ಪ್ರಚಾರ ಸುಸಂಸ್ಕೃತವಾಗಿರಲಿ
Team Udayavani, Feb 4, 2020, 5:05 AM IST
ಆಡಳಿತರೂಢ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವಿನ ಕದನದ ಕಣವಾಗಿ ಬದಲಾಗಿರುವ ದಿಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ತೀವ್ರ ಬಿರುಸು ಪಡೆದುಕೊಂಡಿದೆ. ಎರಡು ಪಕ್ಷಗಳು ಪರಸ್ಪರ ಆರೋಪ, ದೂಷಣೆ , ನಿಂದನೆಗಳಲ್ಲಿ ತೊಡಗಿವೆ. ಇದೇ ವೇಳೆ ರಾಜಕೀಯ ನಾಯಕರಿಂದ ಸಾಮರಸ್ಯ ಕದಡುವ ಕಿಡಿನುಡಿಗಳು ಹೊರಡುತ್ತಿರುವುದು ಮಾತ್ರ ದುರದೃಷ್ಟಕಾರಿ. ಈ ವಿಚಾರದಲ್ಲಿ ಆಪ್ ನಾಯಕರಿಗಿಂತಲೂ ಬಿಜೆಪಿ ನಾಯಕರೇ ಮುಂಚೂಣಿಯಲ್ಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಯ ಆಖಾಡವೂ ನವದೆಹಲಿ ಆಗಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಒಂದು ರೀತಿಯ ಪ್ರಕ್ಷುಬ್ಧ ವಾತಾವರಣ ಇದೆ. ಕಳೆದ 50 ದಿನಗಳಿಂದ ಶಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಧರಣಿಯಿಂದಾಗಿ ರಸ್ತೆ ಬಂದ್ ಆಗಿ ಸ್ಥಳೀಯ ಜನರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಇದೆ. ಈ ಪ್ರತಿಭಟನೆಯ ವಿರುದ್ಧ ಸ್ಥಳೀಯ ಜನರು ಕೂಡ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಹೀಗೆ ಪೌರತ್ವ ಪ್ರತಿಭಟನೆ ಮತ್ತು ವಿಧಾನಸಭೆ ಪ್ರಚಾರ ಜೊತೆಗೆ ನಡೆಯುತ್ತಿರುವಾಗ ದಿಲ್ಲಿಯ ಪೊಲೀಸರು ಅತಿ ಹೆಚ್ಚು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮ ಸಂವೇದಿಯಾಗಿ ಇರಬೇಕಿತ್ತು. ಆದರೆ ಪೊಲೀಸರ ಪ್ರತಿಸ್ಪಂದನವನ್ನು ನೋಡುವಾಗ ಇಂಥ ಲಕ್ಷಣಗಳು ಕಾಣಿಸುತ್ತಿಲ್ಲ.
ಪ್ರತಿಭಟನೆ ನಡೆಯುತ್ತಿರುವ ಸ್ಥಳಗಳಲ್ಲಿ ಎರಡೆರಡು ಬಾರಿ ಗುಂಡು ಹಾರಿದ ಪ್ರಕರಣಗಳು ಸಂಭವಿಸಿವೆ. ಜೆಎನ್‌ಯು ವಿವಿಯಲ್ಲಿ ನಡೆದ ಗುಂಡು ಹಾರಿಸಿದ ಘಟನೆಗೆ ಸ್ವತಹ ಪೊಲೀಸರೇ ಸಾಕ್ಷಿಯಾಗಿದ್ದರು. ಅನಂತರ ಶಹೀನ್‌ಬಾಗ್‌ನಲ್ಲೂ ಇದೇ ರೀತಿಯ ಘಟನೆ ಪುನರಾವರ್ತನೆಯಾಗಿದೆ. ಜೆಎನ್‌ಯು ಘಟನೆ ಸಂಭವಿಸಿದಾಗಲೇ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು.ಪ್ರಜಾತಂತ್ರದಲ್ಲಿ ಹೋರಾಟ, ಧರಣಿ, ಪ್ರತಿಭಟನೆಗಳೆಲ್ಲ ಸಾಮಾನ್ಯ. ಅದು ಹಿಂಸಾಚಾರಕ್ಕೆ ತಿರುಗದಂತೆ ನೋಡಿಕೊಳ್ಳುವುದು ಮಾತ್ರ ಕಾನೂನು ಪಾಲಕರ ಹೊಣೆ.
ಈಗ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರತ್ಯೇಕಿಸಿ ನೋಡಲಾಗದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಬಿಜೆಪಿ ಶಹೀನ್‌ಬಾಗ್ ಧರಣಿಯನ್ನೇ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದೆ. ಆದರೆ ಈ ವಿಚಾರವಾಗಿ ಕೆಲವು ನಾಯಕರು ನೀಡುತ್ತಿರುವ ಹೇಳಿಕೆಗಳು ಮಾತ್ರ ಸಮುಚಿತವಲ್ಲ. ಗುಂಡು ಹಾರಿಸುತ್ತೇವೆ, ನೋಡಿಕೊಳ್ಳುತ್ತೇವೆ ಎಂಬಂಥ ಮಾತುಗಳನ್ನು ಜವಾಬ್ದಾರಿಯುತ ಸ್ಥಾನಗಳಲ್ಲಿರುವ ರಾಜಕೀಯ ನಾಯಕರು ಹೇಳುವಾಗ ಅದು ಬೇರೆಯದ್ದೇ ಸಂದೇಶವನ್ನು ರವಾನಿಸುತ್ತದೆ.
ಪ್ರಜಾತಂತ್ರದಲ್ಲಿ ಇಂಥ ದ್ವೇಷ ಸಾಧನೆಗೆ ಅವಕಾಶವಿಲ್ಲ. ಯಾವುದೇ ಅಭಿಪ್ರಾಯ ಭೇದವಿದ್ದರೂ ಸಂವಾದದ ಮೂಲಕವೇ ಬಗೆಹರಿಯಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ಸಾಹಿಬ್ ವರ್ಮ, ಅಭ್ಯರ್ಥಿ ಕಪಿಲ್ ಶರ್ಮ ಮತ್ತಿತರರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪೈಕಿ ಕೆಲವರಿಗೆ ಚುನಾವಣಾ ಆಯೋಗ ಕೆಲವು ದಿನಗಳ ಪ್ರಚಾರ ನಿರ್ಬಂಧವನ್ನೂ ವಿಧಿಸಿದೆ.
ಪ್ರತಿ ಚುನಾವಣೆಯಲ್ಲೂ ಈ ಮಾದರಿಯ ದ್ವೇಷ ಭರಿತ ಮಾತುಗಳೇ ಪ್ರಚಾರದ
ಸರಕಾಗಬೇಕೆ ಎನ್ನುವುದನ್ನು ಪ್ರಬುದ್ಧ ಮತದಾರರು ಚಿಂತಿಸಬೇಕು. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ, ಭವಿಷ್ಯದ ಯೋಜನೆಗಳು, ನೀತಿ ಸಿದ್ಧಾಂತಗಳ ಬಗ್ಗೆ ಚರ್ಚೆಯಾಗಬೇಕೆ ಹೊರತು ಹೊಡಿಬಡಿ ವಿಚಾರಗಳದ್ದಲ್ಲ. ಪ್ರಜಾತಂತ್ರವೆಂದರೆ ಬ್ಯಾಲಟ್‌ನ (ಮತಪತ್ರ) ಕದನವೇ ಹೊರತು ಬುಲೆಟ್‌ನ ಕದನವಲ್ಲ. ಸುಸಂಸ್ಕೃತ, ನಾಗರಿಕ ಸಮಾಜದಲ್ಲಿ ಚುನಾವಣೆ ಕೂಡ ನಾಗರಿಕವಾದ ರೀತಿಯಲ್ಲೇ ನಡೆಯಬೇಕು. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿರಬಾರದು. ಇದನ್ನು ಎಲ್ಲ ಪಕ್ಷಗಳು ಮತ್ತು ನಾಯಕರು ಅರ್ಥ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.