ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಆರ್ಥಿಕತೆಗೆ ಬಲ ನೀಡಲಿ
Team Udayavani, Jun 22, 2020, 6:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್-19ನಿಂದಾಗಿ ದೇಶದ ಆರ್ಥಿಕ ಸ್ಥಿತಿಯು ಬಿಕ್ಕಟ್ಟಿನಲ್ಲಿರುವ ಈ ಹೊತ್ತಿ ನಲ್ಲಿ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ 41 ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಗಣಿಗಾರಿಕೆಗೆ ಮುಕ್ತವಾ ಗಿಸುವ ಎರಡು ಹಂತದ ಇ-ಹರಾಜು ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿದ್ದಾರೆ.
ಅಲ್ಲದೇ ಇದು ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ರೂಪಿಸಿರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಭಾಗವೂ ಹೌದು.
ಕಳೆದ ಕೆಲವು ವರ್ಷಗಳಿಂದ ದೇಶದ ಕಲ್ಲಿದ್ದಲು ವಲಯ ತೀವ್ರ ಬಿಕ್ಕಟ್ಟನ್ನು ಎದುರಿಸಿದೆ. 1993ರಿಂದ 2010ರವರೆಗೆ ನಡೆದಿದ್ದು ಒಟ್ಟು 218 ಹರಾಜುಗಳಲ್ಲಿ ಕೇವಲ ನಾಲ್ಕನ್ನು ಹೊರತುಪಡಿಸಿ ಉಳಿದದನ್ನೆಲ್ಲ ರದ್ದುಗೊಳಿಸಿ ಆದೇಶ ಹೊರಡಿಸಿತ್ತು ಸುಪ್ರೀಂ ಕೋರ್ಟ್. ಈ ನಡೆಯ ಆರು ವರ್ಷಗಳ ಅನಂತರ ಈ ಪ್ರಕ್ರಿಯೆಗೆ ಚಾಲನೆ ದೊರಕಿದೆ.
ಕಲ್ಲಿದ್ದಲು ನಿಕ್ಷೇಪಗಳ ಈ ಹರಾಜಿನಿಂದ ಮುಂದಿನ 5ರಿಂದ 7 ವರ್ಷಗಳಲ್ಲಿ ದೇಶದಲ್ಲಿ 33 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ ಕೇಂದ್ರ ಸರಕಾರ. ಕಲ್ಲಿದ್ದಲು ನಿಕ್ಷೇಪಗಳು ಬಂಡವಾಳ ಆಕರ್ಷಣೆಯಲ್ಲಷ್ಟೇ ಅಲ್ಲದೇ, 2.8 ಲಕ್ಷ ಉದ್ಯೋಗಗಳನ್ನೂ ಸೃಷ್ಟಿಸಲಿವೆ ಎಂಬ ಭರವಸೆಯ ಮಾತನಾಡಿದ್ದಾರೆ ಪ್ರಧಾನಿಗಳು.
ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದರೂ, ಪ್ರಪಂಚದ ಎರಡನೇ ಅತೀ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರವಾಗಿದ್ದರೂ ಸಹ, ಭಾರತವು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂಥ ಸ್ಥಿತಿಯಲ್ಲಿದೆ. ಈ ವಿಚಾರವನ್ನೇ ಪ್ರಧಾನಿಗಳೂ ಪ್ರಸ್ತಾವಿಸಿದ್ದು, ಪ್ರಪಂಚದ ರಫ್ತುದಾರ ಸಮೂಹದಲ್ಲಿ ಭಾರತವೂ ಒಂದಾಗಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೆಲ್ಲ ಗಮನಿಸಿದರೆ ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾ, ಜಟಿಲ ಜಾಲದಲ್ಲಿ ಸಿಲುಕಿಬಿದ್ದಿದ್ದ ಕಲ್ಲಿದ್ದಲು ವಲಯಕ್ಕೆ ಮರುವೇಗ ನೀಡಲು ಕೇಂದ್ರ ಸರ್ವಸನ್ನದ್ಧವಾಗಿರುವ ಲಕ್ಷಣ ಕಾಣಿಸುತ್ತಿದೆ. ಆದರೆ, ಕೆಲ ವರ್ಷಗಳಿಂದ ವಾತಾವರಣ ರಕ್ಷಣೆಯ ವಿಚಾರದಲ್ಲಿ ಜಗತ್ತಿನಾದ್ಯಂತ ಜಾಗೃತಿ ಹೆಚ್ಚಾಗುತ್ತಿದ್ದು, ಕಲ್ಲಿದ್ದಲು ಗಣಿಗಾರಿಕೆ ಅಥವಾ ಥರ್ಮಲ್ ಪವರ್ ಪ್ಲ್ರಾಂಟ್‌ಗಳನ್ನೆಲ್ಲ ಋಣಾತ್ಮಕವಾಗಿಯೇ ನೋಡಲಾಗುತ್ತಿದೆ.
ಇದೇನೇ ಇದ್ದರೂ ಭಾರತದ ಮುಂದೆ ಈಗಲೂ ಹಲವು ಸವಾಲುಗಳಿವೆ. ಮುಖ್ಯವಾಗಿ ದೇಶದಲ್ಲಿನ ಬಹುತೇಕ ಕಲ್ಲಿದ್ದಲು ನಿಕ್ಷೇಪಗಳು ಜನನಿಬಿಡ ಪ್ರದೇಶಗಳಲ್ಲಿ ಅಥವಾ ಅರಣ್ಯ ಪ್ರದೇಶಗಳಲ್ಲಿವೆ. ಹೀಗಾಗಿ, ಸ್ಥಳೀಯ ಜನರ ಹಾಗೂ ಪ್ರಕೃತಿಯ ಹಿತದೃಷ್ಟಿಯನ್ನು ತಲೆಯಲ್ಲಿಟ್ಟುಕೊಂಡು ಮುಂದಡಿಯಿಡಬೇಕಾದ ಸವಾಲೂ ಇದೆ. ಇದೆಲ್ಲವನ್ನೂ ಸಕ್ಷಮವಾಗಿ ಎದುರಿಸಿ ಮುಂದಡಿ ಇಟ್ಟರೆ ನಿಸ್ಸಂಶಯವಾಗಿಯೂ ಆತ್ಮನಿರ್ಭರತೆಯ ದೃಷ್ಟಿಯಿಂದ ಇದೊಂದು ಮಹತ್ತರ ಹೆಜ್ಜೆಯಾಗುವುದಷ್ಟೇ ಅಲ್ಲದೇ, ಅರ್ಥವ್ಯವಸ್ಥೆಗೆ ಅತ್ಯಗತ್ಯವಾಗಿರುವ ಬಲವೂ ದೊರೆತಂತಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.