ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್ ಡಾಲರ್ ನಷ್ಟ
Team Udayavani, Oct 28, 2021, 5:50 AM IST
ವರ್ಷದಿಂದ ವರ್ಷಕ್ಕೆ ದೇಶದಲ್ಲಿ ನೈಸರ್ಗಿಕ ವಿಪತ್ತುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಕಡೆ ತೀವ್ರ ಬರಗಾಲ, ಮತ್ತೂಂದು ಕಡೆ ಭಾರೀ ಮಳೆ, ಇದರ ಪರಿಣಾಮವಾಗಿ ಪ್ರವಾಹ. 2020ರಲ್ಲಿ ಭಾರತ, ಇಂಥ ಹಲವಾರು ನೈಸರ್ಗಿಕ ವಿಪತ್ತುಗಳಿಗೆ ಸಾಕ್ಷಿಯಾಗಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ(ಡಬ್ಲ್ಯುಎಂಒ) ಹೇಳಿದೆ. ಈ ನೈಸರ್ಗಿಕ ವಿಪತ್ತುಗಳ ಪರಿಣಾಮವಾಗಿ ಕಳೆದ ವರ್ಷ ಭಾರತದಲ್ಲಿ 87 ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನೂ ಈ ಸಂಸ್ಥೆ ಹೊರಹಾಕಿದೆ.
ಕಳೆದ ವರ್ಷ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಹೆಚ್ಚು ನಷ್ಟ ಸಂಭವಿಸಿರುವುದು ಚೀನದಲ್ಲಿ. ಇಲ್ಲಿ ಒಟ್ಟಾರೆ ಆಗಿರುವ ನಷ್ಟ 238 ಬಿಲಿಯನ್ ಡಾಲರ್. ಚೀನ ಬಿಟ್ಟರೆ, ಭಾರತವೇ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಜಪಾನ್ ಇದ್ದು, ಇಲ್ಲಿ 86 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ ಎಂದು ಡಬ್ಲ್ಯುಎಂಒ ತಿಳಿಸಿದೆ. ಈ ದೇಶಗಳಲ್ಲಿ ಹೆಚ್ಚು ನಷ್ಟಕ್ಕೆ ಕಾರಣವಾಗಿರುವುದು ಪ್ರವಾಹಕ್ಕಿಂತ ಬರಗಾಲ ಎಂಬುದೂ ಈ ಸಂಸ್ಥೆ ನೀಡಿರುವ ವರದಿಯ ತಿರುಳು.
ಈ ನೈಸರ್ಗಿಕ ವಿಪತ್ತುಗಳಿಗೆ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಯೇ ಕಾರಣ ಎಂಬುದು ಜಾಗತಿಕ ಹವಾಮಾನ ಸಂಸ್ಥೆಯ ಅಭಿಪ್ರಾಯ. ಈ ಬಗ್ಗೆ ಜಗತ್ತಿನ ಎಲ್ಲ ದೇಶಗಳಿಗೆ ಈ ಸಂಸ್ಥೆ ನೇರ ಎಚ್ಚರಿಕೆಯನ್ನೂ ನೀಡಿದೆ.
ಕಳೆದ ವರ್ಷ ಏಷ್ಯಾದಲ್ಲಿ ತಾಪಮಾನ ತುಸು ಹೆಚ್ಚಾಗಿಯೇ ಇತ್ತು. ಅಂದರೆ, ಸಾಮಾನ್ಯಕ್ಕಿಂತ 1.39 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು. 1981ರಿಂದ 2010ರ ಅಂದಾಜಿಗೆ ತೆಗೆದುಕೊಂಡರೆ ಹೆಚ್ಚೇ ಆಗಿದೆ. ವಿಶೇಷವೆಂದರೆ, ಈ ಕುರಿತಂತೆ ಇನ್ನೇನು ಸ್ಕಾಟ್‌ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ಆರಂಭವಾಗಲಿರುವ ಸಿಒಪಿ26 ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂಬುದು ಸಮಾಧಾನಕರ ವಿಚಾರ.
ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಕಳೆದ ವರ್ಷ ಭಾರತ ಮತ್ತು ಬಾಂಗ್ಲಾದೇಶವನ್ನು ಹೆಚ್ಚಾಗಿ ಕಾಡಿದ್ದ ಆಂಫಾನ್ ಚಂಡಮಾರುತದಿಂದಾಗಿ ಲಕ್ಷಾಂತರ ಮಂದಿ ನಿರ್ವಸತಿಗರಾಗಿದ್ದರು. ಅಂದರೆ, ಭಾರತದಲ್ಲಿ 2.4 ದಶಲಕ್ಷ ಮತ್ತು ಬಾಂಗ್ಲಾದಲ್ಲಿ 2.5 ದಶಲಕ್ಷ ಮಂದಿ ಮನೆ-ಮಠ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದರು.
ಇದರ ಜತೆಗೆ ಹಿಂದೂಮಹಾಸಾಗರದಲ್ಲಿಯೂ ಬಿಸಿ ತಾಪಮಾನ ಹೆಚ್ಚಾಗುತ್ತಿದೆ. ಅಲ್ಲದೆ, ಫೆಸಿಫಿಕ್ ಮತ್ತು ಆಸ್ಟಿಕ್ ಸಾಗರಗಳಲ್ಲೂ ಇದೇ ರೀತಿಯ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಈ ಸಾಗರಗಳ ಮೇಲಿನ ತಾಪಮಾನ, ಜಾಗತಿಕ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಅರಬಿ ಸಮುದ್ರದಲ್ಲಿ ತಾಪಮಾನ ಇದಕ್ಕಿಂತಲೂ ಹೆಚ್ಚಾಗಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆಯ ವರದಿ ಎಚ್ಚರಿಕೆ ನೀಡಿದೆ.
ಇನ್ನು ಪ್ರವಾಹ ಮತ್ತು ಬರಗಾಲದಿಂದಾಗಿ ಹೆಚ್ಚಾಗಿ ಪೆಟ್ಟು ತಿಂದಿರುವುದು ಕರ್ನಾಟಕ, ಅಸ್ಸಾಂ, ಆಂಧ್ರ, ಮಹಾರಾಷ್ಟ್ರ, ಬಿಹಾರ ರಾಜ್ಯಗಳು. ಹವಾಮಾನ ತಜ್ಞರು ಹೇಳಿದಂತೆ, ಈಗ ದೇಶದ ಮುಂದೆ ಜಾಗತಿಕ ತಾಪಮಾನ ಇಳಿಕೆ ಮಾಡುವ ಸವಾಲು ಇದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಈಗ ಕಾಡುತ್ತಿರುವ ಭಾರೀ ಮಳೆ ಅಥವಾ ಪ್ರವಾಹ, ಬರಗಾಲ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಆತಂಕವೂ ಇದೆ. ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾರತವೊಂದೇ ಅಲ್ಲ, ಎಲ್ಲ ದೇಶಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕಾದ ಜರೂರತ್ತು ಖಂಡಿತವಾಗಿಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.