ಸಮರ್ಥ ವ್ಯಕ್ತಿಗೆ ಬಿಸಿಸಿಐ ಸಾರಥ್ಯ
Team Udayavani, Oct 15, 2019, 5:07 AM IST
ಭಾರತದ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿಗೆ ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಾರಥ್ಯ ಸಿಗುವುದು ಬಹುತೇಕ ಖಚಿತವಾಗಿದೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ, ಅದರಲ್ಲೂ ತಂಡದ ನಾಯಕನೇ ಆಗಿದ್ದ ವ್ಯಕ್ತಿಯೊಬ್ಬರು ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗುವುದು ಸಂತೋಷದ ವಿಚಾರವೇ. ಅದರಲ್ಲೂ ಗಂಗೂಲಿಯಂಥ ಸಮರ್ಥ ವ್ಯಕ್ತಿಯ ಕೈಗೆ ಕ್ರಿಕೆಟ್ ಮಂಡಳಿಯ ಸಾರಥ್ಯ ಸಿಗುತ್ತಿರುವುದರಿಂದ ಸಹಜವಾಗಿ ಅನೇಕ ನಿರೀಕ್ಷೆಗಳು ಗರಿಗೆದರಿವೆ.
ಆದರೆ ಇದೇ ವೇಳೆ ಗಂಗೂಲಿ ಆಯ್ಕೆಯೂ ಒಂದು ರೀತಿಯ ಹೊಂದಾಣಿಕೆ ಎಂಬ ಅಪಸ್ವರವೂ ಇದೆ. ಸ್ಪರ್ಧಾ ಕಣದಲ್ಲಿ ಪ್ರತಿಸ್ಪರ್ಧಿಗಳೇ ಇಲ್ಲದಂತೆ ಮಾಡಿ ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧಪಡಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇದರ ಬದಲು ಚುನಾವಣೆ ನಡೆದು ಬಹುಮತದ ಆಧಾರದಲ್ಲಿಯೇ ನೂತನ ಅಧ್ಯಕ್ಷನ ಆಯ್ಕೆಯಾಗಿದ್ದರೆ ಅದು ಹೆಚ್ಚು ಪಾರದರ್ಶಕವೂ ಔಚಿತ್ಯಪೂರ್ಣವೂ ಆದ ಆಯ್ಕೆ ಆಗುತ್ತಿತ್ತು.
ಅನೇಕ ವರ್ಷಗಳಿಂದ ಕ್ರಿಕೆಟ್‌ನ ಗಂಧಗಾಳಿಯೇ ಇಲ್ಲದ ರಾಜಕಾರಣಿಗಳು ಮತ್ತು ಉದ್ಯಮಿಗಳು ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗುತ್ತಿದ್ದರು. ಇದೀಗ ಒಂದು ಬದಲಾವಣೆ ಎಂಬಂತೆ ಅಪ್ಪಟ ಕ್ರಿಕೆಟಿಗನೊಬ್ಬ ಅಧ್ಯಕ್ಷನಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಒಂದು ರೀತಿಯ ಪುಳಕವುಂಟು ಮಾಡಿದೆ.
ಕ್ರಿಕೆಟಿಗನಾಗಿ ಮಾತ್ರವಲ್ಲದೆ ಕ್ರಿಕೆಟ್ ಆಡಳಿತಗಾರನಾಗಿಯೂ ಗಂಗೂಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಎರಡು ದಶಕದ ಹಿಂದೆ ಭಾರತದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಕಳಂಕ, ಒಳಜಗಳ ಇತ್ಯಾದಿ ಸಮಸ್ಯೆಗಳಿಗೆ ಸಿಲುಕಿ ಹೀನಾಯ ಸ್ಥಿತಿಗೆ ತಲುಪಿದ ಸಂದರ್ಭದಲ್ಲಿ ನಾಯಕನ ಹೊಣೆ ವಹಿಸಿಕೊಂಡಿದ್ದರು ಗಂಗೂಲಿ. ಇಡೀ ತಂಡವನ್ನು ಮರಳಿ ಕಟ್ಟಿದ್ದಲ್ಲದೆ ಕ್ರೀಡೆಗೆ ಅಗತ್ಯವಾಗಿ ಬೇಕಿದ್ದ ಆಕ್ರಮಣಕಾರಿ ಮನೋಭಾವವನ್ನು ಆಟಗಾರರಲ್ಲಿ ತುಂಬುವಲ್ಲಿ ಅವರು ಸಫಲರಾಗಿದ್ದರು. ಈ ಕಾರಣಕ್ಕೆ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಗಂಗೂಲಿ ಹೆಸರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ವಿದೇಶಗಳಲ್ಲೂ ಎದುರಾಳಿಗಳಿಗೆ ಸಡ್ಡು ಹೊಡೆದು ನಿಲ್ಲಬಲ್ಲ ತಾಕತ್ತು ಭಾರತ ತಂಡಕ್ಕೆ ಇದೆ ಎಂದು ನಿರೂಪಿಸಿದ್ದು ಗಂಗೂಲಿ.
ನಿವೃತ್ತಿಯ ಬಳಿಕ ಕ್ರಿಕೆಟ್‌ನ ಆಡಳಿತಕ್ಕೆ ಕಾಲಿಟ್ಟ ಗಂಗೂಲಿ ಬಂಗಾಳ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಐದು ವರ್ಷದಲ್ಲಿ ಸಾಕಷ್ಟು ಸುಧಾರ ಣೆ ಗಳನ್ನು ಮಾಡಿದ್ದಾರೆ. ಭಾರತದ ಕ್ರಿಕೆಟ್‌ನ ಕಾಶಿ ಎಂದು ಅರಿಯಲ್ಪಡುವ ಈಡನ್ ಗಾರ್ಡನ್‌ನ ಸ್ವರೂಪವನ್ನು ಬದಲಾಯಿಸಿದ್ದು ಕೂಡ ಅವರ ಸಾಧನೆ. ಬಂಗಾಳ ಕ್ರಿಕೆಟ್‌ಗೆ ಹೊಸ ನೀರು ಹರಿದು ಬರುವಂತೆ ಮಾಡುವಲ್ಲಿ ಗಂಗೂಲಿ ಪ್ರಯತ್ನ ಸಾಕಷ್ಟಿದೆ. ಹೀಗೆ ಕ್ರಿಕೆಟ್‌ಗೆ ಏನು ಬೇಕು ಎಂದು ತಿಳಿದಿರುವ ವ್ಯಕ್ತಿಯೊಬ್ಬರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎನ್ನುವ ಕಾರಣಕ್ಕೆ ಗಂಗೂಲಿ ಮೇಲೆ ಅಪಾರ ನಿರೀಕ್ಷೆಯಿದೆ.
ರಾಜಕಾರಣಿಗಳ ಮತ್ತು ಉದ್ಯಮಿಗಳ ಆಡಳಿತದಲ್ಲಿ ಹದಗೆಟ್ಟಿರುವ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಂಪೂರ್ಣ ಕಾಯಕಲ್ಪ ನೀಡುವ ದೊಡ್ಡ ಹೊಣೆಗಾರಿಕೆ ಗಂಗೂಲಿ ಮೇಲಿದೆ. ಮೂರು ವರ್ಷಗಳಿಂದ ಬಿಸಿಸಿಐಗೆ ಅಧ್ಯಕ್ಷರೇ ಇರಲಿಲ್ಲ. ಸುಪ್ರೀಂ ಕೋರ್ಟ್ ನೇಮಿಸಿದ ಅಧಿಕಾರಿಗಳ ಸಮಿತಿಯೇ ಭಾರತದ ಕ್ರಿಕೆಟ್‌ನ ಆಡಳಿತವನ್ನು ನೋಡಿಕೊಳ್ಳುತ್ತಿತ್ತು. ಪ್ರಥಮ ದರ್ಜೆ ಕ್ರಿಕೆಟ್ ಮತ್ತು ರಣಜಿ ಕ್ರಿಕೆಟ್‌ನ ಸುಧಾರಣೆ ತನ್ನ ಮೊದಲ ಆದ್ಯತೆ ಎಂದು ಗಂಗೂಲಿ ಹೇಳಿದ್ದರೂ ಇದರ ಜೊತೆಗೆ ಸ್ಪಾಟ್‌ಫಿಕ್ಸಿಂಗ್ ಹಗರಣದಿಂದ ಇನ್ನಿಲ್ಲದಂತೆ ಹೆಸರು ಕೆಡಿಸಿಕೊಂಡಿರುವ ಕ್ರಿಕೆಟ್ ಮಂಡಳಿಯ ಇಮೇಜ್ ಮೇಲೆತ್ತುವ ಮಹತ್ತರವಾದ ಹೊಣೆ ಅವರ ಮೇಲಿದೆ. ಅದನ್ನು ಮಾಡಲು ಅವರ ಬಳಿ ಹೆಚ್ಚು ಸಮಯಾವಕಾಶವೂ ಇಲ್ಲ. ಹೊಸ ನಿಯಮಾವಳಿಯಂತೆ 10 ತಿಂಗಳ ಅಧಿಕಾರವಧಿಯ ಬಳಿಕ ಗಂಗೂಲಿ ನಿರ್ಗಮಿಸಬೇಕಾಗುತ್ತದೆ.
ಗಂಗೂಲಿ ಹಾದಿಯೇನೂ ಸರಳವಲ್ಲ. ಎಷ್ಟೇ ಸುಧಾರಣೆಗಳನ್ನು ಮಾಡಿದರೂ ಕ್ರಿಕೆಟ್ ನಿಯಂತ್ರಣ ಮಂಡಳಿಯೊಳಗಿರುವ ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ಸಿಕ್ಕಿದಾಗಲೆಲ್ಲ ತಲೆ ಎತ್ತುತ್ತವೆ. ಇವುಗ ಳನ್ನು ನಿಭಾಯಿಸಿಕೊಂಡು ನೈಜ ಪ್ರತಿಭೆಗಳಿಗೆ ಅನ್ಯಾಯವಾಗದಂತೆನೋಡಿ
ಕೊಂಡು ಹೋಗುವುದು ತಂತಿ ಮೇಲಿನ ನಡಿಗೆಯೇ. ಬಿಸಿಸಿಐ ಮುನ್ನಡೆ ಸಲು 113 ಟೆಸ್ಟ್, 311 ಏಕದಿನ ಪಂದ್ಯಗಳಲ್ಲಿ ಆಡಿರುವ, ಸುಮಾರು 19,000 ರನ್ ಕಲೆಹಾಕಿರುವ ಗಂಗೂಲಿಗಿಂತ ಸಮರ್ಥ ವ್ಯಕ್ತಿಗಳು ಸದ್ಯಕ್ಕೆ ಯಾರೂ ಇಲ್ಲ. ಇಡೀ ದೇಶ ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಗಂಗೂಲಿ ಮಾಡಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.