ಪಂಚರಾಜ್ಯಗಳ ಫಲಿತಾಂಶ ಬದಲಾವಣೆಗೆ ಹೆಜ್ಜೆ
Team Udayavani, Dec 12, 2018, 6:00 AM IST
ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯ ಫಲಿತಾಂಶಕ್ಕೆ ಬಹಳ ಹತ್ತಿರದ ಊಹೆಯನ್ನು ಮಾಡಿದ್ದು ವಿಶೇಷ. ಮೂರು ಪ್ರಮುಖ ರಾಜ್ಯಗಳಲ್ಲಿ ಮೇಲುಗೈ ಸಾಧಿಸಿರುವ ಕಾಂಗ್ರೆಸ್ ಸಹಜವಾಗಿಯೇ ಉತ್ಸಾಹದಲ್ಲಿದ್ದು, ಈ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದು ಹೇಳುತ್ತಿದೆ. ಇತ್ತ ಬಿಜೆಪಿಯು ಈ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುತ್ತಿದೆ.
ಈ ಚುನಾವಣೆಗಳಲ್ಲಿ ಎರಡೂ ಪ್ರಮುಖ ಪಕ್ಷಗಳ ರಾಷ್ಟ್ರೀಯ ನಾಯಕರು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದರಾದರೂ ಪಂಚರಾಜ್ಯಗಳಲ್ಲಿನ ಮತದಾರರ ತೀರ್ಪಿಗೆ ಪ್ರಾದೇಶಿಕ ವಿಷಯಗಳೇ ಕಾರಣವಾದವು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿ ಸಹಜವಾಗಿಯೇ ಅಧಿಕಾರ ವಿರೋಧಿ ಅಲೆ ಎದುರಿಸುತ್ತಿತ್ತು. ಮಧ್ಯಪ್ರದೇಶದಲ್ಲಿ ಸರ್ಕಾರಕ್ಕೆ ವ್ಯಾಪಂ ಹಗರಣ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಅಲ್ಲದೇ ನರ್ಮದಾ ಪ್ಲಾಂಟೇಷನ್ ಹಗರಣ ಸೇರಿದಂತೆ, ರೈತರ ಪ್ರತಿಭಟನೆ, ಇ-ಟೆಂಡರಿಂಗ್ ವಿವಾದಗಳೆಲ್ಲ ಶಿವರಾಜ್ ಸಿಂಗ್ ಸರ್ಕಾರಕ್ಕೆ ತಲೆನೋವು ತರಿಸಿದ್ದವು. ಆದರೂ ಮಧ್ಯಪ್ರದೇಶದ ಮತದಾರರು ಶಿವರಾಜ್ ಸಿಂಗ್ ಚೌಹಾಣ್‌ರನ್ನು ಪೂರ್ಣವಾಗಿ ಕೈಬಿಡುವ ಮನಸ್ಸು ಮಾಡಿಲ್ಲ ಎನ್ನುವುದು ಸ್ಪಷ್ಟ. ರಾಜಸ್ಥಾನದ ವಿಚಾರಕ್ಕೆ ಬಂದರೆ, ವಸುಂಧರಾ ರಾಜೆ ತೀವ್ರ ಅಧಿಕಾರ ವಿರೋಧಿ ಅಲೆ ಎದುರಿಸುತ್ತಿದ್ದರು. ನಿಜಕ್ಕೂ ಬಿಜೆಪಿಗೆ ಆಘಾತವಾಗಿರುವುದು ಛತ್ತೀಸ್‌ಗಡದ ಫಲಿತಾಂಶದಿಂದ. ರಮಣ್ ಸಿಂಗ್ ಸರ್ಕಾರವನ್ನು ಅಲ್ಲಿನ ಮತದಾರ ಖಡಾಖಡಿ ನಿರಾಕರಿಸಿಬಿಟ್ಟಿದ್ದಾನೆ. ಮಿಜೋರಾಂನಲ್ಲಿ 2008ರಿಂದ ಕಾಂಗ್ರೆಸ್‌ನ ಆಡಳಿತವಿತ್ತು ಅಲ್ಲಿಯೂ ಅಧಿಕಾರ ವಿರೋಧಿ ಅಲೆ ಕೆಲಸ ಮಾಡಿದೆ. ಪ್ರಾದೇಶಿಕ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಗದ್ದುಗೆಗೇರಿದೆ. 2014ರಲ್ಲಿ ಕಾಂಗ್ರೆಸ್ 8 ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯಕ್ಷವಾಗಿ/ಪರೋಕ್ಷವಾಗಿ 6 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೀಗ ತನ್ನ ಜೋಳಿಗೆಯಲ್ಲಿದ್ದ ಕೊನೆಯ ಈಶಾನ್ಯ ರಾಜ್ಯವನ್ನೂ ಅದು ಕಳೆದುಕೊಂಡಿದೆ. ಇತ್ತ ತೆಲಂಗಾಣದ ಜನರು ನಿರೀಕ್ಷಿಸಿದಂತೆಯೇ ಮತ್ತೂಮ್ಮೆ ಕೆ. ಚಂದ್ರಶೇಖರ್ ರಾವ್ ಅವರ ಕೈ ಹಿಡಿದಿದ್ದಾರೆ.
ಈಗ ಪ್ರಶ್ನೆ ಏಳುತ್ತಿರುವುದು, ಈ ಚುನಾವಣೆಗಳು ಇನ್ನು ಕೆಲವೇ ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೇ ಎನ್ನುವುದು. “ಇಲ್ಲ’ ಎಂದು ಸಂಪೂರ್ಣವಾಗಿ ತಳ್ಳಿಹಾಕುವುದಕ್ಕೂ ಸಾಧ್ಯವಿಲ್ಲ. ಲೋಕಸಭಾ ಚುನಾವಣೆಗಳು ಹತ್ತಿರದಲ್ಲೇ ಇರುವುದರಿಂದ ಈ ರಾಜ್ಯಗಳ ಮತದಾರರ ಬೆಂಬಲ, ಪ್ರಸಕ್ತ ಅವರು ಆಯ್ಕೆ ಮಾಡಿದ ಪಕ್ಷಗಳತ್ತ ಹೆಚ್ಚು ಇರುತ್ತದೆ. ಉದಾಹರಣೆಗೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ 2008 ಮತ್ತು 2013ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ, 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬಹುಮತ ಪಡೆದಿತ್ತು. ರಾಜಸ್ಥಾನದಲ್ಲಿ 2008 ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, 2009 ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದಲ್ಲಿ ಅಧಿಕ ಸ್ಥಾನ ಗಳಿಸಿತ್ತು. 2013ರಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ, 2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಸ್ಥಾನಗಳನ್ನು ಗಳಿಸಿತ್ತು. ಹೀಗಾಗಿ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನದ ಫಲಿತಾಂಶ ಚಿಂತೆ ಮೂಡಿಸಿರುವುದು ನಿಜ. ಆದರೆ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಪರ್ಯಾಯವಾಗಬಲ್ಲವರು ಯಾರು ಎನ್ನುವ ಪ್ರಶ್ನೆಗೆ ಪ್ರತಿಪಕ್ಷಗಳ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಮಹಾಘಟಬಂಧನ್ ರಚನೆಯ ಮಾತು ಕೇಳಿಸುತ್ತಿದೆಯಾದರೂ, ಅದು ನೇರ-ಬಲಿಷ್ಠ ಪ್ರತಿಸ್ಪರ್ಧಿಯಾಗುವ ಭರವಸೆಯನ್ನು ಇನ್ನೂ ಮೂಡಿಸಿಲ್ಲ, ಆ ಮಹಾಮೈತ್ರಿಯ ಮಾತನಾಡುತ್ತಿರುವ ಪಕ್ಷಗಳಲ್ಲೇ ಇನ್ನೂ ಒಮ್ಮತ ಮೂಡಿಲ್ಲ.
ಕಾಂಗ್ರೆಸ್‌ಗೆ ಈ ಗೆಲುವು ಅನಿವಾರ್ಯವಾಗಿತ್ತು. ಅದರಲ್ಲೂ, ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸುತ್ತಿರುವ ವೇಳೆಯಲ್ಲಿ ದಕ್ಕಿದ ಈ ವಿಜಯ ಅವರಲ್ಲಿ ಸಂತಸ ಮೂಡಿಸಿದೆ. ಗಮನಿಸಬೇಕಾದ ಅಂಶವೆಂದರೆ, ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಆದಿಯಾಗಿ ಯಾವ ಪಕ್ಷಗಳೂ ಇವಿಎಂ ಬಗ್ಗೆ ತಕರಾರು ಎತ್ತದೇ ಇರುವುದು. ಇನ್ನು ಮುಂದಾದರೂ, ಚುನಾವಣಾ ಆಯೋಗದ ಮೇಲೆ ಈ ಪಕ್ಷಗಳು ಆರೋಪ ಮಾಡುವುದನ್ನು ನಿಲ್ಲಿಸಬಹುದೇನೋ. ಇದೇನೇ ಇದ್ದರೂ, ಪಂಚರಾಜ್ಯಗಳ ಮತದಾರರು ತಮ್ಮ ತೀರ್ಪು ನೀಡಿದ್ದಾರೆ. ಈ ತೀರ್ಪನ್ನು ಎಲ್ಲಾ ಪಕ್ಷಗಳೂ ಪಾಠವಾಗಿ ಸ್ವೀಕರಿಸುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.