ಭೂ ಕಬಳಿಕೆ ಕಾಯ್ದೆ ತಿದ್ದುಪಡಿ ರೈತಸ್ನೇಹಿ ನಿರ್ಧಾರ
Team Udayavani, Aug 27, 2022, 6:00 AM IST
ರಾಜ್ಯದಲ್ಲಿ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗು ವಳಿ ಮಾಡಿರುವ ರೈತರ ಭೂ ಒತ್ತುವರಿ ಪ್ರಕರಣಗಳನ್ನು ಭೂ ಕಬಳಿಕೆ ಪ್ರಕರಣಗಳ ವ್ಯಾಜ್ಯ ವಿಲೇವಾರಿಗೆ ಸ್ಥಾಪಿಸಿರುವ ತ್ವರಿತ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡುವ ತೀರ್ಮಾನ ರೈತ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಭೂ ಕಬಳಿಕೆ ತಡೆಯಲು ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯ್ದೆ 2011ನ್ನು ಜಾರಿಗೆ ತಂದಿದ್ದು, ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡಿದೆ. ಈ ನ್ಯಾಯಾಲಯದಲ್ಲಿ ರಾಜ್ಯದಲ್ಲಿ ಒತ್ತುವರಿಯಾಗಿರುವ ಅಥವಾ ಕಬಳಿಸಿರುವ ಎಲ್ಲ ಸರಕಾರಿ ಜಮೀನುಗಳ ಪ್ರಕರಣಗಳು ತ್ವರಿತ ನ್ಯಾಯಾಲಯದ ವ್ಯಾಪ್ತಿಗೆ ಒಳ ಪಡಿಸಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಜೀವನ ನಿರ್ವಹಣೆಗೆ ವ್ಯವಸಾಯ ಮಾಡಲು ರೈತರು ಅರಣ್ಯ ಅಥವಾ ಕಂದಾಯ ಭೂಮಿ ಯನ್ನು ಒತ್ತುವರಿ ಮಾಡಿದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ವಿಶೇಷವಾಗಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಕೋರ್ಟ್ ಪ್ರಕರಣಕ್ಕಾಗಿ ಬೆಂಗಳೂರಿಗೆ ಅಲೆದಾಡುವುದು ದೊಡ್ಡ ಶಿಕ್ಷೆಯಂತಾಗಿ ಪರಿಣಮಿಸಿತ್ತು. ರಾಜ್ಯದಲ್ಲಿ ಭೂ ಒತ್ತುವರಿಯಲ್ಲಿ ಎರಡು ರೀತಿಯ ಮಾನದಂಡಗಳಿವೆ. ರೈತರು ಉಳುಮೆ ಮಾಡುವ ಉದ್ದೇಶದಿಂದ ಅನಧಿಕೃತ ಸಾಗುವಳಿ ಮಾಡುವುದು ಒಂದು ಭಾಗವಾದರೆ, ಸರಕಾರಿ ಜಮೀನಿಗೆ ಬೇಲಿ ಹಾಕಿಕೊಂಡು ಯಾವುದೇ ಕೃಷಿ ಚಟುವಟಿಕೆ ನಡೆಸದೆ ಅಕ್ರಮವಾಗಿ ಕಬಳಿಕೆ ಮಾಡುವುದು ಇನ್ನೊಂದು ಭಾಗ.
ರಾಜ್ಯದಲ್ಲಿ ರೈತರು ಗ್ರಾಮೀಣ ಪ್ರದೇಶದಲ್ಲಿ ಸುಮಾರು 7 ಲಕ್ಷ ಎಕರೆ ಕಂದಾಯ ಭೂಮಿಯಲ್ಲಿ, ಸುಮಾರು 3 ಲಕ್ಷ ಎಕರೆ ಅರಣ್ಯ ಭೂಮಿ ಯಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ನಗರ ಪ್ರದೇಶದಲ್ಲಿ ಸುಮಾರು ಲಕ್ಷ ಎಕರೆ ಪ್ರದೇಶವನ್ನು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆಂದು ಅಂದಾಜಿಸಲಾಗಿದ್ದು, ಅಕ್ರಮ ಕಬಳಿಕೆ ಮತ್ತು ಭೂ ಒತ್ತುವರಿ ನಡುವಿನ ವ್ಯತ್ಯಾಸವನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಂಡಿರುವುದು ರೈತ ಪರ ನಿರ್ಧಾರವಾದಂತಾಗಿದೆ. ರಾಜ್ಯ ಸರಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯ್ದೆ 2011 ಕಲಂ 2ಡಿಗೆ ತಿದ್ದುಪಡಿ ತರಲು ನಿರ್ಧರಿಸಿದ್ದು, ಗ್ರಾಮೀಣ ಪ್ರದೇಶ ಭೂ ಒತ್ತುವರಿ ಪ್ರಕರಣಗಳನ್ನು ಸ್ಥಳೀಯವಾಗಿ ಎಸಿ ಅಥವಾ ಡಿಸಿ ವ್ಯಾಪ್ತಿಯಲ್ಲಿಯೇ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ರೈತರು ನೂರಾರು ಕಿಲೋಮೀಟರ್ ಬೆಂಗಳೂರಿಗೆ ಅಲೆದಾಡುವುದು ತಪ್ಪಿದಂತಾಗಿದೆ.
ಈಗಾಗಲೇ ಸರಕಾರದ ನಿಯಮದಂತೆಯೇ ಅತಿಕ್ರಮಣ ಮಾಡಿ ರುವ ಜಮೀನನ್ನು ರೈತರಿಗೆ ಮಂಜೂರು ಮಾಡಲು ಫಾರ್ಮ್ 57 ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಕೃಷಿಗಾಗಿ ಒತ್ತುವರಿ ಮಾಡಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಆದಷ್ಟು ಶೀಘ್ರ ಜಮೀನು ಮಂಜೂರು ಮಾಡುವ ಕೆಲಸ ಮಾಡಬೇಕು. ಆಗ ರಾಜ್ಯ ಸರಕಾರದ ರೈತ ಪರ ನಿಲುವಿಗೆ ಮತ್ತಷ್ಟು ಅರ್ಥ ಬಂದಂತಾಗುತ್ತದೆ. ಅಲ್ಲದೆ ಕೃಷಿಗಾಗಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ರೈತರ ಜೀವನಕ್ಕೂ ಒಂದು ಆಸರೆಯಾದಂತಾಗುತ್ತದೆ. ರಾಜ್ಯ ಸರಕಾರ ಈ ನಿಟ್ಟಿನಲ್ಲಿಯೂ ಯೋಚನೆ ಮಾಡುವುದು ಸೂಕ್ತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.