ಭದ್ರತೆ ಜತೆಗೆ ಗ್ರಾಮಗಳ ಅಭಿವೃದ್ಧಿ ಗಡಿಯಲ್ಲಿ ಕೇಂದ್ರದ ಹೊಸ ಕಾರ್ಯತಂತ್ರ
Team Udayavani, Feb 17, 2023, 6:00 AM IST
ಭಾರತ-ಚೀನ ನಡುವಣ ವಾಸ್ತವಿಕ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರವೊಂದನ್ನು ರೂಪಿಸಿರುವ ಕೇಂದ್ರ ಸರಕಾರ ದೇಶದ ಭದ್ರತೆಯ ಜತೆಯಲ್ಲಿ ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೂ ಆದ್ಯತೆ ನೀಡಲು ತೀರ್ಮಾನಿಸಿದೆ. ಅಷ್ಟು ಮಾತ್ರವಲ್ಲದೆ ಇದಕ್ಕೆ ಪೂರಕವಾಗಿ ಗಡಿ ಪ್ರದೇಶದ ಎಲ್ಲ ಭಾಗಗಳನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಶಿನ್‌ಕುನ್-ಲಾ ಸುರಂಗ ನಿರ್ಮಾಣಕ್ಕೂ ತನ್ನ ಒಪ್ಪಿಗೆಯನ್ನು ನೀಡಿದೆ. ಈ ಮೂರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಕೇಂದ್ರ ಸರಕಾರ ಎಲ್‌ಎಸಿಯಲ್ಲಿ ನಿರಂತರವಾಗಿ ತಗಾದೆ ತೆಗೆಯುತ್ತಲೇ ಬಂದಿರುವ ಚೀನಕ್ಕೆ ಸಡ್ಡು ಹೊಡೆಯಲು ಮುಂದಾಗಿದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ಚೀನ ಸರಕಾರ ಮತ್ತು ಅಲ್ಲಿನ ಸೇನೆ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸುವ ಮೂಲಕ ಪರೋಕ್ಷವಾಗಿ ಸೇನಾ ಚಟುವಟಿಕೆಗಳಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಲೇ ಬಂದಿವೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ, ಚೀನದೊಂದಿಗಿನ 3,488 ಕಿ. ಮೀ. ಗಳಷ್ಟು ವ್ಯಾಪ್ತಿಯನ್ನು ಹೊಂದಿರುವ ಎಲ್‌ಎಸಿಯುದ್ದಕ್ಕೂ ಹೊಸದಾಗಿ ಏಳು ಐಟಿಬಿಪಿ ಬೆಟಾಲಿಯನ್‌ಗಳನ್ನು ನಿಯೋಜಿಸಲು ತೀರ್ಮಾನಿಸಿದೆ. ಇದರಿಂದ ಗಡಿಯುದ್ದಕ್ಕೂ ಗಸ್ತು ನಡೆಸಲು ಮತ್ತು ಕಣ್ಗಾವಲು ಇಡಲು ಭಾರತೀಯ ಭದ್ರತಾ ಪಡೆಗೆ ಹೆಚ್ಚಿನ ಅನುಕೂಲವಾಗಲಿದೆ.
ಇದರ ಜತೆಯಲ್ಲಿ ಎಲ್‌ಎಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲು “ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ’ ನಡಿಯಲ್ಲಿ ಬರೋಬ್ಬರಿ 4,800 ಕೋ. ರೂ. ಅನುದಾನ ಒದಗಿಸಲು ಕೂಡ ಕೇಂದ್ರ ಸಚಿವ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಇದರಂತೆ ಎಲ್‌ಎಸಿಯನ್ನು ಹೊಂದಿಕೊಂಡಿರುವ ರಾಜ್ಯಗಳ ಗಡಿ ಗ್ರಾಮಗಳಲ್ಲಿ 2,500 ಕೋ. ರೂ. ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ ಸಹಿತ ಅಗತ್ಯ ಮೂಲಸೌಕರ್ಯಗಳ ಒದಗಣೆಯ ಜತೆಯಲ್ಲಿ ಗ್ರಾಮಸ್ಥರ ಜೀವನಮಟ್ಟ ಸುಧಾರಣೆಯ ನಿಟ್ಟಿನಲ್ಲೂ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗಡಿ ಗ್ರಾಮಗಳ ಯುವಜನತೆ ಉದ್ಯೋಗವನ್ನರಸಿ ನಗರಗಳತ್ತ ವಲಸೆ ಹೋಗುವುದು ತಪ್ಪಲಿದೆ. ಗ್ರಾಮಗಳ ಅಭಿವೃದ್ಧಿ ಮತ್ತು ಹೆಚ್ಚುವರಿ ಐಟಿಬಿಪಿ ಸಿಬಂದಿಯ ನೇಮಕದ ಹಿನ್ನೆಲೆಯಲ್ಲಿ ಇಲ್ಲಿನ ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. 12,000 ಅಡಿಗಳಷ್ಟು ಎತ್ತರದ ಬೆಟ್ಟ-ಕಣಿವೆಗಳಿಂದ ಕೂಡಿದ ಮತ್ತು ಸಾಮಾನ್ಯವಾಗಿ ತಾಪಮಾನ ಶೂನ್ಯ ಡಿ.ಸೆ.ಗಿಂತಲೂ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಐಟಿಬಿಪಿ ಸಿಬಂದಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಸ್ಥಳೀಯ ಅರ್ಹ ಯುವಕರಿಗೆ ನೇಮಕಾತಿ ವೇಳೆ ಹೆಚ್ಚಿನ ಅವಕಾಶ ಲಭಿಸಲಿದೆ. ಅಷ್ಟು ಮಾತ್ರವಲ್ಲದೆ ಈ ಗ್ರಾಮಗಳ ಅಭಿವೃದ್ಧಿಯಿಂದ ಪ್ರವಾಸೋದ್ಯಮ ಕ್ಷೇತ್ರ ಚಿಗಿತುಕೊಳ್ಳಲಿದ್ದು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳಲು ಸ್ಥಳೀಯರಿಗೆ ಅನುಕೂಲವಾಗಲಿದೆ.
ಇದೇ ವೇಳೆ ಲಡಾಖ್‌ನ ಗಡಿ ಪ್ರದೇಶಗಳಿಗೆ ಸರ್ವಋತುಗಳಲ್ಲೂ ಸಂಪರ್ಕ ಸಾಧಿಸಲು ಅನುಕೂಲವಾಗುವಂತೆ ಶಿನ್‌ಕುನ್-ಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ. ಅಂದಾಜು 1,681ಕೋ. ರೂ. ವೆಚ್ಚದ ಈ ಯೋಜನೆಯ ಕಾಮಗಾರಿಯನ್ನು ಮುಂದಿನ ಎರಡು ವರ್ಷಗಳ ಒಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಸುರಂಗ ಸಂಚಾರಕ್ಕೆ ಮುಕ್ತವಾದಲ್ಲಿ ಸೇನಾಪಡೆಗಳ ಸಂಚಾರ ಮತ್ತು ಕ್ಷಿಪ್ರ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ವ್ಯೂಹಾತ್ಮಕ ನೆಲೆಯಲ್ಲಿ ಕೇಂದ್ರದ ಈ ಮೂರೂ ತೀರ್ಮಾನಗಳು ಪರಸ್ಪರ ನಂಟು ಹೊಂದಿವೆ. ಈ ತ್ರಿಕೋನ ತಂತ್ರಗಾರಿಕೆ ದೇಶದ ಭದ್ರತೆಯ ದೃಷ್ಟಿಯಿಂದ ಐತಿಹಾಸಿಕವಾದುದಾಗಿದೆ. ಚೀನದ ಪ್ರತಿಯೊಂದು ಕುಟಿಲ ನೀತಿ, ತಂತ್ರಗಾರಿಕೆಗೆ ಕೇಂದ್ರ ಸರಕಾರ ಪ್ರತಿತಂತ್ರವನ್ನು ಅನುಸರಿಸುವ ಮೂಲಕ ಚೀನವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಕೇಂದ್ರ ಸಚಿವ ಸಂಪುಟ ಈ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಚೀನಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ ಮಾತ್ರವಲ್ಲದೆ ಗಡಿ ಗ್ರಾಮಗಳ ಜನರಿಗೆ ಅಭದ್ರತೆಯ ಭಾವ ಮೂಡದಂತೆ ಜಾಣ್ಮೆಯ ನಡೆ ಇರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.