ಆವಿಷ್ಕಾರ ಕ್ಷೇತ್ರದಲ್ಲಿ ಸಿಂಡಿಕೇಟ್ ಬ್ಯಾಂಕ್ ಕ್ರಾಂತಿ
ಈ ಸಂಸ್ಥೆಯನ್ನು ಬೇರೆ ಬ್ಯಾಂಕ್ ಜತೆ ವಿಲೀನಗೊಳಿಸದೆ ಉಳಿಸಿಕೊಂಡರೆ ಲಕ್ಷಗಟ್ಟಲೆ ಗ್ರಾಹಕರಿಗೆ ಬಲ ದೊರೆಯುವುದರಲ್ಲಿ ಸಂದೇಹವಿಲ್ಲ
Team Udayavani, Nov 13, 2019, 5:06 AM IST
ವಿಲೀನದ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಾಗದಿದ್ದಲ್ಲಿ ಬ್ಯಾಂಕಿನ ಹೆಸರನ್ನಾದರೂ ಶಾಶ್ವ ತ ವಾಗಿ ಉಳಿಸಬೇಕು. ಸಿಂಡಿಕೇಟ್ ಬ್ಯಾಂಕಿನ ಮೂಲ ಹೆಸರು ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಆಗಿದ್ದುದರಿಂದ ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಬೃಹತ್ ಕೆನರಾ ಬ್ಯಾಂಕಿಗೆ “”ಕೆನರಾ ಬ್ಯಾಂಕಿಂಗ್ ಸಿಂಡಿಕೇಟ್” ಎಂಬ ಹೆಸರು ಇಡಲಿ. ಹಾಗೆ ಮಾಡಿದಲ್ಲಿ ಗ್ರಾಹಕರಿಗೂ, ಮಾಜಿ ಉದ್ಯೋಗಿಗಳಿಗೂ, ಸ್ಥಾಪಕರಿಗೂ ಹಾಗೂ ಸಂಬಂಧಿಸಿದ ಎಲ್ಲರಿಗೂ ಅಲ್ಪಸ್ವಲ್ಪ ಸಮಾಧಾನ ದೊರೆಯಬಹುದು.
(ಮುಂದುವರಿದ ಭಾಗ)
ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಬ್ಯಾಂಕಿ ನ ಪ್ರಥಮ ಶಾಖೆಯನ್ನು 1969ರಲ್ಲಿ ಪೋರ್ಟ್‌ಬ್ಲೇರ್‌ನಲ್ಲಿ ತೆರೆಯಲಾಯಿತು. 2 ನೆಯ ಶಾಖೆಯನ್ನು ಕ್ಯಾಂಪ್‌ಬೆಲ್ ಬೇಯಲ್ಲಿ ತೆರೆಯಲಾ ಯಿತು. 1976ರಂದು ಬ್ಯಾಂಕ್ ಲಂಡನ್‌ನಲ್ಲಿ ಶಾಖೆ ತೆರೆಯಿತು.
1965ರಲ್ಲಿ ಬ್ಯಾಂಕಿಗೆ 43 ಗ್ರಾಮೀಣ ಶಾಖೆಗಳಿದ್ದರೆ 1975ರ ವೇಳೆಗೆ ಗ್ರಾಮೀಣ ಶಾಖೆಗಳ ಸಂಖ್ಯೆ 308ಕ್ಕೆ ಏರಿ ತು. 1975ರ ಕೊನೆಯ ವೇಳೆಗೆ ಬ್ಯಾಂಕಿಗೆ 308 ಗ್ರಾಮೀಣ ಶಾಖೆಗಳು 197 ಅರೆ ಪಟ್ಟಣ ಶಾಖೆಗಳು, 12 ನಗರ ಶಾಖೆಗಳು, 145 ಮಹಾನಗರ ಶಾಖೆಗಳು ಮತ್ತು 16 ಬಂದರು ನಗರ ಶಾಖೆಗಳು ಇದ್ದವು. ಶೇ 39.59ರಷ್ಟು ಶಾಖೆಗಳು ಗ್ರಾಮೀಣ ಶಾಖೆ ಗಳಾಗಿದ್ದವು ಮತ್ತು ಶೇ. 25.32ರಷ್ಟು ಶಾಖೆಗಳು ಅರೆ ಪಟ್ಟಣ ಶಾಖೆಗಳಾಗಿದ್ದವು.
1969ರ ಕೊನೆಯ ವೇಳೆಗೆ ಬ್ಯಾಂಕಿಗೆ ರೂ. 145 ಕೋಟಿ ಠೇವಣಿಗಳಿದ್ದವು. 1970ರಲ್ಲಿದ್ದ ಠೇವಣಿ ಮೊತ್ತ ರೂ. 168 ಕೋಟಿಯಾದರೆ 1978ರ ವೇಳೆಗೆ ಠೇವಣಿ ಮೊತ್ತ ರೂ. 1076 ಕೋಟಿಗೆ ಏರಿತು. ಆಗ ಬ್ಯಾಂಕಿಂಗ್ ವ್ಯೂಹದ ವಾರ್ಷಿಕ ಸರಾಸರಿ ಠೇವಣಿ ಏರಿಕೆ ದರ ಶೇ. 16-17 ಆಗಿದ್ದರೆ, ಸಿಂಡಿಕೇಟ್ ಬ್ಯಾಂಕಿನ ಸರಾಸರಿ ವಾರ್ಷಿಕ ಠೇವಣಿ ಹೆಚ್ಚಳ ಶೇ. 22 ಆಗಿತ್ತು. ಒಟ್ಟು ಠೇವಣಿಗಳ ಶೇ. 10ರಷ್ಟು ಪಿಗ್ಮಿ ಠೇವಣಿಗಳಾಗಿದ್ದವು. 1970ರಲ್ಲಿ ಸಾಲಗಳ ಮೊತ್ತ ರೂ. 123 ಕೋಟಿಯಾಗಿದ್ದರೆ 1978ರ ಮಾರ್ಚ್ ಅಂತ್ಯದ ವೇಳೆಗೆ ಸಾಲಗಳ ಮೊತ್ತ ರೂ. 600 ಕೋಟಿಗೆ ಏರಿತು. ಇದೇ ಅವಧಿಯಲ್ಲಿ ಆದ್ಯತಾ ರಂಗಗಳ ಸಾಲ ರೂ. 50 ಕೋಟಿಯಿಂದ ರೂ. 246 ಕೋಟಿಗೆ ಏರಿತು. ಆದ್ಯತಾ ರಂಗಗಳ ಸಾಲದ ದಾಮಾಶಯ ಯಾವಾಗಲೂ ಶೇ. 40ಕ್ಕಿಂತ ಹೆಚ್ಚು ಇರುತ್ತಿತು.
ಹೊಸ ಆಯಾಮಗಳು: 1975ರಲ್ಲಿ ಬ್ಯಾಂಕು ತನ್ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಬ್ಯಾಂಕಿಂಗ್ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಎಂಬ ವಿಷಯದಲ್ಲಿ ಒಂದು ಸೆಮಿನಾರ್ ನಡೆಸಿತ್ತು. ಈ ಸೆಮಿನಾರ್‌ನಲ್ಲಿ ಹಿರಿಯ ಆರ್ಥಿಕ ತಜ್ಞರುಗಳು, ಸರಕಾರದ ಅಧಿಕಾರಿಗಳು, ಹಿರಿಯ ಬ್ಯಾಂಕರುಗಳು ಇವರೆಲ್ಲ ಭಾಗವಹಿಸಿದ್ದರು. ಚರ್ಚೆಗೆ ಆಯ್ದುಕೊಂಡಿದ್ದ ವಿಷಯಗಳಲ್ಲಿ ಬ್ಯಾಂಕಿಂಗ್ ಮತ್ತು ಆರ್ಥಿಕ ಪ್ರಗತಿ, ಬ್ಯಾಂಕಿಂಗ್ ಅಭಿವೃದ್ಧಿ ಮತ್ತು ಹಣಕಾಸಿನ ನೀತಿ, ಗ್ರಾಮೀಣ ಬ್ಯಾಂಕಿಂಗ್ ಮತ್ತು ಲಾಭದಾಯಕತೆ, ಸೇವಾ ಉದ್ದಿಮೆಯಾಗಿ ಬ್ಯಾಂಕಿಂಗ್ ಇತ್ಯಾದಿ ಸೇರಿದ್ದವು. ಈ ಸೆಮಿನಾರಿನಲ್ಲಿ ನಡೆದ ಚರ್ಚೆಗಳಿಂದ ಹೊರಹೊಮ್ಮಿದ ಸಲಹೆ ಸೂಚನೆಗಳನ್ನು ಬಳಸುವ ಮೂಲಕ ಸಿಂಡಿಕೇಟ್ ಬ್ಯಾಂಕ್ ತನ್ನ ಅಭಿವೃದ್ಧಿ ಯತ್ನಗಳಿಗೆ ಹೊಸ ಆಯಾಮಗಳನ್ನು ಸೇರಿಸಲು ಸಾಧ್ಯವಾಯಿತು.
ಸಿಂಡಿಕೇಟ್ ಬ್ಯಾಂಕ್, ಮೇಧಾವಿ ಕೆ.ಆರ್. ಪ್ರಸಾದ್‌ರವರ ನೇತೃತ್ವದಲ್ಲಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗವನ್ನು ಆರಂಭಿಸಿತು. ಮಾಜಿ ಕೇಂದ್ರ ಸಚಿವ ಟಿ.ಎ. ಪೈ ಬ್ಯಾಂಕಿನ ಕಸ್ಟೋಡಿಯನ್ ಆಗಿದ್ದಾಗ ತೆರೆದ ಕೊನೆಯ ಶಾಖೆ ಬನ್‌ಸ್ವಾಡ. ಅದನ್ನು 27-2-1970ರಲ್ಲಿ ಟಿ.ಎ.ಪೈ ಆರಂಭಿಸಿ ದರು. ಕೆ.ಕೆ. ಪೈ 958ನೆಯ ಶಾಖೆಯನ್ನು 10-4-1978ರಲ್ಲಿ ಪರಿಗಿಯಲ್ಲಿ ತೆರೆದರು.
ರಾಷ್ಟ್ರೀಕರಣೋತ್ತರ ಆವಿಷ್ಕಾರಗಳು: ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣದ ಅನಂತರವೂ ತನ್ನ ಆವಿಷ್ಕಾರಗಳನ್ನು ಮತ್ತು ನವ್ಯ ಯೋಜನೆಗಳ ರೂಪಣೆಯನ್ನು ಮುಂದುವರಿಸಿದೆ. ರಾಷ್ಟ್ರೀಕರಣೋತ್ತರ ಅವಧಿಯ ಆವಿಷ್ಕಾರಗಳಲ್ಲಿ ಫಾರ್ಮ್ ಕ್ಲಿನಿಕ್ ಪ್ರಮುಖವಾದುದು. ಈ ಆವಿಷ್ಕಾರವನ್ನು ಸಮಗ್ರ ಸಾಲ ನೀಡಿಕೆ ವ್ಯವಸ್ಥೆ ಮತ್ತು ವಿಸ್ತರಣಾ ಚಟುವಟಿಕೆಗಳ ಮಿಲನ ಎನ್ನಬಹುದು.
ಸಿಂಡಿಕೇಟ್ ಬ್ಯಾಂಕ್ ರೈತ ಸೇವಾ ಸಹಕಾರಿ ಸಂಘ ಸ್ಥಾಪಿಸಿದ ಪ್ರಥಮ ಬ್ಯಾಂಕ್. ರಾಷ್ಟ್ರೀಯ ಕೃಷಿ ಆಯೋಗದ ಶಿಫಾರಸಿನಂತೆ ಹಿರಿಯಡ್ಕದಲ್ಲಿ ಪ್ರಥಮ ರೈತ ಸೇವಾ ಸಹಕಾರಿ ಸಂಘವನ್ನು 1976ರಲ್ಲಿ ಆರಂಭಿಸಲಾಯಿತು. 1973ರಲ್ಲಿ ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೆ ಸಾಲ ನೀಡುವ ಹೊಸ ಯೋಜನೆಯನ್ನು ಆರಂಭಿಸಲಾಯಿತು. ಖಾದಿ ಮತ್ತು ಗ್ರಾಮೋದ್ಯೋಗ ಕಮಿಶನ್‌ನ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲಾಯಿತು.
1998ರಲ್ಲಿ ಬ್ಯಾಂಕ್ ಕಿಸಾನ್ ಕ್ರೆಡಿಟ್‌ಕಾರ್ಡ್ ಆರಂಭಿಸಿತು. 2000ನೇ ಇಸವಿಯಲ್ಲಿ ಪ್ಲಾಟಿನಂ ಜುಬಿಲಿಯ ಅಂಗವಾಗಿ ಸಿಂಡಿಕೇಟ್ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ನ್ನು ಸ್ಥಾಪಿಸಲಾ ಯಿತು. ಈ ಟ್ರಸ್ಟ್ 8 ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಗಳನ್ನು ದೇಶದ ವಿವಿಧ ಕೇಂದ್ರಗಳಲ್ಲಿ ಸ್ಥಾಪಿಸಿದೆ. 2001ರಲ್ಲಿ ಸಿಂಡಿಕೇಟ್ ಲಿ. ಫಂ. ಉದ್ಯಮಿ ಕ್ರೆಡಿಟ್ ಕಾರ್ಡ್ ಸಣ್ಣ ಕೈಗಾರಿಕೆಗಳಿಗೆ ನೆರವಿಗೆ ಆರಂಭವಾಯಿತು. 2003ರಲ್ಲಿ ಸಿಂಡ್ ಸ್ವರೋಜ್‌ಗಾರ್ ಕ್ರೆಡಿಟ್ ಕಾರ್ಡ್ ಆರಂಭಿಸಲಾಯಿತು. ಇದರಿಂದ ಕೈಮಗ್ಗ ನಡೆಸುವವರಿಗೆ, ಸಣ್ಣ ಉದ್ಯಮಿಗಳಿಗೆ, ಸ್ವಂತ ಉದ್ಯೋಗಿಗಳಿಗೆ, ರಿಕ್ಷಾ ಮಾಲಕರಿಗೆ ಮತ್ತು ಕಿರು ಉದ್ಯಮಿಗಳಿಗೂ ಆರ್ಥಿಕ ನೆರವು ದೊರೆಯುತ್ತದೆ. 2004ರಲ್ಲಿ ರೈತರಿಗಾಗಿ ಕಿಸಾನ್ ಸಮೃದ್ಧಿ ಕ್ರೆಡಿಟ್ ಕಾರ್ಡ್ ಆರಂಭಿ ಸಲಾಯಿತು. 2006ರಲ್ಲಿ ಸಿಂಡ್ ಜೈ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಯಿತು. ಇದು ರೈತರ ಎಲ್ಲಾ ರೀತಿಯ ವಿನಿಯೋಗ ತಖೆ¤ ಹೂಡಿಕೆಗಳಿಗೆ ಬೇಕಾದ ನಿಧಿಗಳನ್ನು ಒದಗಿಸಿದ ಆರ್ಥಿಕ ನೆರವಿನ ಯೋಜನೆ.
ಬ್ಯಾಂಕ್ ಶಿಕ್ಷಣಕ್ಕೆ ಸಾಲ ನೀಡಲು ಸಿಂಡ್ ವಿದ್ಯಾ ಯೋಜನೆಯನ್ನು ಹೊಂದಿದೆ. ಸಿಂಡ್ ಸೂಪರ್ ಯೋಜನೆಯನ್ನು 2012ರಲ್ಲಿ ಆರಂಭಿಸಲಾಯಿತು. ಇದು ಉನ್ನತ ಶಿಕ್ಷಣ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಇತ್ಯಾದಿಗಳಲ್ಲಿ ಆಯ್ಕೆಯಾದವರಿಗೆ ಸಾಲ ನೀಡುವ ಯೋಜನೆ. ಅದೇ ರೀತಿ ಗೃಹಸಾಲಕ್ಕಾಗಿ ಸಿಂಡ್ ನಿವಾಸ್, ವ್ಯಾಪಾರಕ್ಕೆ ನೆರವು ನೀಡಲು ಸಿಂಡ್ ವ್ಯಾಪಾರ್, ವೃತ್ತಿಪರರಿಗೆ ಸಾಲ ನೀಡಲು ಸಿಂಡ್ ಪ್ರೊಫೆಶನಲ್ ಇತ್ಯಾದಿ ಯೋಜನೆಗಳಿವೆ.
ಉದ್ಯೋಗ ಸೃಷ್ಟಿ : ಸಿಂಡಿಕೇಟ್ ಬ್ಯಾಂಕ್, ಉದ್ಯೋಗ ಸೃಷ್ಟಿಗೆ ಮಹತ್ವರ ಕೊಡುಗೆ ನೀಡಿದ ಬ್ಯಾಂಕ್. ಸಾವಿರಗಟ್ಟಲೆ ಯುವಕ ಯುವತಿಯರಿಗೆ ಸ್ವಂತ ಉದ್ಯೋಗ ನಡೆಸುವಲ್ಲಿ ನೆರವಾಗಿರುವ ಸಿಂಡಿಕೇಟ್ ಬ್ಯಾಂಕ್ ಉದ್ಯಮಶೀಲತೆಯನ್ನು ಬೆಳೆಸುವಲ್ಲಿಯೂ ಮಹತ್ತರ ಪಾತ್ರ ವಹಿಸಿದೆ. ಅಂತಾರಾಷ್ಟ್ರೀಯ ಜೇಸಿ ಸಂಸ್ಥೆಯೊಂದಿಗೆ ಸಹಭಾಗಿತ್ವದ ಮೂಲಕ ಅನುಷ್ಠಾನ ಗೊಳಿಸಲಾದ ಸ್ವಂತ ಉದ್ಯೋಗದ ಮೂಲಕ ಕೆ.ಕೆ. ಪೈ ಅಧ್ಯಕ್ಷರಾಗಿದ್ದಾಗ 1400 ನೇರ ಉದ್ಯೋಗಗಳ ಸೃಷ್ಟಿ ನಡೆಯಿತು.ಇದಲ್ಲದೆ 4200 ಇತರ ಯುವಕರಿಗೆ ಈ ಸ್ವಂತ ಉದ್ಯೋಗಗಳು ಆರಂಭಿಸಿದ ಉದ್ಯಮಗಳು ಕೆಲಸ ನೀಡಿದವು. ಹೀಗೆ 5600 ಉದ್ಯೋಗಗಳ ಸೃಷ್ಟಿ ಈ ಯೋಜನೆಯಿಂದ ಆಯಿತು. ಸಿಂಡಿಕೇಟ್ ಬ್ಯಾಂಕ್ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಸ್ವಂತ ಉದ್ಯೋಗ ಕ್ಲಿನಿಕ್‌ಗಳ ಮೂಲಕ ಸ್ವ-ಉದ್ಯೋಗ ಚಳವಳಿಯನ್ನು ನಡೆಸಿತು. ಪ್ರಪ್ರಥಮ ಗ್ರಾಮೀಣಾಭಿವೃದ್ಧಿ ಮತ್ತು ಸ್ವಂತ ಉದ್ಯೋಗ ಸಂಸ್ಥೆ (Rural Development & self employment Institute- RUDSETI)ಯನ್ನು ಸಿಂಡಿಕೇಟ್ ಜಂಟಿ ಸಂಸ್ಥೆಯಾಗಿ ಉಜಿರೆಯಲ್ಲಿ ಆರಂಭಿಸಿತು. ಈಗ ಅಂತಹ ಸಂಸ್ಥೆಗಳು 14 ರಾಜ್ಯಗಳಲ್ಲಿ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ತರಬೇತಿ ನೀಡುತ್ತಿವೆ.
ಹಣಕಾಸಿನ ಸಾಕ್ಷರತೆ : ಹಣಕಾಸಿನ ಸೇರ್ಪಡೆಗೆ ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮುಂಚೆ ಮಾತ್ರವಲ್ಲದೆ ರಾಷ್ಟ್ರೀಕರ ಣೋತ್ತರ ಅವಧಿಯಲ್ಲೂ ಬಹಳಷ್ಟು ಶ್ರಮಿಸಿದೆ. ಹಣಕಾಸಿನ ಸೇರ್ಪಡೆ ಯೋಜನೆಗೆ ಪೂರಕವಾಗಿ ಹಣಕಾಸಿನ ಸಾಕ್ಷರತೆ ಯನ್ನು ಹೆಚ್ಚಿಸುವ ಸಲುವಾಗಿ ಜ್ಞಾನಜ್ಯೋತಿ ಟ್ರಸ್ಟನ್ನು 2010ರ ಅಕ್ಟೋಬರ್‌ನಲ್ಲಿ ಇತರ ಕೆಲವು ಬ್ಯಾಂಕ್ ಸಹಭಾಗಿತ್ವದೊಂದಿಗೆ ಸ್ಥಾಪಿಸಿತು. ಈ ಟ್ರಸ್ಟ್ ಹಣಕಾಸಿನ ಸಾಕ್ಷರತಾ ಮಾಹಿತಿ ಕ್ಷೇತ್ರದಲ್ಲಿ ಒಂಬತ್ತು ವರ್ಷಗಳ ಉಪಯುಕ್ತ ಸೇವೆ ನೀಡಿದ್ದು 2019- 20ರಲ್ಲಿ ಟ್ರಸ್ಟ್ 75 ಕೇಂದ್ರಗಳ ಮೂಲಕ 11334 ಕಾರ್ಯಕ್ರಮ ಗಳನ್ನು ನಡೆಸಿ 485636 ಜನರಿಗೆ ಆರ್ಥಿಕ ಸಾಕ್ಷರತೆ ಒದಗಿಸಿದೆ. ಟ್ರಸ್ಟ್ ಡಿಜಿಟಲ್ ವ್ಯವಹಾರ ಪ್ರಚೋದನ ಕಾರ್ಯಕ್ರಮಗಳನ್ನು ನಡೆಸಿದೆ. ಈವರೆಗೆ ಟ್ರಸ್ಟ್ 63.94 ಲಕ್ಷ ಜನರಿಗೆ ಆರ್ಥಿಕ ಸಾಕ್ಷರತೆ ಮತ್ತು ಹಣಕಾಸಿನ ಮಾಹಿತಿ ಒದಗಿಸಿದೆ. ಹಣಕಾಸಿನ ಸೇರ್ಪಡೆಗೆ ಅನುಕೂಲವಾಗುವ ಸಿಂಡ್ ಕ್ರೆಡಿಟ್‌ನ್ನು ಬ್ಯಾಂಕ್ 2006ರಲ್ಲಿ ಆರಂಭಿಸಿದೆ. ಇದರನ್ವಯ ಅತಿ ಸಣ್ಣ ಉದ್ಯಮಿಗಳಿಗೆ ಅಗತ್ಯವಿರುವ ಸಾಲ ಸೌಲಭ್ಯ ಒದಗಿಸುತ್ತದೆ. 2007ರಲ್ಲಿ ಸಿಂಡ್ ಶಕ್ತಿಯನ್ನು ಆರಂಭಿಸಿದ ಬ್ಯಾಂಕ್ ಆ ಯೋಜನೆಯನ್ವಯ ಸ್ವಂತ ಉದ್ಯೋಗಿಗಳಿಗೆ, ಸಣ್ಣ ಕಸುಬುದಾರರಿಗೆ, ಬಡಗಿಗಳಿಗೆ, ಪ್ಲಂಬರ್‌ಗಳಿಗೆ, ಪ್ಯಾಕೇಜಿಂಗ್ ಮಾಡುವ ಟೆಕ್ನೀಶಿಯನ್‌ಗಳಿಗೆ ಬೇಕಾದ ಉಪಕರಣಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡುತ್ತದೆ.
ನಿರಂತರ ಒತ್ತು: 2019ರ ವೇಳೆಗೆ ಬ್ಯಾಂಕು ರೂ. 477046 ಕೋಟಿ ಜಾಗತಿಕ ವ್ಯವಹಾರ ಹೊಂದಿತ್ತು ಮತ್ತು ಬ್ಯಾಂಕಿನ ಒಟ್ಟು ಠೇವಣಿ ರೂ. 2,59,897 ಕೋಟಿಯಾಗಿತ್ತು. ಒಟ್ಟು ಠೇವಣಿ ಗಳಲ್ಲಿ ಚಿಲ್ಲರೆ ಠೇವಣಿಗಳು ಶೇ. 66.45 ಆಗಿದ್ದವು. ಬ್ಯಾಂಕಿನ ಸಾಲಗಳು ವಿವಿಧೀಕರಣ ಹೊಂದಿದ್ದು ಕೃಷಿ ಕ್ಷೇತ್ರದ ಮತ್ತು ಮಧ್ಯಮ, ಸಣ್ಣ ಮತ್ತು ಕಿರು ಉದ್ದಿಮೆ ಕ್ಷೇತ್ರದ ಸಾಲಗಳು ದೇಶೀಯ ಸಾಲಗಳ ಶೇ. 56ರಷ್ಟಿದ್ದವು. ತನ್ನ ಆರಂಭದ ವರ್ಷಗಳಿಂದಲೇ ಬ್ಯಾಂಕು ನಿರಂತರವಾಗಿ ಒತ್ತು ನೀಡುತ್ತಾ ಬಂದಿರುವ ಆದ್ಯತಾ ರಂಗಗಳ ಸಾಲ ಮಾರ್ಚ್ 31, 2019ರ ವೇಳೆಗೆ 73,734 ಕೋಟಿಯಾಗಿತ್ತು. ಇದು ಒಟ್ಟು ಸಾಲದ ಶೇ. 40.54 ಆಗಿತ್ತು. ಕೃಷಿ ಸಾಲ ರೂ. 34,439 ಕೋಟಿಯಾಗಿತ್ತು. ಇದು ಒಟ್ಟು ಸಾಲದ ಶೇ. 18.94 ಆಗಿತ್ತು. ಉಳಿದ ಆದ್ಯತಾ ರಂಗಗಳ ಸಾಲ ರೂ. 39,244 ಕೋಟಿ ಯಾಗಿತ್ತು. ಅಂದರೆ ಒಟ್ಟು ಸಾಲದ ಶೇ. 21.60. ಮಾರ್ಚ್ 31 2019ರ ವೇಳೆಗೆ ಒಟ್ಟು ಜಾಗತಿಕ ಸಾಲ ರೂ. 2,17,149 ಕೋಟಿಯಾಗಿತ್ತು. ಇದರಲ್ಲಿ ದೇಶೀಯ ಸಾಲ ರೂ. 1,74,822 ಕೋಟಿಯಾಗಿತ್ತು. 2019ರ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕಿನ ಬಂಡವಾಳ ಯಥೇತ್ಛತೆಯ ದರ 14.23% ಆಗಿತ್ತು.
ಮಾರ್ಗದರ್ಶಿ ಬ್ಯಾಂಕ್ ಯೋಜನೆಗೆ (world bank scheme) ಎರಡು ಅರ್ಥಗಳಿವೆ. ಒಂದನೆಯದು ಪ್ರತಿ ಬ್ಯಾಂಕಿಗೆ ನೀಡಲ್ಪಟ್ಟಿರುವ ಲೀಡ್ ಜಿಲ್ಲೆಗಳಲ್ಲಿರುವ ಎಲ್ಲ ಬ್ಯಾಂಕ್‌ಗಳ ಗುಂಪಿಗೆ ನಾಯಕತ್ವ ನೀಡುವುದು. ಮತ್ತೂಂದು ಲೀಡ್ ಜಿಲ್ಲೆಗಳ ಆರ್ಥಿಕ ಪ್ರಗತಿ ಪ್ರಕ್ರಿಯೆಯನ್ನು ಮುನ್ನಡೆಸುವುದು ಈ ಎರಡೂ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಮತ್ತು ಫಲಪ್ರದವಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಸಿಂಡಿಕೇಟ್ ಬ್ಯಾಂಕಿನದು.
ಪ್ರಶಸ್ತಿಗಳ ಸರಮಾಲೆ: ಸಿಂಡಿಕೇಟ್ ಬ್ಯಾಂಕ್ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ, ಸಣ್ಣ ಠೇವಣಿ ಶೇಖರಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ದೊರೆತ ಇಂಡಿಯನ್ ಮರ್ಚಂಟ್ಸ್ ಚೇಂಬರ್ ಪ್ರಶಸ್ತಿ, ಕೃಷಿಯ ಅಭಿವೃದ್ಧಿಗೆ ನೀಡಿದ ಬೃಹತ್ ಕೊಡುಗೆಗಾಗಿ ಎಫ್ಐ ಸಿಸಿಐ (FICCI) ಪ್ರಶಸ್ತಿ, ಸ್ವಂತ ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ನೀಡಿದ ಮಹತ್ತರ ಕಾಣಿಕೆಗಾಗಿನಯೆ ಪ್ರಶಸ್ತಿ (Naye Award), ಅತ್ಯುತ್ತಮ ಕೈಗಾರಿಕಾ ಸಂಬಂಧ ಮತ್ತು ನೌಕರ ಸಂಬಂಧಕ್ಕಾಗಿ ಎಫ್ಐಸಿಸಿಐ ಪ್ರಶಸ್ತಿ, 2017ರ ಎನ್‌ಪಿಸಿಟಿಯ ರಾಷ್ಟ್ರೀಯ ಪಾವತಿ ಉತ್ಕೃಷ್ಟತಾ ಪ್ರಶಸ್ತಿ (National Payments Excellence Award), 2017-18ರ ಅಸೋಚಮ್ (Assocham) ಪ್ರಶಸ್ತಿ, 2018-19ರ ಅತ್ಯುತ್ತಮ ಸಾಮಾಜಿಕ ಬ್ಯಾಂಕ್ 2ನೆಯ ರನ್ನರ್ ಅಪ್ ಪ್ರಶಸ್ತಿ (Best Social Bank 2nd Runnerup Award) ಇತ್ಯಾದಿ. ಸಿಂಡಿಕೇಟ್ ಬ್ಯಾಂಕ್ 2019ರ ಸೆಪ್ಟೆಂಬರ್ 30ರಂದು ಕೊನೆಗೊಂಡ ಎರಡನೆಯ ತ್ತೈಮಾಸಿಕ ಅವಧಿಯಲ್ಲಿ ರೂ. 251.05 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಕೆಟ್ಟ ಸಾಲಗಳ ದಾಮಾಶಯ ಕೂಡ ಕುಗ್ಗಿದೆ. ಸೆಪ್ಟಂಬರ್ 2018ರಲ್ಲಿದ್ದ ಕೆಟ್ಟ ಸಾಲಗಳ ದಾಮಾಶಯ ಒಟ್ಟು ಸಾಲಗಳ ಶೇ. 12.98. ಇದು 30-9-2019ಕ್ಕೆ 11.45%ಗೆ ಇಳಿದಿದೆ. ಅದೇ ರೀತಿ ಅನುತ್ಪಾದಕ ಸಾಲಗಳ ನಿವ್ವಳ ದಾಮಾಶಯವೂ ಇಳಿದಿದೆ. 2018ರ ಸೆಪ್ಟೆಂಬರ್ 30ರ ಅನಂತರ 2019ರ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ನಿವ್ವಳ ಅನುತ್ಪಾದಕ ಸಾಲಗಳು ರೂ. 13321.30 ಕೋಟಿಯಿಂದ ರೂ. 12481.14 ಕೋಟಿಗೆ ಇಳಿದಿವೆ ಮತ್ತು ನಿವ್ವಳ ಅನುತ್ಪಾದಕ ಸಾಲಗಳ ದಾಮಾಶಯ ಶೇ. 6.38ರಿಂದ ಶೇ. 5.98ಕ್ಕೆ ಈ ಅವಧಿಯಲ್ಲಿ ಇಳಿದೆ. ಬ್ಯಾಂಕಿನ ಬಂಡವಾಳ ಯಥೇತ್ಛತೆಯ ದರ 31-3-2019ರಂದು ಶೇ. 14.23 ಆಗಿತ್ತು.
ಒಟ್ಟಿನಲ್ಲಿ ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣ ಪೂರ್ವ ಮತ್ತು ರಾಷ್ಟ್ರೀಕರಣೋತ್ತರ ಅವಧಿಗಳೆರಡರಲ್ಲೂ ಬ್ಯಾಂಕಿಂಗ್ ಆವಿಷ್ಕಾ ರಗಳಿಗೆ ಒತ್ತು ನೀಡುತ್ತಾ ಬಂದಿದ್ದು , ಹಲವಾರು ಉತ್ಪನ್ನ ಆವಿಷ್ಕಾರಗಳನ್ನು ನಡೆಸಿದೆ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಕೃಷಿ ಕ್ಷೇತ್ರ ಮತ್ತು ಆದ್ಯತಾ ಕ್ಷೇತ್ರಗಳಿಗೆ 1925ರಿಂದಲೂ ನಿರಂತರ ಒತ್ತು ನೀಡಿದ ಏಕೈಕ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಎಂದರೆ ಅತಿಶಯೋಕ್ತಿಯಾಗದು.
ಅಪೂರ್ವ ಅಂತಃಸಾಮರ್ಥ್ಯಗಳು: ಸಿಂಡಿಕೇಟ್ ಬ್ಯಾಂಕ್ ತನ್ನದೇ ಆದ ವಿಶಿಷ್ಟ ಸಂಸ್ಥಾ ಸಂಸ್ಕೃತಿಯನ್ನು ಹೊಂದಿದೆ. ಅದು ಸಾಟಿಯಿಲ್ಲದ ಅಪೂರ್ವ ಅಂತಃಸಾಮರ್ಥ್ಯಗಳನ್ನು ಆರಂಭದ ವರ್ಷಗಳಿಂದಲೇ ಮೈಗೂಡಿಸಿಕೊಂಡಿದೆ ಮತ್ತು ಅವುಗಳನ್ನು ಖಾಯಂ ನೆಲೆಯಲ್ಲಿ ಉಳಿಸಿಕೊಂಡಿದೆ. ಇಂತಹ ವಿಶಿಷ್ಟ ಹಾಗೂ ಸಮಾನಾಂತರವಿಲ್ಲದ ಬ್ಯಾಂಕಿಂಗ್ ಸಂಸ್ಥೆಯನ್ನು ಅದರ ಈಗಿನ ರೂಪದಲ್ಲಿಯೇ ಉಳಿಸಿ ಪ್ರೋತ್ಸಾಹಿಸಿದರೆ ಅದು ಇನ್ನಷ್ಟು ಉನ್ನತ ಸಾಧನೆಗಳನ್ನು ಮುಂದಿನ ವರ್ಷಗಳಲ್ಲಿ ತೋರಿಸಬಹುದು. ಹಾಗಾಗಿ ಈ ಸಂಸ್ಥೆಯನ್ನು ಬೇರೆ ಬ್ಯಾಂಕಿನ ಜೊತೆ ವಿಲೀನಗೊಳಿಸದೆ ಪ್ರತ್ಯೇಕ ಸಂಸ್ಥೆಯಾಗಿ ಶಾಶ್ವತವಾಗಿ ಉಳಿಸಿಕೊಂಡರೆ ಅದರ ಫಲವಾಗಿ ಲಕ್ಷಗಟ್ಟಲೆ ಗ್ರಾಹಕರಿಗೆ ಮತ್ತು ಆರ್ಥಿಕತೆಗೆ ಬ್ಯಾಂಕಿನಿಂದ ಮತ್ತಷ್ಟು ಬಲ ಹಾಗೂ ಬೆಂಬಲ ದೊರೆಯುವುದರಲ್ಲಿ ಸಂದೇಹವಿಲ್ಲ ಮತ್ತು ಬ್ಯಾಂಕ್ ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ಸಮಾಜದ ಕೃಶ ವರ್ಗಗಳಿಗೆ ಮತ್ತು ವಂಚಿತರಿಗೆ ಸ್ನೇಹಿತ ಸಂಸ್ಥೆಯಾಗಿ, ತಣ್ತೀಜ್ಞಾನಿ ರೂಪದಲ್ಲಿ ಮತ್ತು ಮಾರ್ಗದರ್ಶಿಯಾಗಿ ನಿರಂತರವಾಗಿ ಸೇವೆ ನೀಡುತ್ತಾ ಬೆಳೆಯಬಹುದು. ಒಂದು ವೇಳೆ ವಿಲೀನದ ನಿರ್ಧಾರದಿಂದ ಹಿಂದೆ ಸರಿಯಲು ಸರಕಾರಕ್ಕೆ ಸಾಧ್ಯವಾಗದಿದ್ದಲ್ಲಿ ಬ್ಯಾಂಕಿನ ಹೆಸರನ್ನಾದರೂ ಶಾಶ್ವತವಾಗಿ ಉಳಿಸಬೇಕು. ಸಿಂಡಿಕೇಟ್ ಬ್ಯಾಂಕಿನ ಮೂಲ ಹೆಸರು “ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್’ ಆಗಿದ್ದುದರಿಂದ ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಬೃಹತ್ ಕೆನರಾ ಬ್ಯಾಂಕಿಗೆ “”ಕೆನರಾ ಬ್ಯಾಂಕಿಂಗ್ ಸಿಂಡಿಕೇಟ್” ಎಂಬ ಹೆಸರನ್ನಾದರೂ ನೀಡಬೇಕು ಮತ್ತು ಆ ಮೂಲಕ ಸಿಂಡಿಕೇಟ್ ಬ್ಯಾಂಕಿನ ಹೆಸರನ್ನೂ ಶಾಶ್ವತವಾಗಿ ಉಳಿಸಬೇಕು. ಹಾಗೆ ಮಾಡಿದಲ್ಲಿ ಗ್ರಾಹಕರಿಗೂ ಮಾಜಿ ಉದ್ಯೋಗಿಗಳಿಗೂ ಸ್ಥಾಪಕರಿಗೂ ಹಾಗೂ ಸಂಬಂಧಿಸಿದ ಇತರ ಎಲ್ಲರಿಗೂ ಅಲ್ಪಸ್ವಲ್ಪ ಸಮಾಧಾನ ದೊರೆಯಬಹುದು.
ಡಾ| ಕೆ.ಕೆ. ಅಮ್ಮಣ್ಣಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.