ಚಿತ್ರರಂಗದಲ್ಲಿ ಸೃಷ್ಟಿಯಾಗಿದೆ ನಿರ್ವಾತ ಆಧಾರಸ್ತಂಭವಾಗಿದ್ದ ಅಂಬಿ
Team Udayavani, Nov 26, 2018, 6:00 AM IST
ಶನಿವಾರ ನಿಜಕ್ಕೂ ದುರಂತದ ದಿನ. ಕಾಲುವೆಗೆ ಬಸ್ ಉರುಳಿ 30 ಜನ ಸಾವನ್ನಪ್ಪಿದ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಂಡ್ಯದ ಗಂಡೂ ಧರೆ ತೊರೆದಿದ್ದಾರೆ
ಕನ್ನಡದ ಹಿರಿಯ ನಟ, ರಾಜಕಾರಣಿ ಅಂಬರೀಷ್ ನಿಧನ, ಅವರ ಅಭಿಮಾನಿ ಮತ್ತು ಸ್ನೇಹ ಬಳಗಕ್ಕೆ ಅತೀವ ನೋವನ್ನುಂಟುಮಾಡಿದೆ. ರಾಜಕುಮಾರ್, ವಿಷ್ಣುವರ್ಧನ್‌ರ ನಿಧನಾನಂತರ ಅಕ್ಷರಶಃ ಕನ್ನಡ ಚಿತ್ರೋದ್ಯಮದ ಹಿರಿಯಣ್ಣನಾಗಿ ಬದಲಾಗಿದ್ದರು ಅಂಬರೀಷ್. ಇತ್ತೀಚಿನ ಕೆಲ ವರ್ಷಗಳಿಂದ ಅಂಬರೀಷ್‌ಅವರನ್ನು ಕನ್ನಡ ಚಿತ್ರರಂಗದ ಆಧಾರಸ್ತಂಭ ಎಂದೇ ಭಾವಿಸಲಾಗಿತ್ತು.
ಸ್ಯಾಂಡಲ್‌ವುಡ್‌ನಲ್ಲಿನ ಆಂತರಿಕ ಕಲಹಗಳಿಗೆ ತಮ್ಮ ನೇರ ನಿಷ್ಠುರ ನುಡಿಗಳೊಂದಿಗೆ ಅಂತ್ಯಹಾಡುತ್ತಿದ್ದರು ಅಂಬರೀಷ್. ಇತ್ತೀಚೆಗಷ್ಟೇ ಶ್ರುತಿ ಹರಿಹರನ್-ಅರ್ಜುನ್ ಸರ್ಜಾ ಮಿಟೂ ಪ್ರಕರಣದಲ್ಲಿ ಅಂಬರೀಷ್ ಇಬ್ಬರನ್ನೂ ಕೂಡಿಸಿ ವಿವಾದಕ್ಕೆ ಅಂತ್ಯ ಹಾಡಲು ಪ್ರಯತ್ನಿಸಿದ್ದು ಇಲ್ಲಿ ಉಲ್ಲೇಖನೀಯ. ಈಗ ಅವರ ನಿರ್ಗಮನ ಚಿತ್ರರಂಗದಲ್ಲೂ ಬಹುದೊಡ್ಡ ನಿರ್ವಾತವನ್ನು ಸೃಷ್ಟಿಸಲಿದೆ.
ಅಂಬರೀಷ್ ನಂತರ ಯಾರು ಎನ್ನುವ ಪ್ರಶ್ನೆಗೆ ತಕ್ಷಣ ಉತ್ತರ ಸಿಗುವುದು ಕಷ್ಟ. ಡಾ. ರಾಜ್‌ಕುಮಾರ್ ಇದ್ದಾಗ “ಅಪ್ಪಾಜಿ’ ಎಂಬ ಅವರ ವರ್ಚಸ್ಸು ಚಿತ್ರರಂಗವನ್ನು ಒಂದಾಗಿ ಹಿಡಿದಿಟ್ಟುಕೊಂಡಿತ್ತು. ಅವರು ನಿರ್ಗಮಿಸಿದ ನಂತರ ಚಿತ್ರರಂಗವನ್ನು ಅಂಬರೀಷ್ “ಅಣ್ಣ’ ” ಮಾಮ’ನಾಗಿ ಒಂದಾಗಿಟ್ಟಿದ್ದರು. ಜಗಳಗಳು, ಭಿನ್ನಾಭಿಪ್ರಾಯಗಳು ತಲೆದೋರಿದಾಗ ಎಂದಿನ ತಮ್ಮ ಮಂಡ್ಯ ಶೈಲಿಯಲ್ಲಿ ಬೈದು ಬುದ್ಧಿವಾದ ಹೇಳುತ್ತಿದ್ದರು.
ಅಂಬರೀಷ್ ಅವರ ಭಾಷಾ ವೈಖರಿಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇದ್ದವು. ಮಾತು ಒರಟು ಆದರೆ ಮನಸ್ಸು ಮಗುವಿನದ್ದು ಎಂದು ಅಂಬರೀಷ್ ಅವರನ್ನು ಬಲ್ಲವರು ಸಮರ್ಥಿಸುತ್ತಿದ್ದರೆ, ಆ ಭಾಷೆ ಎಲ್ಲರೂ ಸಹಿಸುವಂಥದ್ದಲ್ಲ ಎನ್ನುವುದು ಪ್ರತಿವಾದವಾಗಿತ್ತು. ಆದರೆ ಇದೆಲ್ಲದರ ನಡುವೆ ಎಲ್ಲರೂ ಒಪ್ಪುತ್ತಿದ್ದ ಅಂಶವೆಂದರೆ, ಅಂಬರೀಷ್ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಪಾಲಿಸಿಕೊಂಡು ಬಂದ ಭಾವನಾತ್ಮಕ ವ್ಯಕ್ತಿ ಎನ್ನುವುದು. ಕಲಿಯುಗದ ಕರ್ಣ ಎಂಬ ಅಭಿದಾನಕ್ಕೆ ತಕ್ಕಂತೆ ದಾನ ಧರ್ಮಗಳನ್ನು ಮಾಡುತ್ತಿದ್ದ ಅಂಬರೀಶ್ ಈ ವಿಷಯವನ್ನು ತಮ್ಮ ಪ್ರೊಫೈಲ್‌ಗೆ ಸೇರಿಸಿಕೊಳ್ಳುವುದನ್ನು ಬಯಸುತ್ತಿರಲಿಲ್ಲ. ನೊಂದು ಬಂದವರಿಗೆ ಬರೀ ಬಾಯಿ ಮಾತಲ್ಲಷ್ಟೇ ಅಲ್ಲ, ನಿಜಕ್ಕೂ ಸಹಾಯ ಮಾಡಿ ಸಾಂತ್ವನ ನೀಡುತ್ತಿದ್ದರು ಅಂಬರೀಷ್.
ಕೇಂದ್ರದಲ್ಲಿ ಸಂಸದರಾಗಿ, ಸಚಿವರಾಗಿಯೂ ದುಡಿದಿದ್ದ ಅವರು, ಸಿನೆಮಾ ಮತ್ತು ನಿಜಜೀವನದಲ್ಲಿ ಗುರುತಿಸಿಕೊಂಡಷ್ಟು ರಾಜಕಾರಣದಲ್ಲಿ ಸದ್ದು ಮಾಡಲಿಲ್ಲ. ಬಹುಶಃ ರಾಜಕೀಯದಲ್ಲಿನ ಜಟಿಲತಂತ್ರಗಳು ಅವರ ಗುಣಕ್ಕೆ ಅಷ್ಟಾಗಿ ಒಗ್ಗಲಿಲ್ಲವೆನಿಸುತ್ತದೆ. ಹೀಗಾಗಿ ಅವರ ಬಹುತೇಕ ಜನಸೇವೆಯ ಕೈಂಕರ್ಯವೂ ರಾಜಕೀಯೇತರವಾಗಿಯೇ ಆದದ್ದು ಎನ್ನಬಹುದೇನೋ.
ಅಂಬರೀಷ್ ಯಾವ ಮಟ್ಟಕ್ಕೆ ಜನಮನ ಮುಟ್ಟಿದ್ದರೆನ್ನುವುದಕ್ಕೆ ರಾಜ್ಯ ಮತ್ತು ದೇಶಾದ್ಯಂತ ಅವರ ಅಭಿಮಾನಿಗಳು, ಗೆಳೆಯರು ಮಿಡಿಯುತ್ತಿರುವ ಕಂಬನಿಯೇ ಸಾಕ್ಷಿ. ಫೇಸ್‌ಬುಕ್, ಟ್ವಿಟರ್‌ನಲ್ಲಂತೂ ಅಂಬರೀಷ್ ಅವರಿಗೆ ನುಡಿನಮನಗಳೇ ಹರಿದಾಡುತ್ತಿವೆ. ಪ್ರಧಾನಿಗಳು, ದಕ್ಷಿಣ ಭಾರತ-ಉತ್ತರ ಭಾರತದ ನಟರು, ಕೇಂದ್ರ ಸಚಿವರು, ಪಕ್ಷಾತೀತವಾಗಿ ರಾಜಕಾರಣಿಗಳೆಲ್ಲರೂ ಸಲ್ಲಿಸುತ್ತಿರುವ ನಮನ ಅಂಬರೀಷ್ ಬದುಕಿನಲ್ಲಿ ಎಷ್ಟೆಲ್ಲ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಕರ್ನಾಟಕಕ್ಕಂತೂ ಅಂಬರೀಷ್ ನಿಧನ ನಿಜಕ್ಕೂ ದೊಡ್ಡ ನಷ್ಟ. ಬೇಸರದ ಸಂಗತಿಯೆಂದರೆ, ರಾಜ್ಯಕ್ಕೆ, ಅದರಲ್ಲೂ ಮಂಡ್ಯದ ಜನರಿಗಂತೂ ಶನಿವಾರ ನಿಜಕ್ಕೂ ದುರಂತದ ದಿನ. ಕಾಲುವೆಗೆ ಬಸ್ ಉರುಳಿ 30 ಜನ ಸಾವನ್ನಪ್ಪಿದ್ದ ಆಘಾತಕಾರಿ ಘಟನೆಯ ಬೆನ್ನಲ್ಲೇ ಮಂಡ್ಯದ ಗಂಡೂ ಧರೆ ತೊರೆದಿದ್ದಾರೆ. ಅಭಿಮಾನಿಗಳ ಮನಸ್ಸಿಗೆ ಸಾಂತ್ವನ, ಮೃತರ ಆತ್ಮಕ್ಕೆ ಶಾಂತಿ ದೊರಕುವಂತಾಗಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.