ಕೇಜ್ರಿ ಕ್ಷಮೆಯಾಚನೆ ಪ್ರಹಸನ
Team Udayavani, Mar 20, 2018, 7:30 AM IST
ಎದುರಾಳಿಗಳ ವಿರುದ್ಧ ಲಂಗುಲಗಾಮಿಲ್ಲದೆ ಮಾಡಿದ ಆರೋಪಗಳ ಫಲವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗ ಉಣ್ಣುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪಂಜಾಬಿನ ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಂದ ಕೇಜ್ರಿವಾಲ್ ಕ್ಷಮೆ ಕೇಳಿದ್ದರು. 2016ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಿಂಗ್ ವಿರುದ್ಧ ಕೇಜ್ರಿವಾಲ್ ಡ್ರಗ್ ಮಾಫಿಯಾ ಜತೆಗೆ ನಂಟು ಹೊಂದಿರುವ ಗಂಭೀರವಾದ ಆರೋಪ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಈ ಆರೋಪದಿಂದಾಗಿ ಮಜಿಥಿಯಾಗೆ ವೈಯಕ್ತಿಕವಾಗಿ ಮಾತ್ರವಲ್ಲದೆ ಅವರ ಪಕ್ಷದ ವರ್ಚಸ್ಸಿಗೂ ಈ ಆರೋಪದಿಂದ ಭಾರೀ ಹಾನಿಯಾಗಿತ್ತು. ಅನಂತರ ಕೇಜ್ರಿವಾಲ್ ವಿರುದ್ಧ ಸಿಂಗ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಇದೀಗ ಕೇಜ್ರಿವಾಲ್ ತನ್ನಿಂದ ಆಗಿರುವ ಪ್ರಮಾದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಇದನ್ನು ಒಪ್ಪಿಕೊಂಡು ಮಜಿಥಿಯಾ ಕೇಸ್ ಹಿಂದೆಗೆದುಕೊಂಡಿದ್ದಾರೆ. ಆದರೆ ಈ ಕ್ಷಮೆಯಾಚನೆಯಿಂದ ಕೇಜ್ರಿವಾಲ್ ಪಕ್ಷದೊಳಗೆ ಭಾರೀ ಭಿನ್ನಮತ ಸ್ಫೋಟಗೊಂಡಿದೆ. ಪಂಜಾಬ್ ಚುನಾವಣೆಯಲ್ಲಿ ಡ್ರಗ್ ಸಮಸ್ಯೆಯೇ ಕೇಜ್ರಿವಾಲ್ ಪಕ್ಷದ ಮುಖ್ಯ ವಿಷಯವಾಗಿತ್ತು. ಪಂಜಾಬಿನಲ್ಲಿ ಅಕಾಲಿದಳ ಸರಕಾರ ಹೋಗಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಯಾರೂ ಡ್ರಗ್ ಸಮಸ್ಯೆ ಕುರಿತು ಮಾತನಾಡುತ್ತಿಲ್ಲ. ಸರಕಾರ ಬದಲಾದ ಕೂಡಲೇ ಸಮಸ್ಯೆ ನಿವಾರಣೆಯಾಗಿದೆಯೇ ಎನ್ನುವುದು ಬೇರೆ ವಿಚಾರ. ಕ್ಷಮೆ ಯಾಚಿಸುವ ಮೂಲಕ ಕೇಜ್ರಿವಾಲ್ ತಾನು ಮಾಡಿದ್ದು ಸುಳ್ಳು ಆರೋಪ ಎಂದು ಒಪ್ಪಿಕೊಂಡಂತಾಗಿದೆ.
ಇಷ್ಟಕ್ಕೆ ಮುಗಿಯಲಿಲ್ಲ ಕೇಜ್ರಿವಾಲ್ ಕ್ಷಮೆಯಾಚನೆ ಪ್ರಹಸನ. ಇದೀಗ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಂದ ಕ್ಷಮೆಯಾಚಿಸಿದ್ದಾರೆ. ಇವರಿಬ್ಬರ ವಿರುದ್ಧ ಕೇಜ್ರಿ ವಾಲ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.ರಾಜಕೀಯ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಎದುರಾಳಿಗಳ ವಿರುದ್ಧ ಆರೋಪಗಳನ್ನು ಹೊರಿ ಸುವುದನ್ನೇ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದರು ಕೇಜ್ರಿವಾಲ್. ನಿತ್ಯ ಪತ್ರಿಕಾಗೋಷ್ಠಿ ಕರದು ಅಥವಾ ಟ್ವಿಟರ್‌ನಲ್ಲಿ ಯಾರಾದರೊಬ್ಬರ ವಿರುದ್ಧ ಆರೋಪಗಳನ್ನು ಮಾಡುವುದರಿಂದಲೇ ಅವರ ದಿನಚರಿ ಶುರುವಾಗುತ್ತಿತ್ತು. ಅವರಿಂದ ಅತಿ ಹೆಚ್ಚು ಆರೋಪಗಳನ್ನು ಎದುರಿಸಿದವರು ಪ್ರಧಾನಿ ಮೋದಿ. ಆದರೆ ಯಾವುದಕ್ಕೂ ಅವರ ಬಳಿ ಆಧಾರವಾಗಲಿ, ಪುರಾವೆಯಾಗಲಿ ಇರುವುದಿಲ್ಲ. ರಾಜಕೀಯದಲ್ಲಿ ಆಧಾರರಹಿತ ಆರೋಪಗಳನ್ನು ಮಾಡಿ ಪಲಾಯನ ಮಾಡುವ ಹಿಟ್ ಆ್ಯಂಡ್ ರನ್ ಎಂಬ ಕೆಟ್ಟ ಸಂಸ್ಕೃತಿಯನ್ನು ಪ್ರಾರಂಭಿಸಿದವರೇ ಕೇಜ್ರಿವಾಲ್.ಇದು ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಡೆಸುವ ಗೆರಿಲ್ಲಾ ಯುದ್ಧದಂತೆ. ದಿನಕ್ಕೊಬ್ಬರನ್ನು ಗುರಿ ಮಾಡಿಕೊಂಡು ಅನಿರೀಕ್ಷಿತವಾದ ರೀತಿಯಲ್ಲಿ ದಾಳಿ ಮಾಡಿ ಪಲಾನ ಮಾಡುವುದು. ಈ ಕಲೆಯಲ್ಲಿ ಕೇಜ್ರಿವಾಲ್ ಪರಿಣತರಾ ಗಿದ್ದರು ಹಾಗೂ ಅವರಿಂದ ಪ್ರೇರಿತರಾಗಿ ಇನ್ನೂ ಹಲವು ಮಂದಿ ಈ ತಂತ್ರವನ್ನು ಬಳಸುತ್ತಿದ್ದಾರೆ. ಏನು ಹೇಳಿದರೂ ದಕ್ಕಿಸಿಕೊಳ್ಳಬಹುದು ಎಂಬ ಭಂಡಧೈರ್ಯವೇ ಅವರಿಗಿದ್ದ ಬಂಡವಾಳ. ಆದರೆ ಎದುರಾಳಿಗಳೂ ತನ್ನಷ್ಟೇ ಸಮರ್ಥರಿರುತ್ತಾರೆ ಎಂಬುದನ್ನು ಅವರು ಅರಿತಿರಲಿಲ್ಲ. ಸದ್ಯ ಅವರ ವಿರುದ್ಧ 30ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಆವುಗಳ ವಿಚಾರಣೆ ಮುಗಿಯಲು ಅನೇಕ ವರ್ಷಗಳೇ ಹಿಡಿಯಬಹುದು. ಹೀಗಾಗಿ ಕೋರ್ಟ್‌ಗೆ ಅಲೆದಾಡುವುದಕ್ಕಿಂತ ಕೋರ್ಟಿನ ಹೊರಗೆ ಇತ್ಯರ್ಥ ಪಡಿಸಿಕೊಳ್ಳಲು ನಿರ್ಧರಿಸಿದಂತಿದೆ. ಆದರೆ ಈ ಮೂಲಕ ಅವರು ತನ್ನ ಮಾತ್ರವಲ್ಲದೆ ತನ್ನ ಪಕ್ಷದ ವರ್ಚಸ್ಸನ್ನು ಇನ್ನಷ್ಟು ಕುಗ್ಗಿಸುತ್ತಿದ್ದಾರೆ.
ಕ್ಷಮೆ ಕೇಳಿದ ಮಾತ್ರಕ್ಕೆ ಕಳೆದು ಹೋದ ಪ್ರತಿಷ್ಠೆ ಮರಳಿ ಬರುತ್ತದೆಯೇ ಅಥವಾ ವರ್ಚಸ್ಸಿಗೆ ಆಗಿರುವ ಹಾನಿ ಸರಿಯಾಗುತ್ತದೆಯೇ ಎನ್ನುವುದು ಈಗಿರುವ ಪ್ರಶ್ನೆ. ಸಾರ್ವಜನಿಕ ಜೀವನದಲ್ಲಿರುವವರಿಗೆ ಪ್ರತಿಷ್ಠೆ ಮತ್ತು ವರ್ಚಸ್ಸು ಬಹಳ ಮುಖ್ಯ. ಒಮ್ಮೆ ಇದಕ್ಕೆ ಕಳಂಕ ಮೆತ್ತಿಕೊಂಡರೆ ಅಳಿಸು ವುದು ಬಹಳ ಕಷ್ಟ. ಆದರೆ ಬಹುತೇಕ ಮಾನನಷ್ಟ ಮೊಕದ್ದಮೆಗಳಲ್ಲಿ ಕ್ಷಮೆಯಾಚನೆ ಒಂದು ಕಾಲಮ್ಮಿನ ಸುದ್ದಿಯೂ ಆಗುವುದಿಲ್ಲ. ಆರೋಪ ಮಾಡಿದ ಎಷ್ಟೋ ವರ್ಷಗಳ ಬಳಿಕ ಕ್ಷಮೆ ಕೇಳಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಇಷ್ಟೆಲ್ಲ ವರ್ಷ ಆರೋಪಕ್ಕೊಳಗಾದ ವ್ಯಕ್ತಿಗೆ ಆಗಿರುವ ಹಾನಿಗೆ, ಆತ ಅನುಭವಿಸಿದ ಮಾನಸಿಕ ನೋವಿಗೆ ಯಾರು ಹೊಣೆ? ಇಷ್ಟಕ್ಕೂ ಈ ಕ್ಷಮೆ ಯಾಚನೆಗೆ ಏನಾದರೂ ಅರ್ಥವುಂಟೆ. ಬಹುತೇಕ ಕ್ಷಮೆಯಾಚನೆಗಳು ಹೃದಯದೊಳಗಿನಿಂದ ಬಂದಿರುವುದಿಲ್ಲ, ಬದಲಾಗಿ ಕಾನೂನಿನ ಕುಣಿಕೆ ಬಿಗಿಯಾದಾಗ ಪಾರಾಗುವ ತಂತ್ರವಾಗಿ ಇದನ್ನು ಬಳಸುತ್ತಾರೆ. ಇಂತಹ ಕ್ಷಮೆಯಾಚನೆಯಿಂದ ಏನು ಪ್ರಯೋಜನ. ಈ ರೀತಿ ಬೇಕಾಬಿಟ್ಟಿ ಆರೋಪ ಮಾಡುವುದನ್ನು ತಡೆಯಬೇಕಾದರೆ ನಮ್ಮ ಕಾನೂನಿನಲ್ಲಿ ಬದಲಾವಣೆ ತರುವ ಅಗತ್ಯವಿದೆ. ಮಾನನಷ್ಟ ಪ್ರಕರಣಗಳು ಕಾಲಮಿತಿಯೊಳಗೆ ಮುಗಿದರೆ ಆರೋಪಿಸುವಾಗ ಎರಡೆರಡು ಸಲ ಯೋಚಿಸುವ ಅಭ್ಯಾಸವನ್ನು ರಾಜಕಾರಣಿಗಳು ಮಾಡಿಕೊಂಡಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.