ನೇಮಕಾತಿ ಪ್ರಕ್ರಿಯೆ ಪರಾಮರ್ಶೆಗೆ ಸಕಾಲ
Team Udayavani, Dec 22, 2019, 6:15 AM IST
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಹಲವಾರು ಅರ್ಹತಾ ಪರೀಕ್ಷೆಗಳನ್ನು ಕೈಬಿಟ್ಟು, ಆ ಹುದ್ದೆಗಳನ್ನು ಒಂದೇ ಸಾಮಾನ್ಯ ಅರ್ಹತಾ ಪರೀಕ್ಷೆ(ಸಿಇಟಿ)ಯನ್ನು ನಡೆಸುವ ಮೂಲಕ ಭರ್ತಿ ಮಾಡಿಕೊಳ್ಳುವ ಪ್ರಸ್ತಾವನೆ ಕೇಂದ್ರ ಸಿಬ್ಬಂದಿ ಸಚಿವಾಲಯದ ಮುಂದಿದೆ ಎಂದು ಈ ತಿಂಗಳ ಆರಂಭದಲ್ಲಿ ಮುದ್ರಣ ಮಾಧ್ಯಮಗಳಲ್ಲಿ ವರದಿಯಾಗಿದೆ.
ಕೇಂದ್ರ ಸರ್ಕಾರದ ಹಂತದಲ್ಲಿರುವ ವಿವಿಧ ಆಯ್ಕೆ ಪ್ರಾಧಿಕಾರಗಳಾದ ಸಿಬ್ಬಂದಿ ಆಯ್ಕೆ ಆಯೋಗ, ರೈಲ್ವೇ ನೇಮಕಾತಿ ಮಂಡಳಿ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪ್ರಾಧಿಕಾರಗಳನ್ನು ವಿಲೀನಗೊಳಿಸಿ ಒಂದೇ ಆಯ್ಕೆ ಪ್ರಾಧಿಕಾರವನ್ನು ರಚಿಸಿ, ಅದರ ಮೂಲಕ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳನ್ನು ಆಯ್ಕೆ ಮಾಡುವ ಪ್ರಸ್ತಾವನೆಯೂ ಅದರಲ್ಲಿದೆ. ಇದಕ್ಕೆ ಹಲವು ಕಾರಣಗಳನ್ನು ಸಿಬ್ಬಂದಿ ಸಚಿವಾಲಯವು ನೀಡಿದೆ. ಮೊದಲನೆಯದಾಗಿ ಸಮಾನ ಅರ್ಹತಾ ಮಾನದಂಡ ಹೊಂದಿರುವ ಗ್ರೂಪ್ ಬಿ ಹಾಗೂ ಸಿ ಹುದ್ದೆಗಳಿಗೆ ಅಭ್ಯರ್ಥಿಗಳು ಅಥವಾ ಉದ್ಯೋಗಾ ಕಾಂಕ್ಷಿಗಳು ಪ್ರತ್ಯೇಕ ಪರೀಕ್ಷೆ ತೆಗೆದುಕೊಳ್ಳುವ ಅನಿವಾರ್ಯತೆಯ ನಿವಾರಣೆ. ಎರಡನೆಯದಾಗಿ ಆಭ್ಯರ್ಥಿಗಳು ಭರಿಸಬೇಕಾದ ಪತ್ಯೇಕ ಪರೀûಾ ಶುಲ್ಕ ಹಾಗೂ ಓಡಾಟದ ಖರ್ಚಿನ ಹೊರೆಯನ್ನು ತಗ್ಗಿಸುವುದು. ಮೂರನೆಯದಾಗಿ ನೇಮಕಾತಿ ಪ್ರಕ್ರಿಯೆಗಳು ಹಿಡಿಯುವ ದೀರ್ಘ ಸಮಯವನ್ನು ತಪ್ಪಿಸುವುದು. ಕೊನೆಯದಾಗಿ ಒಂದೇ ಅರ್ಹತೆ ಬೇಡುವ ವಿವಿಧ ಹುದ್ದೆಗಳಿಗೆ ಪದೇ ಪದೇ ಅರ್ಜಿ ಸಲ್ಲಿಸುವ ಹಾಗೂ ಪರೀûಾ ತಯಾರಿಯ ಹೊರೆಯನ್ನು ತಪ್ಪಿಸುವುದು. ಒಟ್ಟಿನಲ್ಲಿ ಮಾನವ ಸಂಪನ್ಮೂಲ, ಸಮಯ ಹಾಗೂ ಹಣಕಾಸು ಸಂಪನ್ಮೂಲದ ಅಪವ್ಯಯ ವನ್ನು ತಡೆಗಟ್ಟುವುದು ಇದರ ಉದ್ದೇಶವೆಂದು ಅರ್ಥೈಸಿಕೊಳ್ಳಬಹುದು. ಈ ನೆಪದಲ್ಲಿ ನಮ್ಮ ರಾಜ್ಯದಲ್ಲಿ ಜರುಗುವ ನೇಮಕಾತಿ ಪ್ರಕ್ರಿಯೆಗಳ ಸುಧಾರಣೆ ಹಾಗೂ ಆಗಬೇಕಾದ ತುರ್ತು ಬದಲಾವಣೆಗಳ ಕುರಿತು ಪರಾಮರ್ಶಿಸುವ ಕಾಲ ಈಗ ಒದಗಿ ಬಂದಿದೆ.
ಭಾರತದ ಸಂವಿಧಾನದಲ್ಲಿ ಪ್ರಸ್ತಾಪವಾದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬೇಕಾದ ಸಿಬ್ಬಂದಿಯನ್ನು ಅರ್ಹತೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಆಯ್ಕೆ ಮಾಡಿಕೊಳ್ಳಲು, ಸಂವಿಧಾನದ ಭಾಗ 14ರ 315ನೇ ವಿಧಿಯಿಂದ 323ನೇ ವಿಧಿಗಳನುಸಾರ ಕೇಂದ್ರ ಹಾಗೂ ರಾಜ್ಯದ ಮಟ್ಟದಲ್ಲಿ ಲೋಕಸೇವಾ ಆಯೋಗಗಳ ಸ್ಥಾಪನೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಇವುಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಆಯಾ ಸರ್ಕಾರಗಳು ನಿಗದಿಪಡಿಸಿದ ಅರ್ಹತೆಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತವೆ. ಇವು ಗ್ರೂಪ್ ಎ, ಗ್ರುಪ್ ಬಿ ಪತ್ರಾಂಕಿತ ಹಾಗೂ ಪತ್ರಾಂಕಿತೇತರ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಸಂವಿಧಾನದ ಆಶಯದಂತೆ ಆಯ್ಕೆ ಪ್ರಾಧಿಕಾರವಾಗಿ ಕೆಲಸ ಮಾಡುತ್ತಿದೆ.
ಆದರೆ ಅದರ ಮೂಲಕ ನೇಮಕಾತಿ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆಯೆಂದು ಕೆಲವು ಇಲಾಖೆಗಳು ಬೇರೆ ಪ್ರಾಧಿಕಾರಗಳ ಮೊರೆಹೋದವು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾದ ಕೇಂದ್ರೀಕೃತ ದಾಖಲಾತಿ ಘಟಕವು ನಿರ್ವಹಿಸುತ್ತಿದೆ. ಕೆಲವು ಇಲಾಖೆಗಳು ಕರ್ನಾಟಕ ಪರೀûಾ ಪ್ರಾಧಿಕಾರದ ಮೊರೆಹೋಗಿವೆ. ಇನ್ನುಳಿದ ಇಲಾಖೆಗಳು ತಾವೇ ಆಯ್ಕೆ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿವೆ. ಯಾವುದೇ ನೇಮಕಾತಿ ಪ್ರಕ್ರಿಯೆಯು ಅಧಿಸೂಚನೆ ಹೊರಡಿಸುವುದು, ಅರ್ಜಿ ಆಹ್ವಾನದ ಆರಂಭ ಹಾಗೂ ಅಂತಿಮ ದಿನಾಂಕ ನಿಗದಿ, ಪರೀûಾ ದಿನಾಂಕ ನಿಗದಿ, ಕೀ ಉತ್ತರ ಪ್ರಕಟ, ಅದಕ್ಕೆ ಆಕ್ಷೇಪಣೆಗೆ ಅವಕಾಶ, ನಂತರದಲ್ಲಿ ಫಲಿತಾಂಶ ಪ್ರಕಟಣೆ, ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನೆ, ತಾತ್ಕಾಲಿಕ ಆಯ್ಕೆ ಪಟ್ಟಿ ನಂತರ ಕೊನೆಯಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಹಂತಗಳನ್ನೊಳಗೊಂಡಿರುತ್ತದೆ.
ಇದಾದ ನಂತರ ಸಂಬಂಧಿತ ಇಲಾಖೆಗಳು ಅಂತಿಮ ಆಯ್ಕೆಪಟ್ಟಿಯ ಆಧಾರದ ಮೇಲೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತವೆ. ಆದರೆ ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಕಾಲಮಿತಿ ನಿಗದಿಯಾಗದೇ ಇರುವುದರಿಂದ ಗೊತ್ತು ಗುರಿಯಿಲ್ಲದೇ, ಕುಂಟುತ್ತಾ ಕುಂಟುನೆಪ ಹೇಳುತ್ತಾ ಆಯ್ಕೆ ಪ್ರಕ್ರಿಯೆಗಳು ಸಾಗಿವೆ.
ಉದಾಹರಣೆಗೆ ಪಿಯು ಉಪನ್ಯಾಸಕರ ನೇಮಕಾತಿ ಮೇ 2015ರಲ್ಲಿ ಆರಂಭಗೊಂಡಿದ್ದು ಇನ್ನೂ ಅಂತಿಮ ಹಂತಕ್ಕೆ ಸಾಗಿಲ್ಲ. ಮೂರು ವರ್ಷಗಳಿಂದ ಸಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಚಿತ್ರಕಲಾ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಅರ್ಧದಲ್ಲಿ ನಿಂತಿದ್ದು, ಅದು ದಡ ಸೇರುವುದು ಯಾವಾಗಲೋ ಎಂದು ಅಭ್ಯರ್ಥಿಗಳು ಕಾಯುತ್ತಿದ್ದಾರೆ.
ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯ ನಂತರ ಪ್ರತಿ ಪ್ರವರ್ಗದ ಶೇಕಡಾ ಹತ್ತರಷ್ಟು ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸುವುದು ಸಂಬಂಧಿಸಿದ ಪ್ರಾಧಿಕಾರಗಳ ಕರ್ತವ್ಯವಾಗಿರುತ್ತದೆ. ನಿಗದಿಗೊಳಿಸಿದ ಅವಧಿಯಲ್ಲಿ ಅಭ್ಯರ್ಥಿಯೊಬ್ಬರು ಹುದ್ದೆಗೆ ವರದಿ ಮಾಡಿಕೊಳ್ಳದಿದ್ದಾಗ, ಹೆಚ್ಚುವರಿ ಪಟ್ಟಿಯಲ್ಲಿನ ನಂತರದ ಅದೇ ಪ್ರವರ್ಗದ ಅಭ್ಯರ್ಥಿಗೆ ಅವಕಾಶ ದೊರೆಯುತ್ತದೆ. ಆದರೆ ಇತ್ತೀಚೆಗೆ ಇಂತಹ ಅವಕಾಶದಿಂದ ಅಭ್ಯರ್ಥಿಗಳು ವಂಚಿತರಾಗುತ್ತಿದ್ದಾರೆ. ಈ ಹುದ್ದೆಗಳು ಮುಂದಿನ ನೇಮಕಾತಿಯವರೆಗೂ ಖಾಲಿ ಉಳಿದು, ಅರ್ಹರಿಗೆ ಸಾಮಾಜಿಕ ನ್ಯಾಯ ಸಿಗದೇ ಹೋಗುತ್ತಿರುವುದು ದುರಂತ. ಪ್ರತಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಅನುಮತಿ ಕಡ್ಡಾಯ. ಹಣಕಾಸು ಇಲಾಖೆಯ ಅನುಮೋದನೆಗೆ ಸಲ್ಲಿಸಿದ ಕಡತಗಳ ವಿಲೇವಾರಿ ವೇಗ ಬಹಳ ನಿಧಾನ ಗತಿಯಲ್ಲಿರುವುದರಿಂದ ಈಗಿನ ಖಾಲಿ ಹುದ್ದೆಗಳು ಭರ್ತಿ ಯಾಗುವುದು ಮೂರ್ನಾಲ್ಕು ವರ್ಷಗಳ ನಂತರವೇ. 2006-07ರ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಸವರಾಜ ಹೊರಟ್ಟಿಯವರು ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಂಡಿದ್ದರು. ಅದೇನೆಂದರೆ ಮುಂದಿನ 2 ವರ್ಷಗಳಲ್ಲಿ ಖಾಲಿಯಗುವ ಶಿಕ್ಷಕರ ಹುದ್ದೆಗಳನ್ನು ಗುರ್ತಿಸಿ, ಅವುಗಳ ಭರ್ತಿಗೆ ಮುಂಚಿತವಾಗಿಯೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆಯನ್ನು ಪಡೆಯುವುದು.
ಇದನ್ನು ಅವರು ಕಾರ್ಯಗತ ಕೂಡ ಮಾಡಿದ್ದರು. ಆದರೆ ಈಗ ಯಾವುದೇ ರಾಜ್ಯದ ಹಣಕಾಸು ಸ್ಥಿತಿ ಅಂದುಕೊಂಡಷ್ಟು ಆರೋಗ್ಯಕರವಾಗಿಲ್ಲ.
ಯೋಜನಾ ವೆಚ್ಚಕ್ಕಿಂತ ಯೋಜನೇತರ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ಖಾಲಿ ಹುದ್ದೆ ಹಾಗೆಯೇ ಉಳಿದು ಹೋಗುವ ಅಪಾಯ ಎದುರಾಗಿದೆ.
ಒಂದೇ ಪ್ರಾಧಿಕಾರವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಮುಂದಿನ ದಿನಗಳಲ್ಲೂ ಅದೇ ತರಹದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಉದ್ಯೋಗಾಕಾಂಕ್ಷಿಗಳು ಪುನಃ ಅರ್ಜಿ ಸಲ್ಲಿಸುವ ಪರಿಪಾಠ ಈಗಲೂ ನಮ್ಮ ರಾಜ್ಯದಲ್ಲಿದೆ. ಅದಕ್ಕೆ ಅಪವಾದವೆಂಬಂತೆ 2015-16ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಾಗಿದ್ದ ಸುಬೋಧ್ ಯಾದವ್ ಅವರು ಅಭ್ಯರ್ಥಿಗಳು ಹೊಂದಿರುವ ವಿವಿಧ ವಿದ್ಯಾರ್ಹತೆಯ ವಿವರಗಳನ್ನು ಪ್ರತಿ ಅಭ್ಯರ್ಥಿಯ ಪ್ರೊಫೈಲ್ ಸೃಷ್ಟಿಸಿ ಅದರಲ್ಲಿ ದಾಖಲಿಸಿ, ಅರ್ಜಿ ಆಹ್ವಾನಿಸಿದಾಗ ಅವರಿಗೆ ಮೊಬೈಲ್ ಸಂದೇಶ ರವಾನಿಸುವ ಹಾಗೂ ಸರಳವಾಗಿ ಅರ್ಜಿ ಹಾಕುವ ವಿನೂತನ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.
ಹಾಗೆಯೇ ನೇಮಕಾತಿ ಪರೀಕ್ಷೆಯ ನಂತರ ಕೀ ಉತ್ತರಗಳನ್ನು ಸಂಬಂಧಿತ ವೆಬ್‌ಸೈಟಿನಲ್ಲಿ ಪರೀಕ್ಷೆ ನಡೆದ ಒಂದು ಗಂಟೆಯಲ್ಲೇ ಕೀ ಉತ್ತರಗಳನ್ನು ಪ್ರಕಟಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡು ಅಭ್ಯರ್ಥಿಗಳನ್ನು ಕೀ ಉತ್ತರಗಳಿಗೆ ಚಾತಕ ಪಕ್ಷಿಯಂತೆ ಕಾಯಿಸುವ ಪರಿಪಾಠಕ್ಕೆ ಅಂತ್ಯ ಹಾಡಿದ್ದರು.
ಆದರೆ ಅವರ ದಿಢೀರ್ ವರ್ಗಾವಣೆಯ ನಂತರ ಈ ಸುಧಾರಣಾ ಪರ್ವಕ್ಕೆ ಮಂಕು ಕವಿದು ಹಳೇ ಸ್ಥಿತಿ ಮರುಕಳಿಸಿತು.
2014ರಲ್ಲಿ ಕೇಂದ್ರ ಸರ್ಕಾರವು ತನ್ನ ವ್ಯಾಪ್ತಿಯಲ್ಲಿನ ಗ್ರೂಪ್ ಸಿ ಹುದ್ದೆಗಳಿಗೆ ಸಂದರ್ಶನ ರಹಿತ ನೇಮಕಾತಿಗಳು ಜರುಗಲಿ ಎನ್ನುವ ಮಹಾನ್ ನಿರ್ಧಾರ ಕೈಗೊಂಡಿತು. ಹಾಗೆಯೇ ರಾಜ್ಯಗಳೂ ಇದನ್ನು ಅಳವಡಿಸಿಕೊಳ್ಳಲು ಸೂಚಿಸಿತು. ಸಿದ್ದರಾಮಯ್ಯ ಸರ್ಕಾರವು ಇದನ್ನು ಅಳವಡಿಸಿಕೊಂಡಿತು.
ಇತ್ತೀಚೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಇದ್ದ ಸಂದರ್ಶನವನ್ನು ಕೈ ಬಿಡಲಾಗಿದೆ. ಈಗ ರಾಜ್ಯದಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಹಾಗೂ ಕೆಲವು ತಾಂತ್ರಿಕ ಹುದ್ದೆಗಳಿಗೆ ಸಂದರ್ಶನ ಕಡ್ಡಾಯವಾಗಿದೆ. ಇದು ಸ್ವಜನಪಕ್ಷಪಾತ, ಹಣವುಳ್ಳವರು ಒಳಸೇರುವ ಅವಕಾಶ ನೀಡಿದೆ. ಇತ್ತೀಚೆಗಷ್ಟೇ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿರುವುದು ಸರ್ಕಾರಗಳು ಬದಲಾದಂತೆ ಇಂಥ ನೇಮಕಾತಿಗಳು ಅಕಾಡೆಮಿ, ನಿಗಮ- ಮಂಡಳಿಗಳ ನೇಮಕಾತಿಗಳಾಗಿವೆಯೇ ಎಂಬ ಅನುಮಾನ ಮೂಡಿಸುತ್ತದೆ.
ಈ ಮೇಲಿನ ಸಮಸ್ಯೆಗಳಿಗೆ ಕೆಲವು ಪರಿಹಾರಗಳನ್ನು ಸೂಚಿಸ ಬಹುದು. ಪ್ರತಿ ನೇಮಕಾತಿ ಪ್ರಕ್ರಿಯೆಗೆ ಆರು ತಿಂಗಳ ಕಾಲಮಿತಿ ಯನ್ನು ನಿಗದಿಪಡಿಸುವುದು. ಯು.ಜಿ.ಸಿ.ಯು ತನ್ನ ಅಧೀನ ವಿ.ವಿ.ಗಳಿಗೆ ಈ ತರಹದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ. ಒಟ್ಟು ಮಂಜೂರಾಗಿರುವ ಹುದ್ದೆಗಳ ಪೈಕಿ ಶೇಕಡಾ 80ರಷ್ಟು ಹುದ್ದೆಗಳನ್ನಾದರೂ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು. ಆರ್ಥಿಕ ಹೊರೆಯೆನಿಸುವುದಾದಲ್ಲಿ ಮೊದಲ ಎರಡು ವರ್ಷ ಮಾಸಿಕವಾಗಿ ಒಟ್ಟು ವೇತನದ ಬದಲು ನಿರ್ದಿಷ್ಟ ಮೊತ್ತವನ್ನು ವೇತನವನ್ನಾಗಿ ನೀಡುವುದು. ನಂತರ ಸಂಪೂರ್ಣ ವೇತನವನ್ನು ನೀಡುವುದು.
ಈ ಪದ್ಧತಿಯನ್ನು ಈಗ ವಿವಿಧ ಎಸ್ಕಾಂಗಳಲ್ಲಿ ಜೂನಿಯರ್ ಲೈನ್‌ಮನ್‌ಗಳಿಗೆ ಅನ್ವಯಿಸಲಾಗಿದೆ. ಹಂಗಾಮಿ ನೌಕರರಿಂದ ಸಂಪೂರ್ಣ ಜವಾಬ್ದಾರಿ ಹಾಗೂ ಉತ್ತರದಾಯಿತ್ವವನ್ನು ನಿರೀಕ್ಷಿಸಲಾಗದು. ಹಾಗಾಗಿ ಗುತ್ತಿಗೆ ಸಿಬ್ಬಂದಿಯನ್ನು ಖಾಯಂ ನೌಕರರನ್ನಾಗಿ ನೇಮಿಸಿಕೊಳ್ಳುವುದು ಹಾಗೂ ಖಾಯಂ ಸಿಬ್ಬಂದಿ ನೇರ ನೇಮಕಕ್ಕೆ ಕ್ರಮ ಕೈಗೊಳ್ಳುವುದು. ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ನೌಕರರಿಂದ ನಿರೀಕ್ಷಿಸುವುದಾದರೆ ಸಾಧ್ಯವಾದಷ್ಟು ಸಂದರ್ಶನ ಆಧಾರಿತ ನೇಮಕಾತಿಯನ್ನು ಕೈ ಬಿಟ್ಟು ಮೆರಿಟ್ ಆಧಾರಿತ ನೇಮಕಾತಿಗಳಿಗೆ ಒತ್ತು ಕೊಡುವುದು. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪಾರದರ್ಶಕವಾಗಿ ನೇಮಕಾತಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ಇನ್ನೂ ಮುಂತಾದ ಕ್ರಮಗಳನ್ನು ಅಳವಡಿಸಿಕೊಂಡು ಆಡಳಿತವನ್ನು ಜನರ ಬಳಿಗೆ ಒಯ್ಯುವ ಕಾರ್ಯ ಸಾಕಾರಗೊಳ್ಳಲಿ.
– ಮಂಜುನಾಥ ಸ್ವಾಮಿ ಕೆ.ಎಂ, ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.