ಆಸಿಯಾನ್ ಸಂಬಂಧ:ಮಹತ್ವದ ರಾಜತಾಂತ್ರಿಕ ನಡೆ
Team Udayavani, Jan 25, 2018, 12:11 PM IST
ದಕ್ಷಿಣ ಚೀನ ಸಮುದ್ರ ಪ್ರದೇಶದಲ್ಲಿನ ಚೀನ ದಬ್ಟಾಳಿಕೆಗೆ ಸೆಡ್ಡು ಹೊಡೆಯಲು ಆಸಿಯಾನ್ ದೇಶಗಳಿಗೆ ಭಾತರದ ಬೆಂಬಲ ಅನಿವಾರ್ಯ. ಈ ಅಂಶವೂ ಆಸಿಯಾನ್ ದೇಶಗಳ ಬಾಂಧವ್ಯ ವೃದ್ಧಿಗೆ ಪೂರಕವಾಗಿದೆ. ಜತೆಗೆ ವಾಣಿಜ್ಯ-ಆರ್ಥಿಕ ಸಹಕಾರ ವೃದ್ಧಿಕೊಳ್ಳುವ ನಿಟ್ಟಿನಲ್ಲೂ ಗಣನೀಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
69ನೇ ಗಣರಾಜ್ಯೋತ್ಸವಕ್ಕೆ ಆಸಿಯಾನ್ ದೇಶಗಳ ಪ್ರಮುಖರನ್ನು ಆಹ್ವಾನಿಸಿರುವ ಪ್ರಧಾನಿ ನರೇಂದ್ರ ಮೋದಿಯ ನಡೆ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ್ದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಯಾವುದಾದರೊಂದು ದೇಶದ ಮುಖ್ಯಸ್ಥರನ್ನು ಆಹ್ವಾನಿಸುವುದು ವಾಡಿಕೆ. ಎರಡು ಸಲ ಮಾತ್ರ ಎರಡು ದೇಶಗಳ ಮುಖ್ಯಸ್ಥರನ್ನು ಆಹ್ವಾನಿಸಲಾಗಿತ್ತು. ಆದರೆ ಒಂದೇ ಸಲ 10 ದೇಶಗಳ ಪ್ರಮುಖರನ್ನು ಅತಿಥಿಗಳಾಗಿ ಆಹ್ವಾನಿಸಿದ್ದು ಇದೇ ಮೊದಲು. ಈ ಕಾರಣಕ್ಕೆ ಇದು ಐತಿಹಾಸಿಕ ನಡೆ ಎಂದು ಬಣ್ಣಿಸಲ್ಪಟ್ಟಿದೆ. ಆಸಿಯಾನ್ ಸದಸ್ಯ ರಾಷ್ಟ್ರಗಳಾದ ಥಾಯ್ಲೆಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಮಲೇಷ್ಯಾ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಬ್ರೂನೈ ದೇಶಗಳ ಮುಖ್ಯಸ್ಥರಿಗೆ ಕಳೆದ ವರ್ಷ ಮನಿಲಾದಲ್ಲಿ ಜರಗಿದ ಆಸಿಯಾನ್ ಶೃಂಗದಲ್ಲಿ ಮೋದಿ ಆಹ್ವಾನ ನೀಡಿದ್ದರು. ಇದರ ಹಿಂದೆ ದೇಶದ ಸೇನೆಯ ಸಾಮರ್ಥ್ಯ ಮತ್ತು ಸಾಂಸ್ಕತಿಕ ವೈಭವವನ್ನು ಪರಿಚಯಿಸುವ ಉದ್ದೇಶ ಮಾತ್ರವಲ್ಲದೆ ವ್ಯೂಹಾತ್ಮಕವಾಗಿ ಇತರ ಹಲವು ಉದ್ದೇಶಗಳು ಇವೆ. ಮೊದಲಾಗಿ ಈ ದೇಶಗಳು ಇರುವುದು ಆಗ್ನೇಯ ಏಷ್ಯಾದಲ್ಲಿ ದಕ್ಷಿಣ ಚೀನ ಪ್ರದೇಶದ ಸುತ್ತಮುತ್ತ. ಹೀಗೆ ಚೀನದ ನೆರೆಹೊರೆ ದೇಶಗಳ ಜತೆಗೆ ಉತ್ತಮ ಸಂಬಂಧ ಸ್ಥಾಪಿಸುವ ಮೂಲಕ ಆ ದೇಶದ ಪಾರಮ್ಯಕ್ಕೆ ಸೆಡ್ಡು ಹೊಡೆಯುವುದು ಮೋದಿಯ ತಂತ್ರಗಾರಿಕೆ.
90ರ ದಶಕದಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಅವರು ಆಗ್ನೇಯ ಏಷ್ಯಾದ ದೇಶಗಳ ಜತೆಗೆ ಉತ್ತಮ ಬಾಂಧವ್ಯ ಹೊಂದುವ ಸಲುವಾಗಿಯೇ “ಲುಕ್ ಈಸ್ಟ್’ ಎಂಬ ನೀತಿಯನ್ನು ರಚಿಸಿದ್ದರು. ಇದೀಗ ಮೋದಿ ಸರಕಾರ ಅದನ್ನು ತುಸು ಮೇಲ್ದರ್ಜೆ ಗೇರಿಸಿ “ಆ್ಯಕ್ಟ್ ಈಸ್ಟ್’ ಎಂದು ಬದಲಾಯಿಸಿಕೊಂಡು ಆಸಿಯಾನ್ ದೇಶಗಳ ಜತೆಗಿನ ಸಂಬಂಧವನ್ನು ಇನ್ನೊಂದು ಮಜಲಿಗೊಯ್ಯುವ ಪ್ರಯತ್ನ¨ ಲ್ಲಿದೆ. ರಾಜಕೀಯ ಮಾತ್ರ ವಲ್ಲದೆ ವಾಣಿಜ್ಯ, ರಕ್ಷಣಾ ಮತ್ತು ಸಾಂಸ್ಕೃತಿಕ ಸಂಬಂಧಗಳ ವಿನಿಮಯಕ್ಕೆ ಸರಕಾರ ಹೆಚ್ಚು ಒತ್ತು ನೀಡಿದ ಪರಿಣಾಮವಾಗಿ ಆಸಿಯಾನ್ ದೇಶ ಗಳ ಹಿಂದೆಂದಿಗಿಂತಲೂ ಹೆಚ್ಚು ನಿಕಟ ವಾಗಿವೆ. ಹಾಗೆಂದು ಎಲ್ಲ 10 ದೇಶಗಳ ಜತೆಗೆ ಸಮಾನ ಸಂಬಂಧ ಇಟ್ಟು ಕೊಳ್ಳುವಲ್ಲಿ ಮಾತ್ರ ನಾವು ಸಫಲ ರಾಗಿಲ್ಲ. ಆಸಿಯಾನ್ ದೇಶಗಳ ಪೈಕಿ ಸಿಂಗಾಪುರ, ಮಲೇಷ್ಯಾ ಮತ್ತು ಥಾಯ್ಲೆಂಡ್ ನಮಗೆ ಹೆಚ್ಚು ಪರಿಚಿತ. ಸಿಂಗಾಪುರ ಮತ್ತು ಭಾರತದ ನಡುವೆ ವಾರದಲ್ಲಿ 400 ವಿಮಾನ ಸಂಚಾರವಿದೆ. ಅಂತೆಯೇ ಮಲೇಷ್ಯಾ ಮತ್ತು ಥಾಯ್ಲೆಂಡ್ ನಡುವೆ ತಲಾ 200 ವಿಮಾನಗಳು ಸಂಚರಿಸುತ್ತಿವೆ. ಉಳಿದ ದೇಶಗಳ ಜತೆಗೆ ಈ ರೀತಿಯ ಸಂಪರ್ಕ ವ್ಯವಸ್ಥೆಯಿಲ್ಲ. ಅದರಲ್ಲೂ ಆಸಿಯಾನ್‌ನ ಪ್ರಮುಖ ರಾಷ್ಟ್ರವಾಗಿರುವ ಇಂಡೋನೇಷ್ಯಾಕ್ಕೆ ನೇರ ವಿಮಾನ ಸಂಪರ್ಕವೇ ಇಲ್ಲ. ಅದೇ ರೀತಿ ಸಿಂಗಾಪುರ ಹೊರತುಪಡಿಸಿದರೆ ಉಳಿದ ದೇಶಗಳ ಜತೆಗೆ ಜಲಸಾರಿಗೆ ಸಂಪರ್ಕವೂ ಅಷ್ಟಕ್ಕಷ್ಟೆ ಎಂಬಂತಿದೆ.
ಆ್ಯಕ್ಟ್ ಈಸ್ಟ್ ನೀತಿಯಲ್ಲಿ ಈ ಲೋಪಗಳತ್ತ ಗಮನ ಹರಿಸುವ ಅಗತ್ಯವಿದೆ. ಮ್ಯಾನ್ಮಾರ್ ಪಕ್ಕದಲ್ಲೇ ಇರುವುದರಿಂದ ಹೆಚ್ಚು ನಿಕಟವಾಗಿದೆ. ಆದರೆ ಬ್ರೂನೈ, ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ದೇಶಗಳ ಜತೆಗಿನ ಸಂಬಂಧ ಇನ್ನಷ್ಟು ನಿಕಟವಾಗುವ ಅಗತ್ಯವಿದೆ. ಈಶಾನ್ಯ ಭಾರತವನ್ನು ಆಗ್ನೇಯ ಏಷ್ಯಾದ ಹೆಬ್ಟಾಗಿಲು ಮಾಡುವುದು ಮೋದಿಯ ಗುರಿ. ಈ ಗುರಿಯನ್ನು ಸಾಧಿಸುವ ಸಲುವಾಗಿ ಈಶಾನ್ಯವನ್ನು ಸಂಪರ್ಕಿಸುವ ಸಲುವಾಗಿ ಮ್ಯಾನ್ಮಾರ್ ಜತೆಗಿನ ಕಲಾದನ್ ಮಲ್ಟಿ ಮೋಡೆಲ್ ಟ್ರಾನ್ಸಿಟ್ ಟ್ರಾನ್ಸ್‌ಪೊàರ್ಟ್ ಪ್ರೊಜೆಕ್ಟ್, ಇಂಡಿಯಾ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿರಾಷ್ಟ್ರ ಹೆದ್ದಾರಿ ಯೋಜನೆ, ರಿØ-ಟಿಡ್ಡಿಂ ರಸ್ತೆ ಯೋಜನೆ ಯಂತಹ ಹಲವು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದಕ್ಷಿಣ ಚೀನ ಸಮುದ್ರ ಪ್ರದೇಶದಲ್ಲಿ ಚೀನ ನಡೆಸುತ್ತಿರುವ ದಬ್ಟಾಳಿಕೆಗೆ ಸೆಡ್ಡು ಹೊಡೆಯಲು ಆಸಿಯಾನ್ ದೇಶಗಳಿಗೆ ಭಾತರದ ಬೆಂಬಲ ಅನಿವಾರ್ಯ. ಈ ಅಂಶವೂ ಆಸಿಯಾನ್ ದೇಶಗಳ ಬಾಂಧವ್ಯ ವೃದ್ಧಿಗೆ ಪೂರಕವಾಗಿದೆ. ಇದರ ಜತೆಗೆ ವಾಣಿಜ್ಯ ಮತ್ತು ಆರ್ಥಿಕ ಸಹಕಾರವನ್ನು ವೃದ್ಧಿಕೊಳ್ಳುವ ನಿಟ್ಟಿನಲ್ಲೂ ಗಣನೀಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 2016-17ನೇ ಸಾಲಿನಲ್ಲಿ ಆಸಿಯಾನ್ ದೇಶಗಳ ಜತೆಗೆ 70 ಶತಕೋಟಿ ಡಾಲರ್ ವಾಣಿಜ್ಯ ವ್ಯವಹಾರ ನಡೆಸಲಾಗಿದೆ. ಅದೇ ರೀತಿ ಆಸಿಯಾನ್ ದೇಶಗಳ ಒಟ್ಟು ಶೇ. 12.5 ಹೂಡಿಕೆ ಭಾರತಕ್ಕೆ ಹರಿದು ಬಂದಿದೆ. 2015ರಲ್ಲಿ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದ ಆಸಿಯಾನ್ ದೇಶಗಳ ಜತೆಗಿನ ವಾಣಿಜ್ಯ ವ್ಯವಹಾರಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ಸಹಕಾರಿಯಾಗಿದೆ. ಈ ಸದೃಢ ಸಂಬಂಧದಲ್ಲಿ ಭಾರತ ಮಾತ್ರವಲ್ಲದೆ ಆಸಿಯಾನ್ ದೇಶಗಳ ಹಿತವೂ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.