ಸಾರ್ವಜನಿಕ ಆಸ್ತಿ ಹಾನಿಯ ನಷ್ಟವನ್ನು ಭರಿಸುವ ಕಠಿನ ಕಾಯ್ದೆಬೇಕು
Team Udayavani, Feb 3, 2024, 5:50 AM IST
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವ ಬಂಧಿತ ಆರೋಪಿಗಳಿಗೆ ಜಾಮೀನು ಸಿಗಬೇಕಾದರೆ ಅವರಿಂದ ಹಾನಿಗೀಡಾದ ವಸ್ತುವಿನ ಮೌಲ್ಯಕ್ಕೆ ಸರಿಸಮಾನಾಗಿ ಹಣವನ್ನು ಠೇವಣಿ ಪಡೆಯಬೇಕು ಎಂಬ ಹೊಸ ನಿಯಮವನ್ನು ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ. ಹಲವು ಪ್ರಕರಣಗಳಲ್ಲಿ ಪ್ರತಿಭಟನೆ, ಬಂದ್ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆದುಕೊಳ್ಳುವುದು ಸುಲಭದ ಸಂಗತಿಯಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ತಡೆ ಕಾಯ್ದೆಗೆ ತಿದ್ದುಪಡಿ ತಂದು ಈ ಅಂಶವನ್ನು ಸೇರಿಸಬೇಕೆಂದು ಕಾನೂನು ಆಯೋಗಕ್ಕೆ ಶಿಫಾರಸು ಮಾಡಲು ಮುಂದಾಗಿದೆ.
ಸದ್ಯ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ತಡೆ ಕಾಯ್ದೆ-1984 ಹಲ್ಲಿಲ್ಲದ ಹಾವಿನಂತಿದೆ. ಪ್ರತಿಭಟನೆ, ದೊಂಬಿ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವವರ ವಿರುದ್ಧ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಷ್ಟೇ ಅವಕಾಶ ಇದೆ. ಆದರೆ ಹಾನಿಯನ್ನು ಭರ್ತಿಗೊಳಿಸುವ ಯಾವ ಅವಕಾಶವೂ ಇಲ್ಲ. ಇತ್ತೀಚೆಗೆ ಉತ್ತರ ಪ್ರದೇಶ ಸರಕಾರ 2010 ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪರಿಗಣಿಸಿ, ಹಾನಿಯನ್ನು ಭರಿಸುವ ನಿಟ್ಟಿನಲ್ಲಿ ಅಧಿಕಾರಯುತ ಪ್ರಾಧಿಕಾರವೊಂದನ್ನು ರಚಿಸಿ ಆದೇಶ ಹೊರಡಿಸಿತ್ತು.
ದೇಶದಲ್ಲಿ ಆಸ್ತಿಪಾಸ್ತಿ ಹಾನಿ ಭರಿಸುವ ಸಂಬಂಧ ಕೇಂದ್ರೀಯ ಶಾಸನ ಇಲ್ಲದೆ ಇರುವುದು ಕೊರತೆ. 2009ರಲ್ಲಿ ಸುಪ್ರೀಂ ಕೋರ್ಟ್ ಎಲ್ಲ ಹೈಕೋರ್ಟ್‌ಗಳಿಗೆ ಮಾರ್ಗ ಸೂಚಿಯನ್ನು ಹೊರಡಿಸಿದ್ದು, ಇದರ ಪ್ರಕಾರ ಹಾನಿಯನ್ನು ಭರಿಸುವ ಸಂಬಂಧ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳನ್ನು “ಕ್ಲೇಮ್ ಕಮಿಶನರ್’ ಎಂದು ನೇಮಕ ಮಾಡಲು ಆದೇಶಿಸಿತು. ಇವರು ದೊಂಬಿಯ ವೇಳೆ ಹಾನಿಗೀಡಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಮೌಲ್ಯವನ್ನು ಪರಿಶೋಧನೆ ನಡೆಸಿ ಹಾನಿಗೆ ಕಾರಣವಾದ ಸಂಘಟನೆ ಅಥವಾ ವ್ಯಕ್ತಿಯಿಂದ ಭರಿಸಬೇಕು ಎಂದು ನಿರ್ದೇಶಿಸಲಾಗಿದೆ.
ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಗೆ ಕಾರಣವಾಗುವ ಪ್ರತಿಭಟನೆ, ದೊಂಬಿಗೆ ಚಾಲನೆ ನೀಡಿದ, ಪ್ರಚೋದನೆ ನೀಡಿದ, ಜನರ ಗುಂಪನ್ನು ಕೆರಳಿಸಿದ ವ್ಯಕ್ತಿಯನ್ನು ಹೊಣೆ ಮಾಡಿ ಆತನಿಂದ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು 2018ರಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತ್ತು. 2020ರಲ್ಲಿ ಬೆಂಗಳೂರಿನಲ್ಲಿ ನಡೆದ ದೊಂಬಿಗೆ ಸಂಬಂಧಿಸಿದ ಹಾಗೆ ಇದೇ ಮಾದರಿಯ “ಕ್ಲೇಮ್ ಕಮಿಶನರ್’ ನ್ನು ನೇಮಕ ಮಾಡಲಾಗಿತ್ತು.
ಆದರೆ ಇಂಥ ಬಹುತೇಕ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣದ ಇತ್ಯರ್ಥವಾಗುವುದು ತಡವಾಗುತ್ತದೆ ಹಾಗೂ ಹಾನಿಯನ್ನು ಭರಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಈ ನಡುವೆ, ಆರೋಪಿಯು ಜಾಮೀನು ಪಡೆದುಬಿಡುತ್ತಾನೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆಯಾದರೂ, ಅದನ್ನೇ ಮುಂದಿಟ್ಟುಕೊಂಡು ಹಿಂಸಾಚಾರಕ್ಕಿಳಿಯುವ ಪ್ರವೃತ್ತಿ ಸಾಮಾನ್ಯವೆನಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರಷ್ಟೇ ಪ್ರತಿಭಟನೆ ಪೂರ್ಣಗೊಳ್ಳುತ್ತದೆ ಎಂಬ ವಿಕೃತ ಮನಃಸ್ಥಿತಿ ಹಲವರಿಗಿದೆ. ಹೀಗಾಗಿ ಕಠಿನ ಕಾನೂನು ರೂಪುಗೊಳ್ಳದೆ ಇದ್ದರೆ, ಮತ್ತೆ ಮತ್ತೆ ಇಂಥ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಕಾನೂನು ಆಯೋಗದ ಶಿಫಾರಸಿನಂತೆ ಆರೋಪಿಗೆ ಜಾಮೀನು ನೀಡುವ ಮೊದಲೇ ನಷ್ಟವನ್ನು ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.