ಪವಿತ್ರ ಆರ್ಥಿಕತೆಯ ಕುಸಿತವ ನಾವೇಕೆ ಗಮನಿಸುತ್ತಿಲ್ಲ?
Team Udayavani, Sep 18, 2019, 4:38 AM IST
ಇಂದು ಬಂದಿರುವ ಆರ್ಥಿಕ ಹಿಂಜರಿತವು ಒಂದರ್ಥದಲ್ಲಿ ಒಳ್ಳೆಯದನ್ನೇ ಮಾಡಿದೆ. ಮಾಡು ಇಲ್ಲವೆ ಮಡಿ ಎನ್ನುತ್ತಿದೆ. ಇದು ದೇವವಾಣಿ ಎಂದೇ ನಂಬುತ್ತೇನೆ ನಾನು. ಎಷ್ಟೆಂದರೂ, ದೇವರು ಶ್ರಮಜೀವಿಗಳ ಸ್ನೇಹಿತ ತಾನೆ? ನಾವು ಬದಲಾದರೆ ರಾಜಕಾರಣಿ ಬದಲಾಗುತ್ತಾನೆ, ನಾವು ಕೊಳ್ಳದೆ ಹೋದರೆ ಕೊಳ್ಳುಬಾಕತೆ ತಂತಾನೆ ಕಳಚಿಬೀಳುತ್ತದೆ.
ಪತ್ರಿಕೆಗಳ ತುಂಬ ದೇಶದ ಆರ್ಥಿಕತೆ ಸೋಲುತ್ತಿರುವುದೇ ಸುದ್ದಿ. ಹೆಚ್ಚಿನ ಸುದ್ದಿಗಳು ಆಟೊಮೊಬೈಲ್ ಉದ್ದಿಮೆಯ ಕುಸಿತ, ಬ್ಯಾಂಕುಗಳ ಕುಸಿತ, ರಿಯಲ್ ಎಸ್ಟೇಟಿನ ಕುಸಿತ, ಬರಬಹುದಾದ ಸಾಫ್ಟ್ವೇರ್ ಕುಸಿತಗಳ ಬಗ್ಗೆ ಮಾತನಾಡುತ್ತಿವೆ ಹಾಗೂ ಚಿಂತಿತವಾಗಿವೆ. ಸರಕಾರವೂ ಸಹ ಇವುಗಳ ಬಗ್ಗೆಯೇ ಮಾತನಾಡುತ್ತಿದೆ ಹಾಗೂ ಚಿಂತಿತವಾಗಿದೆ. ರಾಕ್ಷಸಾಕಾರದ ಆರ್ಥಿಕತೆಯಾದ್ದರಿಂದ, ಬಿದ್ದಾಗ ಭಾರೀ ಸದ್ದಾಗುವುದು ಸಹಜವೇ. ಆದರೆ ನಿಂತ ನೆಲವೇ ಅಲುಗಾಡುವಾಗ ಕೆಲವೊಮ್ಮೆ ತಿಳಿಯುವುದಿಲ್ಲ ನಮಗೆ.
ಈ ಎಲ್ಲ ಸದ್ದ್ದುಗದ್ದಲದ ನಡುವೆ ನಾವು ನಿಜವಾದ ಕುಸಿತವನ್ನು ಗಮನಿಸುತ್ತಲೇ ಇಲ್ಲ. ಅದನ್ನು ನಾನು ನೆಲದ ಕುಸಿತ ಅಥವಾ ಪವಿತ್ರ ಆರ್ಥಿಕತೆಯ ಕುಸಿತ ಎಂದು ಕರೆಯಲು ಬಯಸುತ್ತೇನೆ.
ಪವಿತ್ರ ಆರ್ಥಿಕತೆಯನ್ನು ನಾನು ಹೀಗೆ ವಿವರಿಸಲು ಬಯಸುತ್ತೇನೆ: ಅತ್ಯಂತ ಕಡಿಮೆ ಹೂಡಿಕೆ ಮಾಡಿ ಅತ್ಯಂತ ಹೆಚ್ಚು ಜನರಿಗೆ ಉದ್ಯೋಗ ಒದಗಿಸಬಲ್ಲ ಆರ್ಥಿಕತೆಯದು. ಕಡಿಮೆ ಹೂಡಿಕೆ ಎಂದಾಗ, ಕಡಿಮೆ ಹಣ, ಕಡಿಮೆ ಪರಿಸರ ಎರಡೂ ಹೌದು. ಸರಳವಾಗಿ ಹೇಳಬೇಕೆಂದರೆ, ಸುತ್ತಲ ಪರಿಸರ ಹಾಗೂ ಜನಜೀವನಕ್ಕೆ ಅತ್ಯಂತ ಕಡಿಮೆ ಹಾನಿ ಮಾಡಿ ಅತ್ಯಂತ ಹೆಚ್ಚು ಉದ್ಯೋಗ ಕೊಡಿಸಬಲ್ಲ ಆರ್ಥಿಕತೆಯೇ ಪವಿತ್ರ ಆರ್ಥಿಕತೆ. ಆದರೆ ಈ ಆರ್ಥಿಕತೆಗೊಂದು ಸಮಸ್ಯೆಯಿದೆ. ಈ ಆರ್ಥಿಕತೆಯಲ್ಲಿ ಹಣದ ಹೂಡಿಕೆ ಕಡಿಮೆಯಾದ್ದರಿಂದ, ಹಣದ ಲಾಭವೂ ಕಡಿಮೆ, ಅಭಿವೃದ್ಧಿಯೂ ಕಡಿಮೆ. ಆದರೆ, ಪರಿಸರ ಹೂಡಿಕೆ ಅರ್ಥಾತ್ ನೈಸರ್ಗಿಕ ಪದಾರ್ಥಗಳ ದುರ್ಬಳಕೆಯೂ ಕಡಿಮೆಯಿರುವುದರಿಂದ ಪರಿಸರ, ಸಮಾಜ ಹಾಗೂ ಸಂಸ್ಕೃತಿಗಳಿಗೆ ಇದರಿಂದ ಲಾಭ ಹೆಚ್ಚು. ನಾವು ಎಂದು ಒಳಿತನ್ನೂ ಲಾಭವೆಂದು ಪರಿಗಣಿಸುವೆವೋ, ಅಂದು ಆರ್ಥಿಕತೆ ಪವಿತ್ರವಾಗುತ್ತದೆ.
ಪವಿತ್ರ ಆರ್ಥಿಕತೆ ಎಂಬುದು ಒಂದು ಮಾನದಂಡ. ಈ ಮಾನದಂಡದ ಪ್ರಕಾರ, ಕೈ ಉತ್ಪಾದಕತೆ ಅತ್ಯಂತ ಪವಿತ್ರವಾದದ್ದಾದರೆ, ಕಡಿಮೆ ಯಂತ್ರ ಹಾಗೂ ಹೆಚ್ಚು ಮನುಷ್ಯರನ್ನು ಬಳಸುವ ಇತರೆ ವ್ಯವಸ್ಥೆಗಳೂ ಪವಿತ್ರವಾದದ್ದೇ. ಅರ್ಥಾತ್, ಪವಿತ್ರ ಆರ್ಥಿಕತೆಯೆಂಬುದು ಯಂತ್ರ ವಿರೋಧಿಯಲ್ಲ, ಖಡಾಖಂಡಿತವಾಗಿ ಮನುಷ್ಯ ಪರ ಹಾಗೂ ಪರಿಸರ ಪರವಾದ ಆರ್ಥಿಕತೆಯದು.
ಹಿಂದೆಂದೂ ಗ್ರಾಮೀಣ ಕ್ಷೇತ್ರ ಇಷ್ಟೊಂದು ಬಡವಾಗಿರಲಿಲ್ಲ. ಸರಕಾರದ ಅಂಕಿ ಅಂಶವೇ ಹೇಳುವಂತೆ, ಕಳೆದ ಐದು ವರ್ಷಗಳಲ್ಲಿ ಗ್ರಾಮಿಣ ವರಮಾನದ ಏರಿಕೆಯ ಪ್ರಮಾಣ ಹದಿನೈದು ಪ್ರತಿಶತದಿಂದ ಒಂದು ಪ್ರತಿಶತಕ್ಕೆ ಕುಸಿದಿದ್ದರೆ ಗ್ರಾಮೀಣ ಉತ್ಪಾದಕರಾದ ರೈತರು ಹಾಗೂ ಕುಶಲಕರ್ಮಿಗಳ ಖರ್ಚು, ಉತ್ಪಾದನೆಯ ಖರ್ಚು, ಊಟತಿಂಡಿಯ ಖರ್ಚೆಲ್ಲ ಕೇವಲ ಒಂದು ವರ್ಷದ ಅಂತರದಲ್ಲಿ ವಿಪರೀತ ಏರಿಕೆ ಕಂಡಿವೆ. ರೈತನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ವಿದ್ಯುತ್ತಿನ ಮೇಲಿನ ಖರ್ಚು, ರಾಸಾಯನಿಕ ಗೊಬ್ಬರದ ಮೇಲಿನ ಖರ್ಚು ಹನ್ನೆರಡು ಪ್ರತಿಶತ ಏರಿದೆ. ಕ್ರಿಮಿನಾಶಕಗಳ ಮೇಲಿನ ಖರ್ಚು ಎಂಟು ಪ್ರತಿಶತ ಏರಿದೆ. ಮಿಕ್ಕಂತೆ ಗ್ರಾಮಸ್ಥರ ಮೇಲೆ ನಾವು ಮೊಬೈಲಿನಿಂದ ಹಿಡಿದು ಮೊಬೈಕಿನವರೆಗೆ, ಅನಗತ್ಯ ಪ್ರಯಾಣದಿಂದ ಹಿಡಿದು ದುಂದು ವೆಚ್ಚದವರೆಗೆ, ಕೊಳ್ಳುಬಾಕ ಚಟವನ್ನು ವ್ಯವಸ್ಥಿತವಾಗಿ ಅಂಟಿಸಿದ್ದೇವಾದ್ದರಿಂದ ಗ್ರಾಮೀಣ ಬಡತನವೆಂಬುದು ನರಕತ್ರಯವಾಗಿದೆ. ಸಾಲವಾದರೂ ಸರಿ, ಸೂಯಿಸೈಡಾದರೂ ಸರಿ ಅಥವಾ ಆಡಳಿತ ಪಕ್ಷಗಳ ಲಂಚದ ಹಣವಾದರೂ ಸರಿ ಎಂಬಂತಹ ಹತಾಶ ಪರಿಸ್ಥಿತಿ ತಲುಪಿದ್ದಾರೆ ಅವರು. ಸರಳವಾಗಿ ಹೇಳಬೇಕೆಂದರೆ, ಗ್ರಾಮಸ್ಥರ ಆತ್ಮವನ್ನು ಕೊಂದು, ಜೀವವನ್ನು ಕುಟುಕುಟು ಎಂದು ಉಳಿಸಿದ್ದೇವೆ ನಾವು.
ನಿಜಕ್ಕೂ ಇದು ನಮಗೆ ಆತಂಕದ ಸಂಗತಿಯಾಗಬೇಕಿತ್ತು. ನಾವು ಒಪ್ಪಲಿ ಬಿಡಲಿ, ಇಂದಿನ ಎಲ್ಲ ಆತಂಕಗಳ ನೆಲೆಗಟ್ಟು ಪವಿತ್ರ ಆರ್ಥಿಕತೆಯ ಕಡೆಗಾಣಿಕೆಯೇ ಸರಿ. ದುರಂತವೆಂದರೆ, ಪವಿತ್ರವೆಂಬ ಪದದ ಅರ್ಥವನ್ನೇ ಪಲ್ಲಟಗೊಳಿಸಿ, ಗೆದ್ದೆವೆಂದು ಬೀಗುತ್ತಿದ್ದೇವೆ. ಪೃಥ್ವಿ ಬಿಸಿಯಾಗುತ್ತಿರುವ ಆತಂಕಕ್ಕೂ, ಪ್ರದೂಷಣದ ಆತಂಕಕ್ಕೂ ಅಥವಾ ಕುಸಿತ ಕಂಡಿರುವ ರಾಕ್ಷಸ ಆರ್ಥಿಕತೆಯ ಆತಂಕಕ್ಕೂ, ಪವಿತ್ರ ಆರ್ಥಿಕತೆಗೂ ಸಂಬಂಧವಿದೆಯೆಂದು ತಿಳಿದಿದ್ದರೂ ತಿಳಿಯದಂತಾಡುತ್ತಿದ್ದೇವೆ. ಬುದ್ಧ, ಬಸವ, ರಾಮ, ಕಬೀರ, ಅಕ್ಕ ಎಲ್ಲರೂ ಹೇಳಿದ್ದು ಸತ್ತ ನಂತರದ ಸತ್ಯ ಎಂದೂ, ಲೌಕಿಕದಲ್ಲಿ, ಅದರಲ್ಲೂ ಆರ್ಥಿಕತೆಯಲ್ಲಿ , ಅರ್ಥಾತ್ ಮಾರುಕಟ್ಟೆಯಲ್ಲಿ ಸ್ವೇಚ್ಛಾಚಾರವೇ ಪವಿತ್ರ ಎಂದೂ ತಿಳಿದಿದ್ದೇವೆ. ಹೀಗಾಗಿ, ಪವಿತ್ರವೆಂಬುದು ಹೀನಾಯವಾಗಿದೆ, ಅದು ಪೇಟೆಯಲ್ಲಿ ಕೊಳ್ಳಬಲ್ಲ ಅಫೀಮೇ ಆಗಿ ಕುಳಿತಿದೆ. ಜಾತಿಯ ಮಂದಿರಕ್ಕೊಂದಿಷ್ಟು ಧನಸಹಾಯ ಮಾಡುವುದು ಅಥವಾ ಭಜನೆ ಮಾಡುವುದು ಆರ್ಥಿಕ ಸ್ವೇಚ್ಛಾಚಾರಕ್ಕೆ ಮುಲಾಮು ಎಂದು ತಿಳಿದಿದ್ದೇವೆ ನಾವು.
ಇದು ಹೀಗೇಕಾಯಿತೆಂದರೆ, ರಾಕ್ಷಸ ಆರ್ಥಿಕತೆ ಕೆಲಕಾಲ ಗೆದ್ದಿತ್ತು. ಲಾಭದಾಯಕವಾಗಿತ್ತು. ಪ್ರತಿಶತ ಹನ್ನೆರಡರ ಜಿಡಿಪಿ ಬೆಳವಣಿಗೆಯನ್ನು ಸಾಧ್ಯವಾಗಿಸಿತ್ತು. ಸರಳವಾಗಿ ಹೇಳಬೇಕೆಂದರೆ, ಕೆಲಕಾಲ ಪವಿತ್ರ ಆರ್ಥಿಕತೆಯೆಂಬುದು ಗೊಡ್ಡು ಗಾಂಧಿವಾದಿಗಳು ಹೇಳುವ ಹಾಗೂ ಅನಿವಾರ್ಯವಾಗಿ ಕೇಳಿಸಿಕೊಳ್ಳಬೇಕಿರುವ ವ್ಯರ್ಥ ಬೋಧನೆಯಾಗಿ ಕೇಳಿಸಿತ್ತು ನಮಗೆ. ರಾಮರಾಜ್ಯವೂ ಹಾಗೆಯೇ, ವ್ಯರ್ಥ ಬೋಧನೆಯಾಗಿ ಕೇಳಿಸಿತ್ತು ನಮಗೆ. ಈಗ ಪವಿತ್ರ ಆರ್ಥಿಕತೆಯನ್ನು ಬೋಧಿಸುತ್ತಿರುವವರು ಪ್ರತಿಷ್ಠಿತ ವಿಜ್ಞಾನಿಗಳು ಹಾಗೂ ಯೂರೋಪಿನ ಹಲವು ದೇಶಗಳು.
ರಾಕ್ಷಸ ಆರ್ಥಿಕತೆಯನ್ನು ಬೆಂಬಲಿಸುತ್ತಿರುವುದಕ್ಕಾಗಿ ನಾನು ರಾಜಕಾರಣಿಗಳನ್ನು ಬೈಯ್ಯಲಾರೆ. ನಮ್ಮನ್ನೇ ಬೈದುಕೊಳ್ಳುತ್ತೇನೆ. ನಾವೇ ತಾನೇ ಅವರನ್ನು ಗೆಲ್ಲಿಸಿದ್ದು, ಅವರಿಂದ ಹನ್ನೆರಡು ಪ್ರತಿಶತ ಆರ್ಥಿಕ ಬೆಳವಣಿಗೆ ನಿರೀಕ್ಷಿಸಿದ್ದು? ನಮಗೆ ತಿಳಿಯದೇನು, ಸ್ವೇಚ್ಛಾಚಾರವೆಂಬುದು ಎಲ್ಲಿ ಮಾಡಿದರೂ ಅನಾಚಾರವೇ ಎಂದು? ಪವಿತ್ರ ಸಂಕೇತಗಳನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ಭವ್ಯ ಮಂದಿರಗಳಲ್ಲಿ ಬಂಧಿಸಿಟ್ಟವರು ಯಾರು? ಪೂಜಾರಿಗಳು, ಧರ್ಮ ಮತ್ತು ಆರ್ಥಿಕತೆಯನ್ನು ಪ್ರತ್ಯೇಕಿಸಿ, ಇಲ್ಲಿ ಜಪಮಾಡಿ ಅಲ್ಲಿ ಮಜಾಮಾಡಿ ಎಂದಾಗ ನಮಗೆ ತಿಳಿದಿರಲಿಲ್ಲವೇ ಪಾಪಕ್ಕೆ ಫಲವಿದೆಯೆಂದು?
ಅಥವಾ ಗಂಗೆಯ ಬಗ್ಗೆ ಯೋಚಿಸಿ. ಕಾಡಿನ ಮೃಗಗಳ ಮೂತ್ರ ಅಥವಾ ದಲಿತನ ಸ್ಪರ್ಶ ಅಪವಿತ್ರವಾಗಿಸಲಿಲ್ಲ ಗಂಗೆಯನ್ನು. ಕಾರ್ಖಾನೆಗಳು ಸ್ರವಿಸುತ್ತಿರುವ ಗಲೀಜು ಮಾತ್ರ ಅಪವಿತ್ರವಾಗಿಸಿತು ಗಂಗೆಯನ್ನು. ಅಥವಾ ಗೋವಿನ ಬಗ್ಗೆ ಯೋಚಿಸಿ, ಸೆಮನ್ನುಗಳು ಸಾಕು ಇಂದು ಹಾಲು ಕರೆಯುವ ಜೀವಂತ ಯಂತ್ರವನ್ನು ಹುಟ್ಟಿಸಲಿಕ್ಕೆಂದು. ಟ್ರ್ಯಾಕ್ಟರುಗಳು ಸಾಯಿಸಿದವು ಗೋವಿನ ಪಾವಿತ್ರ್ಯವನ್ನು.
ಇಂದು ಬಂದಿರುವ ಆರ್ಥಿಕ ಹಿಂಜರಿತವು ಒಂದರ್ಥದಲ್ಲಿ ಒಳ್ಳೆಯದನ್ನೇ ಮಾಡಿದೆ. ಮಾಡು ಇಲ್ಲವೆ ಮಡಿ ಎನ್ನುತ್ತಿದೆ. ಇದು ದೇವವಾಣಿ ಎಂದೇ ನಂಬುತ್ತೇನೆ ನಾನು. ಎಷ್ಟೆಂದರೂ ದೇವರು ಶ್ರಮಜೀವಿಗಳ ಸ್ನೇಹಿತ ತಾನೆ?
ನಾವು ಬದಲಾದರೆ ರಾಜಕಾರಣಿ ಬದಲಾಗುತ್ತಾನೆ, ನಾವು ಕೊಳ್ಳದೆ ಹೋದರೆ ಕೊಳ್ಳುಬಾಕತೆ ತಂತಾನೆ ಕಳಚಿಬೀಳುತ್ತದೆ. ಪವಿತ್ರವಾದದ್ದನ್ನು ಉತ್ಪಾದಿಸೋಣ, ಪವಿತ್ರವಾದದ್ದನ್ನು ಕೊಳ್ಳೋಣ. ಆದರೆ ಹಿತಮಿತವಾಗಿ ಕೊಳ್ಳೋಣ. ಆರ್ಥಿಕ ಹಿಂಜರಿತದಿಂದ ಹಾಳಾದ ಜನತೆಗೆ ಸಹಾಯಹಸ್ತ ನೀಡೋಣ. ಎಲ್ಲರೂ ಹಂಚಿಕೊಂಡು ಬಡವರಾಗೋಣ.
ಪ್ರಸನ್ನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.