ಮತ್ತೆ ಮೈತ್ರಿಕೂಟದ ಸರ್ಕಸ್
Team Udayavani, Jan 18, 2019, 12:30 AM IST
ರಾಜಕೀಯ ಕ್ಷೇತ್ರದಲ್ಲಿ ವ್ಯೂಹಕ್ಕೆ ಪ್ರತಿವ್ಯೂಹ ರಚನೆ ಎನ್ನುವುದು ಸಾಮಾನ್ಯ. ಉತ್ತಮ ಪ್ರಜಾಪ್ರಭುತ್ವ ಕೆಲಸ ಮಾಡಲು ಆಡಳಿತ ಮತ್ತು ಪ್ರತಿಪಕ್ಷಗಳು ಸಮ್ಮಿಳಿತವಾಗಿ ಕೆಲಸ ಮಾಡಬೇಕು ಎನ್ನುವುದು ಸಾರ್ವಕಾಲಿಕ ಆಶಯ. ಆದರೆ ಇಂಥವರಿಗೆ ಅಧಿಕಾರ ದಕ್ಕಲೇಬಾರದು, ಯಾವತ್ತೂ ತನ್ನಲ್ಲಿಯೇ ಅಧಿಕಾರದ ನಿಯಂತ್ರಣ ಇರಬೇಕು, ತಾನು ಹೇಳಿದ್ದೇ ನಡೆಯಬೇಕು ಎಂಬ ಮಹತ್ವಾಕಾಂಕ್ಷೆ ಇದ್ದಾಗ ಸದಾಶಯ ಕೆಲಸ ಮಾಡುವುದಿಲ್ಲ.
ಕೋಲ್ಕತಾದಲ್ಲಿ ಜ.19ರಂದು ತೃಣಮೂಲ ಕಾಂಗ್ರೆಸ್ ನಡೆಸಲು ಹೊರಟಿರುವ ಮಹಾಮೈತ್ರಿಯ ಬೃಹತ್ ರ್ಯಾಲಿಯಲ್ಲಿ ಇದೇ ಆಶಯ ವ್ಯಕ್ತವಾಗುತ್ತಿದೆ. ಕಾಗ್ರೆಸ್ ವರಿಷ್ಠರಾದ ಮತ್ತು ರಾಹುಲ್ ಗಾಂಧಿಯವರಿಗೆ ಆಹ್ವಾನ ನೀಡಲಾಗಿದ್ದರೂ, ತಮ್ಮ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಕಳುಹಿಸಿಕೊಡಲಿದ್ದಾರೆ. ಬಿಎಸ್‌ಪಿ ನಾಯಕಿ ಮಾಯಾವತಿಗೆ ಆಹ್ವಾನವಿದ್ದರೂ ಅವರು ಭಾಗವಹಿಸದೆ, ತಮ್ಮ ವಿಶ್ವಾಸಾರ್ಹ ನಾಯಕ ಎಸ್.ಸಿ.ಮಿಶ್ರಾರನ್ನು ಕಳುಹಿಸಿಕೊಡುತ್ತಿದ್ದಾರೆ. ಮನಸ್ಸಿನೊಳಗೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪ್ರಧಾನಮಂತ್ರಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಅದಕ್ಕಾಗಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ರಹಿತ ಮೈತ್ರಿಕೂಟ ರಚನೆಯಾಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ತೆಲಂಗಾಣ ರಾಷ್ಟ್ರ ಸಮಿತಿ ನಾಯಕ, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಫೆಡರಲ್ ಫ್ರಂಟ್ ರಚನೆಗೆ ಓಡಾಟ ನಡೆಸುತ್ತಿದ್ದಾರೆ. ಪ್ರಸ್ತಾವಿತ ಫೆಡರಲ್ ಫ್ರಂಟ್ ಮತ್ತು ಮಹಾಮೈತ್ರಿ ಕೂಟದ ನಾಯಕರಲ್ಲಿ ನಾನೇ ಪ್ರಧಾನಮಂತ್ರಿ ಹುದ್ದೆಯಲ್ಲಿ ಇರಬೇಕು ಎಂಬ ಆಸೆ ಇದೆ. ಹೀಗಾಗಿಯೇ ಬಿಜೆಪಿ ವಿರುದ್ಧದ ಮೈತ್ರಿಕೂಟ ರಚನೆಯಾಗಬೇಕು ಎಂಬ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದರೂ ಇದೊಂದೇ ಕಾರಣಕ್ಕೆ ವಿಫಲವಾಗುವ ಸಾಧ್ಯತೆ ಇದೆ. ಯುಪಿಎ 2ನೇ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಹಿತ ಮೈತ್ರಿಕೂಟ ರಚನೆಯಾಗಬೇಕು ಎಂದು ತುಮಕೂರಿನ ದಾಬಸ್‌ಪೇಟೆ ಸಮೀಪ ತೃತೀಯ ರಂಗದ ನಾಯಕರ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ದೇಶಾದ್ಯಂತ ಸುದ್ದಿಯಾಯಿತು. ಅಂತಿಮವಾಗಿ 2009ರ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಂಡದ್ದು ಕಾಂಗ್ರೆಸ್ ನೇತೃತ್ವದ ಯುಪಿಎ. ಈಗಲೂ ಇದು ಪುನರಾವರ್ತನೆಯಾದರೆ ಅಚ್ಚರಿ ಏನಿಲ್ಲ.
ಏಕೆಂದರೆ, ಸದ್ಯ ಆಗುತ್ತಿರುವ ಮೈತ್ರಿಕೂಟ ರಚನೆಯ ಕಸರತ್ತುಗಳು ಹಿಂದಿನ ವರ್ಷಗಳ ಕಸರತ್ತುಗಳ ಪುನರಾವರ್ತನೆ ಎನ್ನುವುದು ಸ್ಪಷ್ಟ. ಆದರೆ ಅದರ ನೇತೃತ್ವ ವಹಿಸಿರುವ ವ್ಯಕ್ತಿಗಳು ಮಾತ್ರ ಬೇರೆ. 2009ರಲ್ಲಿ ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಮತ್ತು ಇತರರು ನೇತೃತ್ವ ವಹಿಸಿದ್ದರೆ, ಈ ಬಾರಿ ಬಿಜೆಪಿ ನೇತೃತ್ವದ ವಿರೋಧಿ ಕೂಟ ರಚನೆಯ ನಾಯಕತ್ವ ವಹಿಸಿರುವುದು ಆಂಧ್ರಪ್ರದೇಶ ಮುಖ್ಯಮಂತ್ರಿ ನರಾ ಚಂದ್ರಬಾಬು ನಾಯ್ಡು. ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ತೆಲುಗು ದೇಶಂ, ತೆಲಂಗಾಣ ಜನ ಸಮಿತಿ, ಸಿಪಿಐ ಕೈಜೋಡಿಸಿ ಮಹಾಕುಟಮಿ ಅಥವಾ ಜನರ ಒಕ್ಕೂಟ ಮಾಡಿ ಸೋತರು. ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜತೆಗೆ ಟಿಡಿಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಈಗಿನ ಹೊಸ ವಾದ. ಹೀಗೆ, ಸ್ಥಳಕ್ಕೆ ಸಂಬಂಧಿಸಿದಂತೆ ಮೈತ್ರಿ ಮಾಡಿಕೊಳ್ಳುವುದು ಎಂದಾದರೆ, ಒಟ್ಟೂ ವ್ಯವಸ್ಥೆ ನಡೆಯುವುದಾದರೂ ಹೇಗೆ?
ಪ್ರತಿಪಕ್ಷಗಳ ಮೈತ್ರಿಕೂಟದ ಮತ್ತೂಂದು ಸವಾಲು ಏನೆಂದರೆ ಆಯಾ ನಾಯಕರ ಜನಪ್ರಿಯತೆ ಸೀಮಿತ ಭೌಗೋಳಿಕ ವಲಯಕ್ಕೆ ಸೀಮಿತ. ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಆಯ್ದ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಪ್ರಭಾವಳಿ ಇದೆ. ಟಿಎಂಸಿ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತ. ಟಿಡಿಪಿ, ಟಿಆರ್‌ಎಸ್ ಆಂಧ್ರಪ್ರದೇಶ, ತೆಲಂಗಾಣಕ್ಕೆ ಸೀಮಿತ. ಪ್ರಾದೇಶಿಕವಾರು ಪ್ರಾಬಲ್ಯಗಳನ್ನು ಹೊಂದಿರುವ ಪಕ್ಷಗಳು ಈ ಹಿಂದೆಯೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದೇ ಕಾರಣಕ್ಕೆ ಸಮಸ್ಯೆ ಎದುರಿಸಿವೆ.
ಬಿಜೆಪಿ ಯಾವತ್ತಿಗೂ ಅಧಿಕಾರದಲ್ಲಿ ಇರಲೇಬಾರದು. ಆ ಪಕ್ಷ ಬಂದರೆ ಅನಾಹುತವೇ ಆಗುತ್ತದೆ ಎಂಬ ವಾದವೂ ಪ್ರಶ್ನಾರ್ಹ. ಯಾವುದೇ ಮೈತ್ರಿಕೂಟ ಅಥವಾ ಏಕಪಕ್ಷದ ಆಡಳಿತ ಬಂದರೆ ಒಂದು ಅವಧಿಯಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯವೇ ಇಲ್ಲ. ಹೀಗಾಗಿ, ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಅದಕ್ಕಾಗಿ ಅವರು ಬರಲೇಬಾರದು ಎನ್ನುವ ಮಾತುಗಳು ಸಲ್ಲದು. ನಮ್ಮ ದೇಶದಲ್ಲಿ ಯಾವುದೇ ಒಂದು ವ್ಯವಸ್ಥೆ, ನಿರ್ಧಾರ ಬದಲಾಗಲು ಸಮಯ ತೆಗೆದುಕೊಳ್ಳುತ್ತದೆ. ಒಂದು ದೇಶದ ಆಡಳಿತ ನಿರ್ಣಯದಲ್ಲಿ ಸಾಮಾಜಿಕ, ಆರ್ಥಿಕ ಮಾನದಂಡಗಳು ಯಾವತ್ತಿಗೂ ಪ್ರಭಾವ ಬೀರುತ್ತದೆ ಎನ್ನುವುದನ್ನು ಎಲ್ಲಾ ರಾಜಕೀಯ ಪಕ್ಷಗಳು ಮನಗಾಣಬೇಕಾದ್ದು ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.