ಅದು ಅಥವಾ ಇದು: ಎರಡು ಹೋಳಾದ ದೇಶದ ವಾಗ್ವಾದ
Team Udayavani, Dec 13, 2018, 12:30 AM IST
ಒಂದೇ ರೀತಿಯ ದಿನಗಳು ಒಂದನ್ನೊಂದು ಬೆನ್ನಟ್ಟಿಸಿಕೊಂಡು ಹೋಗುತ್ತಿವೆ. ಅವೇ ಸಂಗತಿಗಳು ಮತ್ತೆ ತಿರುತಿರುಗಿ ವರ್ತುಲಾಕಾರವಾಗಿ ಬಂದುಕೊಳ್ಳುತ್ತ ಹೋಗುತ್ತಿವೆ. ಈ ಗಡಿಬಿಡಿಯಲ್ಲಿ ದಿನಗಳು ರಾತ್ರಿಗಳು ಕಣ್ಣು ಮುಚ್ಚಿತೆರೆದ ಹಾಗೆ ವೇಗವಾಗಿ ಓಡಿಯೇ ಹೋಗುತ್ತಿವೆ. ತಮ್ಮ ವೇಗದಲ್ಲಿ ಮತ್ತು ಪುನರಾವೃತ್ತಿಯಲ್ಲಿ ಅವು ಅರ್ಥ ಕಳೆದುಕೊಂಡು ನಿಂತ ಹಾಗೆ ಅನಿಸುತ್ತಿದೆ. ಯಾವುದೂ ಮಹತ್ವದ್ದು ಸಾಧ್ಯವಾಗುತ್ತಿಲ್ಲ. ಸಮಯವನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ.
ಚಿಲಿ ದೇಶದ ಖ್ಯಾತ ಕವಿ ಪಾಬ್ಲೋ ನೆರೂಡನ ಇಂತಹ ಸಾಲುಗಳು ಯಾಕೋ ಮತ್ತೆ ಮನಸ್ಸನ್ನು ತುಂಬಿ ನಿಲ್ಲುತ್ತಿವೆ. ವರ್ತಮಾನವೂ ಹಾಗೆ. ತುಂಬ ಗಡಿಬಿಡಿಯ ದಿನಗಳಿಂದ ತುಂಬಿ ಹೋಗಿದೆ. ಬಹಿರಂಗದ ಗದ್ದಲದಲ್ಲಿ, ಸಾರ್ವಜನಿಕತೆಯಲ್ಲಿ ಉರುಳುತ್ತ ಹೋಗುವ, ಸಮಯ ಹೋಗುತ್ತಿರುವುದು ಹೇಗೆ ಎಂಬುದು ತಿಳಿಯದಂತೆ ಹೋಗುವ ದಿನಗಳು. ಅವೇ ಬಂದ್‌ಗಳು. ಮಾತುಗಳ ಅಬ್ಬರಗಳು. ಬಣ್ಣ ಬಣ್ಣದ ಪತಾಕೆಗಳು. ಏರುಧ್ವನಿಯ ಕೂಗಾಟಗಳು. ಮಾತುಗಳಲ್ಲಿ ಮತ್ತು ಹೊರಗೆ ಹೊತ್ತಿ ಉರಿಯುವ ಬೆಂಕಿ. ತಮ್ಮ ದೇಗೆಲುವೆನ್ನುವ ನಾಯಕರ ಹೇಳಿಕೆಗಳು. ಪರಸ್ಪರ ಭ್ರಷ್ಟಾಚಾರದ ಆರೋಪಗಳು. ದಿನವೂ ಇಂದು ಅಥವಾ ನಾಳೆ. ಸರಕಾರ ಹೋಗಬಹುದು ಎನ್ನುವ ಮಾತುಗಳು. ಒಂದು ದಿನ ನೇತಾರರ ಸಾವು. ಮರುದಿನ ಚುನಾವಣೆ. ಅವೇ ಸವಕಲಾದ ಹೇಳಿಕೆಗಳು. ಆತ್ಮವಿಲ್ಲದ ಮಾತುಗಳು. ಮಾರ್ಕೆಜ್‌ನ ಕಾದಂಬರಿ “ನೂರು ವರ್ಷಗಳ ಮೌನ’ದಲ್ಲಿಯ ಹಾಗಿನ ವಾಸ್ತವ. ಮತ್ತೆ ಮತ್ತೆ ಅವೇ ಪಾತ್ರಗಳು ತಿರುತಿರುಗಿ ಬರುತ್ತವೆ. ತಿರುತಿರುಗಿ ಅದನ್ನೇ ಮಾಡುತ್ತವೆ. ನಿರಂತರ ಏಕತಾನತೆ ಯಂತ್ರದ ಕಡ್ಡಿಯಾಗಿ ಹೋದ ಇಡೀ ಸಾಮಾಜಿಕ ರಾಜಕೀಯ ವ್ಯವಸ್ಥೆ. ಯಾರು ಯಾವ ಮಾತುಗಳನ್ನು ಆಡುತ್ತಾರೆನ್ನುವುದು ಹಲವು ದಿನಗಳ ಮೊದಲೇ ಊಹಿಸಬಹುದು. ರಾಜಕಾರಣಿಗಳು, ಚಿಂತಕರು, ಸ್ವಾಮೀಜಿಗಳು, ಪ್ರಾಧ್ಯಾಪಕರುಗಳು, ಎಲ್ಲ ವರ್ಗಗಳ ಧುರೀಣರು ಹೇಳುತ್ತಿರುವುದು ಅದೇ ಮಾತು. ತಿರುತಿರುಗಿ.
ಕೆಲವು ಉದಾಹರಣೆ. ಶಬರಿಮಲೆಯಲ್ಲಿ ನಡೆಯುತ್ತಿರುವುದನ್ನು ಗಮನಿಸಬೇಕು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸರಿಯಾಗಿಯೇ ಇದೆ. ಅದು ವಿಶಾಲಾರ್ಥದಲ್ಲಿ ಸಂವಿಧಾನವನ್ನು ಅರ್ಥೈಸಿ ಲಿಂಗಸಮಾನತೆಯನ್ನು ಎತ್ತಿ ಹಿಡಿದಿದೆ. ತೀರ್ಪು ವಿಶಾಲಾರ್ಥದ್ದು. ಆದರೆ ಆ ದೇಗುಲದ ವಿಷಯದಲ್ಲಿ ತುಂಬ ಸೂಕ್ಷ್ಮತೆಗಳಿವೆ. ಸಂಸ್ಕೃತಿಗೆ, ಪರಂಪರೆಗೆ ಸೇರಿದ ವಿಷಯಗಳಿವೆ. ಇದು ಸಂಬಂಧ ಪಟ್ಟ ಎಲ್ಲರಿಗೂ ಹೋರಾಟಗಾರರಿಗೂ ಕೂಡ ಗೊತ್ತು. ಆದರೆ ಅನವಶ್ಯಕವಾಗಿ ವಿಷಯ ದೊಡದಾಗಿ ಹೋಗಿದೆ. ಅದನ್ನೊಂದು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡು, ಅಲ್ಲಿಗೆ ಹೋಗಲು ಅವಶ್ಯಕ ವೃತ ಪಾಲಿಸದವರೂ ಅಲ್ಲಿಗೆ ಹೋಗುವ ತರಾತುರಿಯಲ್ಲಿರುವವರೇ! ಸುಮ್ಮನೆ. ಉದ್ದೇಶ ಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ಎಂದೇ ಅನಿಸುತ್ತದೆ. ಅಲ್ಲದೆ ಇಡೀ ದೇಶದಲ್ಲಿಯೇ ದೇಗುಲಗಳಲ್ಲಿ ಋತುಮತಿ ಸ್ಥಿತಿಯಲ್ಲಿರುವ ಮಹಿಳೆಯರಿಗೆ ಪ್ರವೇಶವಿಲ್ಲ ಎಂದೇನೂ ಇಲ್ಲ. ದೇಶಕ್ಕೆ ಅನವಶ್ಯಕವಾಗಿದ್ದ ಗದ್ದಲಗಳು ಇವು. ಈಗ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಹಸ್ರಾರು ಪೋಲೀಸರನ್ನು ಕರ್ತವ್ಯಕ್ಕೆ ತೊಡಗಿಸಬೇಕು.
ಶಾಲೆ ಕಾಲೇಜುಗಳಿಗೆ ರಜೆ ನೀಡಬೇಕು. ಅನವಶ್ಯಕವಾಗಿ ಆ ಪ್ರದೇಶದ, ರಾಜ್ಯದ ಜನರಿಗೆ ತೊಂದರೆ. ಒಂದು ರಾಜ್ಯದ ಸಮಯ ಸುಮ್ಮನೆ ವ್ಯರ್ಥ. ಅಭಿವೃದ್ಧಿ ಕಾರ್ಯಗಳು ಮೂಲೆಗೆ ಬೀಳುತ್ತವೆ. ಇತ್ತೀಚೆಗೆ ಮಹಾಪ್ರಳಯದಲ್ಲಿ ಮುಳುಗಿ ಹೋಗಿದ್ದ ಕೇರಳವನ್ನು ಪುನಃ ಕಟ್ಟುವುದಕ್ಕಿಂತಲೂ ಈ ವಿಷಯ ದೊಡ್ಡ ವಿಷಯವಾಗಿ ಹೋದಂತೆ ಅನಿಸುತ್ತಿದೆ. ಇನ್ನೊಂದು ವಿಷಯ ದೇಶದಲ್ಲಿ ಸತತವಾಗಿ ನಡೆಯುತ್ತಿರುವ ಎಡ-ಬಲಗಳ ಪರಸ್ಪರ ವಿರೋಧ ರಾಜಕೀಯದ ವಿಷಯ. ಪ್ರತಿ ದಿನವೂ ಇದಕ್ಕೆ ಸಂಬಂಧಿಸಿದ ವಿಷಯ ಒಂದರ ಚರ್ಚೆ ಸತತವಾಗಿ ಪತ್ರಿಕೆಗಳಲ್ಲಿ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆದೇ ಇರುತ್ತದೆ. ಇತ್ತೀಚೆಗೆ ಚರ್ಚೆಯಲ್ಲಿರುವ ಅರ್ಬನ್ ನಕ್ಸಲ್ ವಿವಾದವನ್ನೇ ತೆಗೆದುಕೊಳ್ಳಿ. ನಮಗೆಲ್ಲ ತಿಳಿದಿರುವ ಪ್ರಕಾರ ನಕ್ಸಲೈಟ್ ಚಳವಳಿ ಒಂದು ಹಿಂಸಾತ್ಮಕವಾದ ಚಳವಳಿ. ಅದರ ಹಿಂದೆ ಇರುವ ಉದ್ದೇಶ ಒಳ್ಳೆಯದೇ ಇರಬಹುದು. ಶೋಷಿತ ವರ್ಗದ ಪರವಾದ ಹೋರಾಟವಿರಬಹುದು. ಆದರೆ ಹಿಂಸೆಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಎಲ್ಲ ರೀತಿಯ ಹಿಂಸೆಗೂ. ಅದು ಯಾವ ಹೆಸರಿನಲ್ಲಿಯೂ ಇರಲಿ. ತಪ್ಪು ತಪ್ಪೇ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಸಾರ್ವಜನಿಕವಾಗಿ ಹಿರಿಯ ಚಿಂತಕರು, ಗೌರವಾನ್ವಿತರು ನಕ್ಸಲ್ ಪರವೆನಿಸುವ ಸಂಕೇತಗಳನ್ನು ರವಾನಿಸುವುದರಿಂದ, ಮಾತನಾಡುವುದರಿಂದ ಯಾವ ರೀತಿಯ ಸಂದೇಶ ಸಮಾಜಕ್ಕೆ ಹೋಗುತ್ತದೆ ಎನ್ನುವುದನ್ನು ಬಹುಶಃ ನಾವು ಯೋಚಿಸಬೇಕು. ಇಂತಹ ಸೂಕ್ಷ್ಮ ವಿಷಯದ ಕುರಿತಾಗಿ ಬಹಿರಂಗವಾಗಿ ಚರ್ಚೆ ವಿಚರ್ಚೆ ಅನವಶ್ಯಕವಾಗಿತ್ತು ಎಂದೇ ಭಾವನೆ. ಏಕೆಂದರೆ ಹಿಂಸೆ ಇರುವಲ್ಲಿ ಚರ್ಚೆ ಇರಲಾಗುವುದಿಲ್ಲ. ಅದು ಕಾನೂನು ಸುವ್ಯವಸ್ಥೆಗೆ ಬಿಟ್ಟ ವಿಚಾರ. ಅಲ್ಲದೆ ಇಂತಹ ವಿಷಯಗಳನ್ನು ನಿರ್ವಹಿಸಲು ದೇಶದಲ್ಲಿ ಒಂದು ಸಾಂವಿಧಾನಿಕ ವ್ಯವಸ್ಥೆ ಇದೆ. ಕಳೆದ ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಇದೇ ವಿಷಯ ಚರ್ಚೆಯಲ್ಲಿದೆ.
ಈ ಎಡ-ಬಲಗಳ ನಡುವಿನ ಚರ್ಚೆ ಇಂದು ದೇಶದಾದ್ಯಂತ ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿಬಿಟ್ಟಿದೆ. ಚರ್ಚೆಯ ಪರ ಮತ್ತು ವಿರೋಧದ ತೀವ್ರತೆ ಹೇಗಿದೆ ಎಂದರೆ ಕೈಗಾರಿಕಾ ಕ್ಷೇತ್ರ, ಬ್ಯಾಂಕಿಂಗ್, ಶಿಕ್ಷಣ, ಪರಿಸರ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ದೇಶದ ಹಿತದೃಷ್ಟಿಯಿಂದ ಅವಶ್ಯಕವಾದ ಗಟ್ಟಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಸರಕಾರಗಳಿಗೆ ಇಂದು ಕಠಿಣವಾಗಿ ಹೋಗಿದೆ. ಏಕೆಂದರೆ ಕನಿಷ್ಟ ಒಂದು ವರ್ಗವನ್ನೇ ರಾಜಕೀಯವಾಗಿ ವಿರೋಧ ಪಕ್ಷಗಳು ಎಬ್ಬಿಸಿ ಬಿಡುತ್ತವೆ. ಅವುಗಳ ಭವಿಷ್ಯದ ಮೇಲೆ ಕಲ್ಲು ಹಾಕಲಾದಂತೆ ಮಾತನಾಡಲಾಗುತ್ತದೆ. ಸಮಾಜಗಳನ್ನು ಜಾತಿ ವರ್ಗಗಳ ಹೆಸರಿನಲ್ಲಿ ಒಡೆಯಲಾಗುತ್ತಿದೆ. ಹಾಗಾಗಿ ಮಹತ್ವದ ರಾಷ್ಟ್ರೀಯ ನಿರ್ಣಯಗಳು ನಿಂತು ಹೋಗುತ್ತಿವೆ. ಇವೆಲ್ಲ ಗದ್ದಲಗಳಲ್ಲಿ ಸುಮ್ಮನೆ ಏಕೆ ಬೀಳಬೇಕು ಎಂದು ರಾಜಕಾರಣಿಗಳು ಮತ್ತು ಅಧಿಕಾರಿಗಳು ದಿನಚರಿಯಷ್ಟನ್ನೆ ನಿಭಾಯಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ದಿನಗಳೆಯುತ್ತಿರುವಂತೆ ಇದೆ.
ನಮ್ಮಲ್ಲಿ ಪ್ರಸ್ತುತದಲ್ಲಿರುವ ಚಿಂತನ ಕ್ರಮದ ದೊಡ್ಡ ಸಮಸ್ಯೆ ಇದು. ಏನೆಂದರೆ ನಮ್ಮ ಚರ್ಚೆಗಳು ಮತ್ತು ಚಿಂತನಗಳು ಎಕ್ಸ್ ಟ್ರೀಮ್ ಆಗಿ ಹೋಗಿದೆ. ಪರಸ್ಪರ ತೀವ್ರ ವಿರೋಧಿ ಧ್ರುವಗಳಲ್ಲಿ ಚಲಿಸುತ್ತ ಎಂದೂ ಹತ್ತಿರ ಬರಲಾಗದ, ಮಾತನಾಡದ, ಕೂಡಿಕೊಳ್ಳಲಾಗದ, ಹೊಂದಿಕೊಳ್ಳಲಾಗದ ಮನಸ್ಥಿತಿಯನ್ನು ತಲುಪಿಬಿಟ್ಟಿವೆ. ನಮ್ಮ ಇಂದಿನ ಚಿಂತನ ಕ್ರಮವೆಂದರೆ ಅದು ಅಥವಾ ಇದು. ವಿಚಾರವಾದಿಗಳು ಅಥವಾ ಪ್ರಗತಿಶೀಲರ ಧ್ವನಿಗಳು ಯಾವ ಪೆಟ್ಟಿಗೆಯಿಂದ ಹೊರಡುತ್ತವೆ ಎನ್ನುವುದು ನಮಗೆ ಗೊತ್ತು. ಹಾಗೆಯೇ ಗೊಡ್ಡು ಸಂಪ್ರದಾಯವಾದಿಗಳು ಏನು ಹೇಳುತ್ತಾರೆ ಎನ್ನುವುದೂ ನಮಗೆ ಗೊತ್ತು.
ಧ್ವನಿಗಳು, ಮಾತುಗಳು ಸ್ಟೀರೀಯೋಟೈಪ್ ಆಗಿ ಹೋಗಿವೆ. ಅವು ಏನನ್ನು ಸೂಚಿಸುತ್ತವೆ ಅಥವಾ ಹೇಳುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾವು ಅವರ ಸ್ವರಗಳನ್ನು ಆಲಿಸಬೇಕು ಎಂದೇನೂ ಇಲ್ಲ.ಟಿ.ವಿ ಮ್ಯೂಟ್ ಮಾಡಿ ಇಟ್ಟುಕೊಂಡರೂ ಕೂಡ ಮುಖ ನೋಡಿಯೇ ಯಾರು ಏನು ಹೇಳುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಹೇಳಬಹುದಾಗಿದೆ. ಅದು ಅಥವಾ ಇದು. ಮಧ್ಯಮಕ್ಕೆ ಧ್ವನಿಯೇ ಇಲ್ಲವಾಗಿದೆ. ಏಕೆಂದರೆ ಮಧ್ಯಮವನ್ನು ಬಲದ ಜತೆ ಆವಗಲೇ ಎಡಚಿಂತನೆ ಜೋಡಿಸಿ ಬಿಟ್ಟಿದೆ. ಮಾತುಗಳನ್ನು ಆ ರೀತಿಯಲ್ಲಿ ಇಲ್ಲವೇ ಈ ರೀತಿಯಲ್ಲಿ ಮಾತ್ರವೇ ಆಡಬೇಕು. ಇದು ನಮ್ಮ ಬೌದ್ಧಿಕ ವಾತಾವರಣ.
ಗಾಂಧಿ ಹೇಳುತ್ತಿದ್ದರು. ಅಹಿಂಸೆಯೇ ಪರಮಧರ್ಮ. ಆದರೆ ಒಂದು ಮಹಿಳೆಯನ್ನು ಹಿಂಸಿಸುತ್ತಿರುವುದನ್ನು ನೋಡಿ ನಾನು ಅಹಿಂಸಾಪರನಾಗಿರಲಾರೆ. ಯಾವ ಶಸ್ತ್ರ ಬೇಕಾದರೂ ಕೈಯಲ್ಲಿ ಹಿಡಿಯಲು ಸಿದ್ಧ. ಅಲ್ಲದೇ ಗಾಂಧಿ ರಾಜಕೀಯವನ್ನು ಧರ್ಮದಿಂದ ಪ್ರತ್ಯೇಕಗೊಳಿಸಲು ಸಿದ್ಧರಿರಲಿಲ್ಲ. ಏಕೆಂದರೆ ತಮ್ಮ ನಂಬುಗೆಗಳ ಕುರಿತು ಗಾಂಧಿ ಎಷ್ಟೇ ರಿಜಿಡ್ ಆಗಿದ್ದ ವ್ಯಕ್ತಿಯಾಗಿದ್ದರೂ ಕೂಡ ಅವರಿಗೆ ಅದನ್ನು ಮೀರಿಕೊಳ್ಳಬಲ್ಲ ಸೂಕ್ಷ್ಮತೆ ಮತ್ತು ಮಾನವೀಯತೆ ಇತ್ತು. ಆಕಳೊಂದರ ನೋವು ನೋಡಲಾರದೆ ಅದನ್ನು ಸಾಯಿಸಲು ಸಾಧ್ಯವಿದೆಯೇ ಎಂದು ಗಾಂಧಿ ಕೇಳಿದ್ದು ನಮಗೆ ಗೊತ್ತಿದೆ. ಆಗ ಯಂತ್ರಗಳನ್ನು ವಿರೋಧಿಸುತ್ತ ಗಾಂಧಿ ಈಗ ಇದ್ದಿದ್ದರೆ ಯಂತ್ರಗಳ ಕುರಿತು ಏನು ಹೇಳುತ್ತಿದ್ದರೋ ಗೊತ್ತಿಲ್ಲ. ಅವರು ಸ್ವತಃ ತಾನು ಮಾಂಸ ತಿನ್ನುತ್ತಿರಲಿಲ್ಲ, ಚಟಗಳನ್ನು ವಿರೋಧಿಸುತ್ತಿದ್ದರು. ಆದರೆ ಸುತ್ತಮುತ್ತಲೂ ಇದ್ದವರ ಚಟಗಳು, ತೆವಲುಗಳು ಗಾಂಧೀಜಿಯವರಿಗೆ ಗೊತ್ತಿದ್ದವು. ಅಂತವರನ್ನು ಗಾಂಧಿ ತುಂಬ ಪ್ರೀತಿಸುತ್ತಿದ್ದುದೂ ನಮಗೆ ಗೊತ್ತಿದೆ.
ಮುಂದೆ ಬಂದರೆ ಈ ಕಳೆದ ಶತಮಾನದ ಕನ್ನಡ ಸಾಹಿತ್ಯದ ಶ್ರೇಷ್ಟ ಚಿಂತಕರಾಗಿದ್ದ ಅನಂತಮೂರ್ತಿಯಂತವರು ತಮ್ಮನ್ನು ಚಿಂತನೆಯ ಪೆಟ್ಟಿಗೆಗಳಲ್ಲಿ ಇಟ್ಟುಕೊಂಡಿರಲಿಲ್ಲ. ರಾಮಕೃಷ್ಣ ಹೆಗಡೆಯ ಕುರಿತು ಒಳ್ಳೆಯ ಮಾತು ಬರೆಯುವಾಗ ಹೆಗಡೆಯ ಜಾತಿ ಅವರಿಗೆ ಅಡ್ಡ ಬರುತ್ತಿರಲಿಲ್ಲ. ಅರಸು ಅಂತಹ ವ್ಯಕ್ತಿಯನ್ನು ಕೂಡ ಅವರು ಬಿಟ್ಟಿರಲಿಲ್ಲ. ಈ ರೀತಿಯ ದ್ವಂದ್ವ ನೆಹರೂಗೂ ಇತ್ತು. ಕೆಲವೊಮ್ಮೆ ಅವರು ಅನಿರೀಕ್ಷಿತ ಮಾತುಗಳನ್ನಾಡುತ್ತಿದ್ದದ್ದು ನೆನಪಿದೆ.
ವಿಷಾದವೆಂದರೆ ನಮ್ಮ ದೇಶದ ಬೌದ್ಧಿಕ ಜಗತ್ತು ಇಂದು ಎರಡು ಭಾಗಗಳಾಗಿ ಒಡೆದುಕೊಂಡಿದೆ: ಕಪ್ಪು ಅಥವಾ ಬಿಳುಪು. ಎಲ್ಲವೂ ಪೂರ್ವ ನಿರ್ಧರಿತ. ಏನು ಹೇಳಬೇಕಿದೆ ಎಂದರೆ ಇಂತಹ ಎಂದೂ ಕೂಡದ ಉತ್ತರ ದಕ್ಷಿಣ ಧ್ರುವಗಳಲ್ಲಿ ಸಂಚರಿಸುವ ಚಿಂತನೆಗಳು ಕೇವಲ ಚರ್ಚೆಯ ಮಾತುಗಳಾಗಿ ಉಳಿದರೆ ತೊಂದರೆ ಇರಲಿಲ್ಲ.ಆದರೆ ನಮ್ಮ ದೇಶದಲ್ಲಿ ಅವು ಹಾಗೇ ಉಳಿದಿಲ್ಲ. ಇಂತಹ ಮಾತುಗಳು ಸಮಾಜವನ್ನೇ ರಾಜಕೀಯಕ್ಕಾಗಿ ಒಡೆಯುವ, ಒಡೆಯಬಲ್ಲ ಅಸ್ತ್ರಗಳಾಗಿ ಹೋಗಿವೆ. ವೊಟ್ ಬ್ಯಾಂಕ್ ರಾಜಕೀಯದ ಭಾಗಗಳಾಗಿವೆ. ಸಮಸ್ಯೆ ಇರುವುದು ಇಲ್ಲಿ. ಎರಡು ಬಣಗಳು ಅಪಾಯಕಾರಿಯಾಗಿ ಎದುರಾಗಿ ರಣಾಂಗಣದಲ್ಲಿ ನಿಂತು ಬಿಟ್ಟಿವೆ. ಸಂದರ್ಭವನ್ನು ತಿಳಿಗೊಳಿಸಲು ಈಗಿನ ಜರೂರಿ ಎಂದರೆ ದೇಶದ ಹಿತದೃಷ್ಟಿಯಿಂದ ಈ ಎರಡೂ ಗುಂಪುಗಳು ಕನಿಷ್ಠ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವ ಅಗತ್ಯತೆ ಇರುವುದು. ಹಾಗೆಯೇ ಕೇವಲ ವಿರೋಧಿಸುವುದನ್ನು ಬಿಟ್ಟು ಸಮನ್ವಯದ ದಾರಿಗಳನ್ನು ಕೂಡ ಕಂಡುಕೊಳ್ಳಬೇಕಿರುವುದು. ರಾಷ್ಟ್ರೀಯ ಅಗತ್ಯತೆಗಳನ್ನು ಅರಿತು ನಮ್ಮ ಒಡೆಯುವ ಅಜೆಂಡಾಗಳನ್ನು ಬದಿಗಿಟ್ಟು ಯೋಚಿಸಬೇಕಿರುವುದು.
ಇಲ್ಲವಾದರೆ ನಮ್ಮ ದೇಶದ ಮುಂದೆ ಜಾಗತಿಕವಾಗಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ಏಕೆಂದರೆ ಇಂದು ನಮ್ಮ ನೆರೆಯ ದೇಶವಾದ ಚೀನಾ ತನ್ನ ಶಕ್ತಿಯನ್ನು ಅಭಿವೃದ್ಧಿಗೊಳಿಸಿಕೊಳ್ಳುವುದರತ್ತ ಭಾರಿ ಪ್ರಮಾಣದಲ್ಲಿ ದಾಪುಗಾಲು ಹಾಕುತ್ತಿದೆ.
ಹೆಚ್ಚು ಕಡಿಮೆ ನಮ್ಮ ಸುತ್ತ ಮುತ್ತಲಿನ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ ಇತ್ಯಾದಿ ದೇಶಗಳು ಪರೋಕ್ಷವಾಗಿ ಚೀನಾದ ಹತೋಟಿಯಲ್ಲಿವೆ. ನಮ್ಮ ದೇಶದಲ್ಲಿಯೂ ತನ್ನ ರಾಜಕೀಯ ಶಕ್ತಿಯನ್ನು ಒಳ ನುಗ್ಗಿಸಲು ಚೀನಾ ಪ್ರಯತ್ನಿಸುತ್ತಿರುವುದು ತಿಳಿದ ವಿಷಯವೇ. ಅಸ್ಥಿರವಾಗಿರುವ ಇಂದಿನ ಜಾಗತಿಕ ರಾಜಕೀಯ ವಾತಾವರಣಲ್ಲಿ ಚೀನಾ ತುಂಬ ಅಪಾಯಕಾರಿ. ಅಷ್ಟೇ ಅಲ್ಲ, ನಮ್ಮ ರೂಪಾಯಿಯ ವಿರುದ್ಧ ಡಾಲರ್ ಬಲವಾಗುತ್ತಲೇ ಹೋಗುತ್ತಿದೆ. ಅಂದರೆ ಯಾರು ಏನೇ ಹೇಳಿದರೂ ಅಮೆರಿಕ ಕೂಡ ಬಲವಾಗುತ್ತಲೇ ಹೋಗುತ್ತಿದೆ. ಹೀಗಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿರುವುದೆಂದರೆ ನಮ್ಮೆದುರು ತುಂಬ ಸಂಕೀರ್ಣ ರೂಪದ ಅಂತಾರಾಷ್ಟ್ರೀಯ ಸಮಸ್ಯೆಗಳಿವೆ. ಅಂತಾರಾಷ್ಟ್ರೀಯ ಪೆಟ್ರೋಲಿಯಂ ಪೂರೈಕೆಯ ವ್ಯವಸ್ಥೆಯ ದೊಡ್ಡ ಸವಾಲು ನಮ್ಮ ಮುಂದಿದೆ.
ಇಂತಹ ಸಂದರ್ಭದಲ್ಲಿ ನಾವು ನಿಜವಾಗಿ ಚರ್ಚಿಸಬೇಕಿರುವುದು ಅಭಿವೃದ್ಧಿಯ ಕುರಿತು. ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದರ ಕುರಿತು. ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಉದ್ಯೋಗಗಳನ್ನು ಸೃಷ್ಟಿಸುವುದರ ಬಗ್ಗೆ. ಇಂತಹ ಮಹತ್ವದ ವಿಷಯಗಳ ಕುರಿತು ಲಕ್ಷ್ಯ ಹರಿಸಲು ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ನಾವು ಇಂದು ಹೆಚ್ಚಿನ ಸಮಯಾವಕಾಶ ನೀಡಬೇಕಿದೆ. ನಮ್ಮ ಚರ್ಚೆಯ ಕೇಂದ್ರ ಬಿಂದುವಾಗಿರಬೇಕಿರುವುದು ಅಭಿವೃದ್ಧಿ ಪರ ಚಿಂತನೆಗಳು. ಸಂಪತ್ತನ್ನು ಸೃಷ್ಟಿಸಿದ ಹೊರತು ಹಂಚಲಾಗುವುದಿಲ್ಲ.
ಚರ್ಚೆಗಳು, ವಾಗ್ವಾದಗಳು ಬೇಡವೆಂದೇನೂ ಅಲ್ಲ. ಅವು ಪ್ರಜಾಪ್ರಭುತ್ವದ ಜೀವಾಳ. ಆದರೆ ಅವುಗಳನ್ನು ರಾಜಕೀಯವಾಗಿ ದೇಶವನ್ನು, ಸಮಾಜವನ್ನು ಒಡೆದು ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಆಟಕ್ಕಾಗಿ ಬಳಸಿಕೊಳ್ಳುವುದು ಬೇಡ. ಅಲ್ಲದೆ ಚಿಂತಿಸಬಲ್ಲ ವರ್ಗದ ಮೇಲೆ ಒಂದು ವಿಶೇಷ ಜವಾಬ್ದಾರಿ ಇದೆ. ಅದೇನೆಂದರೆ ತಮ್ಮನ್ನು ರಾಜಕೀಯವಾಗಿ ಬೇರೆಯವರು ಬಳಸಿಕೊಳ್ಳದಂತೆ ನೋಡಿಕೊಳ್ಳುವ ಎಚ್ಚರದಲ್ಲಿರುವುದು.
ಡಾ.ಆರ್.ಜಿ.ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.