Train ಹಳಿ ತಪ್ಪಿಸುವ ಯತ್ನ: ಉಗ್ರರ ಷಡ್ಯಂತ್ರ ಮಟ್ಟ ಹಾಕಿ
Team Udayavani, Sep 11, 2024, 6:10 AM IST
ದೇಶದಲ್ಲಿ ಉಗ್ರರ ಮೂಲೋತ್ಪಾಟನೆಗೆ ಸಂಕಲ್ಪ ತೊಟ್ಟಿರುವ ಕೇಂದ್ರ ಸರಕಾರ ಉಗ್ರರ ಎಲ್ಲ ತೆರನಾದ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಬಾಲಬಿಚ್ಚುವ ಹವಣಿಕೆಯಲ್ಲಿರುವ ಪಾಕಿಸ್ಥಾನ ಪ್ರೇರಿತ ಉಗ್ರರನ್ನು ಭದ್ರತಾ ಪಡೆಗಳು ನಿರ್ದಾಕ್ಷಿಣ್ಯವಾಗಿ ಸದೆ ಬಡಿಯುತ್ತಲೇ ಬಂದಿವೆ. ಕೇಂದ್ರ ಸರಕಾರದ ಬಿಗಿ ನಿಲುವು ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಯಿಂದಾಗಿ ಉಗ್ರರು ಹತಾಶರಾಗಿದ್ದು, ಒಂದಲ್ಲ ಒಂದು ತೆರನಾದ ದಾಳಿ ನಡೆಸಿ ದೇಶದಲ್ಲಿ ಅಶಾಂತಿ ಮತ್ತು ಭೀತಿಯ ವಾತಾವರಣ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಭಯೋತ್ಪಾದಕರ ಈ ಷಡ್ಯಂತ್ರದ ಭಾಗವಾಗಿ ಈಗ ದೇಶದ ವಿವಿಧೆಡೆ ರೈಲುಗಳನ್ನು ಹಳಿ ತಪ್ಪಿಸಲು ಸಂಚು ರೂಪಿಸಿರುವಂತೆ ಕಂಡುಬರುತ್ತಿದೆ.
ರವಿವಾರ ಒಂದೇ ದಿನ ದೇಶದಲ್ಲಿ ಇಂತಹ ಎರಡು ಪ್ರಕರಣಗಳು ನಡೆದಿವೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಅನ್ನು ಇರಿಸಿ, ಕಾಲಿಂದಿ ಎಕ್ಸ್‌ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಪ್ರಯತ್ನವನ್ನು ದುಷ್ಕರ್ಮಿಗಳು ನಡೆಸಿದ್ದರು. ರೈಲು ಹಳಿಯ ಮೇಲೆ ಸಿಲಿಂಡರ್ ಇರುವುದನ್ನು ದೂರದಿಂದಲೇ ಗಮನಿಸಿದ ರೈಲಿನ ಚಾಲಕ ತುರ್ತು ಬ್ರೇಕ್ ಹಾಕಿದ್ದರಿಂದಾಗಿ ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿ ಹೋಗಿ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳ ಪರೀಶೀಲನೆಯ ವೇಳೆ ರೈಲು ಹಳಿಯ ಪಕ್ಕದಲ್ಲಿ ಪೆಟ್ರೋಲ್ ತುಂಬಿದ್ದ ಕ್ಯಾನ್ ಮತ್ತು ಬೆಂಕಿ ಪೊಟ್ಟಣ ಪತ್ತೆಯಾಗಿದ್ದು, ಈ ದುಷ್ಕತ್ಯದ ಹಿಂದೆ ಉಗ್ರಗಾಮಿ ಸಂಘಟನೆಗಳ ಕೈವಾಡವಿರುವುದನ್ನು ಪುಷ್ಟೀಕರಿಸಿತ್ತು.
ರವಿವಾರದಂದೇ ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅಜೆ¾àರ್‌ನ ಪಶ್ಚಿಮ ಮೀಸಲು ಸರಕು ಸಾಗಣೆ ಕಾರಿಡಾರ್‌ನ ರೈಲು ಹಳಿಗಳ ಮೇಲೆ ದೊಡ್ಡ ಗಾತ್ರದ ಎರಡು ಸಿಮೆಂಟ್ ಬ್ಲಾಕ್‌ಗಳು ಪತ್ತೆಯಾಗಿದ್ದವು. ಇದನ್ನು ಮೊದಲೇ ಇಲಾಖೆ ಸಿಬಂದಿ ಗಮನಿಸಿ, ರೈಲು ಹಳಿಗಳಿಂದ ತೆರವುಗೊಳಿಸಿದ್ದರಿಂದಾಗಿ ಇಲ್ಲೂ ಭಾರೀ ಅಪಘಾತವೊಂದು ತಪ್ಪಿಹೋಗಿತ್ತು.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿ, ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಕೆಲವು ದಿನಗಳ ಹಿಂದೆಯಷ್ಟೇ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸಲು ಉಗ್ರರ ಸ್ಲಿàಪರ್ ಸೆಲ್‌ಗಳಿಗೆ ಕರೆ ನೀಡಿದ ಬೆನ್ನಲ್ಲೇ ಈ ಪ್ರಯತ್ನಗಳು ನಡೆದಿರುವುದು ಒಂದಿಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಎರಡೂ ಪ್ರಕರಣಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಎಎನ್‌ಐ ಮತ್ತು ಭಯೋತ್ಪಾದಕ ನಿಗ್ರಹ ದಳದ ಮೂಲಕ ತನಿಖೆ ನಡೆಸಲು ನಿರ್ಧರಿಸಿದೆ.
ದೇಶದಲ್ಲಿ ತಮ್ಮ ಅಸ್ತಿತ್ವವನ್ನು ತೋರ್ಪಡಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಪಾಕ್ ಪ್ರೇರಿತ ಭಯೋತ್ಪಾದಕರು ಈಗ ತಮ್ಮ ಕಾರ್ಯತಂತ್ರ ಮತ್ತು ದಾಳಿ ವಿಧಾನವನ್ನು ಪದೇಪದೆ ಬದಲಾಯಿಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ಉಗ್ರರ ಇಂತಹ ಸಂಚನ್ನು ಪತ್ತೆ ಹಚ್ಚಿ, ದುಷ್ಕೃತ್ಯ ಎಸಗುವ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳು ಭಾಗಶಃ ಯಶಸ್ವಿಯಾಗಿವೆ. ಉಗ್ರರ ಈ ಷಡ್ಯಂತ್ರಗಳಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಸ್ಥಳೀಯರ ಚಲನವಲನಗಳ ಮೇಲೆ ಭದ್ರತಾ ಪಡೆಗಳು ಇನ್ನಷ್ಟು ಹೆಚ್ಚಿನ ಕಟ್ಟುನಿಟ್ಟಿನ ನಿಗಾ ಇರಿಸಬೇಕು. ಉಗ್ರರೊಂದಿಗೆ ನಂಟು ಹೊಂದಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಭವಿಷ್ಯದಲ್ಲಿ ಇಂತಹ ದುಸ್ಸಾಹಸಕ್ಕೆ ಯಾರೂ ಮುಂದಾಗದಂತೆ ಮಾಡಬೇಕು. ಉಗ್ರರನ್ನು ಸದೆಬಡಿಯುವುದರ ಜತೆಯಲ್ಲಿ ಯಾನಿಗಳು ಆತಂಕರಹಿತವಾಗಿ ರೈಲುಗಳಲ್ಲಿ ಪ್ರಯಾಣಿಸುವ ನಿಟ್ಟಿನಲ್ಲಿ ಅವರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನೂ ರೈಲ್ವೇ ಇಲಾಖೆ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.