ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿ: ಕಾಂಗ್ರೆಸ್ ಬಯಕೆ ಈಡೇರಿತೇ?
Team Udayavani, Feb 27, 2023, 6:00 AM IST
ಛತ್ತೀಸ್‌ಗಢದ ನವ ರಾಯ್ಪುರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಕಾಂಗ್ರೆಸ್ ಮಹಾಧಿವೇಶನಕ್ಕೆ ರವಿವಾರ ತೆರೆ ಬಿದ್ದಿದೆ. ಈ ಅಧಿವೇಶನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ರಚನೆ, ಪಕ್ಷದ ಸಂವಿಧಾನಕ್ಕೆ ಕೆಲವೊಂದು ಮಹತ್ವದ ತಿದ್ದುಪಡಿಗಳು, ಪ್ರಸಕ್ತ ವರ್ಷ ದೇಶದ ವಿವಿಧ ರಾಜ್ಯಗಳ ವಿಧಾನಸಭೆಗಳು ಮತ್ತು 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬೆಲ್ಲ ವಿಷಯಗಳ ಕುರಿತಾಗಿ ವಿಸ್ತೃತ ಚರ್ಚೆಗಳು ನಡೆದಿವೆ.
ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ತಮ್ಮ ಭಾಷಣದಲ್ಲಿ ಪಕ್ಷದ ಮುಂದಿನ ನಡೆಗಳೇನಿರಬೇಕು ಎಂಬುದನ್ನು ಸ್ಪಷ್ಟ ಮಾತು ಗಳಲ್ಲಿ ಹೇಳಿದ್ದಾರೆ. ಸದ್ಯ ದೇಶದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಿರುವ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ ಎಂಬುದು ಈ ಎಲ್ಲ ನಾಯಕರ ಅಭಿಪ್ರಾಯ.
ಯಾವುದೇ ಕ್ರೀಡೆಯಲ್ಲಿ ಪ್ರಬಲ ಪ್ರತಿಸ್ಪರ್ಧಿ ಅಥವಾ ಎದುರಾಳಿ ಇಲ್ಲವೆಂದಾದರೆ ಆ ಪಂದ್ಯ ತೀರಾ ನಿರಾಶದಾಯಕ. ಒಂದೊಂದು ಬಾರಿ ಕ್ರೀಡೆಯಲ್ಲೂ ಪಂದ್ಯಗಳು ಏಕಪಕ್ಷೀಯವಾಗಿ ನಡೆಯುವುದಿದೆ. ಆದರೆ ಪ್ರತೀ ಬಾರಿಯೂ ಇದೇ ತೆರನಾದಲ್ಲಿ ಆ ಕ್ರೀಡೆ ಜನಮನ್ನಣೆ ಪಡೆಯಲಾರದು. ರಾಜಕೀಯದಲ್ಲೂ ಹಾಗೆಯೇ. ರಾಜಕಾರಣ, ಚುನಾವಣೆ ಎಂದಾದ ಮೇಲೆ ಅಲ್ಲಿ ಸ್ಪರ್ಧೆ ಇರಲೇಬೇಕು. ವಿವಿಧ ಪಕ್ಷಗಳ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟರೆ ಮಾತ್ರ ಅದಕ್ಕೊಂದು ಮೆರುಗು, ಸೊಗಸು. ಅಧಿಕಾರ, ಆಡಳಿತದ ಪ್ರಶ್ನೆ ಬಂದಾಗಲೂ ಇದೇ ಸಿದ್ಧಾಂತ ಅನ್ವಯವಾಗುತ್ತದೆ. ಪ್ರಬಲ ಮತ್ತು ಸಮರ್ಥ ವಿಪಕ್ಷವಿದ್ದಾಗಲಷ್ಟೇ ಆಡಳಿತ ಯಂತ್ರ ಸುಸೂತ್ರವಾಗಿ ಮುಂದೆ ಸಾಗಬಲ್ಲುದು. ಇಲ್ಲವಾದಲ್ಲಿ ಯಾವುದೇ ಆಡಳಿತ ಪಕ್ಷ “ಆನೆ ನಡೆದದ್ದೇ ದಾರಿ” ಎಂಬ ಮಾತಿನಂತೆ ಸಾಗುವ ಸಾಧ್ಯತೆಯೂ ಇರುತ್ತದೆ. ಅಂಥ ಘಟನೆಗಳು ಸಂಭವಿಸಿದಾಗ ವಿಪಕ್ಷಗಳು ಕಡಿವಾಣ ಹಾಕುವುದು ಪ್ರಜಾಸತ್ತೆಯ ಮೂಲಸತ್ವ.
ಸಾರ್ವತ್ರಿಕ ಚುನಾವಣೆಗೆ ವರ್ಷ ಬಾಕಿ ಉಳಿದಿದೆ ಎನ್ನುವಾಗ ಬಿಜೆಪಿ ವಿರುದ್ಧ ಸಮಾನಮನಸ್ಕ ಪಕ್ಷಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯ ಶಕ್ತಿಯನ್ನು ರಚಿಸುವ ಇಂಗಿತವನ್ನು ಕಾಂಗ್ರೆಸ್ ಬಹಿರಂಗವಾಗಿಯೇ ವ್ಯಕ್ತಪಡಿಸಿದೆ. ಇದರ ಜತೆಯಲ್ಲಿ ದೇಶದ ಜನತೆ ಕಾಂಗ್ರೆಸ್ ಅನ್ನು ಒಳಗೊಂಡ ಪರ್ಯಾಯ ರಾಜಕೀಯ ಶಕ್ತಿಯನ್ನು ಎದುರುನೋಡುತ್ತಿದೆ ಎಂಬ ಸಮರ್ಥನೆಯನ್ನೂ ಪಕ್ಷದ ನಾಯಕರು ನೀಡಿದ್ದಾರೆ. ವಿವಿಧ ರಾಜ್ಯಗಳಿಗೆ ಸೀಮಿತವಾಗಿರುವ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸೇತರ ತೃತೀಯ ಶಕ್ತಿಯನ್ನು ರೂಪಿಸುವ ಪ್ರಯತ್ನದಲ್ಲಿರುವಾಗಲೇ ಕಾಂಗ್ರೆಸ್ ನಾಯಕರಿಂದ ಈ ಘೋಷಣೆ ಹೊರಬಿದ್ದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತೂ ದೇಶದ ಜನರ ಒಳಿತಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎನ್ನುವ ಮೂಲಕ ಪ್ರಬಲವಾದ ಪರ್ಯಾಯ ಮೈತ್ರಿಕೂಟ ರಚನೆಯ ಅನಿವಾರ್ಯತೆಯ ಬಗೆಗೆ ಒತ್ತಿ ಹೇಳಿದ್ದಾರೆ.
ಹಿಂದೆಯೂ ಸಾಕಷ್ಟು ಬಾರಿ ಇಂಥ ಒಕ್ಕೂಟ, ಮೈತ್ರಿಕೂಟಗಳ ರಚನೆಯಾಗಿದ್ದು, ಹಲವು ಸಂದರ್ಭಗಳಲ್ಲಿ ಒಳಜಗಳ, ಭಿನ್ನಾಭಿಪ್ರಾಯ ಹಾಗೂ ಅಧಿಕಾರದಾಹದ ಪರಿಣಾಮ ಮೈತ್ರಿಕೂಟ ಕುಸಿದುಬಿದ್ದಿದ್ದೂ ಇದೆ. ಇದನ್ನು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಗಮನದಲ್ಲಿಟ್ಟುಕೊಂಡೇ ಮುಂದಿನ ಹೆಜ್ಜೆ ಇಡಬೇಕು.
ಮುಂದಿನ ಎಲ್ಲ ಚುನಾವಣೆಗಳು ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲದೆ ಪ್ರತಿ ಯೊಂದು ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿದ್ದು ಇದನ್ನರಿತೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿಯನ್ನು ರಚಿಸುವ ಸಂಬಂಧ ಬಹಿರಂಗ ಹೇಳಿಕೆ ನೀಡಿರುವುದಂತೂ ಸ್ಪಷ್ಟ. ಬಿಜೆಪಿ ಮತ್ತದರ ಮಿತ್ರಪಕ್ಷಗಳ ಹೊರತಾಗಿ ಉಳಿದೆಲ್ಲ ಪಕ್ಷಗಳಿಗೆ ಮುಂಬರುವ ಚುನಾವಣೆ ಅಳಿವು-ಉಳಿವಿನ ಪ್ರಶ್ನೆಯಾಗಿರುವುದರಿಂದ ಕಾಂಗ್ರೆಸ್ ನಾಯಕರು ಪರ್ಯಾಯ ಶಕ್ತಿ ರಚನೆಯ ರಾಜಕೀಯ ದಾಳವನ್ನು ಉರುಳಿಸಿದ್ದಾರೆ. ತನ್ಮೂಲಕ ತನ್ನ ಅಸ್ತಿತ್ವಕ್ಕೆ ಎದುರಾಗಿರುವ ಅಪಾಯದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿರುವುದಂತೂ ದಿಟ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.