಮಾನ ವೀಯ ಮೌಲ್ಯ. ಇನ್ನೊಬ್ಬರ ಕಷ್ಟ, ದುಃಖ ಅರ್ಥ ಮಾಡಿ ಕೊಂಡು ಅವರನ್ನು ಸಂತೈಸಲು, ಸಹಾಯಹಸ್ತ ನೀಡುವ ಸ್ಪಂದನ, ಅನುಕಂಪ. ಅನುಕಂಪ ಎಂಬುದು ಚಮತ್ಕಾರೀ ಪರಿವರ್ತನೆಯನ್ನು ತರಬಲ್ಲ ದಿವ್ಯಮಂತ್ರ. ಮಾನವನನ್ನು ದೇವಮಾನವನನ್ನಾಗಿಸುವ ಅಸಮಬಲ ಈ ಕರುಣೆಯೆಂಬ ದೈವೀಗುಣಕ್ಕಿದೆ. ಅಂತರಂಗದಲ್ಲಿ ಕರುಣೆಯ ಒತ್ತಡ ನೆಲೆಯಿದ್ದರೆ ಜೀವನದಲ್ಲಿ ವೈರಿಗಳ ಸಂಖ್ಯೆ ಕಡಿಮೆಯಾಗಿ ಬದುಕು ಬಂಧುರವಾಗುತ್ತದೆ.
ಮೃದುಮಾತು: ಲೋಕದ ಅನೇಕ ಜನರ ಹೃದಯ ಸಿಂಹಾಸನದಲ್ಲಿ ಪ್ರತಿಷ್ಠಿತರಾಗಲು ಮೃದು ವಚನಗಳು ಸರಳ ದಾರಿಯನ್ನು ತೋರಿಸುತ್ತವೆ. ಬಂಧು-ಬಾಂಧವರು, ಸ್ವಾಮಿ-ಸೇವಕ, ಹಿರಿಯ- ಕಿರಿಯ, ಗುರು-ಶಿಷ್ಯ, ಪತಿ-ಪತ್ನಿ, ಕೊಟ್ಟವ-ಕೊಂಡವ, ಮುಖಂಡ- ಹಿಂಬಾಲಕ ಎಲ್ಲರೂ ಮೃದು ಮಾತುಗಳನ್ನು ವಿನಿಮಯ ಮಾಡಿ ಕೊಂಡರೆ ಸುವರ್ಣಯುಗವನ್ನೇ ಸೃಷ್ಟಿಸಬಹುದು. ಮೃದುನಾಲಿಗೆಯ ಮೃದುವಾಗಿಯೇ ಬಳಸುವುದು ಸರ್ವರಿಗೂ ಹಿತಕರ.
ನಿತ್ಯ ಜೀವನದ ವ್ಯಾವಹಾರಿಕ ಸಮಸ್ಯೆಗಳನ್ನು, ಭಿನ್ನಾಭಿ ಪ್ರಾಯಗಳನ್ನು ಮೃದುನುಡಿಗಳಿಂದ ನಿರಾತಂಕವಾಗಿ ಬಗೆಹರಿಸಬಹುದು. ಮೃದು ಮಾತನಾಡುವುದು ಬುದ್ಧ ಬೋಧಿಸಿದ ಸದಾಚಾರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.
ಅಹಿಂಸೆ: ನಿತ್ಯನೂತನ, ನಿರಂತರ ಸಮಾಧಾನ ಸಂತೃಪ್ತಿಗಳನ್ನು ನಮ್ಮದಾಗಿಸಿಕೊಳ್ಳಲು ಅಹಿಂಸಾ ವೃತಪಾಲನೆ ಅತ್ಯಗತ್ಯ. ಪ್ರತಿಯೊಂದು ಧರ್ಮವೂ ಅಹಿಂಸಾ ಸಿದ್ಧಾಂತವನ್ನು ಸಾರುತ್ತದೆ. ಅಹಿಂಸಾ, ಪರಮೋ ಧರ್ಮ ಎಂಬುದು ಜೈನಧರ್ಮದ ಧ್ಯೇಯವಾಕ್ಯ. ಅಹಿಂಸಾ ತತ್ವವನ್ನೇ ಶಾಸ್ತ್ರವನ್ನಾಗಿಸಿ ಭಾರತದಲ್ಲಿ ಬ್ರಿಟಿಷರ ದಬ್ಟಾಳಿಕೆಗೆ ಮಂಗಳ ಹಾಡಿದರು ಗಾಂಧೀಜಿ.
ಅನ್ಯರ ಬಗ್ಗೆ ಅಸೂಯೆ ವ್ಯಕ್ತಪಡಿಸುವುದು, ಅನ್ಯರನ್ನು ನಿಂದಿಸುವುದು, ಕೋಪಿಸಿಕೊಳ್ಳುವುದು, ಸುಳ್ಳು ನುಡಿಗಳನ್ನಾಡುವುದು, ಅಹಿಂಸಾ ಮನೋಭಾವಕ್ಕೆ ಧಕ್ಕೆ ತರುವ ಸಂಗತಿಗಳು. ಇಂತಹ ಗುಣಗಳಿರುವ ಜೀವಿಗಳಿಂದ ದೂರವಿರುವುದೇ ಆರೋಗ್ಯಕರ. ಆದ್ದರಿಂದ ಆದರ್ಶಪ್ರಾಯವಾದ ಎಲ್ಲ ರೀತಿಯ ಸ್ವಾರ್ಥದಿಂದ ಮುಕ್ತನಾದ ಅಹಿಂಸಾ ಶಕ್ತಿಯಿಂದ ನಮ್ಮ ಮನೋಬಲವನ್ನು ವೃದ್ಧಿಸಿಕೊಳ್ಳುವುದು ಉತ್ತಮ. ಕಟಕನಾದ ಅಂಗುಲಿಮಾಲನನ್ನು ಬುದ್ಧ ಗೆದ್ದದ್ದು ಖಡ್ಗದಿಂದಲ್ಲ, ಅಹಿಂಸೆಯಿಂದ ಎಂಬ ಸತ್ಯದಿಂದ ಎಂಬುದನ್ನು ನಾವೆಲ್ಲ ನೆನಪಿನಲ್ಲಿ ಇರಿಸಿಕೊಳ್ಳಬೇಕು.
-ಶಿವಾನಂದ ಪಂಡಿತ್, ಗೋವಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.