ಮತ್ತೆ ಸೇನೆಯ ಪರಾಕ್ರಮ
Team Udayavani, Sep 28, 2017, 11:31 AM IST
ಅದು 2015, ಜೂನ್ 9ರ ಮಧ್ಯರಾತ್ರಿ ದಾಟಿದ ಬಳಿಕ ಸೇನೆ ನಡೆಸಿದ ಕಾರ್ಯಾಚರಣೆ. ಸೇನೆಯ 70 ಮಂದಿ ಪ್ಯಾರಾ ಕಮಾಂಡೊಗಳ ಪಡೆ ಮ್ಯಾನ್ಮಾರ್ ಗಡಿದಾಟಿ ಹೋಗಿ ದಟ್ಟಡವಿಯಲ್ಲಿ ಶಿಬಿರಗಳನ್ನು ಕಟ್ಟಿಕೊಂಡು ತರಬೇತಿ ಪಡೆಯುತ್ತಿದ್ದ ನಾಗಾ ಉಗ್ರರನ್ನು ಸದೆ ಬಡಿದು ವಾಪಸಾಗಿತ್ತು. ಭಾರೀ ತಯಾರಿಯ ಬಳಿಕ ಬರೀ 40 ನಿಮಿಷದೊಳಗೆ ಮುಗಿಸಿದ ಈ ಕಾರ್ಯಾಚರಣೆಯಲ್ಲಿ 38 ನಾಗಾ ಉಗ್ರರು ಹತರಾಗಿದ್ದರು ಹಾಗೂ ಸುಮಾರು 10 ಮಂದಿ ಗಾಯಗೊಂಡಿದ್ದರು.
ಅಲ್ಲಿದ್ದ ಉಗ್ರ ಶಿಬಿರಗಳನ್ನು ಸೇನೆ ನಾಶ ಮಾಡಿತ್ತು. ಜೂ. 4ರಂದು ನಾಗಾ ಉಗ್ರರು ಮಣಿಪುರದಲ್ಲಿ ಸೇನೆಯ ಮೇಲೆ ದಾಳಿ ಮಾಡಿ 18 ಯೋಧರನ್ನು ಸಾಯಿಸಿದ ಕೃತ್ಯಕ್ಕೆ ಸೇನೆ ಸೇಡು ತೀರಿಸಿಕೊಂಡ ರೀತಿಯಿದು. ಅನಂತರ ಕಳೆದ ವರ್ಷ ಸೆ. 28ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇದ್ದ ಉಗ್ರ ಶಿಬಿರಗಳನ್ನು ನಾಶ ಮಾಡಲು ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ರಾತೋರಾತ್ರಿ 30 ಭಾರತೀಯ ಕಮಾಂಡೋ ಪಡೆ ಪಾಕ್ ನೆಲದೊಳಕ್ಕೆ ನುಗ್ಗಿ ಗಡಿಯುದ್ದಕ್ಕೂ ಇದ್ದ ಉಗ್ರರ ಚಿಮ್ಮು ಹಲಗೆಗಳಂತಿದ್ದ ಶಿಬಿರಗಳನ್ನು ಧ್ವಂಸ ಮಾಡಿ ಅಲ್ಲಿದ್ದ ಪಾಕ್ ಸೈನಿಕರನ್ನು ಮತ್ತು ಉಗ್ರರನ್ನು ಸಾಯಿಸಿ ವಾಪಸಾಯಿತು.
ಎಷ್ಟು ಪಾಕ್ ಯೋಧರು ಮತ್ತು ಉಗ್ರರು ಸತ್ತಿದ್ದಾರೆ ಎನ್ನುವ ಲೆಕ್ಕ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ನಾಶವಾದ ಶಿಬಿರಗಳಲ್ಲಿದ್ದ ಶವಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಿರುವುದನ್ನು ನೋಡಿದರೆ ಭಾರೀ ಪ್ರಮಾಣದ ಸಾವು ಸಂಭವಿಸಿರುವುದು ನಿಶ್ಚಿತ. ಈ ಎರಡು ಕಾರ್ಯಾಚರಣೆಗಳು ಭಾರತದ ಸೇನೆಯ ಪರಾಕ್ರಮವನ್ನು ಜಗತ್ತಿಗೆ ತಿಳಿಸಿದ್ದು ಮಾತ್ರವಲ್ಲದೆ ಭಾರತದ ಸೇನಾ ಸಾಮರ್ಥ್ಯದ ಕುರಿತು ಇದ್ದ ಗ್ರಹಿಕೆಯನ್ನು ಬದಲಾಯಿಸಿದ್ದವು. ಇದೀಗ ಪಾಕ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ನಡೆಸಿ ಸರಿಯಾಗಿ ಒಂದು ವರ್ಷದ ಬಳಿಕ ಸೇನೆ ಇದೇ ಮಾದರಿಯ ಇನ್ನೊಂದು ಕಾರ್ಯಾಚರಣೆಯನ್ನು ನಡೆಸಿ ಮತ್ತೆ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಯೋಧರ ಮೇಲೆ ಉಗ್ರರ ಗುಂಪೊಂದು ದಾಳಿ ಮಾಡಿದ ಕೃತ್ಯಕ್ಕೆ ಪ್ರತೀಕಾರವಾಗಿ ಸೇನೆ ಮತ್ತೂಮ್ಮೆ ನಾಗಾ ಉಗ್ರರ ಬೇಟೆಯಾಡಿದೆ. ಈ ಸಲವೂ 70 ಕಮಾಂಡೊಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಕಾರ್ಯಾಚರಣೆಗಾಗಿ ಗಡಿ ದಾಟಿ ಹೋಗಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ. ಎಷ್ಟು ಉಗ್ರರ ಹತರಾಗಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಸೇನೆಯ ಮೂಲಗಳು ಹೇಳುವ ಸಾಕಷ್ಟು ಸಂಖ್ಯೆಯ ಉಗ್ರರು ಸತ್ತಿದ್ದಾರೆ. ಆದರೆ ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ ಎಂದೂ ಸೇನೆ ಸ್ಪಷ್ಟಪಡಿಸಿದೆ.
ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನಿರ್ದೇಶಿತ ಗುರಿಯ ಮೇಲೆ ಎರಗಲಾಗುತ್ತದೆ. ಈ ಸಂದರ್ಭದಲ್ಲಿ ಕಟ್ಟಡ ಮತ್ತಿತರ ನಿರ್ಮಾಣಗಳು, ವಾಹನಗಳು ಮತ್ತಿತರ ಸೊತ್ತುಗಳು ಹಾಗೂ ಜನರಿಗೆ ಆದಷ್ಟು ಕಡಿಮೆ ಹಾನಿಯಾಗುವಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ಬುಧವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ಏನೆಲ್ಲ ಹಾನಿಗಳು ಸಂಭವಿಸಿವೆ ಎನ್ನುವುದು ಕೂಡ ಬಹಿರಂಗವಾಗಿಲ್ಲ. 2015ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನಂತರವೂ ನಾಗಾ ಉಗ್ರರು ಬುದ್ಧಿ ಕಲಿತುಕೊಂಡಿಲ್ಲ.
ಅನಂತರವೂ ಪದೇ ಪದೇ ಸೇನೆ ಮತ್ತು ನಾಗರಿಕರ ಮೇಲೆ ಚಿಕ್ಕಪುಟ್ಟ ದಾಳಿಗಳನ್ನು ನಡೆಸಲಾಗುತ್ತಿತ್ತು. ನ್ಯಾಶನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್- ಕೆ ಗುಂಪಿನ ಮುಖಂಡ ಎಸ್. ಎಸ್. ಕಪ್ಲಂಗ್ ಕಳೆದ ಜೂನ್‌ನಲ್ಲಿ ಸತ್ತ ಬಳಿಕ ನಾಗಾ ಉಗ್ರರು ಶಾಂತಿ ಮಾತುಕತೆಗೆ ಬರಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈಶಾನ್ಯದಲ್ಲಿ ನಾಗಾ ಹೋರಾಟಕ್ಕೆ ದಶಕಗಳ ಇತಿಹಾಸವಿದೆ.
1980ರಲ್ಲಿ ಖಪ್ಲಂಗ್, ಇಸಾಕ್ ಚಿಶಿ ಸು ಮತ್ತು ತುಂಗ್ಲೆಂಗ್ ಮ್ಯೂವಾ ಎಂಬವರು ಸೇರಿಕೊಂಡು ಎನ್‌ಎಸ್‌ಸಿಎನ್ ರಚಿಸಿದ ಬಳಿಕ ನಾಗಾಗಳ ಹೋರಾಟ ಉಗ್ರ ರೂಪಕ್ಕೆ ತಿರುಗಿತು. ಎಂಟು ವರ್ಷದ ಬಳಿಕ ಈ ಸಂಘಟನೆ ಹೋಳಾಗಿ ಖಪ್ಲಂಗ್ ಎನ್‌ಎಸ್‌ಸಿಎನ್- ಕೆಯ ನೇತೃತ್ವ ವಹಿಸಿಕೊಂಡು ಹೋರಾಟ ಮುಂದುವರಿಸಿದ. ನಾಗಾ ಉಗ್ರರಲ್ಲಿ ಭಾರತೀಯರು ಮಾತ್ರವಲ್ಲದೆ ಮ್ಯಾನ್ಮಾರ್‌ನ ನಾಗಾಗಳೂ ಇದ್ದಾರೆ. ಭಾರತದ ನಾಗಾಗಳು ಶಾಂತಿ ಮಾತುಕತೆಗೆ ಸಿದ್ಧರಿದ್ದಾರೆ.
ಆದರೆ ಮ್ಯಾನ್ಮಾರ್ ನಾಗಾಗಳು ಮಾತ್ರ ಸರಕಾರದ ಶಾಂತಿ ಪ್ರಸ್ತಾವಗಳನ್ನು ತಿರಸ್ಕರಿಸುತ್ತಾ ಸಶಸ್ತ್ರ ಹೋರಾಟ ಮುಂದುವರಿಸಿದ್ದಾರೆ. 1997ರಲ್ಲಿ ಶಾಂತಿ ಒಪ್ಪಂದ ನಡೆಸಿದ್ದರೂ ಅದು ಫಲ ನೀಡಿಲ್ಲ. ಇದೀಗ ಭಾರತವೂ ಸಶಸ್ತ್ರ ಹೋರಾಟಕ್ಕೆ ಅದೇ ಮಾದರಿಯಲ್ಲಿ ಪ್ರತ್ಯುತ್ತರ ನೀಡುತ್ತಿದೆ. ಈಗಿನ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳಲು ಮೀನಮೇಷ ಎಣಿಸುತ್ತಾ ಕಾಲಹರಣ ಮಾಡುವುದಿಲ್ಲ ಎನ್ನುವುದು ಈ ಕಾರ್ಯಾಚರಣೆಗಳಿಂದ ಸಾಬೀತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.