ಕೋವಿಡ್ 19 ಅವಧಿಯಲ್ಲಿ ರಕ್ಷಾ ಬಂಧನವೆಂಬ ಮಮತೆಯ ಹಬ್ಬ
ಚಿಂತನೆ
Team Udayavani, Aug 3, 2020, 6:55 AM IST
ಕೋವಿಡ್ 19 ಮಹಾಮಾರಿಯಿಂದ ಜಗತ್ತಿನ ಎಲ್ಲ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತದಲ್ಲಿಯೂ ಈ ವೈರಸ್‌ನ ಹಾವಳಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ.
ಕೋವಿಡ್ 19 ಪರಿಣಾಮವು ನಮ್ಮ ನಿತ್ಯ ಜೀವನದ ಚಟುವಟಿಕೆಗಳ ಮೇಲೂ ಸಾಕಷ್ಟು ಪರಿಣಾಮ ಬೀರಿ, ನಮ್ಮ ಜೀವನ ಶೈಲಿಯನ್ನೇ ಬದಲಾವಣೆ ಮಾಡುತ್ತಿದೆ.
ಈ ಎಲ್ಲದರ ಜೊತೆಗೆ ನಮ್ಮ ಹಬ್ಬ-ಆಚರಣೆಗಳ ಶೈಲಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ವೈವಿಧ್ಯಮಯ ಆಚರಣೆಗಳಲ್ಲಿ ರಕ್ಷಾ ಬಂಧನವೂ ತುಂಬಾ ಪ್ರಾಮುಖ್ಯತೆ ಪಡೆದ ಹಬ್ಬವಾಗಿದೆ.
ಅಣ್ಣ ಸದಾಕಾಲ ನನ್ನನ್ನು ರಕ್ಷಿಸಲಿ ಎಂಬ ಮಹದಾಸೆಯೊಂದಿಗೆ ಸಹೋದರಿಯು, ಸಹೋದರನ ಕೈಗೆ ರಾಖಿ ಕಟ್ಟುವುದೇ ರಕ್ಷಾ ಬಂಧನವೆನಿಸಿಕೊಳ್ಳುತ್ತದೆ. ಇಂತಹ ಪವಿತ್ರವಾದ ಹಬ್ಬವನ್ನು ಈ ವರ್ಷ ಕೋವಿಡ್ 19 ನಡುವೆಯೇ ಆಚರಿಸಬೇಕಾಗಿರುವುದರಿಂದ ರಾಖೀ ಕಟ್ಟುವ ಸಹೋದರಿಯು ರಾಖಿಯೊಂದಿಗೆ ಅಣ್ಣನಿಗೆ ಮಾಸ್ಕ್ ಹಾಗೂ ಸಿಹಿ ತಿಂಡಿಗಳೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೇಯ, ಖಾದ್ಯ ಕೊಡುವಂತಾಗಲಿ.
ಇದಕ್ಕೆ ಪ್ರತಿಯಾಗಿ ಸಹೋದರನು ಉಡುಗೊರೆಯ ರೂಪದಲ್ಲಿ ಅಕ್ಕ ತಂಗಿಯರಿಗೆ ವರ್ಷದುದ್ದಕ್ಕೂ ಸಾಕಾಗುವಷ್ಟು ಮಾಸ್ಕ್ ಗಳನ್ನು ಹಾಗೂ ಸ್ಯಾನಿಟೈಜರ್‌ಗಳನ್ನು ಕೊಡುವಂತಾಗಲಿ. ಒಟ್ಟಲ್ಲಿ, ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಬಹಳ ಜಾಗೃತಿ ವಹಿಸಿ ಕೊರೊನಾ ಸಾಂಕ್ರಾಮಿಕದಿಂದ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವ ಕೆಲಸವಾಗಬೇಕಿದೆ.
ಈ ಹಬ್ಬವು ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಅಣ್ಣ ತಂಗಿಯ ರಕ್ಷಣೆ ಮಾಡಿದರೆ, ತಂಗಿಯಾದವಳು ಅಣ್ಣನ ರಕ್ಷಣೆ ಮಾಡುವ, ಕಷ್ಟಕಾಲದಲ್ಲಿ ಆತನ ಜತೆ ನಿಲ್ಲುವ ಸಂಕಲ್ಪಕ್ಕೆ ನಾಂದಿಯಾಗುತ್ತದೆ. ರಕ್ಷಾ ಬಂಧನ ಎಂಬ ಅಕ್ಷರಗಳೇ ಅಪಾರ ಅರ್ಥವನ್ನು ಒಳಗೊಂಡಿವೆ.
ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧ ಎಂದರ್ಥ. ಅಂದರೆ ತನ್ನ ಸಹೋದರನಿಗೆ ರಾಖೀ ಕಟ್ಟುವ ಮೂಲಕ ರಕ್ಷಣೆ ಮಾಡು ಎಂದು ಬಾಂಧವ್ಯದ ಬಂಧನಕ್ಕೊಳಪಡಿಸುವಳು ಸಹೋದರಿ. ತಂಗಿಯ ಯಾವುದೇ ಕಷ್ಟ, ನೋವು ನಲಿವುಗಳಿಗೆ ಅಣ್ಣನಾದವನು ಸದಾಕಾಲ ಸಹಾಯ ಹಸ್ತ ನೀಡುವ ಮೂಲಕ ಹೃದಯವಂತನಾಗಿರಬೇಕು ಎನ್ನುವುದನ್ನು ಈ ಹಬ್ಬ ಸಾರುತ್ತದೆ.
ತನ್ನ ಅಣ್ಣನಿಗೆ ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ದೊರಕಲಿ ಎಂದು ಸಹೋದರಿಯು ಹಾರೈಸುವಳು. ಅಣ್ಣ ತಂಗಿಯ ಈ ಪವಿತ್ರವಾದ ಸಂಬಂಧಕ್ಕೆ ಯಾವುದೇ ಹಣ, ಶ್ರೀಮಂತಿಕೆಯ ಅಹಂ ಎಂಬುದೇ ಇಲ್ಲ. ಇಂತಹ ಅಮೂಲ್ಯ ಸಂಬಂಧಕ್ಕೆ ಬೇಕಾಗಿರುವುದು ಹೃದಯ ಶ್ರೀಮಂತಿಕೆ ಮಾತ್ರ. ತನ್ನ ಅಣ್ಣ ಅಥವಾ ತಮ್ಮ ಗಟ್ಟಿಯಾಗಿರಬೇಕೆಂದು ಸದಾ ಬಯಸುವ ಸಹೋದರಿ ಯರು, ತಾವು ಊಟ ಮಾಡಿದ್ದೇವೆಂದು ಸುಳ್ಳು ಹೇಳಿ ಅಣ್ಣನ ಹೊಟ್ಟೆ ತುಂಬಿಸುವ ತ್ಯಾಗವನ್ನು ನಾವೆಷ್ಟು ನೋಡಿಲ್ಲ. ಈ ಅಪರಿಮಿತ ಪ್ರೇಮಕ್ಕೆ, ಮಮತೆಗೆ ಬೆಲೆ ಕಟ್ಟುವುದು ಅಸಾಧ್ಯ.
ಸಹೋದರ ಎಂದರೆ, ಒಡಹುಟ್ಟಿದವನೇ ಆಗಿರಬೇಕಿಲ್ಲ. ಯಾವ ವ್ಯಕ್ತಿಗೆ ಹೆಣ್ಣುಮಗಳ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಮನಸ್ಸಿದೆಯೋ ಅವನು ಸಹೋದರನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಆಗಲೇ ಹೇಳಿದಂತೆ, ಅದಕ್ಕೆ ರಕ್ತ ಸಂಬಂಧವೇ ಆಗಿರಬೇಕೆಂದೇನಿಲ್ಲ.
ಅಂದರೆ ಈ ಅಣ್ಣ-ತಂಗಿಯರ ಬಾಂಧವ್ಯ ರಕ್ತ ಸಂಬಂಧವನ್ನು ಮೀರಿರುವಂತಹದ್ದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಆಕಸ್ಮಿಕವಾಗಿ ಭೇಟಿಯಾಗಿ ಅಣ್ಣ ತಂಗಿ ಎಂಬ ಸಂಬಂಧ ಭಾವನಾತ್ಮಕವಾಗಿಯೂ ಹಲವಾರು ಸಂದರ್ಭಗಳಲ್ಲಿ ಉಂಟಾಗಬಹುದು. ಇಂತಹ ಭಾವನಾತ್ಮಕ ಸಂಬಂಧಗಳನ್ನು ಕೂಡ ಎಂದಿಗೂ ಅಳಿಸಲಾರದಂತೆ ಗಟ್ಟಿಗೊಳಿಸುವ ಶಕ್ತಿಯೂ ರಕ್ಷಾ ಬಂಧನಕ್ಕಿದೆ.
ಸಂಬಂಧಗಳು ಹತ್ತಾರು ವರ್ಷ ಗಟ್ಟಿಯಾಗಿ ಉಳಿಯಬೇಕೆಂದರೆ ಅಪನಂಬಿಕೆಗಳಿಗೆ ಅವಕಾಶವಿಲ್ಲದಂತೆ ಬದುಕನ್ನು ಸಾಗಿಸಬೇಕು. ಏಕೆಂದರೆ ಸಂಬಂಧಗಳನ್ನು ಗಟ್ಟಿಗೊಳಿಸುವ ಭದ್ರ ಬುನಾದಿ ಎಂದರೆ ಪರಸ್ಪರ ಬಲವಾದ ನಂಬಿಕೆ. ಶ್ರೀಮಂತಿಕೆಯೇ ಇರಲಿ ಅಥವಾ ಬಡತನವೇ ಇರಲಿ ಎರಡನ್ನೂ ಸಮನಾಗಿ ಸ್ವೀಕರಿಸಿ ಹಂಚಿಕೊಂಡು ಬದುಕುವ ಕಲೆಯೇ ಸಂಬಂಧಗಳ ಸಂಜೀವಿನಿಯಿದ್ದಂತೆ.
ಆಧುನಿಕತೆಯ ಭರಾಟೆಯಲ್ಲಿ ಇಂದು ಹಬ್ಬಗಳು ಕೇವಲ ವಾಟ್ಸ್ ಆ್ಯಪ್, ಫೇಸ್‌ಬುಕ್ ಸಂದೇಶಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಒತ್ತಡದ ಈ ಜೀವನದಲ್ಲಿ ಯಾರಿಗೂ ಯಾರ ಸಮಸ್ಯೆಗಳನ್ನೂ ಆಲಿಸಲು ಸಮಯವಿಲ್ಲದಂತಾಗಿದೆ.
ಈ ಎಲ್ಲದರ ಮಧ್ಯೆಯೇ ರಕ್ಷಾ ಬಂಧನದ ಒಂದು ದಿನವಾದರೂ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಡೀ ದಿನ ಅಕ್ಕ-ತಂಗಿಯರೊಡನೆ ಬೆರೆತು ಅವರ ಕೌಟುಂಬಿಕ, ವೃತ್ತಿ ಸಮಸ್ಯೆಗಳಿರಬಹುದು ಅವುಗಳನ್ನೆಲ್ಲಾ ಆಲಿಸಿ, ಆ ಸಮಸ್ಯೆಗಳಿಗೆ ಪರಿಹಾರದ ಭಾಗವಾಗೋಣ. ರಕ್ಷಾ ಬಂಧನವೆಂಬುದು ಕೇವಲ ಒಂದು ದಿನದ ಆಚರಣೆಗಷ್ಟೇ ಸೀಮಿತಗೊಳಿಸದೇ ಜೀವನ ಪರ್ಯಂತ ಅಣ್ಣನೆನಿಸಿಕೊಂಡವರು ಅಕ್ಕ-ತಂಗಿಯರ ಬದುಕಿಗೆ ಬೆಳಕಾಗುವ ಬಂಧವಾಗುವಂತಾಗಲಿ.
– ರಾಜು ಭೂಶೆಟ್ಟಿ, ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.