ಸಂದರ್ಶನ: ದೇಶವನ್ನು ಮೊಬೈಲ್ ಹ್ಯಾಂಡ್‌ಸೆಟ್ ಹಬ್ ಆಗಿಸುವ ಗುರಿ
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಂದು ತಂಡವಾಗಿ ಹೆಜ್ಜೆ ಹಾಕುತ್ತಿವೆ...
Team Udayavani, Jul 10, 2020, 6:30 AM IST
ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಪರಿಕರಗಳ ಉತ್ಪಾದನಾ ಹಬ್ ಆಗಿಸುವ ಬೃಹತ್ ಗುರಿಯೊಂದಿಗೆ ಹೆಜ್ಜೆ ಹಾಕುತ್ತಿದೆ ಕೇಂದ್ರ ಸರಕಾರ. ಹಾಗಿದ್ದರೆ ಈ ವಿಚಾರದಲ್ಲಿರುವ ಅಡ್ಡಿಗಳನ್ನು ನಿರ್ಮೂಲನೆ ಮಾಡುವಲ್ಲಿ, ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸುವಲ್ಲಿ ಯಾವೆಲ್ಲ ಸುಧಾರಣೆಗಳನ್ನು ತರಲಾಗುತ್ತಿದೆ ಎನ್ನುವುದರ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿದ್ದಾರೆ. ಇಂಡಿಯಾ ಟುಡೆಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
2025-26ರ ವೇಳೆಗೆ ಭಾರತವನ್ನು ನಂಬರ್ 1 ಮೊಬೈಲ್ ಹ್ಯಾಂಡ್‌ಸೆಟ್ ಉತ್ಪಾದನಾ ಕೇಂದ್ರವಾಗಿಸುವ ಬಗ್ಗೆ ಇತ್ತೀಚೆಗೆ ನೀವು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದೀರಿ. 190 ಶತಕೋಟಿ ಡಾಲರ್‌ನ ಈ ಮಾರುಕಟ್ಟೆಯ ಪರಿಕಲ್ಪನೆಯು ವಾಸ್ತವಕ್ಕೆ ಬರಲು ಏನು ಮಾಡಬೇಕು ಎನ್ನುತ್ತೀರಿ?
– ನಾವು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಭಾರತದಲ್ಲಿ ಕೇವಲ ಎರಡು ಮೊಬೈಲ್ ಫ್ಯಾಕ್ಟರಿಗಳಿದ್ದವು. ಈಗ, ನಮ್ಮಲ್ಲಿ 250ಕ್ಕೂ ಅಧಿಕ ಫ್ಯಾಕ್ಟರಿಗಳಿವೆ (ಮೊಬೈಲ್ ಸಂಬಂಧಿ ಬಿಡಿ ಪರಿಕರಗಳ ಉತ್ಪಾದನಾ ಘಟಕ ಒಳಗೊಂಡು). ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ, 90ಕ್ಕೂ ಅಧಿಕ ಉತ್ಪಾದನಾ ಕಂಪನಿಗಳು ಅಸ್ತಿತ್ವಕ್ಕೆ ಬಂದಿವೆ.
2014-2015ರಲ್ಲಿ ಮೊಬೈಲ್ ಉತ್ಪಾದನಾ ಉದ್ಯಮದ ಆದಾಯ 18,990 ಕೋಟಿ ರೂಪಾಯಿಗಳಷ್ಟಿತ್ತು. 2018-2019ರಲ್ಲಿ ಅದು 1.7 ಲಕ್ಷ ಕೋಟಿಗೆ ತಲುಪಿತು, ಈಗ 2019-2020ರಲ್ಲಿ 2.25 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. 2012ರಲ್ಲಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ 1.3 ಪ್ರತಿಶತದಷ್ಟಿದ್ದ ಭಾರತದ ಪಾಲು, ಈಗ 3.5 ಪ್ರತಿಶತಕ್ಕೆ ಏರಿದೆ. ಕಳೆದ ಐದೂವರೆ ವರ್ಷದಲ್ಲಿ ಈ ವಲಯದಲ್ಲಿ ನಾವು 20 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ ಮತ್ತು ಆ್ಯಪಲ್ ಸೇರಿದಂತೆ ಎಲ್ಲಾ ಜಾಗತಿಕ ಬ್ರ್ಯಾಂಡ್‌ಗಳೂ ಭಾರತದಲ್ಲಿವೆ.
ಭಾರತವು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಜಾಗತಿಕ ಉತ್ಪಾದನಾ ಹಬ್ ಆಗಲು ನೀವು ಯಾವ ರೀತಿಯ ಪ್ರೋತ್ಸಾಹ ಕೊಡುತ್ತಿದ್ದೀರಿ?
– ಇದಕ್ಕಾಗಿಯೇ ಸರಿಸುಮಾರು 50 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಇದ್ದು ಇದರಲ್ಲಿ 40 ಸಾವಿರ ಕೋಟಿ ರೂಪಾಯಿಯು ಉತ್ಪಾದನಾ ಸಂಬಂಧಿ ಪ್ರೋತ್ಸಾಹವಾಗಿದ್ದರೆ, 4 ಸಾವಿರ ಕೋಟಿಯು ಕ್ಲಸ್ಟರ್ ಸ್ಕೀಮುಗಳಿಗಾಗಿ ಹಾಗೂ ಇನ್ನೂ ನಾಲ್ಕು ಸಾವಿರ ಕೋಟಿ ರೂಪಾಯಿ ಬಿಡಿ ಭಾಗಗಳ ಉತ್ಪಾದನೆಗೆ ಮೀಸಲಿಡಲಾಗಿದೆ.
ಇಂದು ಮೊಬೈಲ್ ಉತ್ಪಾದನೆಯಲ್ಲಿ ಜಾಗತಿಕವಾಗಿ 5-6 ಕಂಪೆನಿಗಳ ಪಾರಮ್ಯವಿದೆ. ಒಟ್ಟಾರೆ ಉತ್ಪಾದನೆಯಲ್ಲಿ ಇವುಗಳ ಪಾಲು 80 ಪ್ರತಿಶತದಷ್ಟಿದೆ. ಇವುಗಳನ್ನು ನಾವು ಜಾಗತಿಕ ಚಾಂಪಿಯನ್‌ಗಳೆಂದು ಕರೆಯುತ್ತೇವೆ. ಆರಂಭದಲ್ಲಿ ನಾವು 5-6 ಜಾಗತಿಕ ಚಾಂಪಿಯನ್‌ಗಳನ್ನು ಆಕರ್ಷಿಸಲು ಬಯಸಿದ್ದೇವೆ.
ಉತ್ಪಾದನೆಗಾಗಿ ನೀಡಲಾಗುವ ಪ್ಯಾಕೇಜ್‌ನಿಂದ ಇವರಿಗೆ ಲಾಭವಾಗಲಿದೆ. ಎರಡನೆಯದಾಗಿ, ಕ್ಲಸ್ಟರ್‌ಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಮೂರನೆಯದಾಗಿ ಮೊಬೈಲ್ ಫೋನ್‌ಗಳಿಗೆ ಅಗತ್ಯವಾಗಿರುವ ಚಿಪ್‌ಗಳು, ಪರಿಕರಗಳು ಹಾಗೂ ಇತರೆ ಬಿಡಿ ಭಾಗಗಳ ಉತ್ಪಾದನೆಗೆ ಪ್ರೋತ್ಸಾಹಿಸುವುದು.
ಇದರೊಟ್ಟಿಗೆ 5 ರಾಷ್ಟ್ರೀಯ ಚಾಂಪಿಯನ್‌ಗಳನ್ನು ನಾವು ಸೃಷ್ಟಿಸಲು ಮತ್ತು ಅದಕ್ಕಾಗಿ ಅವರಿಗೆ ನೆರವು ನೀಡಲು ಬಯಸಿದ್ದೇವೆ. ಈ ರಾಷ್ಟ್ರೀಯ ಚಾಂಪಿಯನ್‌ಗಳು ಜಾಗತಿಕವಾಗಿ ಸ್ಪರ್ಧೆ ನೀಡುವಂತಾಗಬೇಕು. ನಮ್ಮ ಒಟ್ಟಾರೆ ರೂಪುರೇಷೆ ಹೀಗಿದೆ.
ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ಸ್‌ಗಳ ನಿರ್ಮಾಣ ವಿಷಯಕ್ಕೆ ಬಂದರೆ, ಉತ್ಪಾದನಾ ವಲಯಗಳಿಗೆ ಭೂಪ್ರದೇಶಗಳ ಅಗತ್ಯವಿರುತ್ತದೆ. ಆದರೆ ಜಾಗಗಳ ವಿಚಾರ ಆಯಾ ರಾಜ್ಯಗಳಿಗೆ ಸಂಬಂಧಿಸಿರುವುದರಿಂದ, ಕಂಪನಿಗಳಿಗಿದು ಕಳವಳದ ಸಂಗತಿಯಾಗಿದೆ…
– ನಿರ್ಧಾರಕ್ಕೆ ಬರುವ ಮುನ್ನ ನಾವು ವಿವಿಧ ರಾಜ್ಯಸರಕಾರಗಳೊಂದಿಗೆ ಮತ್ತು ಪಾಲುದಾರರೊಂದಿಗೆ ಚರ್ಚೆ ನಡೆಸಿದ್ದೇವೆ. ನನ್ನ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳು ಸಹ ವಿವಿಧ ರಾಜ್ಯ ಸರಕಾರಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅನೇಕ ರಾಜ್ಯ ಸರಕಾರಗಳು ಈಗ ಮುಂದೆ ಬಂದಿವೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಗುಣಾತ್ಮಕ ಸಂಗತಿಯೆಂದರೆ, ಇದು ಮಾಲಿನ್ಯರಹಿತವಾಗಿದ್ದು, ಉದ್ಯೋಗಗಳನ್ನೂ ಸೃಷ್ಟಿಸುತ್ತದೆ. ನಾವು (ಕೇಂದ್ರ ಮತ್ತು ರಾಜ್ಯ ಸರಕಾರಗಳು) ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ.
ಹೊಸ ನೀತಿಯ ಅಡಿಯಲ್ಲಿ, ದೇಶದಲ್ಲಿ ಎಷ್ಟು ಕ್ಲಸ್ಟರ್‌ಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ?
– ಈಗಾಗಲೇ 20 ಕ್ಲಸ್ಟರ್‌ಗಳು ಬಂದಿವೆ. ದೊಡ್ಡ ಪ್ರಮಾಣದಲ್ಲಿ ಇಎಂಸಿಗಳು (ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಸ್‌ಗಳು) ಕಾರ್ಯರೂಪಕ್ಕೆ ಬಂದಿವೆ. 204 ಕಂಪೆನಿಗಳು ಈಗಾಗಲೇ 847 ಎಕರೆಯಷ್ಟು ಭೂಪ್ರದೇಶವನ್ನು ನೋಂದಾಯಿಸಿಕೊಂಡಿದ್ದು, ಇಎಂಸಿಗಳಲ್ಲಿ ಒಟ್ಟು 32,754 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ. ನಾವೀಗ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿದ್ದೇವೆ.
ಜಾಗತಿಕ ಎಲೆಕ್ಟ್ರಾನಿಕ್ಸ್ ಹಬ್ ಆಗಲು ಭಾರತ, ಚೀನದಲ್ಲಿನ ಜಾಗತಿಕ ಮೌಲ್ಯ ಸರಪಳಿಯ ಮೇಲೂ ಅವಲಂಬಿತವಾಗಬೇಕಾಗುತ್ತದೆ. ಹಾಗಿದ್ದರೆ, ಕೇಂದ್ರ ಸರ್ಕಾರದ ಆತ್ಮನಿರ್ಭರ ಮಾತಿಗೆ ಇದು ಸರಿ ಹೊಂದುತ್ತದೆಯೇ?
– ಆತ್ಮನಿರ್ಭರ ಭಾರತ ಎಂದರೆ ಭಾರತ ಒಂಟಿಯಾಗುವುದು/ಪ್ರತ್ಯೇಕವಾಗುವುದು ಎಂದರ್ಥವಲ್ಲ. ಆತ್ಮನಿರ್ಭರ ಭಾರತ ಎಂದರೆ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದಂಥ ಉತ್ಪಾದನಾ ಹಬ್ ಆಗಿ ಅಭಿವೃದ್ಧಿಪಡಿಸುವುದು ಎಂದರ್ಥ. ಭಾರತದ ಎದುರು ಈ ವಿಚಾರದಲ್ಲಿ ದೊಡ್ಡ ಅವಕಾಶವಿರುವುದನ್ನು ನಾವು ನೋಡುತ್ತಿದ್ದೇವೆ. ಇನ್ನು ಆತ್ಮನಿರ್ಭರ ಭಾರತ ಆಂದೋಲನವು ಯಾವುದೇ ದೇಶದ ವಿರುದ್ಧವಾದದ್ದು ಅಲ್ಲ. ಬದಲಾಗಿ ಇದರ ಗುರಿ ಭಾರತವು ಗುಣಾತ್ಮಕವಾಗಿ ಇರಬೇಕು ಎಂಬುದಾಗಿದೆ. ಇದಷ್ಟೇ ಅಲ್ಲದೇ, ಉದ್ಯಮ ಸ್ನೇಹಿ ವಾತಾವರಣವಿರುವ ರಾಷ್ಟ್ರಗಳ ಶ್ರೇಯಾಂಕದಲ್ಲೂ ನಮ್ಮ ಸ್ಥಾನ ಮೇಲೇರಿದೆ.
ದೇಶದಲ್ಲಿನ ಭೂ, ಕಾರ್ಮಿಕ, ನೇಮಕಾತಿ ನೀತಿಗಳ ಬಗ್ಗೆ ಕಂಪೆನಿಗಳಿಗೆ ಎದೆಗುದಿ ಇದೆ. ಹಾಗಿದ್ದರೆ, ಈ ವಿಚಾರದಲ್ಲಿ ಅವುಗಳಿಗೆ ಅಡಚಣೆಯಾಗದಂತೆ ಹಾಗೂ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂಥ ವಾತಾವರಣವನ್ನು ನಾವು ಪೂರೈಸಬಲ್ಲೆವೇ?
– ಎಲ್ಲ ಅಡ್ಡಿಗಳ ನಡುವೆಯೂ ನಾವಿಂದು 250 ಮೊಬೈಲ್ ಫ್ಯಾಕ್ಟರಿಗಳಿರುವ ರಾಷ್ಟ್ರವಾಗಿ ಬದಲಾಗಿದ್ದೇವೆ. ಇವುಗಳಲ್ಲಿ ಅನೇಕ ಕಂಪೆನಿಗಳು 20 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿವೆ. ಇನ್ನು, ಕಾರ್ಮಿಕ ನೀತಿಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದೇವೆ.
ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಉತ್ತಮ ಸಂಬಳ ಹಾಗೂ ಉತ್ತಮ ಕೆಲಸದ ವಾತಾವರಣವನ್ನು ನೀಡುತ್ತದೆ ಎಂದರೆ, ಖಂಡಿತ ಕೆಲಸಗಾರರು ಅದರೆಡೆಗೆ ಗುಣಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಏನೇ ಇದ್ದರೂ ಭಾರತವೀಗ ಉತ್ಪಾದನಾ ಹಬ್ ಆಗುತ್ತಿದೆ. ರಾಜ್ಯಗಳಿಗೆ ಕೇಂದ್ರ ಸರಕಾರದ ಸಹಾಯದ ವಿಚಾರಕ್ಕೆ ಬರುವುದಾದರೆ. ಏನೇ ಸಮಸ್ಯೆ ಎದುರಾದರೂ ನನಗೊಂದು ಫೋನ್ ಮಾಡಿದರೆ ಸಾಕು. ಖುದ್ದು ನಾನೇ ಮಧ್ಯಪ್ರವೇಶಿಸಿ, ಬಗೆಹರಿಸುತ್ತೇನೆ.
ಗಡಿ ವಿಷಯವಾಗಿ ಭಾರತ ಮತ್ತು ಚೀನದ ನಡುವಿನ ಸಂಬಂಧ ಬಿಕ್ಕಟ್ಟಿನಿಂದ ಕೂಡಿದೆ. ಇನ್ನು ಕೋವಿಡ್ ವಿಚಾರವನ್ನು ಬಹಿರಂಗಪಡಿಸಲು ಚೀನ ತೋರಿಸಿದ ವಿಳಂಬ ಧೋರಣೆಯಿಂದಾಗಿ ಬಹುತೇಕ ರಾಷ್ಟ್ರಗಳಿಗೂ ಚೀನ ವಿರುದ್ಧ ತಕರಾರಿದೆ. ಹಾಗಿದ್ದರೆ, ಚೀನ ವಿಷಯವಾಗಿ ನಿಮ್ಮ ಧೋರಣೆ ಹೇಗಿರಲಿದೆ?
– ನಾನು ನಿರ್ದಿಷ್ಟ ದೇಶವೊಂದರ ಬಗ್ಗೆ ಮಾತನಾ ಡಲು ಬಯಸುವುದಿಲ್ಲ. ಬಿಕ್ಕಟ್ಟು ಪರಿಹಾರಕ್ಕೆ ಒಂದು ಮೆಕ್ಯಾನಿಸಂ ಅನ್ನುವುದು ಇರುತ್ತದೆ. ಸಶಸ್ತ್ರ ಪಡೆಯಲ್ಲಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಇದು ನಡೆಯುವಂಥದ್ದು. ಆದರೆ ಒಂದು ಮಾತನ್ನಂತೂ ಹೇಳಲು ಬಯಸುತ್ತೇನೆ.
ಇದು 2020ರ ಭಾರತವೇ ಹೊರತು, 1962ರ ಭಾರತವಲ್ಲ. ಇದು ಧೈರ್ಯ ಮತ್ತು ದೃಢನಿಶ್ಚಯದ ನಾಯಕ ಮುನ್ನಡೆಸುತ್ತಿರುವ ಭಾರತ. ಇನ್ನು ಚೀನದ ವಸ್ತುಗಳ ವಿಚಾರಕ್ಕೆ ಬರುವುದಾದರೆ, ಒಬ್ಬ ಭಾರತೀಯನಾಗಿ ನನಗೆ ಅಸೌಖ್ಯ ಉಂಟುಮಾಡುವುದೇನೆಂದರೆ, ದೀಪಾವಳಿಯಲ್ಲಿ ಲಕ್ಷ್ಮೀ ಮತ್ತು ಗಣೇಶನ ಮೂರ್ತಿಯೂ ಚೀನದಿಂದ ಬರುತ್ತವೆ ಎನ್ನುವುದು. ಲಕ್ಷ್ಮೀ – ಗಣಪತಿಯ ಮೂರ್ತಿಗಳನ್ನು ಉತ್ಪಾದಿಸುವ ಸಂಪೂರ್ಣ ಸಾಮರ್ಥ್ಯ ಭಾರತಕ್ಕಿಲ್ಲವೇ? ಖಂಡಿತ ಇದೆ. ಭಾರತೀಯರು ಈ ವಿಚಾರದಲ್ಲಿ ಯೋಚಿಸಬೇಕಾಗಿದೆ.
– ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.