ಸ್ವಾತಂತ್ರ್ಯಪೂರ್ವೋತ್ತರದ ಸಾಕ್ಷೀ ಪ್ರಜ್ಞೆಗೊಂದು ನಮನ
Team Udayavani, Dec 30, 2019, 4:03 AM IST
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಮತ್ತು ಅನಂತರದ ಕಾಲಘಟ್ಟಗಳನ್ನು ಕಣ್ಣಾರೆ ಕಂಡ, ಹಳೆಯ ತಲೆಮಾರಿನ ಕೊಂಡಿ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಗಲಿದ್ದಾರೆ. ಸಂಪ್ರದಾಯಸ್ಥರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಹಿರಿಯ ಮುತ್ಸದ್ದಿ ರಾಜಕಾರಣಿಗಳು ಹೀಗೆ ಅನೇಕಾನೇಕ ಮಾದರಿ ವ್ಯಕ್ತಿತ್ವದವರನ್ನು ಕಂಡು ಅವರವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅಪರೂಪದ ಸಂತರಲ್ಲಿ ಒಬ್ಬರಾಗಿ ನಮ್ಮ ಕಣ್ಣೆದುರು ನಿಲ್ಲುತ್ತಾರೆ ಪೇಜಾವರ ಶ್ರೀಗಳು.
ಅವರು ಒಂದು ಕಡೆ ಸಮಾಜ ಸುಧಾರಕರೂ ಇನ್ನೊಂದೆಡೆ ನಿಷ್ಠಾವಂತ ಸಂಪ್ರದಾಯಸ್ಥರು ಹೌದು. 1970ರ ವೇಳೆ ದಲಿತರ ಕಾಲನಿಗಳಿಗೆ ಪಾದಯಾತ್ರೆ ನಡೆಸಿದ್ದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಅದಕ್ಕೆ ಎಷ್ಟೇ ಟೀಕೆಗಳು ಬಂದರೂ ಜಗ್ಗದೆ ತಮ್ಮ ಸಾಮಾಜಿಕ ಬದ್ಧತೆಯನ್ನು ಇಳಿವಯಸ್ಸಿನಲ್ಲಿ ಮುಂದುವರಿಸಿಕೊಂಡು ಬಂದವರು. ಅದೇ ವೇಳೆ ಇದುವರೆಗೆ ಯಾರೂ ನಡೆಸದ 38 ಸುಧಾ ಮಂಗಳ್ಳೋತ್ಸವವನ್ನು ನಡೆಸಿದವರು. ಇದು ಕಠಿಣವಾದ ಶಾಸ್ತ್ರೀಯ ಗ್ರಂಥ. ಇದರ ಪಾಠವನ್ನು ಅವರು ಎಂದೆಂದಿಗೂ ಬಿಟ್ಟವರಲ್ಲ.
ಎಷ್ಟೇ ಪ್ರತಿಭಾವಂತ ವಿದ್ಯಾರ್ಥಿ ಯಾದರೂ ಆತ ಕೇಳಿದ ಎಲ್ಲ ಸಂಶಯಗಳಿಗೆ ಉತ್ತರ ಕೊಡುತ್ತಿದ್ದರು. ಇದೇ ವೇಳೆ ಬಸವಾದಿ ಶರಣರ, ಕನಕಪುರಂದರಾದಿ ದಾಸರ ವಿಚಾರಗಳನ್ನೂ ತಿಳಿದುಕೊಂಡಿದ್ದರು. ಗಾಂಧೀಯವರ ಅಹಿಂಸಾ ಮಾರ್ಗವನ್ನು ಸಾಧ್ಯವಾದಷ್ಟೂ ಅನುಸರಿಸುತ್ತಿದ್ದರು. ಒಂದೆಡೆ ದಲಿತರ ಕೇರಿಗಳಿಗೆ ಹೋಗಿ ವಿಚಾರವಾದಿಗಳಿಂದ ಕುಹ ಕಕ್ಕೆ ಗುರಿಯಾದರೆ, ಐದನೆಯ ಪರ್ಯಾಯದಲ್ಲಿ ಮುಸ್ಲಿಮರಿಗೆ ಈದ್ ಉಪಾಹಾರ ಕೂಟ ಏರ್ಪಡಿಸಿದಾಗ ಕಟ್ಟಾ ಹಿಂದುತ್ವವಾದಿಗಳಿಂದ ಟೀಕೆಗೆ ಗುರಿಯಾದರು. ಅದೇ ವಿಚಾರವಾದಿಗಳು ಈದ್ ಉಪಾಹಾರ ಕೂಟಕ್ಕೆ ಬೆಂಬಲ ಕೊಟ್ಟಿದ್ದರು.
“ಈದ್ ಉಪಾಹಾರದಂತಹ ಕ್ರಮಗಳಿಂದ ಗೋಹತ್ಯೆಯಂತಹ ಸಮಸ್ಯೆಗಳು ಕೊನೆಯಾದೀತು’ ಎಂಬ ಶ್ರೀಗಳ ಆಶಯ ಮಾತ್ರ ದೂರಗಾಮಿ ಚಿಂತನೆಯಾಗಿತ್ತು. ಅವರು ಎರಡು ತೀವ್ರವಾದ ವೈಚಾರಿಕ ಸಂಘರ್ಷ ಏರ್ಪಟ್ಟಾಗ ಎರಡೂ ಕಡೆಗೆ ವಾಲದೆ ಮಧ್ಯಮ ಮಾರ್ಗದಲ್ಲಿ ಮುನ್ನಡೆಯುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎದ್ದ ಮಡೆಸ್ನಾನ ವಿವಾದ. ಇದರ ಬದಲು ದೇವರ ನೈವೇದ್ಯವನ್ನು ಬಡಿಸಿ ಅದರ ಮೂಲಕ ಎಡೆ ಸ್ನಾನ ಮಾಡಬಹುದು ಎಂಬ ಸಲಹೆಯನ್ನು ನೀಡಿದ್ದರು. ಅಯೋಧ್ಯೆ ರಾಮಜನ್ಮಭೂಮಿ ವಿಷಯದಲ್ಲಿಯೂ ಮುಸ್ಲಿಮರಿಗೆ ಸ್ಥಳವನ್ನು ಕೊಡಬಹುದು ಎಂಬ ಸಲಹೆಯನ್ನು ರಾಜೀ ಸಂಧಾನದ ವೇಳೆ ಮಂಡಿಸಿ ಆ ವಿವಾದವನ್ನು ಬಗೆಹರಿಸಲು ತಮ್ಮ ಪ್ರಯತ್ನವನ್ನು ಮಾಡಿದ್ದರು.
ಅವರನ್ನು ಸಮಾರಂಭಗಳಲ್ಲಿ ಎಷ್ಟೇ ಹೊಗಳಿದರೂ “ನಾನು ಏನೆಂದು ನನಗೆ ನಿಮಗಿಂತ ಹೆಚ್ಚಿಗೆ ಗೊತ್ತು. ನಾನು ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ’ ಎಂದು ಹೇಳುತ್ತಿದ್ದುದು ಅವರ ಸಾಮಾಜಿಕ ಕಳಕಳಿಗೆ ಅತ್ಯುತ್ಕೃಷ್ಟ ಉದಾಹರಣೆ ಎನ್ನಬಹುದು. ಗಣೇಶಗುಡಿಯ ಶ್ರೀನಿತ್ಯಾನಂದ ಸ್ವಾಮಿಗಳು ತಾವು ಹಿಂದೆ ಉಡುಪಿಗೆ ಬಂದಾಗ ಒಬ್ಬರು ಸ್ವಾಮಿಗಳು ನನ್ನನ್ನು ಆದರದಿಂದ ನೋಡಿಕೊಂಡಿದ್ದರು ಎಂಬ ವಿಷಯವನ್ನು ಪೇಜಾವರ ಶ್ರೀಗಳ ಗಮನಕ್ಕೆ ತಂದಾಗ “ಅದು ನಾನಲ್ಲ, ಕಾಣಿಯೂರು ಮಠದ ಶ್ರೀವಿದ್ಯಾ ಸಮುದ್ರತೀರ್ಥರು’ ಎಂದು ಸ್ಪಷ್ಟಪಡಿಸುವ ಮೂಲಕ ಕೀರ್ತಿ, ಪ್ರಸಿದ್ಧಿಗಳು ಯಾರು ಮಾಡಿದ್ದಾರೋ ಅವರಿಗೇ ಸಿಗಬೇಕೆಂಬ ಪ್ರಾಮಾಣಿಕತೆಯ ಸಂದೇಶವನ್ನು ನೀಡಿದ್ದರು. ನಿತ್ಯಾನಂದ ಸ್ವಾಮಿಗಳು “ಪೇಜಾವರ ಶ್ರೀಗಳವರನ್ನು ದೇವದೂತ, ಕನಕದಾಸರು’ ಎಂದು ಬೇರೆಯವರ ಬಳಿ ಹೇಳಿದ್ದರು.
ಈ ವಿಚಾರವನ್ನು ಪೇಜಾ ವರರ ಗಮನಕ್ಕೆ ತಂದಾಗ “ನಾವು ಸಾಮಾನ್ಯರಲ್ಲಿ ಸಾಮಾನ್ಯ’ ಎಂಬ ವಿನಯವಂತಿಕೆಯನ್ನು ತೋರುತ್ತಿದ್ದರು. ಯಾರೇ ಬಂದು ತಮಗೆ ಮಂತ್ರದೀಕ್ಷೆ ಕೊಡಬೇಕೆಂದಾಗ ಅದನ್ನು ಕೊಟ್ಟು ಅವರನ್ನು ಆಧ್ಯಾತ್ಮಿಕವಾಗಿ ಉದ್ಧರಿಸುವ ಕಾಳಜಿ ಅನ್ಯಾದೃಶವಾದುದು. ತೀರಾ ಇತ್ತೀಚಿಗೆ ಉಡುಪಿ ಪೇಜಾವರ ಮಠಕ್ಕೆ ದ.ಕ. ಜಿಲ್ಲೆಯ ಯುವ ಸನ್ಯಾಸಿಯೊಬ್ಬರು ಬಂದಿದ್ದರು. ಯುವ ಸನ್ಯಾಸಿ ಎದ್ದು ನಿಂತು ಪೇಜಾವರ ಶ್ರೀಗಳಿಗೆ ಶಾಲು ಹೊದೆಸಿ ಗೌರವಿಸಿದಾಗ ಪೇಜಾವರ ಶ್ರೀಗಳೂ ಅವರಿಗೆ ಶಾಲು ಹೊದೆಸಿ ಗೌರವಿಸಿದರು. ಆದರೆ ಪೇಜಾವರ ಶ್ರೀಗಳಿಗೆ ಎದ್ದು ನಿಲ್ಲಲು ಆಗಲಿಲ್ಲ. ಆಗ ಸಂಕೋಚಪಟ್ಟು ವಯಸ್ಸಿನ ಕಾರಣ ನನಗೆ ಎದ್ದು ನಿಲ್ಲಲು ಆಗುತ್ತಿಲ್ಲ ಎಂದು ಯುವ ಮಠಾಧಿಪತಿಗೆ ತಿಳಿಸಿ ತನ್ನ ಅಸಹಾಯಕತೆಯನ್ನು ತಿಳಿಸಿದ್ದರು.
ಇದನ್ನು ಕಂಡಾಗ ಅನಾರೋಗ್ಯದಲ್ಲಿಯೂ ಅವರ ಸೌಜನ್ಯಶೀಲಗುಣ, ವಿನಯವಂತಿಕೆ ಪೀಠಾಧೀಶರಿಗೆ, ದೊಡ್ಡ ದೊಡ್ಡ ಅಧಿಕಾರಸ್ಥರಿಗೆ ಆದರ್ಶಪ್ರಾಯವಾದುದು ಎಂದು ತಿಳಿದುಬರುತ್ತದೆ. ಆದರ್ಶ ಗುಣಗಳ ಪ್ರತಿರೂಪದಂತಿದ್ದ, ವಿವಿಧ ಮತಪಂಥಗಳ ಸ್ವಾಮೀಜಿ ಯವರೊಂದಿಗೆ ಸೌಹಾರ್ದ ಸಂಬಂಧವನ್ನು ಇರಿಸಿಕೊಂಡು ಅವರಿಗೂ ಮಾರ್ಗದರ್ಶ ಕರಂತಿದ್ದ ಶ್ರೀಗಳು ನಮ್ಮೊಡನೆ ಇಂದಿಲ್ಲ. ಯಾವತ್ತೂ ಗುಣಗಳು ಸಾರ್ವಕಾಲಿಕ. ಶ್ರೀಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಕಲ್ಯಾಣವನ್ನು ಮಾಡುವುದು ನಾವು ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.