PM Poshan: ಶಾಲಾ ಮಕ್ಕಳ ಮೊಟ್ಟೆಗೂ ಕನ್ನ ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ
Team Udayavani, Nov 9, 2024, 5:10 PM IST
ಮಕ್ಕಳಿಗೆ ಪೋಷಕಾಂಶಭರಿತ ಆಹಾರವನ್ನು ನೀಡುವ ಉದ್ದೇಶದೊಂದಿಗೆ ರಾಜ್ಯ ಸರಕಾರ ಪಿಎಂ ಪೋಷಣ್ ಯೋಜನೆಯಡಿ ಒಂದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡುವ ಯೋಜನೆಯನ್ನು ಜಾರಿಗೊಳಿಸಿತ್ತು. ಇದಕ್ಕೆ ಪೂರಕವಾಗಿ ಅಜೀಂ ಪ್ರೇಮ್‌ಜೀ ಫೌಂಡೇಶನ್(ಎಪಿಎಫ್) ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ನೀಡಲು ಮುಂದೆ ಬಂದಿತ್ತು.
ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡಲು ನಿರ್ಧರಿಸಲಾಗಿತ್ತು. ಮಕ್ಕಳಿಗೆ ಮೊಟ್ಟೆ ನೀಡುವ ವಿಷಯದಲ್ಲಿ ಆರಂಭದಲ್ಲಿಯೇ ಮಕ್ಕಳ ಹೆತ್ತವರು ಮತ್ತು ಶಿಕ್ಷಕರಿಂದಲೂ ಒಂದಿಷ್ಟು ವಿರೋಧ ವ್ಯಕ್ತವಾಗಿತ್ತಾದರೂ ಬಳಿಕ ತಣ್ಣಗಾಗಿ ಮೊಟ್ಟೆ ವಿತರಣೆ ಆರಂಭಗೊಂಡಿತ್ತು. ಏತನ್ಮಧ್ಯೆ ಮೊಟ್ಟೆ ವಿತರಣೆಯಲ್ಲಿ ಅಕ್ರಮ ನಡೆಯುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಸರಕಾರದ ಉಪಕ್ರಮಕ್ಕೆ ಬಾಧಿಸಿದ್ದ ಬಾಲಗ್ರಹ ಪೀಡೆ ಇನ್ನೂ ತೊಲಗಿದಂತೆ ಕಾಣುತ್ತಿಲ್ಲ. ಮಕ್ಕಳಿಗೆ ಮೊಟ್ಟೆ ವಿತರಿಸುವುದಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ತಲೆದೋರಿರುವ ಸಮಸ್ಯೆಗಳು, ಸೃಷ್ಟಿಯಾಗಿರುವ ಅವಾಂತರಗಳು ಇನ್ನೂ ಮುಂದುವರಿದಿದ್ದರೂ ಅರೆಮನಸ್ಸಿನಿಂದಲೇ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯದಲ್ಲಿ ಶಿಕ್ಷಕರು ಮತ್ತು ಸಿಬಂದಿ ತೊಡಗಿಸಿಕೊಂಡಿದ್ದಾರೆ.
ಈ ಯೋಜನೆಯಲ್ಲಿ ಕೈಜೋಡಿಸಿರುವ ಎಪಿಎಫ್ ನ ತಂಡ, ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸುವ ಸಲುವಾಗಿ ನಾಲ್ಕು ವಿಭಾಗದ ಶಾಲೆಗಳಿಗೆ ಭೇಟಿ ನೀಡಿದಾಗ ಮೊಟ್ಟೆ ವಿತರಣೆಯಲ್ಲಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ಶಾಲೆಗಳಲ್ಲಿ ಇದುವರೆಗೂ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಲು ಆರಂಭಿಸಿಲ್ಲವಾದರೆ ಮತ್ತೆ ಹಲವು ಶಾಲೆಗಳಲ್ಲಿ ಮೊಟ್ಟೆ ತಿನ್ನುವ ಮಕ್ಕಳಿಗೂ ಬಾಳೆಹಣ್ಣು ನೀಡಲಾಗುತ್ತಿದೆ. ಇನ್ನು ಕೆಲವು ಶಾಲೆಗಳಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣಿನ ಬದಲಾಗಿ ಕೇವಲ ಚಿಕ್ಕಿಯನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಚಿಕ್ಕಿ ಕೂಡ ಸರಕಾರ ನಿಗದಿಪಡಿಸಿದ ತೂಕಕ್ಕಿಂತ ಕಡಿಮೆ ತೂಕದ ಚಿಕ್ಕ ಗಾತ್ರದ ಚಿಕ್ಕಿಯನ್ನು ನೀಡಲಾಗುತ್ತಿದೆ ಎಂದು ಎಪಿಎಫ್, ಇಲಾಖೆಗೆ ವರದಿ ನೀಡಿದೆ.
ಒಟ್ಟಾರೆ ಇಡೀ ಯೋಜನೆಯ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ಎಡವಿರುವುದು ಸ್ಪಷ್ಟವಾಗುತ್ತದೆ. ಮಹತ್ವಾಕಾಂಕ್ಷೆಯ ಯೋಜನೆಯ ನೈಜ ಉದ್ದೇಶವೇ ನಿರರ್ಥಕವಾಗುತ್ತಿದೆಯಲ್ಲದೆ ಮಕ್ಕಳ ಹೆಸರಲ್ಲಿ ಇದರ ಹಣವನ್ನು ಯಾರೋ ಜೇಬಿಗಿಳಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಯನ್ನು ಎಪಿಎಫ್ ಆಗ್ರಹಿಸಿದೆ. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಆ್ಯಪ್ ಅಳವಡಿಕೆ, ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮತ್ತಿತರ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನೇನೋ ನೀಡಿದೆ.
ಶಿಕ್ಷಣ ಇಲಾಖೆ ಈ ವಿಷಯದಲ್ಲಿ ಕೇವಲ ಭರವಸೆಗಷ್ಟೇ ಸೀಮಿತವಾಗದೆ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದಲ್ಲೂ ಅಕ್ರಮ ಎಸಗುವವರ ವಿರುದ್ಧ ಇಲಾಖೆ ನಿಷ್ಠುರ ಕ್ರಮ ಕೈಗೊಳ್ಳಬೇಕು. ಖಾಸಗಿ ಸಂಸ್ಥೆಯ ಪ್ರಾಯೋಜಕತ್ವವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಶಿಕ್ಷಣ ಇಲಾಖೆ ಎಡವಿದ್ದು, ಇಂತಹ ಎಡವಟ್ಟುಗಳಿಂದಲೇ ಖಾಸಗಿ ಸಂಘ, ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಲು ಹಿಂದೇಟು ಹಾಕುತ್ತಿವೆ.
ಇನ್ನಾದರೂ ಶಿಕ್ಷಣ ಇಲಾಖೆ ಇಂತಹ ಅವಾಂತರಗಳು, ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಈಗ ಬೆಳಕಿಗೆ ಬಂದಿರುವ ಅಕ್ರಮದ ಹಿಂದಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರಗಿಸುವುದರ ಜತೆಯಲ್ಲಿ ಹಾಲಿ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದನ್ನು ಖಾತರಿಪಡಿಸುವ ಹೊಣೆಗಾರಿಕೆಯನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಿದಲ್ಲಿ ಮಾತ್ರವೇ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ
Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.