ರಾಮಾಯಣಕ್ಕೆ ಮುಖಾಮುಖೀಯಾದಾಗ…
Team Udayavani, Jan 20, 2019, 12:30 AM IST
ಬಡಿದಾಡುವವರೆಲ್ಲಾ ಧರ್ಮ ನಿಂದನೆ-ರಕ್ಷಣೆಯ ಹೆಸರಿನಲ್ಲಿ ತಮ್ಮ ತಮ್ಮ ಹಠ ಸಾಧಿಸಿಕೊಳ್ಳುತ್ತಿರುವವರು ಮಾತ್ರ. ಪ್ರಚೋದನೆ ಮಾತ್ರ ಇವರಿಗೆ ಸೀಮಿತವಾಗಿದೆ. ರಾಮನಾಮ ಶಾಂತಿಧಾಮವೆಂದು ಭಾವಿಸಿ ಬದುಕುತ್ತಿರುವ ಸಿದ್ಧಾಂತ, ಮತಾಂಧತೆಗಳಿಂದ ದೂರವಿರುವ ಕೋಟ್ಯಂತರ ಸಾಮಾನ್ಯರು ನಮ್ಮಲ್ಲಿದ್ದಾರೆ.
ರಾಮ ಎರಡು ವಾದಿಗಳಿಗೆ ಆಹಾರ, ಆತ ರಾಜಕೀಯ ದಾಳ, ಭಾರತೀಯ ಸಾಂಸ್ಕೃತಿಕ ವಸ್ತು! “ರಾಮ ನೀ ನಾಮು ಎಂತೋ ರುಚಿರಾ’ ಇದು ಶ್ರೀರಾಮದಾಸರ ಸುಪ್ರಸಿದ್ಧ ಕೀರ್ತನೆಯ ಸಾಲು. ರಾಮ ನಿನ್ನ ನಾಮ ಎಷ್ಟೋ ರುಚಿಯೋ ಎಂದು ಇದರ ಅರ್ಥ. ಹೌದು ರಾಮನಾಮ ಕೆಲವರಿಗೆ ಅಮೃತವಾದರೆ, ಅದು ಮತ್ತೆ ಕೆಲವರಿಗೆ ಅಪಥ್ಯ.
ರಾಮನ ಹೆಸರಿನಲ್ಲಿ ವಾದ-ವಿವಾದ-ವಿತಂಡವಾದಗಳ ಸರಣಿಗಳು ನಿತ್ಯ ನಿಲ್ಲದೆ ನಡೆಯುತ್ತಲೇ ಇವೆ. ರಾಮನ ಶ್ರೇಷ್ಠತೆಯನ್ನು ಪ್ರಶ್ನಿಸುವ ಗುಂಪು ಒಂದೆಡೆ, ರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದು ಗುಣಗಾನ ಮಾಡುವ ಆಸ್ತಿಕ ಸಮೂಹ ಇನ್ನೊಂದೆಡೆ. ಆದರೆ ಒಂದು ಇನ್ನೊಂದಕ್ಕೆ ಎದುರಾದಾಗ ಅಲ್ಲಿ ರಾಮ-ರಾವಣರ ಯುದ್ಧವೇ ಸಂಭವಿಸಿಬಿಡುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಯುದ್ಧಕ್ಕೆ ನಾವೆಲ್ಲಾ ನಿತ್ಯ ರುಜು ಹಾಕುತ್ತಲೇ ಬಂದಿದ್ದೇವೆ.
ರಾಮಾಯಣಕ್ಕೆ ಬಂದಾಗ ಅದು ರಾಮಚರಿತ್ರೆ ಮಾತ್ರವಲ್ಲ. ಮಹರ್ಷಿ ವಾಲ್ಮೀಕಿಗಳು ಅದನ್ನು ಅಲ್ಲಿಗೆ ಸೀಮಿತಗೊಳಿಸದೆ ಅದನ್ನು ಮಾನವನ ಸಹಜ ಸ್ವಭಾವವಾದ ಕಾಮನೆಗಳು, ಅಸೂಯೆ, ಕೋಪ, ಲಂಪಟತನ, ಪರಸ್ತ್ರೀ ಕಾಮನೆಯ ಅಡ್ಡಪರಿಣಾಮ, ಅಧಿಕಾರದಾಹ, ಆದರ್ಶ ಬದುಕು ಹೀಗೆ ಜಗತ್ತಿಗೆ ಬೇಕಾದ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಇಂದಿನ ವಾದಗಳೆಂಬ ಯುದ್ಧದ ಕಾಲಘಟ್ಟದಲ್ಲಿ ರಾಮಾಯಣ ಬೆಳಕು ಚೆಲ್ಲಿದ ಅಂಶಗಳನ್ನು ಮುಕ್ತವಾಗಿ ನೋಡುವುದು ಅವಶ್ಯಕವೆನ್ನಿಸುತ್ತದೆ. ವಾದಗಳ ಕೇಂದ್ರ ಬಿಂದು ಎಲ್ಲಿದೆ? ಮಾತಿನಲ್ಲಿದೆ! ಮಾತು ಮಾತು ಬೆಳೆದಂತೆ ವಾದ ವಿವಾದಕ್ಕೆ, ವಿವಾದ ವಿತಂಡವಾದಕ್ಕೆ, ಅದು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ ದೇಶದಲ್ಲಿ ಆಗುತ್ತಿರುವುದು ಅದೇ.
ತಾನು ನಂಬಿದ ಸಿದ್ಧಾಂತ, ಧರ್ಮ, ನಂಬಿಕೆಯ ಕಡೆಗೆ ಯಾರಾದರೂ ಬೆರಳು ಮಾಡಿದಾಗ ಅಲ್ಲಿ ಶೋಕ ಉಂಟಾಗುತ್ತದೆ. ಆ ಶೋಕದಿಂದ ಉತ್ಪತ್ತಿಯಾಗುವ ರಸವೇ ಅಸೂಯೆ, ಹತಾಶೆ, ಉದ್ವೇಗ. ಇವುಗಳ ಸಮೂಹ ಪ್ರತಿನಿಧಿಯೇ ಕೋಪ. ಕೋಪದ ಮೇಲೆ ನಿಯಂತ್ರಣವಿಲ್ಲದೆ ಹೋದಾಗ ವೃತ್ತಿಯಾಗಲಿ, ಪ್ರವೃತ್ತಿಯಾಗಲಿ, ಚಿಂತನೆಯಾಗಲಿ ಎಲ್ಲವೂ ಅನಾಹುತಗಳನ್ನೇ ಸೃಷ್ಟಿಸುತ್ತವೆ. ಕೋಪಕ್ಕೆ ವಶನಾದವನು ಏನು ಮಾಡುತ್ತಾನೆ? ಕೋಪದಿಂದ (ಹತಾಶೆ) ಅವನ ಬಾಯಿಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. (ಸಾಮಾಜಿಕ ಜಾಲತಾಣದಲ್ಲಿ ಕೈಬೆರಳುಗಳು ಇಂತಹ ಹತಾಶೆಯ ಭಾವದಲ್ಲಿ ನಿಯಂತ್ರಣವಿಲ್ಲದೆ ವರ್ತಿಸು ತ್ತಿರುವುದು). ತನ್ನನ್ನು ಅವರಿಸಿದ ಕೋಪವನ್ನು ಬಿಟ್ಟವನೇ ಧನ್ಯ ಎನ್ನುತ್ತದೆ ರಾಮಾಯಣ. ಮುಂದುವರಿದು ರಾಮಾಯಣ ಹೇಳುತ್ತದೆ “ಉತ್ತಮನು ಯಾರು? ಸಹನೆಯ ಬಲವುಳ್ಳವನು!’
ಈಗ ಸಹನೆ ಯಾರಲ್ಲಿದೆ? ಎಷ್ಟರಮಟ್ಟಿಗೆ ಸಹನೆಯಿಂದ ವರ್ತಿಸುತ್ತಿದ್ದೇವೆ? ಸಹನೆಯಿಂದ ಬೇರೆಯವರ ಮಾತು (ವಾದ)ಗಳನ್ನು ಆಲಿಸುತ್ತಿದ್ದೇವೆ? ರಾಮನನ್ನು ನಂಬಿಕೊಂಡವರಲ್ಲೂ ಸಹನೆಯಿಲ್ಲ, ರಾಮನನ್ನು ಪ್ರಶ್ನಿಸುತ್ತಿರುವರಲ್ಲೂ ಅದು ಇಲ್ಲ.
ವಾಲ್ಮೀಕಿ ರಾಮಾಯಣ ವ್ಯಕ್ತಿತ್ವದ ಬಗ್ಗೆ ಎಷ್ಟೊಂದು ಅದ್ಭುತವಾಗಿ ವಿವರಿಸುತ್ತದೆ. ಅಸೂಯೆಯಿಂದ ಮೊದಲು ಹುಟ್ಟುವುದು ಬೇರೆಯವರಲ್ಲಿನ ಅವಗುಣಗಳನ್ನು ಹುಡುಕುವ ಚಟ. ಇತರರ ಒಳ್ಳೆಯ ಗುಣಗಳನ್ನು ಕಡಿಮೆ ಮಾಡಿ ನೋಡುವುದು ಅವರಲ್ಲಿ ಇಲ್ಲದ ಕೆಟ್ಟಗುಣಗಳನ್ನು ಚಿತ್ರಿಸಿ ಅವರ ವ್ಯಕ್ತಿತ್ವವನ್ನು ನಾಶಮಾಡುವುದು. ವ್ಯಕ್ತಿತ್ವವೆಂದರೆ ಆತ್ಮಪರಿಶೀಲನೆ, “ನಾನು ಹೀಗೆ ಮಾತನಾಡಬಹುದೇ? ನಾನು ಯಾವುದೇ ತಪ್ಪು ಮಾಡಿಲ್ಲವೇ? ನನ್ನಲ್ಲಿ ಯಾವುದೇ ಅವಲಕ್ಷಣಗಳೂ ಇಲ್ಲವೆ?’ ಹೀಗೆ ನಿನ್ನನ್ನು ನೀನು ಮೊದಲು ಪ್ರಶ್ನಿಸಿಕೋ ಅನ್ನುತ್ತದೆ ರಾಮಾಯಣ. ಎಷ್ಟರಮಟ್ಟಿಗೆ ನಾವು ಆತ್ಮಪರಿಶೀಲನೆ ಮಾಡಿಕೊಂಡು ಮಾತನಾಡುತ್ತಿದ್ದೇವೆ?
ವಾಲ್ಮೀಕಿಗಳು ತೀರ್ಥಸ್ನಾನಕೆಂದು ತಮ್ಮ ಶಿಷ್ಯಗಣದೊಂದಿಗೆ ತಮಸಾ ನದಿಗೆ ಹೋಗುತ್ತಾರೆ. ತಮಸಾ ನದಿಯನ್ನು ಕಂಡು ಹರ್ಷಗೊಂಡ ಅವರು ತಮ್ಮ ಪ್ರಿಯ ಶಿಷ್ಯ ಭಾರದ್ವಾಜನಿಗೆ “ಭಾರದ್ವಾಜ, ಈ ನದಿಯ ಜಲ ಎಷ್ಟೊಂದು ಶುಭ್ರವಾಗಿದೆ, ನದಿ ತೀರವಂತೂ ಸಜ್ಜನರ ಮನಸ್ಸಿನಂತೆ ಕಲ್ಮಶ ರಹಿತವಾಗಿದೆ’ ಎನ್ನುತ್ತಾರೆ. ಅರ್ಥ: ಸಜ್ಜನರ ಮನಸ್ಸು ಕಲ್ಮಶರಹಿತವಾಗಿರುತ್ತದೆ. ಆದರೆ ಎಂತಹ ಸಜ್ಜನರನ್ನು ಎಲ್ಲಿ ಹುಡುಕುವುದು, ಎಂಬುದೇ ಸಮಸ್ಯೆಯಾಗಿದೆ.
ಸಮಾಜದಲ್ಲಿ ಉದ್ವೇಗದ ವಾತಾವರಣ ನಿರ್ಮಾಣವಾಗಲೂ ಕಾರಣ ಅಸಹನೆ. ವ್ಯಕ್ತಿ-ವ್ಯಕ್ತಿಯಲ್ಲೂ ಅಸಹನೆಯ ಕಾರಣದಿಂದ ಪ್ರಚೋದನೆ ಉಂಟಾಗುತ್ತಿದೆ. ವಾಲ್ಮೀಕಿಗಳು ರಾಮನ ವ್ಯಕ್ತಿತ್ವವನ್ನು ಸಹನೆಯೊಂದಿಗೆ ಸಮೀಕರಿಸಿ ಹೇಳುವಾಗ “ಅವನ ಸಹನೆ ಭೂಮಿಯಷ್ಟು’ ಅನ್ನುತ್ತಾರೆ. ಸಹನೆ ಎಂಬ ಅಸಹಾಯಕತೆಯ ಸಂಕೇತವಲ್ಲ. ಎದುರಿನ ವ್ಯಕ್ತಿಯ ನಿರಂತರ ಪ್ರಚೋದನೆ ಹೊರತಾಗಿಯೂ ಒಂದು ಮಾತೂ ಆಡದೆ ತಾಳ್ಮೆಯಿಂದ ವರ್ತಿಸಲು ಮನೋನಿಗ್ರಹ ಅವಶ್ಯಕ. ನಿಜವಾದ ಧೈರ್ಯ-ಧರ್ಮ ಯಾವುದೆಂದರೆ ಸಹನೆಯಿಂದ ಪ್ರಚೋದನೆಯನ್ನು ಸ್ವೀಕರಿಸುವುದು. ಅವನು (ಎದುರಿಗಿರುವ ವ್ಯಕ್ತಿ) ಪ್ರಚೋದಿಸಿದಾಗ ನಾನು (ರಾಮ) ಪ್ರಚೋದನೆಗೆ ಒಳಪಟ್ಟರೆ ನನಗೂ-ಅವನಿಗೂ ಯಾವ ವ್ಯತ್ಯಾಸವಿರುವುದಿಲ್ಲ ಇದು ವಾಲ್ಮೀಕಿಯ ರಾಮನ ಸಹನಾಶಕ್ತಿ. ಸಹನಾಮೂರ್ತಿಯಾದ ರಾಮನ ಭಕ್ತಗಣ ಪ್ರಚೋದನೆಗೆ ಒಳಾಗುವುದು ಎಷ್ಟರಮಟ್ಟಿಗೆ ಸರಿ? ಒಂದು ವರ್ಗ ಹೌದು ರಾಮನ ಬಗ್ಗೆ ಕೆಟ್ಟದಾಗಿ ಚಿತ್ರಿಸಿ, ವಿಮರ್ಶಿಸುತ್ತಿದೆ ತಾನೆ? ಇರಲಿ ಬಿಡಿ, ಸತ್ಯದ ಅರಿವು ನಿಮಗೆ ಇದೇ ತಾನೆ? ನಿಮ್ಮ ರಾಮನ ವ್ಯಕ್ತಿತ್ವ ನಿಮಗೆ ಗೊತ್ತು ತಾನೆ? ಮತ್ತೆ ಯಾಕೆ ಈ ಮಟ್ಟದ ಟೀಕೆ-ಟಿಪ್ಪಣಿ? ಕೆಲವೊಂದಕ್ಕೆ ನಿರ್ಲಕ್ಷ Âವೇ ಉತ್ತರವಾಗಬೇಕು.
ಧರ್ಮವೆಂದರೆ ಸಹನೆ. ರಾಮಾಯಣ ಸಹನೆಯನ್ನು ಪ್ರತಿಬಿಂಬಿಸುತ್ತದೆ. ಎಲ್ಲದರಲ್ಲೂ ಪ್ರಚೋದನೆ, ಧರ್ಮದಲ್ಲಂತೂ ಈಗ ಬರೀ ಪ್ರಚೋದನೆ ಮಾತ್ರವೇ ಉಳಿದುಬಿಟ್ಟಿದೆ. ಧರ್ಮದ ಹೆಸರಿನಲ್ಲಿ ಸಮಾಜ ಪ್ರಚೋದನೆಗೆ ಒಳಪಟ್ಟರೆ ಸಮಾಜಕ್ಕೆ ನೆಲೆ ದಕ್ಕುವುದೇ? ರಾಮನು ಮದ್ಯಪಾನ ಮಾಡುತ್ತಿದ್ದ, ಮಾಂಸಾಹಾರ ಸೇವನೆ ಮಾಡುತ್ತಿದ್ದ ಎಂದು ಕೆಲವರನ್ನುತ್ತಾರೆ, ಅದರ ಬದಲಾಗಿ ರಾಮನಲ್ಲಿನ ಸಹನೆ, ಸಮಾಜದ ಬಗ್ಗೆ ಆತನಿಗಿದ್ದ ಕಾಳಜಿ, ರಾಮನನ್ನು ಸಮಾಜ ನೋಡುತ್ತಿದ್ದ ರೀತಿ ಇವುಗಳ ಬಗ್ಗೆ ಚಿಂತಿಸಿದ್ದರೆ ಅದಕ್ಕೊಂದು ಅರ್ಥ ದಕ್ಕುತ್ತದೆ. ರಾಮ ದೇವರೋ ಇಲ್ಲ ಮಾನವನೋ ಅನ್ನುವ ಚರ್ಚೆಗಿಂತ ರಾಮ ಈ ದೇಶದ ಒಂದು ಸಾಂಸ್ಕೃತಿಕರೂಪ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಆತನಲ್ಲಿದ್ದ ಮಾನವ, ಆತನಲ್ಲಿದ್ದ ದೇವರೂಪಕ್ಕೆ ಮೀರಿ ರಾಮಾಯಣ ನೀಡಿದ ರಾಮನೆಂಬ ಸಾಂಸ್ಕೃತಿಕ ರೂಪಕ್ಕೆ ಗೌರವಿಸಿದರೆ ಅದಕ್ಕೊಂದು ಅರ್ಥ ದಕ್ಕುತ್ತದೆ.
ಒಂದಾನೊಂದು ಸಂದರ್ಭದಲ್ಲಿ ವಿಚಾರವಂತರೊಬ್ಬರ ಜೊತೆಗೆ ಮನುಸ್ಮತಿಯ ಬಗ್ಗೆ ಚರ್ಚಿಸಿದೆ. ಆಗ ಅವರೊಂದು ಅದ್ಭುತವಾದ ಮಾತು ಹೇಳಿದರು. “ಈಗ ಪ್ರಗತಿಪರರೆಂದು ಕರೆಸಿಕೊಳ್ಳುವವರೆಲ್ಲಾ ಮನುಸ್ಮತಿಯನ್ನು ಸುಡಬೇಕು ಅನ್ನುತ್ತಾರೆ. ಆದರೆ ನನ್ನ ಪ್ರಶ್ನೆ, ಮನುಸ್ಮತಿಯನ್ನು ಸುಡುವುದರಿಂದ ನೀವು ಮನುವನ್ನು ಸುಡಬಹುದೆ? ಈಗ ಮನು, ಸ್ಮತಿಯಲ್ಲಿ ಇಲ್ಲ, ಸಮಾಜದಲ್ಲಿದ್ದಾನೆ, ನಿಮ್ಮಲ್ಲಿದ್ದಾನೆ, ನನ್ನಲ್ಲಿದ್ದಾನೆ. ನಾವು ನಮ್ಮಲ್ಲಿನ ಮನುವನ್ನು ಸುಟ್ಟುಕೊಂಡರೆ ಸಮಾಜದಲ್ಲಿ ಸಮಾನತೆ ತಾನಾಗಿ ಬರುತ್ತೆ.’
ಹೌದಲ್ಲಾ, ನಾವು ಮಾಡುತ್ತಿರುವುದೇನು? ಯಾವುದನ್ನೋ ಸುಡಬೇಕು ಅಂತ ಕೂಗುತ್ತೇವೆ. ಏನನ್ನೋ ಮಾಡಿಬಿಡಬೇಕೆಂದು ಹೋರಾಡುತ್ತವೆ. ಆದರೆ ಅಂತರಂಗದಲ್ಲಿ ನಾವು ಇನ್ನೂ ಹಾಗೇ ಉಳಿದುಬಿಟ್ಟಿದ್ದೇವೆ. ಪ್ರಚೋದನೆಗೆ ಮೀರಿ ಬದುಕುವ ಶಕ್ತಿ ನಮ್ಮಲ್ಲಿ ಇಲ್ಲದಾಗಿದೆ. ಯಾವ ಭಗವದ್ಗೀತೆಯನ್ನು ಸುಟ್ಟರೋ, ಗಗನಯಾತ್ರಿ ಸುನೀತಾ ವಿಲಿಯಮ್ಸ್ ತನ್ನ ಭರವಸೆಯ ಸಂಕೇತವಾಗಿ ಮಂಗಳಯಾತ್ರೆಗೆ ತೆಗೆದುಕೊಂಡು ಹೋಗಿದ್ದು ಇದೇ ಭಗವದ್ಗೀತೆಯನ್ನೇ. ಅದು ಅವರ ನಂಬಿಕೆ, ಅದನ್ನು ಗೌರವಿಸ ಬೇಕಾಗುತ್ತದೆ. ಭಗವದ್ಗೀತೆಯನ್ನು ಒಬ್ಬರು ಸುಡುವುದರಿಂದ ಇದಕ್ಕಿರುವ ಮೌಲ್ಯವೇನೂ ಕಡಿಮೆ ಆಗುವುದಿಲ್ಲ.
ಬಲವಂತದಿಂದ ಯಾವುದನ್ನೂ ಬದಲಾಯಿಸಲಾಗದು. ಸಮಾಜ ತನ್ನೊಳಗೆ ತಾನೇ ಬದಲಾವಣೆಗೆ ತೆರೆದುಕೊಳ್ಳಬೇಕು. ಇಲ್ಲದೇ ಹೋದರೆ ಯಾವುದು ಸಮಾನತೆಯೆಂದು ಭಾವಿಸುತ್ತೇವೋ ಅದು ಕೊನೆಗೆ ಭ್ರಮೆಯಾಗಿ ಬಿಡುತ್ತದೆ.
ಹಿಂದೆ ಕೆಲವರು ಭಗವದ್ಗೀತೆಯನ್ನು ಸುಟ್ಟರು. ಅದರಿಂದ ಏನಾದರೂ ಸಮಾಜದಲ್ಲಿ ಬದಲಾವಣೆ ಆಯಿತೇ? ಇಲ್ಲ, ಬದಲಾಗಿ ಅದರಿಂದ ಸಮಾಜದಲ್ಲಿ ಉದ್ವೇಗ, ಅಸಹನೆ ಹೆಚ್ಚಾಯಿತು. ಈಗ ರಾಮಾಯಣದ ಸರದಿ, ರಾಮನನ್ನು ಪ್ರಶ್ನಿಸುವುದು, ಅದನ್ನೇ ಜಾತ್ಯಾತೀತ, ಪ್ರಗತಿಪರವೆಂದು ಮಾತನಾಡುವುದರಲ್ಲಿ ಯಾವುದೇ ಸಾಮಾಜಿಕ ಸುಧಾರಣೆಯ ಚಿಂತನೆಯಿಲ್ಲ. ಸಾಮಾಜಿಕ ಸುಧಾರಣೆಗೆ ಇರುವುದು ಎರಡೇ ಮಾರ್ಗ. ಒಂದು ಯಾವುದು ಮೌಡ್ಯ ಧರ್ಮವೆಂದು ಭಾವಿಸುತ್ತಿರೋ ಅದನ್ನು ಸಂಪೂರ್ಣವಾಗಿ ತ್ಯಜಿಸುವುದು. ಎರಡು, ಮೌಡ್ಯ ಕಂದಾಚಾರಗಳಿಂದ ದೂರ ಇರುವುದು. ಅಷ್ಟನ್ನು ಬಿಟ್ಟು ಆ ಧರ್ಮವನ್ನು ಬಿಡಲಾಗದೆ, ಅದರಲ್ಲಿನ ವಸ್ತುವನ್ನು ಒಪ್ಪಿಕೊಳ್ಳಲಾಗದೆ ಅದರ ಮೇಲೆ ನಿತ್ಯ ಗಧಾಪ್ರಹಾರ ಮಾಡುವುದರಿಂದ ಸಾಮಾಜಿಕ ಸುಧಾರಣೆ ಆಗುತ್ತದೆಂದು ತಿಳಿದರೆ ಅದೊಂದು ಪೊಳ್ಳುತನವಾಗಿಬಿಡುತ್ತದೆ.
ರಾಮನನ್ನು ಪ್ರಶ್ನಿಸಿ, ರಾಮಾಯಣವನ್ನು ವಿಮರ್ಶಿಸುವುದೇ ನಿಜವಾದ ಅಭಿವ್ಯಕ್ತಿ ಸ್ವಾತಂತ್ರÂವೆಂದುಕೊಂಡರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೂಂದಿಲ್ಲ. ಹೋಗಲಿ, ಇದನ್ನೇ ಅಭಿವ್ಯಕ್ತಿಯೆಂದು ಭಾವಿಸಿದರೂ ಇದರಿಂದ ಸಮಾಜ ಏನನ್ನು ದಕ್ಕಿಸಿಕೊಳ್ಳುತ್ತದೆ? ಎಂಬುದು ಇಲ್ಲಿರುವ ಮೂಲಭೂತ ಪ್ರಶ್ನೆ. ರಾಮನನ್ನು ವಿಮರ್ಶಿಸುವುದರಿಂದ, ಭಗವದ್ಗೀತೆಯನ್ನು ಸುಡುವುದರಿಂದ ಜನಸಾಮಾನ್ಯರಲ್ಲಿ ರಾಮನ ಮೇಲಿರುವ ಪ್ರೀತಿ, ಕೃಷ್ಣನ ಮೇಲಿರುವ ಭಕ್ತಿ ಇವೆರಡು ಕಡಿಮೆಯಾಗುವುದಿಲ್ಲ.
ರಾಮಾಯಣ ಈ ದೇಶದ ಜನಸಾಮಾನ್ಯನಿಗೆ ಸಹನೆಯ ಪಾಠ ಹೇಳಿಕೊಟ್ಟಿದೆ. ಹೀಗಾಗಿ ಅವನು ಪ್ರಚೋದನೆಗೆ ಒಳ್ಳಪಟ್ಟಿಲ್ಲ. ಇಲ್ಲಿ ಬಡಿದಾಡುವವರೆಲ್ಲಾ ಧರ್ಮ ನಿಂದನೆ-ರಕ್ಷಣೆಯ ಹೆಸರಿನಲ್ಲಿ ತಮ್ಮ ತಮ್ಮ ಹಠ ಸಾಧಿಸಿಕೊಳ್ಳುತ್ತಿರುವವರು ಮಾತ್ರ.
ಪ್ರಚೋದನೆ ಮಾತ್ರ ಇವರಿಗೆ ಸೀಮಿತವಾಗಿದೆ. ರಾಮನಾಮ ಶಾಂತಿ ಧಾಮವೆಂದು ಭಾವಿಸಿ ಬದುಕುತ್ತಿರುವ ಸಿದ್ಧಾಂತ, ಮತಾಂಧತೆಗಳಿಂದ ದೂರವಿರುವ ಕೋಟ್ಯಂತರ ಸಾಮಾನ್ಯರು ಈಗಲೂ ಪಠಿಸುತ್ತಿರುವುದು ಮಾತ್ರ ರಾಮ…ರಾಮ…ರಾಮ…
– ರವೀಂದ್ರ ಕೊಟಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.