ಎಲ್ಲ ಸರಕಾರಿ ಅಧಿಕಾರಿಗಳು ಪ್ರಾಮಾಣಿಕರೇ?: ಅಧ್ಯಾದೇಶದ ಜಿಜ್ಞಾಸೆ
Team Udayavani, Oct 23, 2017, 7:13 AM IST
ರಾಜಸ್ಥಾನದ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರ ಹೊರಡಿಸಲುದ್ದೇಶಿಸಿರುವ ಸುಗ್ರೀವಾಜ್ಞೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ಮಾಡುವ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ನ್ಯಾಯಾಧೀಶರು, ದಂಡಾಧಿಕಾರಿಗಳು ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಯಾವುದೇ ಕೇಸಿನ ತನಿಖೆ ನಡೆಸಬೇಕಾದರೆ ಸರಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎನ್ನುತ್ತದೆ ಈ ಸುಗ್ರೀವಾಜ್ಞೆ. ಇಷ್ಟು ಮಾತ್ರವಲ್ಲದೆ, ಸರಕಾರ ಅನುಮತಿ ನೀಡಿ ತನಿಖೆ ಪ್ರಾರಂಭವಾಗುವ ತನಕ ಮಾಧ್ಯಮಗಳು ಆರೋಪಿತ ಸರಕಾರಿ ಅಧಿಕಾರಿ ಮತ್ತು ನ್ಯಾಯಾಧೀಶರು ಮತ್ತು ಅವರ ಕುಟುಂಬದವರ ಹೆಸರು ಮತ್ತು ಇತರ ವಿವರಗಳನ್ನು ಪ್ರಕಟಿಸುವಂತಿಲ್ಲ. ಒಂದು ವೇಳೆ ಪ್ರಕಟಿಸಿದ್ದೇ ಆದರೆ ಅಂತಹ ಮಾಧ್ಯಮದವರನ್ನು ಗರಿಷ್ಠ 7 ವರ್ಷಗಳ ತನಕ ಜೈಲಿಗೆ ತಳ್ಳಲು ಕಾನೂನಿನಲ್ಲಿ ಅವಕಾಶವಿದೆ. ನಿವೃತ್ತ ಅಧಿಕಾರಿಗಳಿಗೂ ಈ ಕಾನೂನು ಅನ್ವಯಿಸುತ್ತದೆ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕಂಡು ಬಂದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ವಿಲೇವಾರಿ ಮಾಡಲು ಸರ್ಕಾರ 6 ತಿಂಗಳ ಕಾಲಮಿತಿ ಹಾಕಿಕೊಂಡಿದೆ. 6 ತಿಂಗಳೊಳಗೆ ಪ್ರತಿಕ್ರಿಯೆ ಬರದಿದ್ದರೆ ಅನುಮತಿ ಸಿಕ್ಕಿದೆ ಎಂದು ಭಾವಿಸಿ ತನಿಖೆ ಮುಂದುವರಿಸಬಹುದು. ಇಂತಹ ಒಂದು ಸುಗ್ರೀವಾಜ್ಞೆ ಹೊರಡಲಿದೆ ಎಂಬ ಸುದ್ದಿ ಸಿಕ್ಕಿದ್ದೇ ತಡ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲ ಬಿಜೆಪಿ ಸರ್ಕಾರದ ಮೇಲೆ ಮುಗಿ ಬಿದ್ದಿರುವುದು ಸಹಜ ರಾಜಕೀಯ ಬೆಳವಣಿಗೆ. ಆದರೆ ಕಾಂಗ್ರೆಸ್ 2013ರಲ್ಲಿ ತನ್ನದೇ ನೇತೃತ್ವದ ಯುಪಿಎ ಸರ್ಕಾರ ಇರುವಾಗ ಕೇಂದ್ರದ ಅಧಿಕಾರಿಗಳನ್ನು ರಕ್ಷಿಸಲು ಇದೇ ಮಾದರಿಯ ತಿದ್ದುಪಡಿಗೆ ಮುಂದಾಗಿತ್ತು ಎಂಬುದನ್ನು ಮರೆತಿದೆ.
ಮೇಲ್ನೋಟಕ್ಕೆ ಈ ಕಾನೂನನ್ನು ಭ್ರಷ್ಟರನ್ನು ರಕ್ಷಿಸಲೆಂದೇ ರೂಪಿಸಿರುವಂತೆ ಕಾಣಿಸುತ್ತಿದ್ದರೂ ಅದರ ಹಿಂದಿನ ಆಶಯವನ್ನು ತಿಳಿಯಬೇಕಾದರೆ ಕೇಂದ್ರ ಭ್ರಷ್ಟಾಚಾರ ನಿಗ್ರಹ ಕಾಯಿದೆಗೆ ಮಾಡಿರುವ ತಿದ್ದುಪಡಿಗೊಮ್ಮೆ ಕಣ್ಣು ಹಾಯಿಸುವುದು ಒಳ್ಳೆಯದು. ಉದಾರೀಕರಣದ ಪೂರ್ವದಲ್ಲಿ ಅಂದರೆ 1988ರಲ್ಲಿ ರಚನೆಯಾದ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಪ್ರಸ್ತುತ ಕಾಲಮಾನಕ್ಕೆ ಸರಿ ಹೊಂದುತ್ತಿಲ್ಲ ಎಂದು ಮನಗಂಡಿದ್ದ ಹಿಂದಿನ ಯುಪಿಎ ಸರ್ಕಾರ ಹಲವು ತಿದ್ದುಪಡಿ ಶಿಫಾರಸುಗಳನ್ನು ಮಾಡಿತ್ತು. ಆದರೆ ಆಗ ಅದನ್ನು ಮಂಜೂರು ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಆಗ ವಿಪಕ್ಷದಲ್ಲಿದ್ದು ತಿದ್ದುಪಡಿಯನ್ನು ವಿರೋಧಿಸಿದ್ದ ಬಿಜೆಪಿ 2015ರಲ್ಲಿ ತಾನೇ ತಿದ್ದುಪಡಿಗೆ ಸಂಪುಟದ ಅನುಮೋದನೆ ಪಡೆದುಕೊಂಡಿತು. ಮುಖ್ಯವಾಗಿ ಕಾಯಿದೆಯ ಪರಿಚ್ಛೇದ 13ಕ್ಕೆ ತಿದ್ದುಪಡಿ ಮಾಡುವುದು ಇದರ ಉದ್ದೇಶವಾಗಿತ್ತು. ಇಂಗ್ಲೆಂಡ್ ನ ಲಂಚ ಕಾಯ್ದೆ-2010ರ ಕೆಲವು ಅಂಶಗಳನ್ನು ಸೇರಿಸಿಕೊಂಡು ಈ ತಿದ್ದುಪಡಿಯನ್ನು ಮಾಡಲಾಗಿದೆ. ಭ್ರಷ್ಟ ನಿರ್ಧಾರ ಮತ್ತು ತಪ್ಪು ನಿರ್ಧಾರದ ನಡುವೆ ವ್ಯತ್ಯಾಸವಿದೆ. ಸರಕಾರಿ ಅಧಿಕಾರಿ ತನ್ನ ಅಥವಾ ತನ್ನವರ ವೈಯಕ್ತಿಕ ಲಾಭ ಯಾ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಧಾರ ಭ್ರಷ್ಟ ನಿರ್ಧಾರವಾಗುತ್ತದೆ. ವೈಯಕ್ತಿಕ ಲಾಭದ ಅಪೇಕ್ಷೆಯಿಲ್ಲದೆ ಕೈಗೊಂಡ ನಿರ್ಧಾರವನ್ನು ಭ್ರಷ್ಟ ನಿರ್ಧಾರವೆಂದು ಪರಿಗಣಿಸಬಾರದು. ತಪ್ಪು ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದರೂ ಇದರಲ್ಲಿ ಅಧಿಕಾರಿಗೆ ವೈಯಕ್ತಿಕವಾಗಿ ಯಾವುದೇ ಲಾಭವಾಗಿರುವುದಿಲ್ಲ. ಆದರೆ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ತಮ್ಮಿಂದ ತಪ್ಪು ಸಂಭವಿಸಬಹುದು ಎಂಬ ಭೀತಿಯಲ್ಲಿ ನಿರ್ಧಾರಗಳನ್ನೇ ಕೈಗೊಳ್ಳದೆ ಇದ್ದರೆ ಸಹಜವಾಗಿ ಆಡಳಿತ ಯಂತ್ರ ಕುಂಟತೊಡಗುತ್ತದೆ ಮತ್ತು ಇದರಿಂದ ಅಭಿವೃದ್ಧಿಗೆ ತೊಡಕಾಗುತ್ತದೆ.
ರಾಜಸ್ಥಾನದ ಸುಗ್ರೀವಾಜ್ಞೆಯಲ್ಲಿರುವ ಮಾಧ್ಯಮಗಳನ್ನು ನಿರ್ಬಂಧಿಸುವ ಅಂಶ ಮಾತ್ರ ಉತ್ತಮವಾಗಿಲ್ಲ. ಅತ್ತ ತನಿಖೆಯ ಭಯವೂ ಇಲ್ಲ, ಇತ್ತ ಮಾಧ್ಯಮಗಳಲ್ಲಿ ಬಹಿರಂಗವಾಗುವ ಭಯವೂ ಇಲ್ಲ ಎಂದಾದರೆ ಸರಕಾರಿ ಬಾಬುಗಳಿಗೆ ಅಂಕುಶವೇ ಇಲ್ಲ ಎಂದಾಗುತ್ತದೆ. ಇದು ಮಾಧ್ಯಮಗಳ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವೂ ಹೌದು. ಈ ಅಂಶವನ್ನು ವಿರೋಧಿಸುವ ಅಗತ್ಯವಿದೆ. ಸರಕಾರಿ ಅಧಿಕಾರಿಗಳೆಂದರೆ ಲಂಚ ತಿನ್ನುವವರು ಎಂಬ ಸಾರ್ವತ್ರಿಕ ಅಭಿಪ್ರಾಯವಿದೆ. ಹಾಗೆಂದು ಎಲ್ಲ ಸರಕಾರಿ ಅಧಿಕಾರಿಗಳು ಭ್ರಷ್ಟರಲ್ಲ. ಆದರೆ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಕಡಿಮೆಯಿದೆ. ಅವರನ್ನು ರಕ್ಷಿಸಲು ಇಂತಹ ಒಂದು ಸುಗ್ರವಾಜ್ಞೆ ಅಗತ್ಯವಿರುವುದು ನಿಜ. ಆದರೆ ಅದು ದುರುಪಯೋಗವಾಗದಂತೆ ಎಚ್ಚರವಹಿಸಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.