ದಿಕ್ಸೂಚಿಯಾದ ಸಮ್ಮೇಳನ ನುಡಿಬೇರು ಗಟ್ಟಿಯಾಗಲಿ
Team Udayavani, Jan 7, 2019, 12:30 AM IST
ಪ್ರತಿವರ್ಷ ನುಡಿಜಾತ್ರೆ ಘಟಿಸುವುದು ನಾಡಿನ ಅತ್ಯಂತ ಸಹಜ ಕ್ರಿಯೆ. ಅದರಿಂದ ನಾಡಿಗೆ- ನುಡಿಗೆ ದಕ್ಕಿದ್ದೇನು ಎನ್ನುವ ಪ್ರಶ್ನೆಯೊಂದು ಮಾತ್ರ ಆ ಸಮ್ಮೇಳನ ರೂಪುಗೊಳ್ಳುವ ಮೊದಲು ಮತ್ತು ನಂತರವೂ ಕಾಡುವಂಥದ್ದು. ಆದರೆ, ಈ ಬಾರಿಯ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಭಿನ್ನ ನಿಲುವನ್ನು ತಳೆಯಿತು. ಭಾಷೆಯ ಬೆಳವಣಿಗೆಗೆ ಹಲವು ಕಿಂಡಿಗಳನ್ನು ತೆರೆದಿಟ್ಟು, ಭವಿಷ್ಯದ ಸಮ್ಮೇಳನಗಳಿಗೆ ದಿಕ್ಸೂಚಿ ತೋರಿರುವುದು ಸ್ತುತ್ಯರ್ಹ.
ಸಮ್ಮೇಳನ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡದ ಮೂಲ ಸಮಸ್ಯೆಯನ್ನು ಸೂಕ್ಷ್ಮವಾಗಿ ಶೋಧಿಸಲಾಗಿದೆ. ಅಲ್ಲಿ ಹತ್ತಾರು ಸಮಸ್ಯೆಗಳನ್ನು ಪ್ರಸ್ತಾಪಿಸದೇ, ಗಂಭೀರ ಸ್ವರೂಪದ ಒಂದೇ ಸಮಸ್ಯೆಗೆ ಚಿಕಿತ್ಸೆ ನೀಡುವುದು ಸದ್ಯದ ಮಟ್ಟಿಗೆ ಅನಿವಾರ್ಯ ಎಂಬ ಧ್ವನಿಯನ್ನು ಅದರಲ್ಲಿ ಸುಸ್ಪಷ್ಟ. ಕನ್ನಡ ಶಾಲೆಯ ಮೇಲಿನ ತಿರಸ್ಕಾರ, ಇಂಗ್ಲಿಷ್ ಮಾಧ್ಯಮ ಕಡೆಗಿನ ವಲಸೆಗೆ, ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ರಾಷ್ಟ್ರೀಕರಣವೇ ಸೂಕ್ತ ಎನ್ನುವ ಚಿಂತನೆಯನ್ನು ದಶಕಗಳ ಹಿಂದೆಯೇ ಮಾಡಿದ್ದಿದ್ದರೆ, ಇಂದು ಇಷ್ಟೊಂದು ಚಿಂತಿಸಬೇಕಾಗಿರಲಿಲ್ಲ.
ಇಲ್ಲಿಯ ತನಕ ನಡೆದ ಎಲ್ಲ ಸಮ್ಮೇಳನಗಳಲ್ಲೂ ಭಾಷೆಯ ಬೆಳವಣಿಗೆ ಕುರಿತು ಉತ್ತಮ ನಿರ್ಣಯ ಕೈಗೊಂಡಿದ್ದು ಹೌದಾದರೂ, ಅದು ಆಡಳಿತ ಯಂತ್ರದ ಕಿವಿಗೆ ಬೀಳಲಿಲ್ಲ ಎನ್ನುವುದೂ ವಿಪರ್ಯಾಸವೇ. ಪ್ರಸ್ತುತ ಸಮ್ಮೇಳನದ ಧ್ವನಿ ಮುಖ್ಯಮಂತ್ರಿ ಅವರ ಕಿವಿಗೂ ಬಿದ್ದಿರುವುದು, ಆ ಕುರಿತು ಚಿಂತಿಸುವುದಾಗಿ ಅವರು ಹೇಳಿರುವುದು, ಕೇವಲ ಭರವಸೆಯಾಗಿ ಉಳಿಯದೇ, ನಾಡಿಗೆ ಬೆಳಕು ತೋರುವ ಕೆಲಸವಾಗಲಿ ಎಂದು ಆಶಿಸೋಣ.
ಈ ನಡುವೆಯೇ ಮಾತೃಭಾಷಾ ರಾಷ್ಟ್ರೀಕರಣ ಕೆಲಸ ಅಷ್ಟೊಂದು ಸಲೀಸೇ? ಎಂಬ ಪ್ರಶ್ನೆಯೂ ಕಾಡುತ್ತದೆ. ಈಗಿನ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳು ರಾಜಕಾರಣಿಗಳ ಅಧಿಪತ್ಯದಲ್ಲೇ ಇರುವುದರಿಂದ, ಸರ್ಕಾರಕ್ಕೆ ಅವರನ್ನೆಲ್ಲ ಓಲೈಸುವುದು ಸವಾಲಿನ ಕೆಲಸವೂ ಆಗಲಿದೆ.
ಇದೆಲ್ಲಕ್ಕಿಂತ ಆಚೆ ಪೋಷಕರ ಮನಃಸ್ಥಿತಿಯನ್ನು ಬದಲಿಸುವ ಕೆಲಸ ಮಹಾನ್ ಸವಾಲೇ ಸರಿ. ಎಲ್ಲಿ ಮಾತೃಭಾಷೆಯಲ್ಲಿ ಓದಿದರೆ, ಮಕ್ಕಳು ಹಿಂದೆ ಬೀಳುತ್ತವೋ ಎಂಬ ಭಾವ ಮೇನಿಯಾದಂತೆ ಹಬ್ಬಿರುವುದು ಆತಂಕದ ಸಂಗತಿ. ಕನ್ನಡ ಅನ್ನ ಕೊಡುವ ಭಾಷೆ ಎಂಬುದನ್ನು ಬಿಂಬಿಸುವ ಕೆಲಸಕ್ಕೆ ಅಷ್ಟೇ ಅಗತ್ಯ ತಯಾರಿಗಳನ್ನೂ ಸರ್ಕಾರ ಮಾಡಬೇಕಿದೆ.
ಸೃಜನಶೀಲತೆ ಎನ್ನುವುದು ಶಿಕ್ಷಣಕ್ಕೂ ದಾಟಬೇಕು ಎನ್ನುವ ಆಶಯ ಸಮ್ಮೇಳನದಿಂದ ಹೊರಬಿದ್ದಿದೆ. ಇದುವರೆಗೆ ಸಾಹಿತ್ಯ ಪರಿಧಿಗಷ್ಟೇ ಆಸ್ತಿಯಂತೆ ಇದ್ದ ಸೃಜನಶೀಲತೆಯನ್ನು ಬರಮಾಡಿಕೊಳ್ಳುವ ಬಗೆಯೆಂತು ಎಂಬುದರ ಹುಡುಕೂಟವೂ ಸಾಹಿತ್ಯ ತಜ್ಞರಿಂದ, ಶೈಕ್ಷಣಿಕ ತಜ್ಞರಿಂದ ಆಗಲೇಬೇಕಿರುವ ಕೆಲಸ.
ಸಮ್ಮೇಳನ ಹೊಮ್ಮಿಸಿದ ಇಷ್ಟೆಲ್ಲ ಆಶಯಗಳನ್ನು ಮಂಕಾಗಿಸುವ ಕೆಲಸವೂ ಆಗಬಾರದು ಎನ್ನುವ ಎಚ್ಚರ ಸರ್ಕಾರಕ್ಕೆ ಬೇಕು. ಭಾಷೆಯ ವಿಚಾರದಲ್ಲಿ ರಾಜಕಾರಣ, ಸ್ವಹಿತಾಸಕ್ತಿಯನ್ನು ದೂರವಿಟ್ಟಾಗ ಮಾತ್ರವೇ ಇಂಥ ಆಶಯಗಳು ಈಡೇರಲು ಸಾಧ್ಯ. ನುಡಿಯ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಆದಷ್ಟು ಬೇಗ ಸಾಗಲಿ ಎಂದು ಹಾರೈಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.